Friday, 22nd November 2024

ಸಂಗೀತ ಅಧ್ಯಾತ್ಮವಲ್ಲದೇ ಮತ್ತೇನು ?

ವೀಣೆಯೇ ನನ್ನ ಭಾಷೆ

ಸೌರಭ ರಾವ್

ಮೂರು ದಶಕಕ್ಕೂ ಮೀರಿದ ಸಂಗೀತ ಸಾಧನೆ. ಪ್ರಪಂಚದ ನಾನಾ ಭಾಗಗಳ ಸಂಗೀತೋತ್ಸವಗಳಲ್ಲಿ ವೀಣೆ ನುಡಿಸಿ ಶ್ರೋತೃ ಗಳೊಂದಿಗೆ ತಮ್ಮ ಸಂಗೀತದ ಸಂತೋಷವನ್ನು ಹಂಚಿಕೊಂಡಿರುವ ಜಯಂತಿ ಕುಮರೇಶ್, ನಮ್ಮ ನಡುವಿನ ಅಪ್ರತಿಮ ಕಲಾವಿದೆ. ಸಂಗೀತ ಚೂಡಾಮಣಿ ಪ್ರಶಸ್ತಿ, ವೀಣಾ ನಾದ ಮಣಿ, ಕಲಾ ರತ್ನ, ಸತ್ಯಶ್ರೀ, ಗಾನ ವಾರಿಧಿ, ಸಂಗೀತ ಶಿಖರ ಸಮ್ಮಾನ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರ ಪಾಲಿಗೆ ಬಂದಿವೆ. ಝಾಕಿರ್ ಹುಸ್ಸೇನ್, ಕುಮರೇಶ್, ಅರುಣಾ ಸಾಯಿರಾಂ ಸೇರಿದಂತೆ ಅನೇಕ ಸಂಗೀತ ದಿಗ್ಗಜರ ಜೊತೆ ವೀಣಾ ವಾದನ ಮಾಡಿರುವ ಜಯಂತಿ ಕುಮರೇಶ್ ಸಂಗೀತದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಅವರು ‘ವಿಶ್ವವಾಣಿ’ಗಾಗಿ ನೀಡಿದ ಸಂದರ್ಶನದ ಮೂರನೆಯ ಮತ್ತು ಕೊನೆಯ ಭಾಗ ಇಲ್ಲಿದೆ.

ಪ್ರಶ್ನೆ: ಇಡೀ ಪ್ರಪಂಚದ ಬೇರೆ ಬೇರೆ ಸಂಗೀತ ಶೈಲಿಗಳು ಒಟ್ಟಿಗೇ ಬಂದು ಹೊಸ ಹೊಸ ಪ್ರಯೋಗಗಳು ನಡೆಯುತ್ತಿರುವ ಕಾಲ ದಲ್ಲೂ, ಹಿಂದೂಸ್ತಾನಿ ಸಂಗೀತ ದೊಡ್ಡದು, ಕರ್ನಾಟಕ ಶಾಸ್ತ್ರೀಯ ಸಂಗೀತ  ದೊಡ್ಡದು ಎಂದು ಕೆಲವರು ಆಗಾಗ ವಾದಿಸು ವುದು ಕಂಡುಬರುತ್ತದೆ.

ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಜಯಂತಿ ಕುಮರೇಶ್: ಒಂದು ಕಾಲದ ಸಂಗೀತವನ್ನು ಕೇಳಿದರೆ, ಆ ಕಾಲದ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಅದು ನಮ್ಮ ಜೊತೆ ಮಾತನಾಡುತ್ತದೆ. ಇವತ್ತಿನ ದಿನ, ಸಾಮಾಜಿಕ ಜಾಲತಾಣಗಳಲ್ಲಿ, ಅಂತರ್ಜಾಲದಲ್ಲಿ ಜನ ಹಿಂದೆಂದಿ ಗಿಂತಲೂ ಹತ್ತಿರ ಬರು ತ್ತಿದ್ದರೆ, ಗಡಿಗಳು ಮಾಯವಾಗುತ್ತಿವೆ. ಉತ್ತರ, ದಕ್ಷಿಣ ಎಂಬ ಯಾವ ಭೇದವೂ ಇಲ್ಲದೆ ಅನೇಕ ಕಾರ್ಯಕ್ರಮಗಳು, ಪ್ರಯೋಗ ಗಳೂ ನಡೆಯುತ್ತಿವೆ. ಇದೇ ಮುಂದಿನ ದಾರಿ ಕೂಡಾ. ಸಂಕುಚಿತ ಮನಸ್ಥಿತಿ ಈಗ ಹಳೆಯ ವಿಷಯ, ಆ ದಿನಗಳು ಮುಗಿದಿವೆ ಎಂದು ನಾನು ನಂಬುತ್ತೇನೆ. ಸಂಗೀತ, ಬೇರೆ ಕಲಾಪ್ರಾಕಾರಗಳಂತೆ ನಮ್ಮನ್ನು ಎಲ್ಲ ಸಂಕೋಲೆಗಳಿಂದ ಬಿಡುಗಡೆ ಗೊಳಿಸುವ, ದೈವೀಕ ಅನುಭವ. ಸಮಯ ಬದಲಾಗುತ್ತಿದ್ದಂತೆ ನಾವೂ ಬದಲಾಗಬೇಕು. ಬೇರನ್ನು ಗಟ್ಟಿಯಾಗಿ ಹಿಡಿದುಕೊಂಡೇ ಹೊಸ ದಿಗಂತಗಳತ್ತ ಹಾರಬಹುದು. ಮತ್ತು ನಮ್ಮ ಮಕ್ಕಳೇ ಇಂತಹ ಮುಕ್ತತೆಗೆ ತೆರೆದುಕೊಂಡಿರುತ್ತಾರೆ, ಪ್ರಯೋಗಗಳನ್ನು ಅಂಜದೇ, ಹಿಂಜರಿಯದೇ ಮಾಡುತ್ತಾರೆ. ಹಾಗಾಗಿ ನಾವೂ ಹೊಸ ಗಮ್ಯಗಳತ್ತ ಸಾಗಬೇಕು. ಅದು ಪಾಶ್ಚಾತ್ಯ ಸಂಗೀತವಾಗಲಿ, ಹಿಂದೂಸ್ತಾನಿ ಸಂಗೀತವಾಗಲಿ, ಕರ್ನಾಟಕ ಶಾಸ್ತ್ರೀಯ ಸಂಗೀತವಾಗಲಿ, ಇರುವುದು ಅವೇ ಸಪ್ತಸ್ವರಗಳು. ಇರುವ ಏಳು ಸ್ವರಗಳನ್ನೇ ನಾವು ಸಂಗೀತದ ಬೇರೆ ಬೇರೆ ಶೈಲಿಗಳಲ್ಲಿ ಬಳಸುವುದು. ಅಷ್ಟೇ.

ಪ್ರ: ನಿಮ್ಮ ಯೂಟ್ಯೂಬ್ ಚಾನೆಲ್ಲಿನಲ್ಲಿ ಅನೇಕ ರಾಗಗಳ, ಪ್ರಯೋಗಗಳ ವಿಡಿಯೋಗಳ ಜೊತೆ, ಇತ್ತೀಚೆಗೆ ಕೆಲವು ಪ್ರಖ್ಯಾತ ಸಿನೆಮಾಗಳ ಕೆಲವು ಹಾಡುಗಳನ್ನು ಬಳಸಿ ಆ ಛಾಯೆ ಇರುವ ಶಾಸ್ತ್ರೀಯ ಸಂಗೀತದ ಕೆಲವು ರಾಗಗಳನ್ನು ನುಡಿಸುವ ಪ್ರಯೋಗ ಮಾಡುತ್ತಿದ್ದೀರಿ ಅಲ್ಲವೇ?
ಉ: ಹೌದು, ಇವು ಪ್ರಖ್ಯಾತ ಆಂಗ್ಲ ಸಿನೆಮಾಗಳ ಹಾಡುಗಳ ಕವರ್‌ಗಳಲ್ಲ. ಈ ಪ್ರಯೋಗ, ನಾನು ಚಿಕ್ಕಮಕ್ಕಳ, ಯುವಕರ ಸಂಗೀತದ ಭಾಷೆಯ ಮೂಲಕ ಅವರ ಜೊತೆ ಒಂದು ಸಂವಹನ ನಡೆಸುವುದಕ್ಕೆ ಮಾಡಿದ್ದು. ನಾವು ಬಲವಂತ ಮಾಡಿ, ನೀನು ಏಕೆ ಪಂಚರತ್ನ ಕೃತಿಗಳನ್ನು ಕೇಳುತ್ತಿಲ್ಲ ಎಂದು ನಮ್ಮ ಮಕ್ಕಳಿಗೆ ಕೇಳಬಾರದು. ಅದರ ಬದಲು, ನೋಡು, ನಿನ್ನ ಹ್ಯಾರಿ ಪಾಟರ್ ಟ್ರ್ಯಾಕ್ ನುಡಿಸುತ್ತೇನೆ, ನಮ್ಮ ಕೀರವಾಣಿ ರಾಗ ಸ್ವಲ್ಪ ಹಾಗೇ ಇದೆ ಅಲ್ಲವಾ? ಎಂದು ಆಸಕ್ತಿ ಬೆಳೆಯುವಂತೆ ಮಾಡ ಬೇಕು. ವೀಣೆ ಯಾವುದೋ ಗತಕಾಲದ ವಾದ್ಯವಲ್ಲ, ಅದು ಎಲ್ಲ ಕಾಲಕ್ಕೂ ತಕ್ಕಂಥ, ಕಾಲ-ದೇಶವೆಂಬ ಎಲ್ಲೆಗಳನ್ನು ಮೀರಿದ ವಾದ್ಯ ಎಂದು ಮನವರಿಕೆ ಮಾಡಿಕೊಡಬೇಕು ಎಂಬುದು ಇದರ ಆಶಯ. ಇದನ್ನು ಶುರು ಮಾಡಿದ ಮೇಲೆ ನೂರಾರು ಮಕ್ಕಳು ಈ ಪ್ರಯೋಗದ ಬಗ್ಗೆ ಮಿಂಚಂಚೆ ಕಳುಹಿಸಿದ್ದರು. ಫ್ರೋಝೆನ್ ಚಿತ್ರದ ಹಾಡನ್ನು ನುಡಿಸಿದಾಗಲಂತೂ ಪುಟ್ಟ ಪುಟ್ಟ ಹುಡುಗಿ ಯರು ಭಾವುಕರಾಗಿ ಪತ್ರ, ಚಿತ್ರ ಎಲ್ಲವನ್ನೂ ಕಳುಹಿಸಿದರು. ನಾವೂ ನಿಮ್ಮ ಜೊತೆಯೇ ಇದ್ದೇವೆ ಎಂದು ಮಕ್ಕಳಿಗೆ ನಾಜೂಕಾಗಿ ಮನವರಿಕೆ ಮಾಡಿಕೊಡಬೇಕು. ಬನ್ನಿ, ಒಟ್ಟಿಗೇ ಹೊಸದೇನನ್ನೋ ಕಲಿಯೋಣ ಎಂದು ಕುತೂಹಲ ಹುಟ್ಟುವಂತೆ ಮಾಡಿ ಅವರ ವಿಶ್ವಾಸ ಗೆಲ್ಲಬೇಕು.

ಪ್ರ: ಸರಸ್ವತಿ ವೀಣೆಗೋಸ್ಕರವೇ ಒಂದು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಅನ್ನೋ ಆಸೆ ನಿಮ್ಮದು. ಇದರ ಬಗ್ಗೆ ದಯವಿಟ್ಟು ನಮಗೆ ವಿವರವಾಗಿ ಹೇಳಿ.

ಉ: ಈಗ ನಾನಿರುವ ಕೋಣೆಯಲ್ಲೇ ನೋಡಿದರೆ, 12 ವೀಣೆಗಳಿವೆ. ನನ್ನ ಬಳಿ 24 ವೀಣೆಗಳಿವೆ. ಅದ್ಭುತವಾದ ಕಛೇರಿಗಳ, ಸಂಯೋಜನೆಗಳ ಧ್ವನಿಮುದ್ರಣಗಳಿವೆ. ಸಾಕಷ್ಟು ಸಂಶೋಧನೆಗಳಿಗೆ ಸಹಾಯವಾಗುವ ವಿಷಯಗಳಿವೆ. ಇವನ್ನೆಲ್ಲ ಎಲ್ಲಿ ಜೋಪಾನ ಮಾಡೋದು? ಒಂದು ಸಂಸ್ಥೆೆಯಿರಬೇಕು. ವೀಣೆ ನಮ್ಮ ರಾಷ್ಟ್ರೀಯ ವಾದ್ಯ. ಹೊರದೇಶದ ಜನರಿಗೆ ಈ ವಿಷಯ ಗೊತ್ತೇ ಇಲ್ಲ. ಎಲ್ಲರಿಗೂ ರಾಷ್ಟ್ರೀಯ ಪ್ರಾಣಿ ಹುಲಿ ಗೊತ್ತು, ರಾಷ್ಟ್ರೀಯ ಪಕ್ಷಿ ನವಿಲು ಗೊತ್ತು, ರಾಷ್ಟ್ರೀಯ ಹೂವು ಕಮಲ ಗೊತ್ತು. ಆದರೆ ಎಷ್ಟೋ ಜನರಿಗೆ ಸರಸ್ವತಿ ವೀಣೆ ರಾಷ್ಟ್ರೀಯ ವಾದ್ಯ ಎಂದು ಗೊತ್ತೇ ಇಲ್ಲ. ಜನ ವೀಣೆಯ ಬಗ್ಗೆ ಅದನ್ನು ಹೇಗೆ ಮಾಡುತ್ತಾರೆ ಎಂದೆಲ್ಲ ಕುತೂಹಲದಿಂದ ತಿಳಿದುಕೊಳ್ಳಬೇಕು ಎಂದರೆ, ತಂಜಾವೂರಿಗೆ ಹೋಗಿ. ಅಲ್ಲಿ ಒಂದು ಪುಟ್ಟ ಅಂಗಡಿ ಇದೆ, ಅಲ್ಲಿ ರಂಗಸ್ವಾಮಿ ಎನ್ನುವವರಿದ್ದಾರೆ, ಅಲ್ಲಿ ವೀಣೆ ಮಾಡುತ್ತಾರೆ ಎಂದೆಲ್ಲಾ ಹೇಳೋದಕ್ಕಿಂತಲೂ, ಸರಸ್ವತಿ ವೀಣೆಗೆ ಒಂದು ಸಂಶೋಧನಾ ಕೇಂದ್ರ ಸ್ಥಾಪಿಸಿದರೆ, ವೀಣೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಒಂದೇ ಸೂರಿನಡಿ ಸಿಗುವಂತೆ ಮಾಡಬಹುದು. ವೀಣೆಯ ರೂಪಕ್ಕೂ ನಮ್ಮ ದೇಹಕ್ಕೂ ಇರುವ ಸಂಬಂಧವೇನು, ನಾಲ್ಕು ತಂತಿಗಳು ಹೇಗೆ
ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತವೆ, ಹೀಗೆ ಎಲ್ಲಾ ವಿಷಯಗಳನ್ನು, ಜ್ಞಾನವನ್ನು ಅಲ್ಲಿಂದ ಹಂಚಬಹುದು. ಅಲ್ಲಿ ಪ್ರತಿದಿನ ವೂ ಒಂದು ಕಛೇರಿ ನಡೆಯಬೇಕು, ತರಗತಿಗಳು ನಡೆಯಬೇಕು ಎಂಬ ದೊಡ್ಡ ಕನಸಿದೆ. ಹೊರದೇಶದಿಂದ ಬಂದವರಿಗೆ, ನಾವು ನಮ್ಮ ರಾಷ್ಟ್ರೀಯ ವಾದ್ಯವನ್ನು ಎಷ್ಟು ಆಸ್ಥೆಯಿಂದ ನೋಡಿಕೊಳ್ಳುತ್ತೇವೆ ಎಂದು ತಿಳಿಯಬೇಕು. ಇದಕ್ಕೂ ಇಂಡಿಯನ್ ನ್ಯಾಷನಲ್ ಆರ್ಕೆಸ್ಟ್ರಾಗೆ ಬೇಕಾದ ಹಾಗೆ ಕಾರ್ಪೊರೇಟ್ ಬೆಂಬಲ ಬೇಕು. ಒಬ್ಬಳೇ ಮಾಡಲು ಬಹಳ ಕಷ್ಟವಾದ ಕೆಲಸ.

ಪ್ರ: ಸಂಗೀತ ಒಂದು ಆಧ್ಯಾತ್ಮಿಕ ಅನುಭವ ಹೇಗೆ?
ಉ: ಸಂಗೀತಕ್ಕೆ ಯಾವುದೇ ಒಂದು ಭಾಷೆ, ಗಡಿ, ಧರ್ಮ, ಜಾತಿಯ ಹಂಗಿಲ್ಲ. ಕಾಲ-ದೇಶಗಳ ಮಿತಿಯಿಲ್ಲ. ಅದು ಒಂದು ದಿವ್ಯ, ಅಪ್ಪಟ ಧ್ವನಿ ತರಂಗಗಳ ಅನುಭವ. ನಾದ. ಈಗ ನಾನು ಒಂದು ರಾಗ ನುಡಿಸಿದರೆ, ಒಬ್ಬ ವ್ಯಕ್ತಿ ಕಣ್ಮುಚ್ಚಿ ತಾನು ಯಾವುದೊ ಗುಹೆಯಲ್ಲಿ ತಪಸ್ಸು ಮಾಡುತ್ತಿರುವಂತೆ ಅನ್ನಿಸಬಹುದು, ಇನ್ನೊಬ್ಬರಿಗೆ ತಾನು ಈಜಿಪ್‌ಟ್‌ ದೇಶದ ಪಿರಮಿಡ್‌ಗಳ ನಡುವೆ ಇದ್ದೇನೆ ಅನ್ನಿಸಬಹುದು, ಮತ್ತೊಬ್ಬರಿಗೆ ಮತ್ತೇನೋ ಅನ್ನಿಸಬಹುದು. ಒಂದು ರಾಗ ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಅಲೆಗಳನ್ನು ಹುಟ್ಟುಹಾಕುತ್ತದೆ. ಒಂದೇ ರಾಗದ ಅನುಭವ ನೂರು ಜನರಲ್ಲಿ ನೂರು ರೀತಿ ಇರುತ್ತದೆ. ನುಡಿಸುವವರಲ್ಲಿ
ಒಂದು, ಕೇಳುವವರಲ್ಲಿ ಮತ್ತೊಂದು. ಆದರೆ ಎಲ್ಲ ಅನುಭವಗಳ ಮೂಲ ಒಂದೇ ನಾದ, ಸಂಗೀತ. ಸಂಗೀತ ಆರನೇ ಧಾತು. ಅದು ಸ್ಪರ್ಶಕ್ಕೆ ನಿಲುಕದ, ದೃಷ್ಟಿಗೆ ನಿಲುಕದ, ಅಳತೆ ಮಾಡಲಾಗದ ಅನುಭೂತಿ. ಒಂದು ಕಛೇರಿಯಲ್ಲಿ ನಾನು ನಿಮಗೆ ಏನೂ ಕೊಡುವುದಿಲ್ಲ, ನೀವು ಏನೂ ತೆಗೆದುಕೊಳ್ಳುವುದಿಲ್ಲ.

ನಾನೂ ಖಾಲಿ ಬರುತ್ತೇನೆ, ನೀವೂ ಖಾಲಿ ಹೋಗುತ್ತೀರಿ. ಆದರೆ ಇಬ್ಬರ ಮನಸ್ಸಿನಲ್ಲೂ ಅಷ್ಟೊಂದು ತರಂಗಗಳೆದ್ದಿರುತ್ತವಲ್ಲ! ಹಾಗಾಗೇ ಪ್ರಪಂಚದ ಎಲ್ಲೆಡೆ ಜನ ಸಂತೋಷದಲ್ಲಿ ಒಂದು ರೀತಿಯ ಸಂಗೀತ ಕೇಳುತ್ತಾರೆ, ದುಃಖದಲ್ಲಿ ಮತ್ತೊಂದು ರೀತಿಯ ಸಂಗೀತ ಕೇಳುತ್ತಾರೆ. ಸಂಗೀತದ ಅನುರಣನ ಮಾತಿಗೆ ಮೀರಿದ್ದೇನನ್ನೂ ನಮ್ಮೊಳಗೇ ಮಾಡುತ್ತದಲ್ಲ, ನಮ್ಮನ್ನು ಕಲಕಿ ಬಿಡುತ್ತದಲ್ಲ, ಅದು ದೈವಿಕ ಅನುಭವವೇ. ಸಂಗೀತ ಅಧ್ಯಾತ್ಮವಲ್ಲದೇ ಮತ್ತೇನು?

ಪ್ರ: ನೀವು ಮದುವೆಯಾಗಿರುವುದು ನಮ್ಮ ಕಾಲದ ಒಬ್ಬ ಶ್ರೇಷ್ಠ ಪಿಟೀಲು ವಾದಕ, ಕುಮರೇಶ್ ಅವರನ್ನು. ನೀವು ಎಷ್ಟೋ ಕಛೇರಿಗಳನ್ನು ಒಟ್ಟಿಗೇ ಮಾಡುತ್ತಿರುತ್ತೀರಿ. ಸಂಗೀತ ನಿಮ್ಮನ್ನು ಹೇಗೆ ಬೆಸೆದಿದೆ?
ಉ: ನಾನು ಸಂಗೀತಾಭ್ಯಾಸ ಶುರು ಮಾಡುವ ಮುಂಚೆಯೇ ಕುಮರೇಶ್ ಕಛೇರಿ ಕೊಡಲು ಶುರುಮಾಡಿಬಿಟ್ಟಿದ್ದರು. ನಾನು ಐದನೇ ವಯಸ್ಸಿನಲ್ಲಿ ಅವರ ಸಂಗೀತ ಕೇಳುತ್ತಿದ್ದೆ! ಕುಮರೇಶ್ ಮತ್ತು ಅವರ ಅಣ್ಣ ಗಣೇಶ್ ಚಿಕ್ಕ ವಯಸ್ಸಿನಿಂದಲೇ ಅಗಾಧ ಪ್ರತಿಭೆಯಿಂದ ಸಂಗೀತ ರಸಿಕರ ಮನತಣಿಸುತ್ತಾ ಬಂದಿದ್ದಾರೆ. ಅವರ ಜೊತೆಗೇ ನನ್ನ ಮದುವೆಯಾಗಿದ್ದು ನನ್ನ ಜೀವನದ ಅತ್ಯಂತ ಸುಂದರ ವಿವರಗಳಲ್ಲೊಂದು. ಅವರು ನನ್ನನ್ನು ನಾನಾಗಿರುವುದಕ್ಕೆ, ನನ್ನ ಸಂಗೀತದಲ್ಲಿ ಹೊಸತನಗಳನ್ನು ಹುಡುಕುವುದಕ್ಕೆೆ ಸದಾ ಬೆಂಬಲ ನೀಡುತ್ತಾರೆ. ನಮ್ಮ ಬೆಳವಣಿಗೆ ಹೀಗೆ ಒಬ್ಬರಿಗೊಬ್ಬರಿಗೆ ಪೂರಕವಾಗಿದೆ. ಎಷ್ಟೋ ಜನ ನಾವಿಬ್ಬರೂ ಸಂಗೀತದಲ್ಲೇ ಮುಳುಗಿರುತ್ತೇವೆ, ಸಂಗೀತದ ಬಗ್ಗೆೆಯೇ ಮಾತನಾಡುತ್ತಿರುತ್ತೇವೆ, ಅದನ್ನು ಬಿಟ್ಟು ಬೇರೇನೂ ಇಲ್ಲ ಎನ್ನುವ ಹಾಗೆ ಪ್ರಶ್ನೆ ಕೇಳುತ್ತಾರೆ. ಅಲ್ಲಾ, ಹಾಗಾಗಿಬಿಟ್ಟರೆ ಅಡಿಗೆ ಯಾರು ಮಾಡುತ್ತಾರೆ, ಬಿಲ್ ಯಾರು ಕಟ್ಟುತ್ತಾರೆ? ನಾವೂ ಎಲ್ಲಾ ದಂಪತಿಗಳಂತೆಯೇ ಜೀವನ ನಡೆಸುತ್ತೇವೆ. ಮನೆಯ ಕೆಲಸಗಳಲ್ಲಿ ಒಬ್ಬರಿಗೊಬ್ಬರು ಸಹಾಯವಾಗುತ್ತೇವೆ. ಆದರೆ ಒಂದಂತೂ ನಿಜ. ಒಂದು ಕಛೇರಿ ಮುಗಿಸಿಕೊಂಡು ಮನೆಗೆ ಬಂದು ಅದರ ಬಗ್ಗೆ ಒಬ್ಬರಿಗೊಬ್ಬರು ಅರ್ಥವಾಗುವ ಹಾಗೆ ಮಾತ ನಾಡಬಹುದು. ಇವತ್ತು ಖರಹರಪ್ರಿಯ ನುಡಿಸುವಾಗ ಒಂದು ಕಡೆ ‘ಧ’ ಸ್ವರಕ್ಕೆ ಜಾರಿದಾಗ ರೋಮಾಂಚನವಾಯ್ತು ಎಂದು ಹೇಳಿದರೆ ಅವರಿಗೆ ಅರ್ಥವಾಗುತ್ತದಲ್ಲ, ಮತ್ತು ಅದಕ್ಕೆ ಒಬ್ಬ ಸಂಗಾತಿ ಯಾಗಿಯೂ, ಸಂಗೀತಗಾರನಾಗಿಯೂ ಅವರು ಸ್ಪಂದಿಸುತ್ತಾರಲ್ಲ, ಅದು ಖಂಡಿತ ಸುಂದರ ಅನುಭವ.

(ಮುಗಿಯಿತು)