ಮನೆಯಿಂದ ಕೆಲಸ ಮಾಡುವಾಗ, ಆಗಾಗ ಖಂಡಿತವಾಗಿಯೂ ತೆಗೆದುಕೊಳ್ಳಲೇಬೇಕಾದ ಐದು ನಿಮಿಷದ ಬಿಡುವಿ ನಲ್ಲಿ, ಸಣ್ಣ ಪುಟ್ಟ ಮನೆಗೆಲಸಗಳನ್ನು ಮುಗಿಸಬಹುದು, ಗೊತ್ತೆ?
ಬಹಳಷ್ಟು ಮಂದಿಗೆ ಈಗ ಮನೆಯಿಂದ ಕೆಲಸ ಮಾಡುವುದು ಅನಿವಾರ್ಯವಾಗಿದೆ, ಕೆಲವರಿಗೆ ಅದರಿಂದ ಅನುಕೂಲವೂ ಆಗಿದೆ. ಆದರೆ, ಮನೆಯನ್ನೇ ಆಫೀಸು ಮಾಡಿಕೊಂಡು, ಒಂದರ ಹಿಂದೆ ಒಂದರಂತೆ ಕೆಲಸ ಮಾಡುವ ಒತ್ತಡದಲ್ಲಿ ಕೆಲವು ದಿನನಿತ್ಯದ ಕೆಲಸಗಳು ಉಳಿಯುತ್ತದೆಯೇ? ಅಂತಹ ಬಾಕಿ ಉಳಿದ ಕೆಲಸಗಳು ನಂತರ ಕಿರಿಕಿರಿ ಮಾಡುತ್ತಿವೆಯೇ? ಬಾಕಿ ಉಳಿಯುವ ಸಣ್ಣ ಪುಟ್ಟ ಕೆಲಸಗಳನ್ನು ಒಂದೊಂದಾಗಿ ಮಾಡಲು ಕೆಲವು ಉಪಾಯಗಳಿವೆ.
ಗಂಟೆಗೊಮ್ಮೆ ಬ್ರೇಕ್: ಕೆಲಸದ ನಡುವೆ ಒಂದು ಗಂಟೆಗೊಮ್ಮೆ ಬ್ರೇಕ್ ತೆಗೆದುಕೊಳ್ಳಬೇಕು. ಈ ಅವಧಿಯನ್ನು ಬಾಕಿ ಉಳಿದ ಕೆಲಸ ಮಾಡಲು ಉಪಯೋಗಿಸಿಕೊಳ್ಳಬಹುದು. ಒಂದೆರಡು ಬಟ್ಟೆ ಇಸ್ತ್ರಿ ಮಾಡಲು, ಟೀಪಾಯಿ ಮೇಲೆ ರಾಶಿಬಿದ್ದ ಪೇಪರು ಗಳನ್ನು ಒಳಗೆತ್ತಿ ಇಡಲು ಇಂತಹ ಕೆಲಸದ ನಡುವಿನ ಬ್ರೇಕ್ ಒಳ್ಳೆಯ ಅವಕಾಶ.
ಐದು ನಿಮಿಷದ ನಿಯಮ: ಐದು ನಿಮಿಷದಲ್ಲಿ ಮಾಡುವ ಕೆಲಸಗಳನ್ನು ಒಂದೊಂದಾಗಿ ಮಾಡುವ ಯೋಚನೆ ಮಾಡಬೇಕು. ಹಾಲ್ ಕ್ಲೀನಿಂಗ್, ಸ್ನಾನ, ಟೀ ತಯಾರಿಸಿ ಸೇವಿಸುವುದು ಇತ್ಯಾದಿ.
ಪಟ್ಟಿ ಮಾಡುವುದು: ಬಾಕಿ ಉಳಿದ ಕೆಲಸಗಳನ್ನು ನೆನಪಿಗೆ ಬಂದಂತೆಲ್ಲ ಪಟ್ಟಿಮಾಡಿ, ಬಿಡುವಾದಾಗ ಕೆಲಸವನ್ನು ಮಾಡಿಸಬೇಕು. ಈ ಬಾಕಿ ಕೆಲಸಗಳ ಪಟ್ಟಿಯು ಸದಾ ಕಣ್ಣಿಗೆ ಕಾಣುವಂತೆ ಇರಬೇಕು.
ಸ್ಮಾರ್ಟ್ ಫೋನ್ ಉಪಯೋಗ: ಬಾಕಿ ಉಳಿದ ಕೆಲಸಗಳನ್ನು ನೆನಪಿಸಿಕೊಳ್ಳಲು ಇನ್ನೊಂದು ಉಪಾಯ ಎಂದರೆ ಸ್ಮಾರ್ಟ್ ಫೋನ್ ನಲ್ಲಿ ಫೋಟೋ ತೆಗೆಯುವುದು. ಯಾವುದಾದರೂ ಪುಸ್ತಕ ಓದಬೇಕಾದರೆ ಅದರ ಫೋಟೋ ತೆಗೆದಿಟ್ಟುಕೊಂಡು
ಬಿಡುವಾದಾಗ ಓದಬಹುದು.
ಸಾಮಾಜಿಕ ಜಾಲತಾಣ: ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಹಲವು ಸುದ್ದಿಗಳನ್ನು ತಿಳಿಯಬಹುದು, ಗೆಳೆಯರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಬಹುದು. ಮನೆಯಿಂದ ಕೆಲಸ ಮಾಡುವಾಗ, ಈ ರೀತಿಯ ಸಂಪರ್ಕ ಒಳ್ಳೆಯದು. ಆದರೆ ಹಲವು ಬಾರಿ ಸಾಮಾಜಿಕ ಜಾಲತಾಣಗಳು ಏಕಾಗ್ರತೆಗೆ ಭಂಗ ತರುತ್ತವೆ!
ಪ್ರತಿದಿನ ಒಂದು ಅಥವಾ ಎರಡು ಗಂಟೆಗಿಂತ ಹೆಚ್ಚು ಕಾಲ ಸಾಮಾಜಿಕ ಜಾಲತಾಣದಲ್ಲಿ ವಿಹರಿಸುವುದಿಲ್ಲ ಎಂದು ನೀವೇ ಚೌಕಟ್ಟು ಹಾಕಿಕೊಳ್ಳಬೇಕು. ಆಗ, ಹಲವು ಪ್ರಮುಖ ಕೆಲಸಗಳಿಗೆ ಸಮಯ ಸಿಗುತ್ತದೆ.
ಕುಟುಂಬಕ್ಕಿರಲಿ ಆದ್ಯತೆ
ಮನೆಯಿಂದ ಕೆಲಸ ಮಾಡುವಾಗಲೂ, ನಿಮ್ಮ ಕುಟುಂಬಕ್ಕಾಗಿ ಸಮಯ ಮೀಸಲಿಡಲೇಬೇಕು, ಜತೆಗೆ ಹವ್ಯಾಸಗಳಿಗೂ ಅವಕಾಶ ನೀಡಿ ಮನಸ್ಸನ್ನು ಹಗುರಗೊಳಿಸಿಕೊಳ್ಳಬೇಕು. ಇಲ್ಲವಾದರೆ, ಮನೆಯು ಆಫೀಸಿಗಿಂತಲೂ ಬಿಗಿ ಎನಿಸುವ ಬಂಧನ ಎನಿಸಬಹುದು. ದಿನದ ಕೆಲವು ನಿಮಿಷಗಳಾದರೂ ಮನಸ್ಸು ಪ್ರಫುಲ್ಲವಾಗುವಂತೆ ನೋಡಿಕೊಳ್ಳಿ.