Friday, 22nd November 2024

ನಾವು ಕಾಫಿ ಮಂದಿ

ಸುಲಲಿತ ಪ್ರಬಂಧ

ಕಾಫಿಯನ್ನು ಕೆಲವರು ಅಮೃತ ಎಂದೂ ಕರೆದಿದ್ದಾರೆ. ಚಳಿ ಹಿಡಿದ ಮೈಯನ್ನು ಬೆಚ್ಚಗೆ ಮಾಡುವ, ಜಡ್ಡು ಹಿಡಿದ ಮೆದುಳಿಗೆ ಸ್ಪೂರ್ತಿ ತುಂಬುವ ಕಾಫಿಯು, ನಮ್ಮ ಮಲೆನಾಡಿನ ಅಮೃತ ಎನ್ನಬಹುದು!

ಸುಮಾ ವೀಣಾ ಹಾಸನ

ಮಲೆನಾಡಿನ ಅಮೃತ ಅಂದರೆ ಕಾಫಿ ಅಲ್ವೆೆ! ಕೊರೆಯುವ ಮೈ ಚಳಿ ಬಿಡಿಸಲು ಸುಖೋಷ್ಣ ಸ್ಥಿತಿಯಲ್ಲಿರುವ ಹಿತವಾದ ಪರಿಮಳ ಬೀರುವ ಕಾಫಿ ಬೇಕು! ಕಾಫಿ ತನ್ನ ಪರಿಮಳ ಮತ್ತು ಬಣ್ಣದಿಂದ ಖ್ಯಾತ. ಹಾಗಾಗಿ ಕಡು ಕಂದು ಬಣ್ಣವನ್ನು ಕಾಫಿ ಕಲರ್ ಅಥವಾ ಕಾಫಿಬ್ರೌನ್ ಎಂದು ಕರೆಯುವುದು.

ಯುಗಾದಿ ಕಳೆದ ನಂತರ ಬರುವ ಮಳೆಯಿಂದ ಕಾಫಿ ಹೂ ಅರಳುತ್ತದೆ, ಅದರ ಪರಿಮಳವೇ ಚೇತೋಹಾರಿ. ಹೂವಿಂದ ಮೊದಲ್ಗೊಂಡು ಅರೋಮ್ಯಾಟಿಕ್ ಕಾಫಿಯವರೆಗೆ ಅಂದರೆ, ಕಾಫಿ ಹೂ, ಕಾಫಿ ಹಣ್ಣು, ಕಾಫಿ ಕೊಯ್ಲು, ಕಾಪಿ ಕಣ, ಕಾಫಿ ಪಲ್ಪ್‌, ಕಾಫಿ ಬೇಳೆ, ರೊಬೊಸ್ಟ, ಪಾಚ್ಮೆೆರ್ಂಟ್, ಚೆರ್ರಿ, ಕಾಫಿ ಪ್ಲ್ಯಾಂಟರ್‌, ಕಾಫೀ ಪ್ಲಾಂಟೇಶನ್, ಕಾಫಿ ಬೋರ್ಡ್, ಕಾಫಿ ಕ್ಯೂರಿಂಗ್ ಪದಗಳನನ್ನೇ ಕೇಳಿ ಬೆಳೆದ ಕಾಫಿ ಮಂದಿ ನಾವು.

ಕಾಫೀ ಗಿಡದ ಬುಡಗಳನ್ನು ಅಲಂಕಾರಿಕ ವಸ್ತುಗಳನ್ನಾಗಿ ಪರಿವರ್ತಿಸಿ ಬಳಸುತ್ತಾರೆ. ನಮ್ಮಜ್ಜಿ, ನಮ್ಮಮ್ಮ, ನಾನು, ನನ್ನ ತಮ್ಮಂದಿರು ಎಲ್ಲರೂ ಕಾಫಿ ಪ್ರಿಯರೆ. ಕಾಫಿಯಲ್ಲೂ ಆರೋಗ್ಯ ಕಂಡು ಕೊಂಡವರು! ನನ್ನ ಪ್ರಕಾರ ಕಾಫಿ ಅಂದರೆ ಅದೊಂದು ಕಂಫರ್ಟ್. ಘಮಘಮಿಸುವ ಬಿಸಿ ಕಾಫಿಯನ್ನು ಕುಡಿಯುವುದೆಂದರೆ, ಅದೊಂದು ಆಹ್ಲಾದಕಾರಿ ಅನುಭವ. ಯಾರಾದರೂ ಮಾತಿಗೆ ಸಿಕ್ಕರೆ ‘‘ಕಾಫಿ ಆಯಿತ? ಸಂಜೆ ಕಾಫಿಗೆ ಏನು?’’ ಎನ್ನುತ್ತಾರೆ. ಕ್ಯಾರೆಟ್-ಬಿಟ್ರೂಟ್, ಜಹಾಂಗಿರ್- ಜಿಲೇಬಿ ಅನ್ನುವಂತೆ ಕಾಪಿ-ಟೀ ಎನ್ನುವುದುಂಟು. ಕಾಫಿ ಕುಡಿಯುವುದಕ್ಕೂ, ಹೀರುವುದಕ್ಕೂ, ಸವಿಯುವುದಕ್ಕೂ ವ್ಯತ್ಯಾಸವಿದೆ. ಕಾಫಿ ಕಪ್‌ಗಳಲ್ಲಿ ಎಷ್ಟು ವಿಧ !

ಸ್ಟೀಲ್, ಹಿತ್ತಾಳೆ, ಬೆಳ್ಳಿ, ಪಿಂಗಾಣಿ, ಗಾಜು ಇತ್ಯಾದಿ. ಬೈಟು ಕಾಫಿ, ಬೈತ್ರಿ ಕಾಫಿ ಪದಗಳನ್ನು ಮಲೆನಾಡು ಬಿಟ್ಟಮೇಲೆ ನಾನು ಪರಿಚಯಿಸಿಕೊಂಡದ್ದು. ಆರಾಮ ಕುರ್ಚಿ, ಸುಶ್ರಾವ್ಯ ಸಂಗೀತ, ಪರಿಮಳ ಭರಿತ ಕಾಫಿ, ದಿನಪತ್ರಿಕೆಯಿರುವ ಬೆಳಗು, ನಿಜ ಅರ್ಥ ದಲ್ಲಿ ಸ್ವರ್ಗ ಸಮಾನ ಬೆಳಗು!

ಎಮ್ಮೆ ಹಾಲಿನ ಕಾಫಿ

ಕಾಫಿ ಮಾಡು, ಕಾಪಿ ಕಾಸು, ಕಾಫಿ ಇಡು, ಕಾಫಿ ಬೆರೆಸು,ಕಾಫಿ ಮಿಕ್ಸ್‌ ಮಾಡು ಇವೆಲ್ಲಾ ಪದಗಳು ಕಾಫಿ ಮಾಡುವ ಬೇರೆ ಬೇರೆ ಪ್ರಕಾರಗಳನ್ನು ತಿಳಿಸುತ್ತದೆ. ಹಿಂದೆ ಕಾಫಿ ಪುಡಿಯನ್ನು ಕುದಿಸಿ, ಹಾಲು ಹಾಕಿ ಸೋಸುತ್ತಿದ್ದರು, ಕಾಫಿ ಪುಡಿಯನ್ನು ಲೋಟಕ್ಕೆ ಹಾಕಿ ಕುದಿಯುವ ಹಾಲನ್ನು ಹಾಕಿ ಒಂದು ನಿಮಿಷ ಬ್ಲೆೆಂಡ್ ಆಗಲು ಬಿಟ್ಟು ಸೋಸುವುದಿತ್ತು. ನಂತರ ಫಿಲ್ಟರ್ ಕಾಫಿ. ಈಗ ಇನ್ಸ್ಟಂಟ್ ಕಾಫಿ ಪ್ಯಾಕನ್ನು ಕತ್ತರಿಸಿ ಬಿಸಿ ಹಾಲಿಗೆ ಸೇರಿಸುವುದು ಅಷ್ಟೇ. ಫಿಲ್ಟರ್ ಕಾಫಿ, ಹಾಲಲ್ಲಿ ಕಾಫಿ, ನೀರಲ್ಲಿ ಕಾಫಿ, ಎನೇ ಆದರೂ ಒಳ್ಳೆಯ ಕಾಫಿಗೆ ಒಳ್ಳೆಯ ಹಾಲೂ ಬೇಕು! ಹಸುವಿನ ಹಾಲಿಗಿಂತ ಎಮ್ಮೆ ಹಾಲಿನಲ್ಲಿ ಕಾಫಿ ರುಚಿಕರ. ತೆಂಗಿನ ಹಾಲಿನಲ್ಲಿಯೂ ಕಾಫಿ ಮಾಡುತ್ತಾರೆ. ಹಿಂದೆ ಮಲೆನಾಡಿನ ಮನೆಗಳಲ್ಲಿ ಕಡಿಮೆ ಬೆಲ್ಲ, ಕಾಫಿ ಪುಡಿ ಹಾಕಿದ ಕಾಫಿ ಯಾವಾಗಲೂ ಇದ್ದೇ ಇರುತ್ತಿತ್ತು. ಅದೇ ಈಗ ಬ್ಲ್ಯಾಕ್ ಕಾಫಿ ಆಗಿದೆ, ಫ್ಯಾಷನ್ ಕಾಫಿ ಆಗಿದೆ. ಅದರಲ್ಲೂ, ಆರ್ಗ್ಯಾನಿಕ್ ಬೆಲ್ಲ ಹಾಕಿದ ಖಾಲಿ ಕಾಫಿ ಈಗಿನ ಟ್ರೆಂಡ್.

ಡಬ್ಬಿ ಕಾಫಿಪುಡಿ
ಮನೆಯ ಆಚೆಯ ಒಲೆಯ ಮೇಲೆ ಮರಳು ಬಿಸಿ ಮಾಡಿ ಕಾಫಿ ಬೇಳೆ ಹುರಿಯುತ್ತಿದ್ದರು. ರನ್ನನ ಗದಾಯುದ್ಧದಲ್ಲಿ ಬರುವ ‘‘ಪುರಿಗಡಲೆಗೆ ಮರಳ್ ಕಾಯ್ವ ತೆರದಿ’’ ಎಂಬ ಮಾತು ನೆನಪಾಗುತ್ತದೆ. ‘‘ಕಾಫಿ ಬೀಜ ಹುರಿಯಲ್ ಮರಳ್ ಕಾಯ್ವ ತೆರದಿ’’ ಅನ್ನಬಹುದೇನೋ. ಕಾಫಿ ಬೇಳೆಯನ್ನು ಹದವಾಗಿ ಹುರಿದು, ಒರಳಲ್ಲಿ ಕುಟ್ಟಿ ಪುಡಿ ಮಾಡಿ, ಜರಡಿ ಹಿಡಿದು ಡಬ್ಬಗಳಲ್ಲಿ ತುಂಬಿ ಡುತ್ತಿದ್ದ ದಿನಗಳು ಸರಿದು ಬಹುದಿನವಾಗಿದೆ. ನಂತರ ಅದೇ ಹೋಂಮೇಡ್ ಪುಡಿಗೆ ಚಿಕೋರಿ ತಂದು ಬೆರೆಸಿಕೊಳ್ಳುತ್ತಿದ್ದ ದಿನ ಗಳು. ಅವೂ ಕಳೆದು ಕಾಫಿ ಪುಡಿ ಮಿಲ್ಲಿಗೆ ಬೇಳೆಯನ್ನು ಕೊಟ್ಟು ನೈಸ್ ಇಲ್ಲವೆ, ಫಿಲ್ಟರ್ ಕಾಫಿ ಪುಡಿ ತರುತ್ತಿದ್ದ ದಿನಗಳೂ ಸರಿದಿವೆ.

‘‘ತೊಂಬತ್ಮೂರು ಡಿಗ್ರಿಯಲ್ಲಿ ಬಿಸಿ ಮಾಡಿದ ನೀರಿಗೆ’’ ಎಂಬ ಮಾತು ಕೇಳಿ ಭಯ ಬೇಡ. ಕಾಫಿ ಮಾಡಲು ಥರ್ಮೋಮೀಟರ್ ಬೇಡ! ಸರಿಸುಮಾರು ತೊಂಬತ್ಮೂರು ಡಿಗ್ರಿಯಲ್ಲಿ ಕುದಿಸಿದ ನೀರಿಗೆ ಕಾಫಿ ಪುಡಿ, ಸ್ವಲ್ಪ ಸಕ್ಕರೆ ಹಾಕಿ ಸ್ಟವ್ ಆಫ್ ಮಾಡಿ ತೆಗೆದ ಡಿಕಾಕ್ಷನ್ಗೆೆ ಹಾಲು ಬೆರೆಸಿದರೆ ಕಾಫಿ ಬಹಳ ಚೆನ್ನಾಗಿರುತ್ತದೆ. ಇನ್ನು ಕಾಫಿ ಫಿಲ್ಟರ್‌ಗೆ ಪುಡಿ ಹಾಕಿ, ನೀರು ಹಾಕುವುದರ ಮೊದಲು ಎರಡು ಚಿಟಿಕೆ ಸಕ್ಕರೆ ಸೇರಿಸಿ ನಂತರ ಇಳಿದ ಡಿಕಾಕ್ಷನ್ ಬಳಸಿದರೆ ಕಾಫಿ ಬಹಳ ಚೆನ್ನಾಗಿರುತ್ತದೆ. ಹಾಲಿನಲ್ಲಿ ಮಾಡಿದ ಕಾಫಿಯನ್ನು ತಕ್ಷಣ ಕುಡಿಯಬೇಕು.

ನಾನು ಎರಡನೆ ಮಗುವಿನ ಹೆರಿಗೆಗೆ ಆಸ್ಪತ್ರೆಗೆ ಸೇರಲು ಹೊರಟಾಗ, ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡುವಾಗ ನೆನಪಿನಿಂದ ತೆಗೆದಿಟ್ಟ ವಸ್ತುಗಳು ಅಂದರೆ ಸಕ್ಕರೆ, ಕಾಫಿ ಪುಡಿ. ಕಾಫಿ ಮಾಡಲೆಂದೇ ಖರೀದಿಸಿದ ಹೊಸ ಪಾತ್ರೆ! ಆಗ ನನಗೆ ಆಗಿದ್ದು ಸಿಝೇರಿ ಯನ್ ಹೆರಿಗೆ. ವಿಪರೀತ ತಲೆ ನೋವು ಬರಲು ಪ್ರಾರಂಭವಾಗಿತ್ತು. ಆಗ ನನ್ನ ಡಾಕ್ಟರ್ ಅರಿವಳಿಕೆ ತಜ್ಞರಲ್ಲಿ ನನ್ನ ಸಮಸ್ಯೆೆಯ ಬಗ್ಗೆೆ ಚರ್ಚಿಸಿದರು. ಅವರು ‘‘ಸ್ಟ್ರಾಂಗ್‌ ಕಾಫಿ ಕುಡಿಯಿರಿ’’ ಎಂದರು. ನನಗೋ ಬಹಳ ಖುಷಿ! (ಸಿಜೇರಿಯನ್ ಹೆರಿಗೆನೋ ಇಲ್ಲ ನಾರ್ಮಲ್ಲೋ, ಹೆರಿಗೆಗೆ ಮುನ್ನ ಸ್ಟ್ರಾಂಗ್‌ ಕಾಫಿ ಕುಡಿಯುವುದು ಉತ್ತಮ ಎನ್ನುತ್ತಾರೆ). ಹಾಗೆ ಅಲ್ಲಿದ್ದ ವೈದ್ಯ ಪ್ರಶಿಕ್ಷಣಾರ್ಥಿ ಯನ್ನು ‘‘ಕಾಫಿಯಲ್ಲಿ ಏನಿರುತ್ತದೆ?’’ ಅಂದರೆ ಅವರು ‘‘ಕಾಫಿಯಲ್ಲಿ ಡಿಕಾಕ್ಷನ್ ಇರುತ್ತೆ’’ ಅಂದರು. ನಾನು ತಲೆನೋವಿನ ಭಾರದಲ್ಲೇ ‘‘ಕೆಫೆನ್’’ ಅಂದೆ. ಅವರಿಗೆ ಕೇಳಿಸಲಿಲ್ಲ. ‘‘ಕಾಫಿಯಲ್ಲಿ ಕೆಫೆನ್ ಇರುತ್ತದೆ’’ ಎಂದು ಅರಿವಳಿಕೆ ತಜ್ಞರು ಹೇಳಿ ಹೊರ ಟರು.

ಔಷಧಿಯಾಗಿ ಕಾಫಿ

ಕುಡಿಯುವ ಕಾಫಿಗೆ ಸ್ವಲ್ಪ ಜಜ್ಜಿದ ಶುಂಟಿ ಹಾಕುವುದರಿಂದ ಕೆಮ್ಮು, ನೆಗಡಿ ಕಡಿಮೆಯಾಗುತ್ತದೆ. ‘‘ಅಮ್ಮಾ ಒಂತೊಟ್ಟು ಕಾಫಿ
ಸಿಗಬಹುದ’’ ಎಂದು ಕೆಲವರು ಕೇಳುತ್ತಾರೆ. ಅಂದರೆ ಕಾಫಿಗೆ ಒತ್ತಡವನ್ನು ತಗ್ಗಿಸುವ ಶಕ್ತಿ ಇದೆ ಎಂದಾಯಿತಲ್ಲವೇ. ಪ್ರತಿ ದಿನ
ಮೂರು ಕಪ್ ಕಾಫಿ ಸೇವನೆ ಮಾಡಿದರೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆ, ಆರು ಕಪ್‌ಗಿಂತ ಹೆಚ್ಚು ಕುಡಿದರೆ ಪಾರ್ಶ್ವವಾಯುವಿನ ಸಾಧ್ಯತೆ ಕಡಿಮೆ ಎನ್ನುತ್ತಾರೆ.

ಇದಕ್ಕೆ ಕಾರಣ ಕಾಫಿಯಲ್ಲಿರುವ ಆಚಿಟಿ ಆಕ್ಸಿಡೆಂಟುಗಳು. ಇತ್ತೀಚೆಗೆ ಗ್ರೀನ್ ಕಾಫಿ ಕೂಡ ಬಂದಿದೆ. ವ್ಯಾಯಾಮದ ನಂತರ ಕಾಫಿ ಕುಡಿದರೆ ಸ್ನಾಯು ನೋವು ಕಡಿಮೆ ಆಗುತ್ತದೆ ಎನ್ನುತ್ತಾರೆ. ಇನ್ನು ಎಲ್ಲರಿಗು ತಿಳಿದಿರುವಂತೆ ತಲೆ ನೋವು ಕೂಡ ಕಡಿಮೆ ಯಾಗುತ್ತದೆ. ಒಂದು ಹಂತದ ನೈಸರ್ಗಿಕ ನೋವು ನಿವಾರಕ ಈ ಕಾಫಿ ಎಂದರೂ ತಪ್ಪಿಲ್ಲ. ಬೆಡ್ ಕಾಫಿ ಬ್ಯಾಡ್ ಕಾಫಿಯೇ ಸರಿ! ಮೊದಲು ನೀರು ಕುಡಿದು, ಆನಂತರ ಕಾಫಿ ಸವಿಯಬಹುದು, ಖಾಲಿ ಹೊಟ್ಟೆಗೆ ಕಾಫಿ ಹಾಕಬಾರದು. ಆಗ ಗ್ಯಾಸ್ಟ್ರಿಕ್ ಸಮಸ್ಯೆ, ಎದೆಯುರಿಯಂಥಹ ಸಮಸ್ಯೆ ಬರುತ್ತದೆ. ಏನೆ ಆಗಲಿ ಲವಲವಿಕೆಗೆ ಇನ್ನೊಂದು ಹೆಸರು ಕಾಫಿ!

ನಾವು ಹೊಳೆನರಸೀಪುರದಲ್ಲಿದ್ದಾಗ ಒಳ್ಳೆಯ ಕಾಫಿ ಬೇಕೆಂದರೆ ಗೀತಾ ಆನಂದ್ ಅವರ ಮನೆಗೆ ಹೋಗುತ್ತಿದ್ದೆೆ. ಹೊಸ ಊರಿನ ಆ ಹೊಸ ಪರಿಚಯಕ್ಕೆ, ನಮ್ಮ ಆತ್ಮೀಯತೆಗೆ ಅಂದು ಕಾಫಿ ಮೀಡಿಯೇಟರ್ ಆಗಿತ್ತು ಎಂದರೆ ತಪ್ಪಿಲ್ಲ. ಹತ್ತು ವರ್ಷಗಳ ಹಿಂದಿನ ಮಾತು. ನಾನು ಬೆಂಗಳೂರಿಗೆ ಬಂದಾಗಲೆಲ್ಲ ನಾನು, ನನ್ನ ತಮ್ಮ ಕಾಫಿಗೆಂದೇ ಆಚೆ ಹೋಗುತ್ತಿದ್ದೆವು. ಮಯ್ಯಾಸ್ ಕಾಫಿ, ಇಂಡಿಯನ್ ಕಾಫಿ ಹೌಸ್, ಮಾವಳ್ಳಿ ಟಿಫನ್ಸ್‌, ಅಡಿಗಾಸ್ ಹೊಟೇಲಿನ ಕಾಫಿಗಳ ರುಚಿಯನ್ನು ನೋಡಿದ್ದೆೆವು. ಈಗಲೂ ಬೆಂಗಳೂರಿನಿಂದ ಹಾಸನಕ್ಕೆ ಬಸ್ ಹತ್ತಲು ನವರಂಗ್ ಬಳಿ ಬಂದಾಗ, ಮಲ್ಲೇಶ್ವರಂನ ಯಾವುದಾದರೂ ಕಾಫಿ ಶಾಪ್ ಹೊಕ್ಕೇ
ಹೊಕ್ಕುತ್ತೇವೆ. ಕಾಫಿಯನ್ನು ನಿಧಾನವಾಗಿ ಗುಟುಕಿಸುವಾಗ ಕಡೆಯ ಗುಟುಕು ಬಂದರೆ ‘‘ಫೋನ್ ಮಾಡು, ಬಾಯ್’’ ಅನ್ನುವ ಅಧಿಕೃತ ಸಂದೇಶ ಬಂದಂತೆ. ಅದೇ ನಮ್ಮ ಕಾಫಿ ವಿದಾಯ! ಈಗಲೂ ಈ ಬರೆಹವನ್ನು ಮುಗಿಸುತ್ತಿರುವುದು ಸಹೃದಯರಿಗೆ ಕಾಫಿ ವಿದಾಯ ಹೇಳಿಯೇ. ನನಗೆ ಇದು ಕಾಫಿ ವಿರಾಮ!