Tuesday, 26th November 2024

ಗಾಂಧಿವಾದ-ಗೂಡ್ಸೆವಾದದ ನಡುವೆ ಚುನಾವಣೆ:ಎಐಸಿಸಿ ವಕ್ತಾರೆ

ತುಮಕೂರು: ಕಾಂಗ್ರೆಸ್‌ನ ಗಾಂಧಿವಾದ ಮತ್ತು ಬಿಜೆಪಿಯ ನಾಥೂರಾಮ್ ಗೂಡ್ಸೆವಾದದ ನಡುವೆ ಪ್ರಸಕ್ತ ಚುನಾವಣೆ ನಡೆಯುತ್ತಿದ್ದು, ಜನರ ಆಶೀರ್ವಾದ ಬಲದಿಂದ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ದೆಹಲಿ ಕಾಂಗ್ರೆಸ್ ಶಾಸಕಿ ಹಾಗೂ ಎಐಸಿಸಿ ಮಾಧ್ಯಮ ವಕ್ತಾರೆ ಅಲ್ಕಾಲಂಬಾ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹೊಸ ಭರವಸೆಗಳು ಮತ್ತು ಬಿಜೆಪಿ ಪಕ್ಷದ ಶೂನ್ಯ ಸಾಧನೆ ಪ್ರಸಕ್ತ ಚುನಾವಣೆಯಲ್ಲಿ ಚರ್ಚೆಗೆ ಗ್ರಾಸವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಜನಮತ ವ್ಯಕ್ತವಾಗಲಿದೆ ಎಂದರು.
ಶೇ.40 ರಷ್ಟು ಕಮೀಷನ್ ಪಡೆಯುವಲ್ಲಿ ಮಗ್ನವಾದ ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿ ಯತ್ತ ಗಮನಹರಿಸದೆ ಕೋಮು ದ್ವೇಶ ಬಿತ್ತಿ ಸಮಾಜದ ಶಾಂತಿ, ಸೌಹಾರ್ದತೆ, ಸ್ವಾಸ್ತö್ಯ ವನ್ನು ಕೆಡಿಸುವ ಹುನ್ನಾರ ನಡೆಸಿದೆ ಎಂದರು.
ಕರ್ನಾಟಕದಲ್ಲಿ ಮರಾಠಿಗರು ಮತ್ತು ಕನ್ನಡಿಗರ ನಡುವೆ ಕಿಚ್ಚು ಹಚ್ಚಿರುವ ಬಿಜೆಪಿ ಈಗ ನಂದಿನಿ ಮತ್ತು ಅಮೂಲ್ ನಡುವೆ ಗೊಂದಲ ಸೃಷ್ಠಿ ಮಾಡಿ ನಂದಿನಿಯನ್ನು ರದ್ದುಪಡಿಸಿ ಅಮೂಲ್ ಅನ್ನು ಕರ್ನಾಟಕದಲ್ಲಿ ಅಸ್ಥಿತ್ವಕ್ಕೆ ತರಲು ಸಂಚು ರೂಪಿಸಿದೆ ಎಂದು ಆರೋಪಿಸಿದರು.
ತುಮಕೂರು ಜಿಲ್ಲೆಯಲ್ಲಿ ಎಲ್ಲ ಸಮುದಾಯದವರನ್ನು ಒಗ್ಗಟ್ಟಾಗಿ ಸೇರಿಸಿ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳು ಎಲ್ಲರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಇದ್ದು, ಉತ್ತಮ ಸಾಧನೆ ಮಾಡಲಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಮಾತನಾಡಿ, ಎಐಸಿಸಿ ನಾಯಕಿ ಪ್ರಿಯಾಂಕಗಾಂಧಿ ಅವರು ಹಿರಿಯೂರಿ ನಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಅದ್ದೂರಿ ಪ್ರಚಾರ ನಡೆಸಿದ್ದು, ಈ ಪ್ರಚಾರದಲ್ಲಿ ತುಮಕೂರು ಜಿಲ್ಲೆಯ ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದರು.
ಮೇ.1 ರಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿಗೆ ರಾಹುಲ್ ಗಾಂಧಿ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಹಾಗೆಯೇ ಮೇ.5ರೊಳಗೆ ಪ್ರಿಯಾಂಕಗಾಂಧಿ ಅವರೂ ಸಹ ಜಿಲ್ಲೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿಗಳ ಪರ  ಪ್ರಚಾರ ಕೈಗೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದ್ದು, 11 ವಿಧಾನಸಭಾ ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿ ಗಳು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ರಾಜ್ಯ ವಕ್ತಾರೆ ಭವ್ಯ ನರಸಿಂಹಮೂರ್ತಿ, ಬೆಂಗಳೂರು ನಗರ ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯಾಧ್ಯಕ್ಷ ಎಂ.ಆರ್.ಮಹೇಶ್, ನಿಂಗರಾಜು, ಮರಿಚನ್ನಮ್ಮ, ಡಾ.ಅರುಂಧತಿ  ಹಾಜರಿದ್ದರು.