Friday, 22nd November 2024

ಮಲೆನಾಡಿನ ಮಂಗ ಮಾಯೆ

ರವಿ ಮಡೋಡಿ ಬೆಂಗಳೂರು

ಮಲೆನಾಡಿನ ಮತ್ತು ಕರಾವಳಿಯ ಹಲವು ರೈತರು ಇಂದು ಮಂಗನ ಕಾಟ ದಿಂದ ನಲುಗಿದ್ದಾರೆ. ಮರದಲ್ಲಿರುವ ಎಳನೀರನ್ನು ಶಿಸ್ತಾಗಿ ತೂತು ಮಾಡಿ ನೀರು ಕುಡಿಯುವ ನೂರಾರು ಮಂಗಗಳು ಅವರ ಜೀವನವನ್ನು ನರಕ ಮಾಡಿವೆ. ಬಾಳೆ, ತೆಂಗು, ಅಡಕೆ, ಏಲಕ್ಕಿ ಎಲ್ಲವನ್ನೂ ಕಿತ್ತು ತಿನ್ನುವ, ಹಾಳುಗೆಡಹುವ ಮಂಗಗಳ ಹಿಂಡನ್ನು ಎದುರಿಸುವ ಪರಿ ಕಾಣದೆ, ಮಲೆ ನಾಡಿನ ರೈತ ಕಂಗಾಲಾಗಿದ್ದಾನೆ. ನಶಿಸುತ್ತಿರುವ ಕಾಡಿನಲ್ಲಿ ಏನೂ ತಿನ್ನಲು ದೊರೆಯದ ಮಂಗಗಳು, ಗದ್ದೆಗೆ ಬಂದು ಬತ್ತವನ್ನು ತಿನ್ನುವುದೂ ಇದೆ! ಮಂಗಗಳು ಆಂಜನೇಯನ ಪ್ರತಿನಿಧಿಗಳು ಎಂಬ ದೈವಿಕ ಭಾವನೆಯೂ ಸೇರಿಕೊಂಡು, ಮಂಗಗಳನ್ನು ಓಡಿಸಲು ಕಠಿಣ ಕ್ರಮ ಕೈಗೊಳ್ಳಲು ರೈತ ಹಿಂಜರಿಯುತ್ತಿದ್ದಾನೆ.

ತೆಂಗಿನ ಮರವೇರಿ ಎಳನೀರನ್ನು ತೂತು ಮಾಡಿ, ಮನುಷ್ಯರಂತೆಯೇ ಕುಡಿಯುವ ಮಂಗಗಳ ಉಪಟಳವನ್ನು ನಿಗ್ರಹಿಸಲು,
ಸರಕಾರವು ‘ಮಂಗಗಳ ಪಾರ್ಕ್‌‘ ಮಾಡುತ್ತೇವೆನ್ನುವ ಬಾಲಿಶ ಆಶ್ವಾಸನೆಯನ್ನು ನೀಡುತ್ತಿದೆ! ಹಿಂಡು ಹಿಂಡು ಮಂಗಗಳು
ಮಲೆನಾಡಿನ ಹಲವು ರೈತರ ಜೀವವನ್ನು ಹಿಂಡುತ್ತಿವೆ, ಅವರ ದಿನಚರಿಯನ್ನು ಕಾಡುತ್ತಿವೆ. ಅಷ್ಟಕ್ಕೂ, ಅಡಿಕೆ, ತೆಂಗು,
ಬಾಳೆಕಾಯಿ, ತರಕಾರಿಗಳನ್ನು ತಿನ್ನುವ ಮಂಗಗಳು ಕಾಡುಪ್ರಾಣಿಗಳೆ? ಇಂತಹ ಪ್ರಶ್ನೆಗಳನ್ನು ಎದುರಿಸುವ ಆ ಭಾಗದ ಕೃಷಿಕ,
ಇಂದು ಗೊಂದಲದಲ್ಲಿದ್ದಾನೆ.

ಅಯ್ಯೋ ನೋಡೆ, ಏನೋ ಸದ್ದು ಕೇಳ್ತಾಯಿದೆ. ಚೌತಿ ಹಬ್ಬದ ಕಡುಬಿಗೆ ಬಿಟ್ಟ ಎರಡು ಮುಳ್ಳು ಸೌತೆಕಾಯಿಗಳನ್ನೂ ಅವು ಬಿಡಲ್ಲ ಅನ್ನಿಸುತ್ತೆ’ ಎಂದು ಅಡುಗೆಯ ಮನೆಯಲ್ಲಿ ಊಟ ಮಾಡುತ್ತಿದ್ದ ಸುಬ್ಬಾಭಟ್ಟರು, ಜಗುಲಿಯಲ್ಲಿದ್ದ ಹೆಂಡತಿಗೆ ಹೇಳಿದರು. ಗಂಡನ ಆದೇಶವನ್ನು ಮೀರಲಾರದ ಸರಸ್ವತಮ್ಮನವರು, ತಮ್ಮ ಕುಂಟು ಕಾಲಿನಲ್ಲಿ ನಡೆಯುತ್ತಾ, ಕೋಲು ಹಿಡಿದುಕೊಂಡು ಟಾಮಿ ನಾಯಿಗೆ ಹಿಡ್ಡಿ ಹಿಡ್ಡಿ ಎಂದು ಹುರಿದುಂಬಿಸಿ, ಸೌತೆ ಚಪ್ಪರದ ಕಡೆಗೆ ಹೊರಟರು. ಟಾಮಿ ತನ್ನ
ಬಾಲವನ್ನು ನೆಟ್ಟಗೆ ಮಾಡಿಕೊಂಡು, ಯುದ್ಧಕ್ಕೆ ಹೊರಟವರಂತೆ, ಮಂಗನನ್ನು ಹಿಡಿಯುವುದಕ್ಕೆ ಕೂಗುತ್ತ ಓಡಿತು. ಬರುತ್ತಿರುವ ಆತಂಕವನ್ನು ಗ್ರಹಿಸಿದ ಕಪಿ, ಅಲ್ಲಿಯೇ ತಿನ್ನಬೇಕು ಎಂದುಕೊಂಡಿದ್ದ ಸೌತೆಕಾಯಿಯನ್ನು, ತಕ್ಷಣವೇ ಕಿತ್ತುಕೊಂಡು, ಹತ್ತಿರ ದಲ್ಲಿದ್ದ ಮರವೇರಿವನ್ನು ಏರಿ ಹಲ್ಲುಕಿರಿದು, ಟಾಮಿಯನ್ನು ಅಣಕಿಸಿತು. ಒಂದೇ ಉಸಿರಿಗೆ ಓಡಿ ಬಂದಿದ್ದ ಟಾಮಿಗೆ ನಿರಾಸೆ
ಯಾದರೂ, ತನ್ನ ಪ್ರಯತ್ನವನ್ನು ಬಿಡದೇ, ಕೂಗುತ್ತಲೇ ಇತ್ತು.

ಹೇಳಿ ಕೇಳಿ ಮಂಗ ಅದು, ತಾನೇ ಬೆಣ್ಣೆೆಯನ್ನು ತಿಂದು, ಮೇಕೆಯ ಬಾಯಿಗೆ ಒರೆಸಿದ ಚಾಣಾಕ್ಷ. ಈಗ ಅಷ್ಟು ಸುಲಭವಾಗಿ ಟಾಮಿಯ ಕೈಗೆ ಸಿಕ್ಕಿ ಬೀಳುವುದೇ? ಕುಂಟುತ್ತ ಬಂದ ಸರಸ್ವತಮ್ಮ, ಕೋಲನ್ನು ಬಡಿಯುತ್ತ, ದೊಡ್ಡ ದ್ವನಿಯಲ್ಲಿ ಶಬ್ದಗೈದರು. ಯಾವಾಗ ಸರಸ್ವತಮ್ಮನ ಪ್ರವೇಶವಾಯಿತೋ, ತನಗೆ ಅಪಾಯವೆಂದು ಭಾವಿಸಿದ ಮರ್ಕಟ, ಪಕ್ಕದಲ್ಲಿರುವ ಎತ್ತರದ ಮರ ವನ್ನು ಏರಿತು. ಸರಸ್ವತಮ್ಮ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಎಸೆದರಾದರೂ, ಅದು ಮಂಗನ ಹತ್ತಿರವೂ ಹೋಗಲಿಲ್ಲ. ಮಂಗ ಮಾತ್ರ ‘ನನ್ನ ನೀನು ಗೆಲ್ಲಾರೆ. ಛಲವೇತಕೆ’ ಎಂಬ ನೋಟವನ್ನು ಬೀರಿ, ತನ್ನ ಎಂಜಲಿನಿಂದ ಮುಖವನ್ನು ಉಜ್ಜಿಕೊಂಡಿತು. ಇದನ್ನೇ ತಪ್ಪಾಗಿ ಅರ್ಥವಿಸಿಕೊಂಡ ಸರಸ್ವತಮ್ಮನಿಗೆ ಕೋಪ ಉಕ್ಕೇರಿ, ತಮ್ಮ ಸಿಟ್ಟನ್ನು ಟಾಮಿಯ ಮೇಲೆ ಹಾಕಿದರು. ‘ಈ ದರಿದ್ರ ನಾಯಿ. ಒಂದು ಮಂಗ ಬಂದರೂ, ಕೂಗೊಲ್ಲ, ಹಿಡಿಯಲ್ಲ. ಇದಕ್ಕೆ ಅನ್ನ ಹಾಕುವುದೇ ದಂಡ’ ಎಂದು ಛೀಮಾರಿ ಹಾಕಿ, ಬೈಯುತ್ತಲೇ ಮನೆಯ ಕಡೆಗೆ ಹೋರಟರು.

ದಿನ ನಿತ್ಯದ ಕಥೆ

ಇದು ಸುಬ್ಬಾಭಟ್ಟರ ಮತ್ತು ಮಲೆನಾಡಿನ ಮತ್ತು ಕರಾವಳಿಯ ಹಲವು ರೈತರ ಪ್ರತಿದಿನದ ಕಥೆ. ನಿತ್ಯವೂ ಈ ಮಂಗಗಳು ಅಡಿಕೆ, ಯಾಲಕ್ಕಿ, ಎಳನೀರು, ಬಾಳೆ, ತರಕಾರಿಗಳನ್ನು ಕಿತ್ತು ತಿಂದು ಜೊತೆಗೆ ಒಂದಷ್ಟನ್ನು ಹಾಳು ಮಾಡಿ ಹೋಗುವುದು ಸಾಮಾನ್ಯ. ಜನರಿಗೆ ಇವುಗಳನ್ನು ಓಡಿಸುವುದೇ ಒಂದು ಉದ್ಯೋಗ. ಮನೆಯವರು ಊಟಕ್ಕೆ ಕುಳಿತಿರುವಾಗ ಈ ಮಂಗಗಳು ಹಿಂಡು ಹಿಂಡಾಗಿ ಬಂದು ಬೆಳೆಗಳನ್ನು ನಾಶಪಡಿಸುತ್ತದೆ. ಹಾಗಾಗಿಯೇ ಒಟ್ಟಾಗಿ ಮನೆಯಲ್ಲಿ ಕುಳಿತು ಊಟ ಮಾಡುವ ಅವಕಾಶ ಇಲ್ಲ. ಒಬ್ಬರಾ ದರೂ ಈ ದಾಳಿಕೋರರ ಕಾವಲಿಗೆ ನಿಲ್ಲಬೇಕಿತ್ತು. ಇಲ್ಲವಾದರೆ ಕಷ್ಟಪಟ್ಟು ಬೆಳೆದದ್ದು ಕ್ಷಣಾರ್ಧದಲ್ಲಿ ಮಂಗನ ಹೊಟ್ಟೆಗೆ ಸೇರುತ್ತಿದ್ದವು.

ಒಂದು ಸಲ ಸುಬ್ಬಾಭಟ್ಟರು ಬಾಳೆಗೊನೆಯನ್ನು ಸಂತೆಯಲ್ಲಿ ಮಾರುವುದಕ್ಕೆ ಬೈಕಿನಲ್ಲಿರಿಸಿಕೊಂಡು ಹೋರಟರು. ಮಾರ್ಗ ಮಧ್ಯೆೆ ಜಲಭಾದೆಯನ್ನು ತೀರಿಸಿಕೊಳ್ಳಲು ಗಾಡಿಯನ್ನು ನಿಲ್ಲಿಸಿದರು. ಬಂದು ನೋಡಿದರೆ, ಐದಾರು ಮಂಗಗಳು ಬಾಳೆಗೊ ನೆಯ ಚಿಪ್ಪನ್ನು ಹಿಸಿದು, ಎತ್ತಿಕೊಂಡು ಮರವನ್ನೆರು ತ್ತಿದ್ದವು. ‘ಅಯ್ಯೋ! ನನ್ನ ಬಾಳೆಗೊನೆ’ ಎನ್ನುವಷ್ಟರಲ್ಲಿ ಬಾಳೆಗೊನೆ
ಮಂಗಮಾಯವಾಗಿತ್ತು. ಇಡೀ ಬಾಳೆಗೊನೆಯಲ್ಲಿ ಅವುಗಳು ಉಳಿಸಿದ್ದು ಒಂದು ಚಿಪ್ಪು ಬಾಳೆಕಾಯಿ ಮಾತ್ರ. ಅದನ್ನಿಟ್ಟು ಕೊಂಡು ಸಂತೆಗೆ ಹೋಗಿ ಅವಮಾನಗೊಳ್ಳುದಕ್ಕಿಂತ, ಮನೆಗೆ ಹೋಗುವುದು ಉತ್ತಮವೆಂದು ಭಾವಿಸಿ, ಇದ್ದ ಚಿಪ್ಪುನ್ನು ಮಂಗ ಗಳಿಗೆ ಕೊಟ್ಟು, ಸಪ್ಪೆಮೋರೆ ಹಾಕಿಕೊಂಡು ಮನೆಗೆ ಹೊರಟರು.

ಹೋದ ವರುಷ ಸುಬ್ಬಾಭಟ್ಟರ ಕಥೆ ಇದಕ್ಕಿಂತ ಭಿನ್ನ. ಕೊಳೆಯ ರೋಗದಿಂದ ಅಡಿಕೆಯೆಲ್ಲ ಉದುರಿ ಹೋಗಿ, ಉಳಿದಿರುವ ಅಡಿಕೆಯನ್ನು ಉಳಿಸಿಕೊಳ್ಳುವುದಕ್ಕೆ ಹರಸಾಹಸ ಮಾಡಬೇಕಾಗಿ ಬಂತು. ಆದರೆ ಈ ಮಂಗಗಳು ಹಟಕ್ಕೆ ಬಿದ್ದವರಂತೆ ದಿನವೂ ತೋಟಕ್ಕೆ ನುಗ್ಗಿ, ಎಳೆಯ ಅಡಿಕೆಕಾಯಿಯನ್ನು ಜಗಿದು ಕೆಳಕ್ಕೆ ಹಾಕುತ್ತಿದ್ದವು. ಭಟ್ಟರಿಗೆ ಅಳುವ ಸ್ಥಿತಿ. ಮಂಗಗಳ ಉಪಟಳ ವನ್ನು ತಡೆಯುವುದಕ್ಕೆ ಒಬ್ಬ ಕಾವಲುಗಾರನನ್ನು ಹುಡುಕಿದರು. ಆ ಕೆಲಸಕ್ಕೆ ಆಯ್ಕೆಯಾಗಿದ್ದು ಕ್ಯೆೆಪ್ಪ ತಿಮ್ಮ. ಅವನಿಗೆ ಕಿವಿ ಸ್ವಲ್ಪ ಮಂದ. ಜೊತೆಗೆ ವಯಸ್ಸಾಗಿತ್ತು. ಬಹಳ ನಿಯತ್ತಿನ ಮನುಷ್ಯ. ಅಡಿಕೆ ಸುಗ್ಗಿ ಮುಗಿಯುವವರೆಗೆ ಕಾವಲು ಕಾಯುತ್ತೇನೆ ಎಂದು ಭರವಸೆ ನೀಡಿ, ಕಾಯುತ್ತಿದ್ದ. ಆದರೆ ಅವನಿಗೆ ಮಂಗನ ಹಿಂಡು ಬಂದಿದ್ದೇ ತಿಳಿಯುತ್ತಿರಲಿಲ್ಲ. ಎಲ್ಲಾ ತಿಂದು ಮುಗಿಸಿದ ಮೇಲೆ, ಆಗ ಓಡಿಸುವುದಕ್ಕೆ ಮುಂದಾಗುತ್ತಿದ್ದ. ಈ ಕಡೆ ಸುಬ್ಬಾಭಟ್ಟರಿಗೆ ಅಡಿಕೆ ಕಾಯಿಯೂ ಉಳಿಯಲಿಲ್ಲ. ಈ ಕಡೆ ತಿಮ್ಮನಿಗೆ ಸಂಬಳವನ್ನು ಕೊಡುವುದೂ ತಪ್ಪಲಿಲ್ಲ.

ಮಂಗನ ಹಿಡಿಯುವವರು ಬಂದರು
ತಮ್ಮ ಕೊನೆಯ ಪ್ರಯತ್ನವೆಂಬಂತೆ, ಮಂಗ ಹಿಡಿಯುವರನ್ನು ಕರೆಯಿಸಿ, ಅವರಿಗೆ ಹಣಕೊಟ್ಟು, ಹತ್ತೆಂಟು ಮಂಗಗಳನ್ನು ಹಿಡಿದು, ಘಾಟಿಯಲ್ಲಿ ಬಿಟ್ಟು ಬಂದರು. ಬೋನಿನಲ್ಲಿ ಹಿಡಿದು ಸಾಗಿಸಿದ್ದನ್ನು ನೋಡಿದ ಇತರ ಮಂಗಗಳು, ತಮ್ಮ  ಜೀವ ಬೆದರಿಕೆಯಿಂದ ಊರನ್ನು ಬಿಟ್ಟವು. ಒಂದು ತಿಂಗಳು ಯಾವ ಕಾಟವಿಲ್ಲದೇ ಮನೆ-ಮನಗಳು ಶಾಂತವಾದವು. ತೆಂಗಿನ ಎಳನೀರು ಸ್ವಲ್ಪ ಬಲಿಯತೊಡಗಿದವು. ತಾವು ಗೈದ ಸಾಹಸವನ್ನು ಮನೆಯ ಮುಂದೆ ಕುರ್ಚಿಯಲ್ಲಿ ಕುಳಿತು, ಕವಳ ಹಾಕಿಕೊಂಡು ಬಂದವರಿಗೆಲ್ಲ ತಿಳಿಸಿದರು. ಆದರೆ ಆ ಖುಷಿ ಹೆಚ್ಚು ದಿನ ಇರಲಿಲ್ಲ. ಬೇರೆ ಯಾರೋ ಪೇಟೆ ಮಂಗಗಳನ್ನು ರಾತ್ರೋರಾತ್ರಿ ಇವರ ಮನೆಯ ಹಿಂದಿನ ಕಾಡಿನಲ್ಲಿ ಬಿಟ್ಟು ಹೋಗಿದ್ದರು. ಈ ಪೇಟೆಯ ಮಂಗಗಳಿಗೆ ರಸ್ತೆ ಮನೆಗಳು ಪರಿಚಿತವಾಗಿರುತ್ತದೆ ವಿನಹಃ ಕಾಡು ಎಂದರೆ ಅಪರಿಚಿತ.

ಹಳ್ಳಿಯೊಳಗೆ ಬಂದು, ಹೊಟ್ಟೆೆಗೆ ಗತಿಯಿಲ್ಲದೇ ಅಲ್ಲಿದ್ದ ಮನೆಗಳ ಮೇಲೆ ದಾಳಿ ನಡೆಸತೊಡಗಿದವು. ಇತ್ತ ತಮ್ಮ ಸ್ವಸ್ಥಾನಕ್ಕೆ ಬೇರೊಂದು ಗುಂಪಿನ ಮಂಗಗಳು ಬಂದಿರುವುದನ್ನು ಗುರುತಿಸಿದ ಮೊದಲಿನ ಮಂಗಗಳು, ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಯಿತು. ಅದರ ಬಲ ಪ್ರದರ್ಶನಕ್ಕೆ ವೇದಿಕೆಯಾಗಿದ್ದು ಸುಬ್ಬಾಭಟ್ಟರ ಮನೆಯೇ. ಎರಡು ಪಗಂಡಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟಕ್ಕೆ ಮುಂದಾದವು. ಒಂದು ಪಂಗಡ ಎಳನೀರು, ಅಡಿಕೆಯನ್ನು ಕಿತ್ತರೇ, ಮತ್ತೊಂದು ಪಂಗಡ ಒಣಹಾಕಿದ ವಸ್ತುಗಳನ್ನು ಕಿತ್ತುಕೊಂಡು ಸುಬ್ಬಾಭಟ್ಟರನ್ನು ಇನ್ನಷ್ಟು ಕಾಡಿದವು!

ಇಡೀ ಮಲೆನಾಡಿನಲ್ಲಿ ಮಂಗಳ ಕಾಟಕ್ಕೆ ಬೇಸತ್ತು ಎಲ್ಲರೂ ಸರ್ಕಾರದ ಗಮನವನ್ನು ಸೆಳೆಯುವುದಕ್ಕೆ ಪ್ರತಿಭಟನೆ ಮಾಡ
ಬೇಕೆಂದು ಯೋಚಿಸಿ ಒಂದು ದಿನ ನಿಗದಿ ಮಾಡಿದರು. ಸುಬ್ಬಾಭಟ್ಟರು ಸಹ ಪತ್ನಿ ಸಮೇತ ಹೋಗಿ, ಸಾವಿರಾರು ಜನರ ಜತೆ ಸೇರಿ, ಪ್ರತಿಭಟನೆ ಮಾಡಿ, ಮನೆಗೆ ಬಂದರು. ಬೆಳಗ್ಗೆಯೇ ಎಲ್ಲ ಅಡುಗೆಯನ್ನು ಮಾಡಿಟ್ಟು ಹೋಗಿದ್ದರು. ವಾಪಸು ಬಂದು ಊಟಕ್ಕೆ ಅಣಿಯಾಗಬೇಕು ಎನ್ನುವಷ್ಟರಲ್ಲಿ ಅಡುಗೆ ಮನೆಯಲ್ಲಿ ಅನ್ನದ ಪಾತ್ರೆಯೇ ಸಿಗಲಿಲ್ಲ! ಮೇಲೆ ನೋಡಿ ದಾಗ, ಅಡುಗೆ ಮನೆಯ ಹಂಚುಗಳು ಸರಿದದ್ದು ಕಾಣಿಸಿತು.

ಒಂದು ಕ್ಷಣ ಹೌಹಾರಿ, ಮನೆ ಕಳ್ಳತನವಾಗಿದೆ ಅಂದುಕೊಂಡರು. ಆದರೆ ಎಲ್ಲಾ ವಸ್ತುಗಳು ಸರಿಯಾಗಿಯೇ ಇದ್ದವು, ಅನ್ನದ ಪಾತ್ರೆಯೊಂದನ್ನು ಬಿಟ್ಟು! ಹಿತ್ತಲಿಗೆ ಬಂದರೆ, ಅಲ್ಲಿ ಅವರ ಪಾತ್ರೆ ಮಗಚಿ ಬಿದ್ದಿತ್ತು. ಅಲ್ಲೆಲ್ಲ ಅನ್ನವೂ ಚೆಲ್ಲಿತ್ತು. ತೊಂಡೆಯ ಚಪ್ಪರದಲ್ಲಿ ಕುಳಿತಿದ್ದ ಮಂಗ, ಅನ್ನವನ್ನು ತಿನ್ನುತ್ತಾ, ಇನ್ನೊಂದಿಷ್ಟನ್ನು ಅದಾಗಲೇ ತನ್ನ ಗಂಟಲಿನಲ್ಲಿ ತುಂಬಿಕೊಂಡು,
ಮೂತಿ ದಪ್ಪ ಮಾಡಿಕೊಂಡಿತ್ತು!

ಮಲೆನಾಡಿನ ಮತ್ತು ಕರಾವಳಿಯ ಹಲವು ಹಳ್ಳಿಯವರು ಇಂದು ಮಂಗಗಳಿಂದ ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಇಂದು
ಇಡೀ ಮಲೆನಾಡು ಮಂಗನ ದಾಳಿಗೆ ತುತ್ತಾ ಗಿ ಜರ್ಜರಿತವಾಗಿದೆ. ನೂರಾರು ವರುಷಗಳಿಂದ ಮಾಡಿಕೊಂಡು ಬಂದ ತೋಟ-ಗದ್ದೆಗಳು ಪಾಳು ಬೀಳುತ್ತಿವೆ. ತೆಂಗಿನ ಮರದ ಎಳನೀರನ್ನು ಮಂಗಗಳು ತೂತು ಮಾಡಿ ಕುಡಿಯುತ್ತಿವೆ.

ಹತ್ತೈವತ್ತು ಕೆ.ಜಿ. ಏಲಕ್ಕಿ ಬೆಳೆಯುತ್ತಿದ್ದವರು ಇಂದು ಮಂಗನ ಕಾಟದಿಂದಾಗಿ, ಅರ್ಧ ಕೆ.ಜಿಗೆ ಬಂದು ಮುಟ್ಟಿದ್ದಾರೆ.
ರಾಸಾಯನಿಕ ಮುಕ್ತವಾಗಿ ಬೆಳೆದುಕೊಳ್ಳುತ್ತಿದ್ದ ಹಣ್ಣು-ತರಕಾರಿಗಳು ಮಂಗನ ಬಾಯಿಗೆ ಗ್ರಾಸವಾಗುತ್ತಿವೆ. ಮಲೆನಾಡಿನ ಕೃಷಿಕರ ಜೀವನ ಮತ್ತು ಅದರ ನಿರ್ವಹಣೆಯನ್ನು ಇಂದು ಮಂಗಗಳು ನಿರ್ಧರಿಸುತ್ತಿವೆ. ಮಂಗನಿಂದ ಮಾನವ ಎನ್ನುವುದನ್ನು ಬದಲಿಸಿ, ಮಂಗಗಳೇ ಮಾನವನನ್ನು ಮಂಗ ಮಾಡುತ್ತಿವೆ ಎನ್ನಬೇಕಾಗಿರುವುದು ಮಲೆನಾಡು ಮತ್ತು ಕರಾವಳಿಯ ರೈತರ ಪಾಲಿನ ಕಟುವಾಸ್ತವ.

ಹುಲಿಯಾದ ನಾಯಿ
ಈ ಮಧ್ಯೆ ಸುಬ್ಬಾಭಟ್ಟರಿಗೆ ಹೊಸ ಆಲೋಚನೆ ಬಂತು. ಮನೆ ನಾಯಿ ಟಾಮಿಗೆ ಹುಲಿಯಂತೆ ಬಣ್ಣವನ್ನು ಬಳಿದು, ಪಟ್ಟೆಗಳ ಅಲಂಕಾರ ಮಾಡಿ ತೋಟದಲ್ಲಿ ಬಿಟ್ಟರು. ಮಂಗಗಳು ಈ ವಿಚಿತ್ರ ಆಕೃತಿಯನ್ನು ನೋಡಿ ಹೆದರಿ, ಒಂದು ವಾರ, ತೋಟದ ಕಡೆಗೆ ಸುಳಿಯಲಿಲ್ಲ. ಸುಬ್ಬಾಭಟ್ಟರು ಮೀಸೆಯಲ್ಲೇ ನಕ್ಕರು. ಆದರೆ ಈ ಮಂಗಗಳು ತಮ್ಮ ಸೋಲನ್ನು ಸುಲಭವಾಗಿ ಬಿಟ್ಟುಕೊಡುವ ಜಾತಿಯೇ!

ನಾಯಿ ಆಗಾಗ ಕೂಗುವುದನ್ನು ಕಂಡು, ಅದರ ನಿಜಬಣ್ಣವನ್ನು ಪತ್ತೆ ಮಾಡಿ ದವು. ಒಂದು ವಾರದ ಸುಬ್ಬಾಭಟ್ಟರ ಗೆಲುವನ್ನು,  ತನ್ನ ಒಂದೇ ಕೂಗಿನಲ್ಲಿ ಟಾಮಿ ಮಣ್ಣುಪಾಲು ಮಾಡಿ, ಮತ್ತೆ ‘‘ಹಿಡಿ ಹಿಡಿ’’ ಎಂದು ಕೂಗುವ ಉದ್ಯೋಗ ವನ್ನು ಸುಬ್ಬಾಭಟ್ಟರಿಗೆ ಕರುಣಿಸಿತು!