Saturday, 21st September 2024

ಅಭಿವೃದ್ದಿಯ ಹೊಸ ಯೋಜನೆಗಳ ರಾಜಕೀಯ ಪರ್ವ

ಸ್ವಾಸ್ಥ್ಯ ಸಂಪದ

Yoganna55@gmail.com

1952 ರಿಂದ 2004 ರವರೆಗೆ ರಾಜ್ಯವನ್ನಾಳಿದ ಸರ್ಕಾರಗಳು ಅಭಿವೃದ್ಧಿಯ ದಿಕ್ಕಿನಲ್ಲಿ ಹೊಸ ಹೊಸ ಯೋಜನೆಗಳನ್ನು ರೂಪಿಸಿ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಚುನಾಯಿತ ಸರ್ಕಾರಗಳು ಇಲ್ಲದಿದ್ದರೂ ಅಧಿಕಾರ ಶಾಹಿ ಆಡಳಿತ ವ್ಯವಸ್ಥೆ ಆಡಳಿತವನ್ನು ಸುಗಮವಾಗಿ ನಡೆಸಿಕೊಂಡು ಹೋಗುತ್ತದೆ.

ರಾಜ್ಯಪಾಲರುಗಳ ಆಡಳಿತದಲ್ಲಿ ಇದನ್ನು ನಾವು ನೋಡಿಲವೇನು? ಜನ ಪ್ರತಿನಿಽಗಳ ಸರ್ಕಾರ ಜನರ ನಾಡಿಮಿಡಿತವನ್ನು ಅರಿತು ನಾಡಿನ ಮತ್ತು ದೇಶದ ಹಿತಕ್ಕಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ಕೊಟ್ಟಾಗ ಮಾತ್ರ ಅವು ಇತಿಹಾಸದಲ್ಲಿ ಉಳಿಯುತ್ತವೆ. ಇಲ್ಲದಿದ್ದಲ್ಲಿ ಮರೆತು ಹೋಗುತ್ತವೆ. ಹಿಂದಿನ ಲೇಖನದಲ್ಲಿ ಪ್ರಾರಂಭಿಸಿದ ಈ ಸಂಬಂಧಿ ವಿಚಾರಗಳನ್ನು ಈ
ಲೇಖನದಲ್ಲಿ ಮುಂದುವರಿಸಿದ್ದೇನೆ.

ಕಾಂಗ್ರಸ್ ಇಬ್ಭಾಗವಾದ ನಂತರ 1572ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷ ದೇವರಾಜ ಅರಸು ಅವರ ನೇತೃತ್ವದಲ್ಲಿ ಅಽಕಾರಕ್ಕೆ ಬಂತು. ಹಾವನೂರು ವರದಿಯನ್ನು ಜಾರಿಗೆ ತಂದು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ್ದು, ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಇಲಾಖೆಗಳನ್ನು ಪ್ರಾರಂಭಿಸಿ ಆ ವರ್ಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದ್ದು, ತುರ್ತು ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು 20 ಅಂಶದ ಕಾರ್ಯಕ್ರಮಗಳನ್ನು ಸಕಾರಾತ್ಮಕವಾಗಿ ಅನುಷ್ಠಾನಗೊಳಿಸಿದ್ದು, ಉಳುವವನಿಗೇ ಭೂಮಿ ನೀಡಿದ್ದು, ಒಕ್ಕಲಿಗ ಮತ್ತು ಲಿಂಗಾಯತರ ಪ್ರಾಬಲ್ಯವಿದ್ದ ರಾಜಕೀಯ ಕ್ಷೇತ್ರಕ್ಕೆ ಹಿಂದುಳಿದ ವರ್ಗ ಗಳು ಮತ್ತು ಸಣ್ಣಪುಟ್ಟ ಜಾತಿಗಳ ನಾಯಕರುಗಳನ್ನು ಗುರುತಿಸಿ, ಇಂದಿರಾಗಾಂಧಿ ಅಲೆಯನ್ನು ಉಪಯೋಗಿಸಿಕೊಂಡು ಅವರುಗಳನ್ನು ಶಾಸಕರನ್ನಾಗಿಸಿ ಎಲ್ಲಾ ವರ್ಗಗಳಲ್ಲೂ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನಾಯಕತ್ವ ಬೆಳೆಯಲು ಭದ್ರವಾದ ಬುನಾದಿ ಹಾಕಿದ್ದು, ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ್ದು ಮತ್ತು ಪದವೀಧರರಿಗೆ ಸರ್ಕಾರಿ ನೌಕರಿ ನೀಡಿದ್ದು ಇವೆಲ್ಲ ಕ್ರಾಂತಿ ಕಾರಕ ಬದಲಾವಣೆಗಳನ್ನು ಯಾರ ವಿರೋಧವೂ ಇಲ್ಲದಂತೆ ಚಾಣಾಕ್ಷತನದಿಂದ ಜಾರಿಗೊಳಿಸಿದ್ದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ‘ಅರಸು ಪರ್ವ’ ಎಂದೇ ಪರಿಗಣಿಸಬೇಕು.

ಅರಸು ಅವರ ಕಾಲದಲ್ಲಿ ರಾಜಕೀಯ ಭ್ರಷ್ಟಾಚಾರ ವ್ಯಾಪಕವಾಯಿತಾದರೂ ಅದಕ್ಕೆ ಅವರು ನೀಡಿದ್ದ ಸಮರ್ಥನೀಯ ಕಾರಣಗಳು ಸಂದರ್ಭೋಚಿತವಾಗಿ ಒಪ್ಪುವಂತದ್ದಾಗಿದ್ದವು? ಅವರು ಕೈಗೊಂಡ ವ್ಯಾಪಕ ಜನಪರ ಕಾರ್ಯಗಳ ಮುಂದೆ ಭ್ರಷ್ಟಾಚಾರ ಗಣನೆಗೇ ಬರಲಿಲ್ಲ. ಅವರ ಆಡಳಿತದ ಮೇಲೆ ಭ್ರಷ್ಟಾಚಾರದ ಆರೋಪಗಳು ಬಂದರೂ ಸ್ವತಃ ಅವರೇ ಇಂದಿನ ರಾಜಕಾರಣಿಗಳಂತೆ ಸಂಪತ್ತು ಗಳಿಕೆ ಮಾಡಲಿಲ್ಲ ಎಂಬುದು ನಿರ್ವಿವಾದ.

ದುರ್ದೈವ ಇಂತಹ ಸಾಮಾಜಿಕ, ರಾಜಕೀಯ ಹರಿಕಾರರನ್ನೂ ಸಹ ಇಂದಿರಾಗಾಂಧಿ ದೂರಮಾಡಿ ೧೯೭೯ರಲ್ಲಿ ಅರಸು
ಅವರನ್ನು ಅಧಿಕಾರದಿಂದ ಇಳಿಸಿ ಗುಂಡೂರಾಯರನ್ನು ಮುಖ್ಯಮಂತ್ರಿ ಮಾಡಿದ್ದರ ಕಾರಣಕ್ಕಾಗಿ ಅರಸು ಅವರು ತಮ್ಮದೇ ಆದ ಪ್ರಾದೇಶಿಕ ಪಕ್ಷ ‘ಕರ್ನಾಟಕ ಕ್ರಾಂತಿ ರಂಗ’ (೧೯೭೯) ಕಟ್ಟಿ, ೧೯೮೦ರಲ್ಲಿ ನಡೆದ ಮಧ್ಯಂತರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೂ ಒಂದು ಸೀಟೂ ಲಭಿಸಲಿಲ್ಲ.

ಅವರೇ ಬೆಳೆಸಿದ ಹಲವಾರು ನಾಯಕರುಗಳು ಮತ್ತು ಜನರು ಅವರಿಗೆ ಮನ್ನಣೆ ನೀಡಲಿಲ್ಲ. ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೊಂದು ದುರ್ದೈವದ ಘಟನೆ. ೧೯೮೩ರಲ್ಲಿ ನಡೆದ ವಿಧಾನಸಭಾ ಚುನಾವಣೆ ಹೊತ್ತಿಗೆ ಅರಸುರವರು (೧೯೮೨) ಕಾಲವಾಗಿದ್ದರು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಾದ ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ, ಧರ್ಮಸಿಂಗ್, ಹಾಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಇತ್ಯಾದಿ ಹಲವಾರು ಇಂದಿನ ರಾಜಕೀಯ ಮುಖಂಡರುಗಳು ದೇವರಾಜ ಅರಸು ಅವರು ನೆಟ್ಟು ಪೋಷಿಸಿದ ನಾಯಕರುಗಳೇ ಆಗಿದ್ದಾರೆ.

ದೇವರಾಜ ಅರಸರ ಕಡೆಗಣನೆ, ಗುಂಡೂರಾವ್ ಅವರ ವೈಭವ ಪೂರಿತ ವರ್ಣರಂಜಿತ ಆಡಳಿತದಿಂದಾಗಿ ರಾಜ್ಯದಲ್ಲಿ
ಇಂದಿರಾ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ಕುಗ್ಗುತ್ತಾ ಬಂತು. ಕೇಂದ್ರದಲ್ಲಿ ಜನತಾ ಪಕ್ಷ ಅಽಕಾರ ಕಳೆದುಕೊಂಡಿದ್ದರೂ,
ರಾಜ್ಯದಲ್ಲಿ ಜನತಾಪಕ್ಷ ಎಚ್.ಡಿ. ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಆರ್. ಬೊಮ್ಮಾಯಿ, ಎನ್. ರಾಚಯ್ಯ, ರಾಮಕೃಷ್ಣ ಹೆಗಡೆ, ಅಬ್ದುಲ್ ನಜೀರ್ ಸಾಬ್ ಮತ್ತಿತರ ಘಟಾನುಘಟಿ ನಾಯಕರುಗಳ ಪ್ರಭಾವದಿಂದಾಗಿ ಸದೃಢವಾಗಿದ್ದರಿಂದ, ಅಷ್ಟೊತ್ತಿಗಾಗಲೆ ಬಂಗಾರಪ್ಪನವರು ದೇವರಾಜ ಅರಸು ಅವರ ಕ್ರಾಂತಿರಂಗವನ್ನು ಜನತಾ ಪಕ್ಷದೊಡನೆ ವಿಲೀನಗೊಳಿಸಿದ ಪರಿಣಾಮವಾಗಿ ೧೯೮೩ರ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳಿಸಿ ೧೫ ಸ್ಥಾನಗಳನ್ನು ಗಳಿಸಿದ್ದ ಬಿಜೆಪಿಯೊಂದಿಗಿನ ಪ್ರಪ್ರಥಮ ಕಾಂಗ್ರೆಸ್ಸೇತರ ಸಮ್ಮಿಶ್ರ ಸರ್ಕಾರ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂತು.

ದುರ್ದೈವ ಈ ಸರ್ಕಾರವೂ ಹೆಚ್ಚು ಕಾಲ ಉಳಿಯದೆ (೧೯೮೩-೧೯೮೪) ವಿಧಾನಸಭೆ ವಿಸರ್ಜನೆಯಾಗಿ ೧೯೮೫ರಲ್ಲಿ
ನಡೆದ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂತು. ಹೆಗಡೆ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್ ಸಾಬ್‌ರಿಂದಾಗಿ ಹಳ್ಳಿಹಳ್ಳಿಗೂ  ಬೋರ್‌ವೆಲ್‌ ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಿದ್ದು, ಪಂಚಾಯ್ತ್ ರಾಜ್ ಕಾಯ್ದೆಯನ್ನು ಜಾರಿಗೆ ತಂದು ಅಧಿಕಾರ ವಿಕೇಂದ್ರೀಕರಣ ಮಾಡಿದ್ದು, ಪಿಡಬ್ಲ್ಯುಡಿ ಮಂತ್ರಿಯಾಗಿದ್ದ ದೇವೇಗೌಡರು ನೀರಾವರಿ ಯೋಜನೆಗಳನ್ನು ಅದರಲ್ಲೂ ಆಲಮಟ್ಟಿ ಕೃಷ್ಣಾ ನದಿ ಯೋಜನೆಯನ್ನು ತ್ವರಿತಗೊಳಿಸಿದ್ದು ಈ ಸರ್ಕಾರದ ಸಾಧನೆಗಳಾದರೂ ಬಾಟ್ಲಿಂಗ್ ಹಗರಣ ಮತ್ತು ಫೋನ್ ಕದ್ದಾಲಿಕೆ ಹಗರಣಗಳಿಂದಾಗಿ ಸರ್ಕಾರ ಪತನಗೊಂಡು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಒಳಜಗಳದಿಂದ ಅದೂ ಅಲ್ಪಾವಽಗೆ ಪತನಗೊಂಡಿತು.

ಅಷ್ಟೊತ್ತಿಗಾಗಲೆ ಲೋಕಸಭೆಗೆ ನಡೆದ ಚಿಕ್ಕಮಗಳೂರಿನ ಮಧ್ಯಂತರ ಚುನಾವಣೆಯಲ್ಲಿ ಇಂದಿರಾಗಾಂಧಿ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದ ವೀರೇಂದ್ರ ಪಾಟೀಲರು ಇಂದಿರಾ ಕಾಂಗ್ರೆಸ್ ಸೇರಿದ್ದರ ಪರಿಣಾಮವಾಗಿ ೧೯೯೦ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೀರೇಂದ್ರ ಪಾಟೀಲರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಖಂಡ ಬಹುಮತದೊಂದಿಗೆ ಅಸ್ತಿತ್ವಕ್ಕೆ ಬಂತಾದರೂ ಅವರ ಅನಾರೋಗ್ಯದಿಂದಾಗಿ ಎಸ್. ಬಂಗಾರಪ್ಪನವರು ಮುಖ್ಯಮಂತ್ರಿಯಾದರು.

ಬಂಗಾರಪ್ಪನವರು ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಮಹತ್ತರ ಯೋಜನೆಯೊಂದನ್ನು ಕಾರ್ಯಗತ ತಂದು ಇಂದಿಗೂ ಅದು ಮುಂದುವರಿದಿದೆ. ಕ್ಲಾಸಿಕ್ ಕಂಪ್ಯೂಟರ್ ಹಗರಣದಿಂದಾಗಿ ಬಂಗಾರಪ್ಪನವರೂ ಸಹ ಅಧಿಕಾರ ಕಳೆದುಕೊಂಡು ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಗಳಾದರು. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶಗಳಿಗೆ ಪಾರದರ್ಶಕವಾದ, ಮೆರಿಟ್ ಹಾಗೂ ಮೀಸಲಾತಿ ಆಧಾರಿತ ಸಿಇಟಿ ಪರೀಕ್ಷೆಯನ್ನು ಜಾರಿಗೆ ತಂದು ಅದು ಇಂದಿನ ರಾಷ್ಟ್ರಮಟ್ಟದ ನೀಟ್ ಪರೀಕ್ಷೆಗೆ ಪ್ರೇರಣೆ ಯಾಯಿತು. ಚಿನ್ನಪ್ಪ ರೆಡ್ಡಿ ಮೀಸಲಾತಿ ವರದಿ ಜಾರಿಗೆ ತರಲು ಕೈ ಹಾಕಿ ಮೇಲ್ಜಾತಿ ಅವರ ವಿರೋಧ ಕಟ್ಟಿಕೊಂಡ ಪರಿಣಾಮವಾಗಿ, ಇಬ್ಭಾಗವಾಗಿದ್ದ ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಜನತಾದಳ ಮತ್ತು ದೇವೇಗೌಡರ ನೇತೃತ್ವದ ಸಮಾಜವಾದಿ ಜನತಾಪಕ್ಷ ಒಗ್ಗೂಡಿದ್ದ ಪರಿಣಾಮವಾಗಿ ೧೯೯೪ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜನತಾದಳ ಅಧಿಕಾರಕ್ಕೆ ಬಂತು.

ದೇವೇಗೌಡರು ಮೂಲತಃ ಕಾಂಗ್ರೆಸ್ಸಿನವರಾದರೂ ೧೯೬೨ ರಲ್ಲಿ ಪ್ರಥಮಬಾರಿಗೆ ಸ್ವತಂತ್ರವಾಗಿ ಗೆದ್ದು, ವಿಧಾನಸಭಾ
ಸದಸ್ಯರಾಗಿ, ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಾಗ ದೇವೇಗೌಡರು ಅದರ ಅಧ್ಯಕ್ಷರಾಗಿ, ದೇವರಾಜ ಅರಸರು ಮುಖ್ಯಮಂತ್ರಿ
ಯಾಗಿದ್ದಾಗ ವಿರೋಧ ಪಕ್ಷದ ಯಶಸ್ವಿ ನಾಯಕರಾಗಿ ರಾಜ್ಯದ ಸಮಸ್ಯೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಕೃಷ್ಣಾದ
ಆಲಮಟ್ಟಿ ಅಣೆಕಟ್ಟು ಯೋಜನೆಯನ್ನು ತ್ವರಿತಗೊಳಿಸಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಿದ್ದು, ಬೆಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪಿಸುವ ಮೂಲಕ ಐಟಿ ಬಿಟಿ ಬೆಳವಣಿಗೆಗೆ ಬುನಾದಿ ಹಾಕಿದ್ದು, ಹುಬ್ಬಳ್ಳಿಯ ಈದ್‌ಗಾ ಮೈದಾನದ ಪ್ರಕರಣವನ್ನು ಸೌಹಾರ್ದಯುತವಾಗಿ, ಶಾಶ್ವತವಾಗಿ ಬಗೆಹರಿಸಿದ್ದು, ಬೆಂಗಳೂರು ಮತ್ತು ಜಿಲ್ಲೆಗಳಲ್ಲಿ ದೇವೇಗೌಡರು ಜನತಾ ದರ್ಶನ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಬಗೆಹರಿಸಿ ಸರ್ಕಾರವನ್ನು ಜನರ ಬಳಿಗೆ ಕೊಂಡೊಯ್ದಿದ್ದು ಇವೆಲ್ಲದರ ಪರಿಣಾಮವಾಗಿ ಜನತಾದಳ ೧೯೯೬ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ೧೭ ಸ್ಥಾನ ಗಳಿಸಿದ್ದರಿಂದ ಕೇಂದ್ರದಲ್ಲಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಕಾಂಗ್ರೆಸ್‌ನ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ದೇವೇಗೌಡರು ದಕ್ಷಿಣ ಭಾರತದ ೨ನೇ
ಪ್ರಧಾನಮಂತ್ರಿ ಮತ್ತು ಕರ್ನಾಟಕದ ಮೊಟ್ಟ ಮೊದಲ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

(ಮುಂದುವರೆಯುತ್ತದೆ)