Saturday, 14th December 2024

ಬಿಸಿ ಗಾಳಿಗೆ ತಲೆ ಬಿಸಿಬೇಡ, ಎಚ್ಚೆತ್ತುಕೊಳ್ಳುವ ಅಗತ್ಯವಿದೆ

ಬಿರು ಬಿಸಿಲು ಭಾರಿಸುತ್ತಿರುವಾಗಲೇ ಮತ್ತಷ್ಟು ತಲೆಬಿಸಿಯಾಗುವ ಸುದ್ದಿಯೊಂದು ಹೊರಬಿದ್ದಿದೆ. ಭಾರತದ ತಾಪಮಾನ ಮುಂದಿನ ದಿನಗಳಲ್ಲಿ ತೀರಾ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಲಿದ್ದು, ಬಿಸಿಗಾಳಿಗೆ ಸಿಲುಕಿ ದೇಶದ ಶೇ.೯೦ರಷ್ಟು ಮಂದಿ ತೀವ್ರ ಆರೋಗ್ಯದ ಸಮಸ್ಯೆ, ಆಹಾರದ ಕೊರತೆ ಎದುರಿಸಲಿದ್ದಾರಂತೆ.

ಮಾತ್ರವಲ್ಲ, ಇದೇ ಕಾರಣಕ್ಕೆ ಸಾಕಷ್ಟು ಸಾವೂ ಸಂಭವಿಸಲಿದೆ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನ ಸಾರಿದೆ. ಇಂಥ ವರದಿಗಳು ಹೊಸತೇನಲ್ಲ. ಜಾಗತಿಕ ತಾಪಮಾನ ಹೆಚ್ಚಳದ ವಿಚಾರದಲ್ಲಿ ಸಾಕಷ್ಟು ವರ್ಷಗಳಿಂದ ಭಾರತದ ಮೇಲೆ ಗೂಬೆ ಕೂರಿಸುವ ಯತ್ನವನ್ನು ಮಾಡಿ ಕೊಂಡೇ ಬರಲಾಗುತ್ತಿದೆ. ಅದರಲ್ಲೂ ಪಾಶ್ಚಾತ್ಯ ದೇಶಗಳ ಕೂಗು ಹೆಚ್ಚೇ ಇದೆ. ಇದೀಗ ಕೇಂಬ್ರಿಜ್ ವಿವಿಯ ಅಧ್ಯಯನ ಇನ್ನೂ ಮುಂದೆ ಹೋಗಿ ತಾಪಮಾನದ ಸ್ವರೂಪವನ್ನು ಗ್ರಹಿಸುವಲ್ಲಿ ಭಾರತ ವಿಫಲವಾಗುತ್ತಿದ್ದು, ಇಲ್ಲಿ ಬಳಸುತ್ತಿರುವ ಅಧ್ಯಯನ ವಿಧಾನದಲ್ಲೇ ನ್ಯೂನತೆ ಗಳಿವೆ ಎಂದೂ ಗಂಭೀರ ಸ್ವರೂಪದ ಆರೋಪ ಮಾಡಿದೆ.

‘ಪಿಎಲ್ಒಎಸ್ ಕ್ಲೈಮೇಟ್’ ಎಂಬ ನಿಯತಕಾಲಿಕದಲ್ಲಿ ಇಂಥದ್ದೊಂದು ವರದಿ ಪ್ರಕಟವಾಗಿದೆ. ಬಿಸಿಗಾಳಿ ಮತ್ತು ಅಽಕ ತಾಪಮಾನದ ಅಪಾಯಗಳು ಮತ್ತು ಅದಕ್ಕೆ ಗುರಿಯಾಗಲಿರುವ ಜನರನ್ನು ಗುರುತಿಸಲು ಇದೇ ಮೊದಲ ಬಾರಿಗೆ, ಭಾರತಕ್ಕೆ ಸಂಬಂಧಿಸಿದಂತೆ ‘ಬಿಸಿಗಾಳಿ ಸೂಚ್ಯಂಕ’ವನ್ನು ಕೇಂಬ್ರಿಜ್ ವಿಜ್ಞಾನಿಗಳ ತಂಡ ರೂಪಿಸಿದೆ ಯಂತೆ. ಆದರೆ ಇಡೀ ವರದಿಯಲ್ಲಿ ಭಾರತದಲ್ಲಿ ಈ ಯಾವುದೇ ಅಂಶಗಳನ್ನು ಸಮಗ್ರವಾಗಿ ವಿಶ್ಲೇಷಿಸಿಲ್ಲ.

ಅಪಾಯಗಳನ್ನು ಪಟ್ಟಿ ಮಾಡಲಾಗಿದೆಯೇ ಹೊರತೂ ನಿಖರ ಕಾರಣಗಳನ್ನು, ಪರಿಣಾಮಕಾರಿ ಪರಿಹಾರೋಪಾಯಗಳನ್ನು ಸೂಚಿಸಿಲ್ಲ. ಈ ಹಿನ್ನೆಲೆ ಯಲ್ಲಿ ವರದಿಯನ್ನು ಎಷ್ಟರಮಟ್ಟಿಗೆ ಗಂಭೀರವಾಗಿ ಪರಿಗಣಿಸಬೇಕು ಎಂಬುದು ಪ್ರಶ್ನೆಯಾಗಿಯೇ ಉಳಿದುಕೊಳ್ಳುತ್ತದೆ. ಹಾಗೆಂದು ಭಾರತದ ಸನ್ನಿವೇಶ ದಲ್ಲಿ ಪ್ರತಿಕೂಲ ಹವಾಮಾನವನ್ನು ನಿರ್ಲಕ್ಷಿಸುವಂತೆ ಇಲ್ಲ. ಕಳೆದ ವರ್ಷವಿಡೀ ಹವಾಮಾನವು ಅತ್ಯಂತ ಅನಿರೀಕ್ಷಿತವೂ ಪ್ರತಿಕೂಲಕರ ವಾಗಿಯೂ ಇತ್ತು.

ಜನವರಿಯಿಂದ ಸೆಪ್ಟೆಂಬರ್‌ವರೆಗೆ ದೇಶದ ಹಲವೆಡೆ ನಾನಾ ರೀತಿಯ ನೈಸರ್ಗಿಕ ವಿಕೋಪಗಳನ್ನು ಕಾಣಲಾಗಿತ್ತು. ಈ ವರ್ಷ ಬೇಸಿಗೆ ಆರಂಭದಲ್ಲೇ ಕರ್ನಾಟಕ ಸೇರಿದಂತೆ ಹಲವೆಡೆ ತಾಪಮಾನ ವಿಪರೀತ ಹೆಚ್ಚಿದೆ. ಸಾಮಾನ್ಯವಾಗಿ ಮುಂಗಾರು ಮಳೆ ಋತುವಿನ ಅವಧಿಯಲ್ಲಿ ಹೆಚ್ಚು ಮಳೆ, ಪ್ರವಾಹ ಸಹಜ. ಆದರೆ, ಕಳೆದ ವರ್ಷದಿಂದೀಚೆಗೆ ಚಳಿಗಾಲ, ಮುಂಗಾರುಪೂರ್ವ ಅವಧಿಯಲ್ಲಿಯೂ ಪ್ರತಿ ಕೂಲ ಹವಾಮಾನ ಉಂಟಾಗುತ್ತಿದೆ. ೨೦೨೨ರಲ್ಲಿ ೨೭೩ ದಿನಗಳ ಪೈಕಿ ೨೪೨ ದಿನಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ದೇಶ ಕಂಡಿದೆ. ಕಳೆದ ೨೦ ವರ್ಷಗಳಲ್ಲಿ ಅತಿ ಹೆಚ್ಚು ಪ್ರಕೃತಿ ವಿಕೋಪ ಗಳನ್ನು ಕಂಡ ಮೂರನೇ ದೇಶ ಭಾರತ. ದೇಶದ ಎಲ್ಲ ರಾಜ್ಯಗಳೂ ಇಂತಹ ಪರಿಸ್ಥಿತಿಯನ್ನು ಎದುರಿಸಿವೆ.

ಕರ್ನಾಟಕವೂ ಇದಕ್ಕೆ ಹೊರತಲ್ಲ. ತುಸುಮಟ್ಟಿಗೆ ಜಾಗತಿಕ ತಾಪಮಾನ ಏರಿಕೆಯೂ ಇದಕ್ಕೆ ಕಾರಣವೆಂಬುದನ್ನು ಅಲ್ಲಗಳೆಯುವಂತಿಲ್ಲ. ಈ
ಹಿನ್ನೆಲೆಯಲ್ಲಿ ಎಚ್ಚೆತ್ತುಕೊಳ್ಳುವುದು ಅಗತ್ಯ.