Sunday, 15th December 2024

ಅಭಿವ್ಯಕ್ತಿಗೇಕೆ ಈ ಮಟ್ಟಿಗಿನ ನಿರ್ಬಂಧ?

ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ‘ದಿ ಕೇರಳ ಸ್ಟೋರಿ’ ಎಂಬ ಸಿನೆಮಾದ ಬಗ್ಗೆ ಮಾತನಾಡಿದ್ದಾರೆ. ದೇಶಾದ್ಯಂತ ಶುಕ್ರವಾರ ಬಿಡುಗಡೆ ಯಾಗಿರುವ ಈ ಚಲನಚಿತ್ರ ಕಳೆದೊಂದು ವಾರದಿಂದಲೂ ತೀವ್ರ ಪ್ರತಿಭಟನೆ, ವಿರೋಧದ ಕಾರಣಕ್ಕೆ ಸುದ್ದಿಯಾಗಿದ್ದೇ ಹೆಚ್ಚು.

ಮಹಿಳೆಯರ ಮತಾಂತರವನ್ನು ಆಧರಿಸಿದೆ ಎನ್ನಲಾದ ಚಿತ್ರದ ಪ್ರದರ್ಶನಕ್ಕೆ ಕೇರಳದಲ್ಲಿ ಅವಕಾಶ ಮಾಡಿಕೊಡಬಾರದು ಎಂದು ಅಲ್ಲಿನ ಪ್ರತಿ ಪಕ್ಷಗಳೊಂದಿಗೆ ಆಡಳಿತಾರೂಢ ಮೈತ್ರಿಕೂಟವೂ ಒತ್ತಾಯಿಸಿದ್ದು ಮಾತ್ರವಲ್ಲ, ಕೋರ್ಟ್ ಮೆಟ್ಟಿಲನ್ನೂ ಏರಿವೆ. ಸುಪ್ರೀಂ ಕೋರ್ಟ್‌ನಲ್ಲಿ ಇದರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ವಜಾ ಆಯಿತೆಂಬುದು ಬೇರೆ ಮಾತು. ವಿಚಿತ್ರವೆಂದರೆ ಭಾರತೀಯ ಮನಃಸ್ಥಿತಿ ಇತ್ತೀಚೆಗೆ ಹೀಗೇಕೆ ಬದಲಾಗುತ್ತಿದೆ ಎಂಬುದು.

ಅದು ಚಲನಚಿತ್ರ, ಪುಸ್ತಕಗಳು, ಗಣ್ಯರ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಪ್ರತಿಯೊಂದರ ಹಿಂದೆಯೂ ರಾಜಕೀಯ ಲೆಕ್ಕಾಚಾರಗಳು, ಧರ್ಮ- ಜಾತಿಯ ಬಣ್ಣಗಳು ಎಲ್ಲಿಂದಲೋ ಅಂಟಿಕೊಂಡು ಬಿಡುತ್ತಿವೆ. ತೀರಾ ಸಾಂಸ್ಕೃತಿಕ, ಸಾಹಿತ್ಯಕ ಕ್ಷೇತ್ರಗಳನ್ನೂ ಇಂಥ ಲೆಕ್ಕಾಚಾರದಲ್ಲಿ ನೋಡುವ ಮನೋಭಾವ ನಿಜಕ್ಕೂ ಆಧುನಿಕ ಸಮಾಜಕ್ಕೆ ಶೋಭೆ ತರುವಂಥದ್ದಲ್ಲ.

ಅಷ್ಟಕ್ಕೂ ಆಕ್ಷೇಪಾರ್ಹ ಸಂಗತಿಗಳು ಇದ್ದದ್ದೇ ಆದಲ್ಲಿ ಚಲನಚಿತ್ರದ ಮಟ್ಟಿಗೆ ಸೆನ್ಸಾರ್ ಮಂಡಳಿ/ ಫಿಲ್ಮ್ -ಡರೇಷನ್‌ನಂಥ ವ್ಯವಸ್ಥೆ ನಮ್ಮಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲವೇ? ಅಥವಾ ಅದೂ ನಂಬಿಕೆ ಕಳೆದುಕೊಳ್ಳುವ ಮಟ್ಟಿಗೆ ನಮ್ಮ ವ್ಯವಸ್ಥೆ ಹದಗೆಟ್ಟಿದೆ ಎಂದರೆ ಗಂಭೀರವಾಗಿ ಚಿಂತಿಸಲೇಬೇಕಾದ ಸಂಗತಿ. ಹಾಗೂ ಸಿನೆಮಾ-ಪುಸ್ತಕಗಳು ಆಯಾ ವ್ಯಕ್ತಿಗತ ಅಭಿವ್ಯಕ್ತಿಯ ಮಿತಿಯಷ್ಟೇ. ಅದು ಸಮಾಜನ್ನು ಪ್ರಭಾವಿಸುವುದಿಲ್ಲ ಎಂತಲ್ಲ.

ಆದರೆ, ಅವುಗಳನ್ನೂ ನೋಡಿ, ಓದಿ, ಅವನ್ನೇ ಆಧರಿಸಿ ನಿರ್ಧಾರಕ್ಕೆ ಬರುವಷ್ಟರಮಟ್ಟಿಗೆ ನಮ್ಮ ಸಮಾಜ ವಿವೇಚನೆಯನ್ನು ಕಳೆದುಕೊಂಡಿಲ್ಲ. ಎಲ್ಲಕ್ಕಿಂತ ಸೋಜಿಗವೆನಿಸುವುದು ಚಲನಚಿತ್ರಗಳು ಬಿಡುಗಡೆಗೆ ಮುನ್ನವೇ ಟೀಸರ್‌ಗಳನ್ನೋ, ಹಾಡಿನ ದೃಶ್ಯಗಳನ್ನೋ ಪೋಸ್ಟರ್‌ಗಳನ್ನೂ ಕೊನೆಗೆ ಹೆಸರನ್ನೇ ಆಕ್ಷೇಪಿಸಿ ವಿವಾದ ಎಬ್ಬಿಸಿ, ಅದರ ವಿರುದ್ಧ ಕಾನೂನು ಸಮರ ಸಾರುವ ಮಟ್ಟಿಗೆ ಹೋಗುತ್ತಿದ್ದೇವೆ. ಇತ್ತೀಚೆಗೆ ಶಾರುಕ್ ಖಾನ್ ಅಭಿನಯದ ‘ಪಠಾಣ್’ ಚಿತ್ರದ ವಿಚಾರದಲ್ಲೂ ಹೀಗೆಯೇ ವಿವಾದವೆದ್ದು, ಆಗಲೂ ಪ್ರಧಾನಿ ಮೋದಿಯವರೇ ‘ಬುದ್ಧಿ ಹೇಳಿದ’ ಬಳಿಕ ಎಲ್ಲವೂ ತಣ್ಣಗಾಗಿತ್ತು.

ಹಾಗಾದರೆ, ಏನಾಗಿದೆ ಈ ಸಮಾಜಕ್ಕೆ? ವ್ಯಕ್ತಿತ್ವ ಹರಣ, ದೇಶದ್ರೋಹಕ್ಕೆ ಪ್ರಚೋದನೆಯಂಥ ವಿಷಯಗಳನ್ನು ಹೊರತುಪಡಿಸಿ, ಪ್ರತಿಯೊಂದಕ್ಕೂ ಕಾನೂನು ಸಮರಕ್ಕಿಳಿಯುವುದರಿಂದ ಕೋರ್ಟ್ ಸಮಯವೂ ವ್ಯರ್ಥ. ಕೆಲವೊಮ್ಮೆ ಪುಕ್ಕಟೆ ಪ್ರಚಾರ
ತಂತ್ರ ವಾಗಿಯೂ ಇಂಥವು ನಡೆಯುತ್ತಿರುವುದು ನಗಣ್ಯವೇನಲ್ಲ. ಇಷ್ಟೆಲ್ಲದರ ನಡುವೆಯೂ ಪುರಸ್ಕರಿಸುವ, ತಿರಸ್ಕರಿಸುವ ಪ್ರೇಕ್ಷಕನ ಅಥವಾ ಓದುಗನ ಹಕ್ಕಿನ ಮೇಲೆ ಅನಗತ್ಯ ಒತ್ತಡ ಹೇರುವ ಅಧಿಕಾರವನ್ನು ಕೊಟ್ಟರ‍್ಯಾರು?