Thursday, 12th December 2024

ಈಗಲಾದರೂ ಮತ ಮೌಲ್ಯ ಅರಿಯೋಣ

ಚುನಾವಣೆಗೆ ಇವತ್ತೊಂದು ದಿನ ಬಾಕಿಯಿದೆ. ಅಂತೂ ಒಂದು ತಿಂಗಳ ಪ್ರಚಾರದ ಅಬ್ಬರ, ಪಕ್ಷಗಳ ನಾಯಕರ ಸರ್ಕಸ್, ತಂತ್ರ ಗಾರಿಕೆಗಳಿಗೆಲ್ಲವೂ ಬ್ರೇಕ್ ಬಿದ್ದಿದೆ. ಇನ್ನೇನಿದ್ದರೂ ಎಲ್ಲ ಮತದಾರರ ಬೆರಳ ತುದಿಯಲ್ಲಿ ನಿಂತಿದೆ.

ಹಾಗೆ ನೋಡಿದರೆ ಕಳೆದೊಂದು ವರ್ಷದಿಂದಲೂ ರಾಜಕೀಯ ಪಕ್ಷಗಳು ಮತ್ತು ನಾಯಕರು ಚುನಾವಣೆ ದೃಷ್ಟಿಯಲ್ಲಿಟ್ಟು ಕೊಂಡು ಸಿದ್ಧತೆ ಮಾಡಿಕೊಳ್ಳುತ್ತಲೇ ಬಂದಿದ್ದರು. ಅದರಲ್ಲೂ ಮುಖ್ಯವಾಗಿ ಅರ್ಧದಲ್ಲೇ ಅಧಿಕಾರ ಕೈ ತಪ್ಪಿಸಿಕೊಂಡು ಪ್ರತಿ ಪಕ್ಷಗಳ ಆಸನಕ್ಕೆ ತಳ್ಳಲ್ಪಟ್ಟಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶತಾಯಗತಾಯ ಮತ್ತೆ ಅಧಿಕಾರಕ್ಕೇರಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಅತ್ಯಂತ ವ್ಯವಸ್ಥಿತವಾಗಿ ಹವಣಿಸಿದವು.

ಬಿಜೆಪಿ ನಾಯಕರು ಸಹಜವಾಗಿ ಅಧಿಕಾರ ಉಳಿಸಿಕೊಳ್ಳಲು ಹೆಣಗಿದ್ದು ಸತ್ಯ. ಈ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಮೂರೂ ಪಕ್ಷಗಳೂ ಮತದಾರರನ್ನು ಸೆಳೆಯಲು ಭರಪೂರ ಭರವಸೆಗಳ ಹೊಳೆಯನ್ನೇ ಹರಿಸಿವೆ. ಚುನಾವಣಾ ಪ್ರಣಾಳಿಕೆಗಳಲ್ಲಿ ಇವು ಢಾಳಾಗಿ ಕಂಡಿವೆ. ಇವನ್ನೂ ಮೀರಿ ತಿಂಗಳಿಡೀ ರಾಜ್ಯಾದ್ಯಂತ ಎಲ್ಲೆಂದರಲ್ಲಿ ಕೈಕಾಲಿಗೆ ಎಡವುತ್ತಿದ್ದ ನಾಯಕರು, ಅವರ ಸೋಗು, ಭಾಷಣಗಳ ಸುರಿಮಳೆ, ರೋಡ್‌ಶೋ-ರ‍್ಯಾಲಿಗಳ ಕಿರಿಕಿರಿ, ಸಮಾವೇಶಗಳ ಭರಾಟೆ, ವೈಯಕ್ತಿಕ ನಿಂದನೆ, ಆರೋಪ- ಪ್ರತ್ಯಾರೋಪಗಳ ಕೆಸರೆರಚಾಟ…ಇತ್ಯಾದಿಗಳೆಲ್ಲವೂ ರೇಜಿಗೆ ಹುಟ್ಟಿಸುವ ಮಟ್ಟಿಗೆ ಇತ್ತು.

ಯಾವಾಗ ಈ ಚುನಾವಣೆ ಮುಗಿಯುತ್ತದೋ ಎಂದೆನಿಸಿದ್ದರೂ ಅಚ್ಚರಿಯಿಲ್ಲ. ಯಾರೊಬ್ಬರೂ ಅಧಿಕಾರದಲ್ಲಿದ್ದಾಗ ರಾಜ್ಯದ, ಕ್ಷೇತ್ರದ, ಮತದಾರರ ಹಿತಕ್ಕಾಗಿ ಚಿಂತಸದ, ಶ್ರಮಿಸದ ಫಲ ಇದು. ಹಾಗೊಂದೊಮ್ಮೆ ನಿಜಕ್ಕೂ ಜನ ಹಿತದ ಕೆಲಸಗಳನ್ನು ಮಾಡಿದ್ದರೆ ಈ ಪಾಟಿ ರಂಪಾಟ ಅಗತ್ಯ ಇರಲಿಲ್ಲವೆಂದೆನಿಸುತ್ತದೆ. ಚುನಾವಣೆ ಎಂಬದು ಪ್ರಜಾಪ್ರಭುತ್ವದ ಹಬ್ಬವಾಗಿ ಇಂದು ಉಳಿದಿಲ್ಲ. ಕೀಳು ರಾಜಕಾರಣದ ‘ಹುಚ್ಚು ಜಾತ್ರೆ’ ಯಂತಾಗಿದೆ.

ಜಾತಿ-ವರ್ಗಗಳ ಓಲೈಕೆಯ, ಪ್ರತಿಷ್ಠೆ- ತಾಕತ್ತಿನ ಪ್ರದರ್ಶನ, ಓಲೈಕೆ-ದ್ವೇಷ ಸಾಧನೆಯ ವೇದಿಕೆಯಂತಾಗಿಬಿಟ್ಟಿರುವುದು ದುರಂತ.
ರಾಜಕೀಯ ಪಕ್ಷಗಳು, ನಾಯಕರು ಏನೇ ಆಗಿದ್ದರೂ ಅದರ ನೇರ ಹೊಣೆಗಾರರು ನಾವು ಮತದಾರರೇ. ಸಿಕ್ಕ ಒಂದು ದಿನದ ಮತದಾನದ ಅವಕಾಶವನ್ನು ವ್ಯರ್ಥ ಮಾಡಿದ್ದರ ಅಥವಾ ವಿವೇಚನಾ ರಹಿತ ಹಕ್ಕು ಚಲಾವಣೆ ಮಾಡಿದ್ದರ ಫಲವಿದು. ಮತದಾರರು ಮತದಾನದ ವಿಚಾರದಲ್ಲಿ ಉದಾಸೀನ ತೋರದೆ ಸೂಕ್ತ ಅಭ್ಯರ್ಥಿಗೆ ತಮ್ಮ ಮತವನ್ನು ಚಲಾಯಿಸುವ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ. ಮತದ ಮೌಲ್ಯವನ್ನು ಈಗಾದರೂ ಅರಿಯಬೇಕಿದೆ.