Friday, 22nd November 2024

ಬಿಗಿ ಭದ್ರತೆಗಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತೆ ರಾಮಲಿಂಗಾ ರೆಡ್ಡಿ ಒತ್ತಾಯ

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಗ ಗೂಂಡಾಗಳಿಂದ ದುವರ್ತನೆ 

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಅವರು ತಮ್ಮ ಪಕ್ಷದ ಗೂಂಡಾಗಳ ಮೂಲಕ ಮತದಾರರನ್ನು ಬೆದರಿಸುವ ಕಾರ್ಯದಲ್ಲಿ ನಿರತರಾಗಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಅಡ್ಡಿ ಪಡಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸುವಂತೆ ಕಾಂಗ್ರೆಸ್ ನಿಯೋಗ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು, ಜಯನಗರ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಮತ್ತು ಮಾಜಿ ಮೇಯರ್ ರಾಮಚಂದ್ರಪ್ಪ, ಭೈರಸಂದ್ರ ವಾರ್ಡ್ ನ ಬಿಬಿಎಂಪಿ ಮಾಜಿ ಸದಸ್ಯ ನಾಗರಾಜು ನೇತೃತ್ವದ ನಿಯೋಗ ಮುಖ್ಯ ಚುನಾವಣಾಧಿಕಾರಿ ಅವರಿಗೆ ದೂರು ಸಲ್ಲಿಸಿತು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, ರಾತ್ರಿ ವೇಳೆಯಲ್ಲಿ ಮುಖ ಗವಸು, ಮಂಕಿ ಕ್ಯಾಪ್ ಹಾಗೂ ಹೆಲ್ಮೆಟ್ ಧರಿಸಿ ನೂರಾರು ಗೂಂಡಾಗಳು ಭೀತಿ ವಾತಾವರಣ ಸೃಷ್ಟಿಸುತ್ತಿದ್ದಾರೆ.

ವಿಶೇಷವಾಗಿ ಮಾರೇನಹಳ್ಳಿ, ಅರಸು ಕಾಲೋನಿ, ತಿಲಕ್ ನಗರ್, ಭೈರಸಂದ್ರ, ಮಾರೇನಹಳ್ಳಿ ಪಾಳ್ಯ, ರಾಗಿಗುಡ್ಡ, ಬನಶಂಕರಿ ಕ್ವಾಟ್ರಸ್, ಮಾರೇನಹಳ್ಳಿ ಟ್ಯಾಂಕ್ ಬಂಡ್ ರಸ್ತೆ, ಜೆ.ಪಿ. ನಗರ ಇನ್ನಿತರ ಪ್ರದೇಶಗಳಲ್ಲಿ ಸುಳ್ಳು ಸುದ್ದಿ ಹರಡಿಸುವ, ಕೊಳಚೆ ಪ್ರದೇಶ, ಮುಸ್ಲೀಂ ಸಮುದಾಯವಿರುವ ಭಾಗಗಳಲ್ಲಿ ಬೆದರಿಕೆ ಹಾಕಿ ಮತಗಟ್ಟೆಗಳಿಗೆ ಬರದಂತೆ ತಡೆಹಿಡಿಯುತ್ತಿದ್ದಾರೆ ಎಂದರು.

ಗೂಂಡಾಗಳ ಉಪಟಳದಿಂದ ಮತದಾನ ಪ್ರಮಾಣ ಕಡಿಮೆಯಾಗುವ ಆತಂಕವಿದ್ದು, ಚುನಾವಣೆ ಉದ್ದೇಶ ನಿರರ್ಥಕಗೊಳ್ಳಲಿದೆ. ಕಳೆದ ರಾತ್ರಿ ಹಲವು ಭಾಗಗಳಲ್ಲಿ ದೂಂಡಾವರ್ತನೆ ತೋರಿದ್ದು, ಆಯೋಗ ಇಂತಹ ವಿಚಿದ್ರಕಾರಿ ಶಕ್ತಿಗಳನ್ನು ತಡೆ ಹಿಡಿಯ ಬೇಕು. ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರೀಯ ಪಡೆಗಳನ್ನು ನಿಯೋಜನೆ ಮಾಡಬೇಕು ಎಂದು ಕೋರಾಗಿದೆ.

ಈ ಸಂಬಂಧ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗುವುದು ಜೊತೆಗೆ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ಒತ್ತಾಯಿಸಿದರು.