ಶಶಾಂಕಣ
shashidhara.halady@gmail.com
ಕಳೆದ ವಾರ ನಮ್ಮ ಹಳ್ಳಿ ಹಾಲಾಡಿಗೆ ಹೋಗಿದ್ದೆ; ಬಸ್ ಸ್ಟಾಪ್‌ನ ಹತ್ತಿರವೇ ಇದ್ದ ಅಂಗಡಿಯಲ್ಲಿ ಮಾವಿನ ಹಣ್ಣಿನ ರಾಶಿ
ಕಾಣಿಸಿತು. ‘ಇದಾವ ಮಾವು?’ ಎಂದು ಕೇಳಿದಾಗ, ‘ಇದು ಮಲಬಾರ್, ತಕೊಳ್ಳಿ’ ಎಂದರು ಅಂಗಡಿಯವರು.
ಇದ್ಯಾವುದಪ್ಪಾ, ಮಲಬಾರ್ ಎಂಬ ಹೊಸ ತಳಿ ಎಂದು ಪರಿಶೀಲಿಸಿದಾಗ ಗೊತ್ತಾಯಿತು, ಇದು ನಮ್ಮೂರಿನ ‘ಮಲಬಾರ್ ಕಸೆ’ ಎಂಬ ತಳಿ. ನನ್ನ ಬಾಲ್ಯಕಾಲದಿಂದಲೂ ಪರಿಚಿತ; ನಮ್ಮ ಹಳ್ಳಿ ಮನೆಗೆ ತಾಗಿಕೊಂಡಂತೆ ಈ ತಳಿಯ ಎರಡು ಮಾವಿನ ಮರಗಳಿದ್ದವು. ಇವುಗಳ ವಿಶೇಷತೆ ಎಂದರೆ, ಕಸಿ ಕಟ್ಟದೇ ಬೆಳೆಸಿದ ಗಿಡಗಳಿವು; ಉತ್ತಮ ತಳಿಯ ಕಸಿ ಹಣ್ಣನ್ನು ತಿಂದು, ಅದರ ಗೊರಟನ್ನು ನಾಟಿ ಮಾಡಿದಾಗ ಮೊಳಕೆ ಒಡೆದು ಬರುವ ಗಿಡ ಇದು ಎಂದು ನಮ್ಮ ಅಮ್ಮಮ್ಮ ಹೇಳುತ್ತಿದ್ದರು.
ಅದರಲ್ಲಿ ಮೂಲ ಕಸಿ ಹಣ್ಣಿನ ರುಚಿ ಇರಲಾರದು, ಅಥವಾ ಇದ್ದರೂ ಇರಬಹುದು, ಆದರೆ, ಆ ಗುಣಮಟ್ಟ ಇರುವುದಿಲ್ಲ ಎಂಬುದು ಅವರ ಅನುಭವ ಜನ್ಯ ಮಾತು. ನಮ್ಮ ಮನೆಯ ಪಕ್ಕದಲ್ಲೇ ಇದ್ದ ಆ ಎರಡೂ ‘ಮಲಬಾರ್ ಕಸೆ’ ಗಿಡಗಳನ್ನು ನಮ್ಮ ಅಮ್ಮಮ್ಮನೇ ನೆಟ್ಟು, ಬೆಳೆಸಿದ್ದು ಎಂದು ಅವರು ಹೆಮ್ಮೆ ಯಿಂದ ಹೇಳಿಕೊಳ್ಳುತ್ತಿದ್ದರು. ಅದರಲ್ಲಿ ಪ್ರತಿ ವರ್ಷ ನೂರಾರು ಹಣ್ಣುಗಳು ಬಿಡುತ್ತಿದ್ದವು; ಸಿಹಿಗೆ ಕೊರತೆ ಇಲ್ಲ, ಗಾತ್ರವೂ ಪರವಾಗಿಲ್ಲ, ಆದರೆ ರುಚಿ ಅಷ್ಟಕ್ಕಷ್ಟೆ; ಬಣ್ಣ, ಸಿಹಿ ಇದ್ದರೂ, ತುಸು ನಾರು, ಪರಿಮಳ ರಹಿತ ರುಚಿಯಾದ್ದರಿಂದ, ತಿನ್ನಲು ಅಷ್ಟೊಂದು ಇಷ್ಟ ಎನಿಸು ತ್ತಿರಲಿಲ್ಲ.
ಆದರೆ, ನಮ್ಮೂರಿನಲ್ಲಿ ಆಗಿನ ದಿನಗಳಲ್ಲಿ ಉತ್ತಮ ತಳಿಯ ಕಸಿ ಹಣ್ಣುಗಳು ಬಹಳ ಕಡಿಮೆ, ಆದ್ದರಿಂದ, ನಮ್ಮ ಮನೆಯ ‘ಮಲಬಾರ್ ಕಸೆ’ಯೇ ನಮಗೆ ದಕ್ಕಿದ ಭಾಗ್ಯ. ಆಗಿನ ದಿನಗಳಲ್ಲಿ ನಮ್ಮ ಹಳ್ಳಿಯಲ್ಲಿದ್ದ ‘ಮುಂಡಪ್ಪ’ ಎಂಬ ತಳಿಯ, ಅತಿ ರುಚಿ, ತುಸು ಅಪರೂಪ ಎನಿಸುವ ಮಾವು ಸಿಗುತ್ತಿತ್ತು; ಆದರೆ, ಅದರ ಇಳುವರಿ ತೀರಾ ಕಡಿಮೆ; ಎರಡು ವರ್ಷಗಳಿಗೊಮ್ಮೆ ಅದರಲ್ಲಿ ಕಾಯಿ ಆಗುವುದು; ಅದಕ್ಕೆ ವಿಪರೀತ ಬೇಡಿಕೆ. ಆ ಹಣ್ಣಿನ ರುಚಿಯ ಕುರಿತು ಕಾರಂತರ ಸಾಹಿತ್ಯದಲ್ಲೂ ಪ್ರಸ್ತಾಪ ಬಂದಿದೆ; ಸ್ವತಂತ್ರ ಪೂರ್ವ ಕಾಲದಲ್ಲಿ ಮುಂಡಪ್ಪ ತಳಿಯ ಕಸಿ ಕಟ್ಟಿದ ಒಂದು ಗಿಡಕ್ಕೆ ಒಂದು ಅಕ್ಕಿ ಮುಡಿಯ ಬೆಲೆ ಇತ್ತಂತೆ (ಅಂದರೆ, ಸುಮಾರು ೪೨ ಕಿಲೊ ಅಕ್ಕಿಯ ಬೆಲೆ!) ಆಗೆಲ್ಲಾ ಕಸಿ ಕಟ್ಟುವವರೂ ಕಡಿಮೆ, ಕಸಿ ಕಟ್ಟಿದಾಗ ಆರೋಗ್ಯಕರವಾಗಿ ಬೆಳೆ
ಯುವ ಗಿಡಗಳೂ ಕಡಿಮೆ. ನಾ ಕಂಡಂತೆ, ನಮ್ಮೂರಿನಲ್ಲಿ ಅಂದು ಆ ತಳಿಯ ಕೇವಲ ನಾಲ್ಕಾರು ಮರಗಳಿದ್ದವು.
ಆದ್ದರಿಂದಲೇ ನಮ್ಮ ಮನೆಯ ‘ಮಲಬಾರ್ ಕಸೆ’ಗೆ ತಕ್ಕಷ್ಟು ಪ್ರಾಧಾನ್ಯ ಇತ್ತು. ಆದರೆ, ಆಗಿನ ದಿನಗಳಲ್ಲಿ ಅದನ್ನು ಅಂಗಡಿ ಗಳಲ್ಲಿಟ್ಟು ಮಾರುವ ಪದ್ಧತಿ ಇರಲಿಲ್ಲ; ಈಗ ಅದೇ ಸಾಧಾರಣ ರುಚಿಯ ಹಣ್ಣನ್ನು ‘ಮಲಬಾರ್’ ಎಂಬ ಹೆಸರಿನಿಂದ ನಮ್ಮೂರಿನಲ್ಲಿ ಮಾರಾಟ ಮಾಡುವುದನ್ನು ಕಂಡು ತುಸು ಅಚ್ಚರಿಯೂ, ತುಸು ಹೆಮ್ಮೆಯೂ ಆಯಿತು.
ಮಲಬಾರ್ ಕಸೆ ಮಾವಿನ ಗಿಡದ ಇನ್ನೊಂದು ವಿಶೇಷವಿದೆ. ಅದರ ಗೊರಟನ್ನು ನೆಲದಲ್ಲಿಟ್ಟು ನೀರೆರೆದರೆ, ಒಮ್ಮೆಗೇ ಮೂರರಿಂದ ಐದು ಗಿಡಗಳು ಹೊರಬರುತ್ತಿದ್ದವು! ಆ ನಂತರ ಬೆಳೆಯುವುದು ಒಂದೇ ಗಿಡವಾದರೂ, ಮೊಳಕೆಯೊಡೆಯುವ ಐದು ಎಳೆ ಗಿಡಗಳನ್ನು ಕಂಡರೆ ತುಸು ಅಚ್ಚರಿಯೂ ಆಗುತ್ತಿತ್ತು. ಆದರೆ, ಆ ಗಿಡವನ್ನು ಬೆಳೆಸಿದರೆ, ಅದರಲ್ಲಿ ಬಿಡುವ ಹಣ್ಣುಗಳ ರುಚಿಯೂ ಅಷ್ಟಕ್ಕಷ್ಟೆ; ಒಮ್ಮೆ ತಿಂದ ನಂತರ, ಅದರಲ್ಲಿರುವ ನಾರುಗಳು ಹಲ್ಲಿಗೆ ಸಿಕ್ಕಿಹಾಕಿಕೊಂಡು, ಅದನ್ನು ತೆಗೆಯುವುದೇ
ಒಂದು ರೇಜಿಗೆಯ ಕೆಲಸ.
ಆದರೂ ಮಕ್ಕಳಿಗೆ ರುಚಿ; ರಸಾಯನ ಮಾಡಲು, ಸಾಸ್ಮೆ, ಚಟ್ನಿ ಮಾಡಲು ಅಡ್ಡಿಲ್ಲ. ಹಿಂದಿನ ಕಾಲದಲ್ಲಿ ಮಾಡುತ್ತಿದ್ದಂತೆ,
ಚೆನ್ನಾಗಿ ಹೆಚ್ಚಿ, ಒಣಗಿಸಿಟ್ಟುಕೊಂಡು ಮಳೆಗಾಲದಲ್ಲಿ ಹುಳಿ ಬದಲಿಗೆ ಉಪಯೋಗಿಸಲೂ ಅಡ್ಡಿಲ್ಲ. ಈ ಮಲಬಾರ್ ಕಸೆಯ ಇನ್ನೊಂದು ಗುಣ ಎಂದರೆ, ಮಳೆಗಾಲ ಆರಂಭವಾದ ನಂತರವೂ ಹಲವು ದಿನಗಳ ತನಕ ಹಣ್ಣಾಗುತ್ತಲೇ ಇರುತ್ತದೆ. ನಮ್ಮೂರಿನ ಮಳೆ ಗೊತ್ತಲ್ಲ, ಒಮ್ಮೊಮ್ಮೆ ಎಡೆಬಿಡದೆ ಸುರಿದರೆ ನಾಲ್ಕಾರು ದಿನಗಳ ತನಕವೂ ಸುರಿದೀತು; ಆಗ ಈ
ಹಣ್ಣಿನ ಮೇಲೆ ಕಪ್ಪು ಕಪ್ಪು ಕಲೆಗಳೂ ಆಗಿ, ರುಚಿಯೂ ಕಡಿಮೆಯಾಗುತ್ತದೆ.
ಇಂದು ನಮ್ಮೂರಿನ ಅಂಗಡಿಗಳಲ್ಲಿ, ಈ ಹಣ್ಣಿನ ಮಾರಾಟದ ಬೆಲೆಯು ಉತ್ತಮ ಕಸಿ ಹಣ್ಣಿನ ಬೆಲೆಗಿಂತ ಅರ್ಧದಷ್ಟು. ಮಿತವ್ಯಯ ಬಯಸುವವರ ಆಪ್ತ ಈ ಮಲಬಾರ್ ಕಸೆ. ಗಾತ್ರದಲ್ಲಿ ದೊಡ್ಡದಿದ್ದರೂ, ಸಪ್ಪೆ ರುಚಿಯ ಮಲಬಾರ್ ಕಸೆಯನ್ನು ‘ರುಚಿ ರಹಿತ’ ಎಂದು ನಾವು ಕರೆಯಲು ಇನ್ನೊಂದು ಕಾರಣವೂ ಇತ್ತು; ಅಂದು ನಮ್ಮೂರಿನ ಸುತ್ತಮುತ್ತಲೂ, ಮನೆಯ
ಅಂಚಿನ ಕಾಡಿನಲ್ಲಿ, ನಮ್ಮ ಬಂಧುಗಳ ಮನೆಯ ಪಕ್ಕದಲ್ಲಿ ಬೆಳೆದಿದ್ದ ಕಾಟು ಮಾವಿನ ಮರಗಳಲ್ಲಿ ದೊರೆಯುತ್ತಿದ್ದ ಹಣ್ಣುಗಳ ಅಸೀಮ ಮತ್ತು ವೈವಿಧ್ಯಮಯ ರುಚಿಯ ಎದುರು ಸುಮಾರಾಗಿ ಯಾವ ಕಸಿ ಹಣ್ಣೂ ನಿಲ್ಲಲಾರದು!
ಗಾತ್ರದಲ್ಲಿ ಸಣ್ಣ ದಾದರೂ, ಅಲ್ಲೆಲ್ಲಾ ಸಿಗುತ್ತಿದ್ದ ಕಾಟು ಮಾವಿನ ಹಣ್ಣಿನ ಪರಿಮಳ ಮತ್ತು ರುಚಿವೈವಿಧ್ಯಕ್ಕೆ ಸಾಟಿಯೇ ಇಲ್ಲ! ಇಂದು ಮಾರುಕಟ್ಟೆಯಲ್ಲಿ ದೊರೆಯುವ ಹೆಸರಾಂತ ತಳಿಗಳಾದ ಬಾದಾಮಿ, ಅಪೂಸ್, ಮಲ್ಲಿಕಾ, ನೀಲಂ ಮೊದಲಾದ ಹಣ್ಣುಗಳ ರುಚಿಯನ್ನು ಹೊಂದಿದ್ದ ಕಾಟು ಮಾವಿನ ಹಣ್ಣುಗಳು ನಮ್ಮ ಮನೆಯ ಸುತ್ತ ದೊರೆಯುತ್ತಿದ್ದವು ಎಂಬುದೇ ಅಚ್ಚರಿಯ ಮತ್ತು ವಿಸ್ಮಯ ತರುವ ವಿಚಾರ.
ಆದರೇನು ಮಾಡುವುದು, ನಮ್ಮೂರು ಈಚಿನ ಒಂದೆರಡು ದಶಕಗಳಲ್ಲಿ ಕಂಡ ‘ಅಭಿವೃದ್ಧಿ’ಯಿಂದಾಗಿಯೋ, ನಮ್ಮ ಜನರ ಅವಜ್ಞೆಯಿಂದಾಗಿಯೋ, ಬಡತನದ ಬವಣೆಯಿಂದಾಗಿ ಮರ ಕಡಿದು ಮಾರುವಂತಹ ಅನಿವಾರ್ಯತೆಗೆ ಸಿಲುಕಿದ್ದರಿಂದಾ ಗಿಯೋ ಏನೊ, ಅಂತಹ ಅಪರೂಪದ ರುಚಿಕರ ಕಾಟು ಮಾವಿನ ಮರಗಳೇ ಬಹುತೇಕ ಕಣ್ಮರೆಯಾಗಿ ಹೋಗಿವೆ. ಅದೇ ರೀತಿ, ಉಪ್ಪಿನಕಾಯಿಗೆ ಅನುಕೂಲವಾಗುತ್ತಿದ್ದ ಕಾಟು ಮಾವಿನ ಮರಗಳು ಸಹ ಬಹುತೇಕ ಕಣ್ಮರೆಯಾಗಿವೆ!
ಬೇರೆಲ್ಲಾ ಯಾಕೆ, ನಮ್ಮ ಮನೆಯ ಹತ್ತಿರವೇ ಇದ್ದ ಒಂದು ಅಪರೂಪದ ಮಾವಿನ ಮರವು ಉಪಯೋಗಕ್ಕೆ ಬಾರದೇ ಮೂಲೆಗುಂಪಾದ ಕಥೆಯನ್ನೇ ತೆಗೆದುಕೊಂಡರೆ, ಹೇಗೆ ಹಳ್ಳಿ ಜನರ ಅವಜ್ಞೆಯಿಂದ ಕೆಲವು ತಳಿಗಳು ನೇಪಥ್ಯಕ್ಕೆ ಸರಿಯುತ್ತಿವೆ ಎಂಬುದನ್ನು ಗುರುತಿಸಬಹುದು. ನಮ್ಮ ಮನೆಯ ಅಂಗಳದಲ್ಲಿ ನಿಂತರೆ ಕಾಣುವಂತೆ, ‘ಮುಲ್ಲಿಗದ್ದೆ’ಯ (ಮೂಲೆ ಗದ್ದೆ) ಅಂಚಿನಲ್ಲಿ ಒಂದು ಎತ್ತರವಾದ ಮಾವಿನ ಮರವಿತ್ತು. ನಿಜ ಹೇಳಬೇಕೆಂದರೆ, ಅದರಲ್ಲಿ ಕಾಯಿ ಬಿಡುವುದನ್ನು ನಾನು ಹೆಚ್ಚು ಕಂಡದ್ದಿಲ್ಲ. ಎಲ್ಲೋ ಒಮ್ಮೊಮ್ಮೆ ಹೂವು ಬಿಟ್ಟು, ಮಿಡಿಯಾಗಿದ್ದನ್ನು ಕಂಡಿದ್ದೆ. ಆದರೆ ತೀರಾ ಕಡಿಮೆ
ಮಿಡಿಗಳಾಗುತ್ತಿದ್ದವು. ಅದಕ್ಕೊಂದು ಕಾರಣವಿತ್ತು.
ಎತ್ತರವಾಗಿ, ದಪ್ಪವಾಗಿ ಬೆಳೆದಿದ್ದ ಆ ಮರದ ಎಲೆಗಳ ಹರಹೂ ವಿಶಾಲ; ಆದ್ದರಿಂದ, ಪ್ರತಿ ವರ್ಷ ತೋಟಕ್ಕೆ ಬುಡ ಮಾಡುವಾಗ, ಅದರ ಸೊಪ್ಪನ್ನು ಕಡಿದು ತಂದು ಅಡಿಕೆ ಮರಗಳ ಬುಡದಲ್ಲಿ ಹರಹುತ್ತಿದ್ದರು. ನಮ್ಮ ಮನೆಯಲ್ಲಿದ್ದದ್ದು ಪುಟಾಣಿ
ತೋಟ, ಅಬ್ಬಬ್ಬಾ ಎಂದರೆ ಐವತ್ತರಿಂದ ಅರವತ್ತು ಅಡಿಕೆ ಮರಗಳಿದ್ದ ತಾವು ಅದು. ಅದಕ್ಕೆ ಪ್ರತಿ ಮಳೆಗಾಲದಲ್ಲಿ ಬುಡ ಮಾಡುವ ಶಾಸ. ಆಗ ಆ ಮುಲ್ಲೆಗದ್ದೆ ಮಾವಿನ ಮರದ ಸೊಪ್ಪನ್ನು ಕಡಿದು ತರುತ್ತಿದ್ದರು. ಅದಕ್ಕೂ ಕೆಲವು ಕಾರಣಗಳಿದ್ದವು; ಆ
ದಪ್ಪನೆಯ ಮರದ ಬುಡ ನಮ್ಮ ಜಾಗದಲ್ಲಿದ್ದರೂ, ಅದರ ಕೊಂಬೆಗಳು ನಮ್ಮ ಪಕ್ಕದವರ ಗದ್ದೆಗೆ ಚಾಚುವಂತಿದ್ದವು. ಆ ರೀತಿ ಕೊಂಬೆಗಳು ಚಾಚಿಕೊಂಡರೆ, ‘ಮರಗೊಡ್ಲು’ (ನೆರಳು) ಉಂಟಾಗಿ, ಗದ್ದೆಯಲ್ಲಿ ಬತ್ತದ ಬೆಳೆ ಚೆನ್ನಾಗಿ ಬರುವುದಿಲ್ಲ ಎಂಬುದು ಪಕ್ಕದ ಗದ್ದೆಯವರ ದೂರು. ಆ ರೀತಿ ದೂರನ್ನು ಕೇಳೀ, ಕೇಳೀ, ಅಂತಹ ದೂರಿಗೆ ಅವಕಾಶವನ್ನೇ ನೀಡದಂತೆ, ಪ್ರತಿ ವರ್ಷ ಆ ಬೃಹತ್ ಮಾವಿನ ಮರದ ಗೆಲ್ಲುಗಳನ್ನು ಕಡಿಸಿ, ತೋಟಕ್ಕೆ ಹಾಕಿಸುತ್ತಿದ್ದರು.
ವಿಶೇಷವೆಂದರೆ, ಅದು ಜೀರಿಗೆ ಮಾವಿನ ಮರ. ಬಹು ಹಿಂದೆ, ಅದರ ಮಿಡಿಗಳನ್ನು ಕುಯ್ದು ಉಪ್ಪಿನ ಕಾಯಿಯನ್ನು ಮಾಡುತ್ತಿದ್ದರಂತೆ; ಉದಕ್ಕೆ, ತೆಳ್ಳಗೆ ಇರುವ ಉತ್ತಮ ಗುಣಮಟ್ಟದ ಮಿಡಿಗಳನ್ನು ಆ ಮರ ಕೊಡುತ್ತಿತ್ತು. ಇಳುವರಿ ಕಡಿಮೆ; ಆದರೆ ಅದರ ರುಚಿ ತುಂಬಾ ಚೆನ್ನ ಎಂದು ನಮ್ಮ ಅಮ್ಮಮ್ಮ ಹೇಳುತ್ತಿದ್ದರು. ಆದರೆ, ಪಕ್ಕದ ಜಾಗದವರ ಕಾಟದಿಂದಾಗಿ, ಪ್ರತಿ ವರ್ಷ ಅದರ ಕೊಂಬೆಗಳನ್ನು ಕಡಿದು ಹಾಕಿದ್ದರಿಂದಾಗಿ, ಅದರಲ್ಲಿ ಹೂ ಬಿಡುವ ಕೊಂಬೆಗಳೇ ಇಲ್ಲದಂತಾಗಿತ್ತು. ನಾನು ಕಂಡಾಗ, ಆ ‘ಜೀರಿಗೆ ಮಿಡಿ’ ಮರವು ಎತ್ತರಕ್ಕೆ ಬೆಳೆದುಕೊಂಡಿದ್ದರೂ, ತುದಿಯಲ್ಲಿ ಮಾತ್ರ ನಾಲ್ಕಾರು ರೆಂಬೆಗಳನ್ನು
ಉಳಿಸಿಕೊಂಡಿತ್ತು. ಆದ್ದರಿಂದ, ಆ ಮರದ ಮಿಡಿಯ ರುಚಿ ನೋಡುವ ಅವಕಾಶ ದೊರೆಯಲಿಲ್ಲ.
ಒಮ್ಮೆ ಅದರ ತುದಿಯಲ್ಲಿ ನಾಲ್ಕೆಂಟು ಉದ್ದ ನೆಯ ಮಿಡಿಗಳು ಬಿಟ್ಟದ್ದನ್ನು ಕಂಡದ್ದುಂಟು. ಆ ಜೀರಿಗೆ ಮಿಡಿಯ ಅನನ್ಯತೆಯನ್ನು ಗುರುತಿಸಲು ವಿಫಲರಾದ ನಮ್ಮ ಮನೆಯವರ ಅವಜ್ಞೆಯಿಂದಾಗಿ, ಆ ಕಾಟು ಮಾವಿನ ಮರದ ಪೂರ್ಣ ಉಪಯೋಗವನ್ನು ಪಡೆಯಲು ಸಾಧ್ಯವಾಗಲೇ ಇಲ್ಲ. ಪ್ರತಿವರ್ಷ ಅದರ ಕೊಂಬೆಗಳನ್ನು ಕಡಿದದ್ದರಿಂದಲೋ ಏನೊ, ನಂತರ ಬಹು ಬೇಗನೆ ಮರವೇ ಕಣ್ಮರೆಯಾಯಿತು.
ಅಪರೂಪದ ತಳಿಯೊಂದು ಈ ರೀತಿ ಅವಜ್ಞೆಗೆ ಒಳಗಾಗಿ, ನಮ್ಮ ಕೈ ತಪ್ಪುವ ಇಂತಹ ಉದಾಹರಣೆ ತೀರಾ ಅಪರೂಪವಲ್ಲ; ನಮ್ಮ ಹಳ್ಳಿಗಳಲ್ಲಿ ಇಂತಹ ಹಲವು ಕಾಟು ಮಾವಿನ ಮರಗಳು ಅವನತಿಯನ್ನು ಕಂಡಿವೆ. ನಮ್ಮ ಮನೆ ಎದುರಿನ ಹಾಳುಮನೆ ಜಡ್ ಎಂಬ ಜಾಗದಲ್ಲಿದ್ದ ಒಂದು ರುಚಿಕರ ಕಾಟುಮಾವಿನ ಮರವು ಇದೇ ರೀತಿಯ ಉದಾಸೀನದಿಂದ, ಅಸ್ತಿತ್ವವನ್ನು ಕಳೆದುಕೊಂಡಿತು. ನಮ್ಮ ಮನೆಯಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಅಬ್ಲಿಕಟ್ಟೆಯ ನಮ್ಮ ಅಜ್ಜಿಯ ಮನೆಯ ಸುತ್ತಲೂ ನಾಲ್ಕಾರು ಕಾಟು ಮಾವಿನ ಮರಗಳಿದ್ದವು. ಅವುಗಳೂ ಪ್ರತಿವರ್ಷ ಬಿಡುವ ಸಾವಿರಾರು ಮಾವಿನ ಮಿಡಿ ಮತ್ತು ಹಣ್ಣುಗಳ ರುಚಿ ಅಪರೂಪ. ಒಂದು ಮರ ಬಿಡುತ್ತಿದ್ದ ಹಣ್ಣುಗಳ ರುಚಿಯು, ಬಹುಪಾಲು ರಸಪೂರಿ ಹಣ್ಣಿನ ರುಚಿಯನ್ನೇ ಹೋಲುತ್ತಿತ್ತು.
ಆದರೆ ಗಾತ್ರ ಮಾತ್ರ ಚಿಕ್ಕದು; ಒಂದು ಮುಷ್ಟಿಯಷ್ಟು. ಅದರ ಚೊಟ್ಟನ್ನು ಕತ್ತಿಯಿಂದ ಕತ್ತರಿಸಿ, ಇಡೀ ಹಣ್ಣನ್ನು ಚೀಪಿ ತಿಂದಾಗ, ಉತ್ತಮ ರುಚಿಯ ಅನುಭವ ನೀಡುತ್ತಿತ್ತು. ಆ ಕಾಟು ಹಣ್ಣಿನಲ್ಲಿ ತುಸು ರಸಭರಿತ ಭಾಗವೂ ಜಾಸ್ತಿಯಾಗೇ ಇರುತ್ತಿದ್ದುದರಿಂದ,
ಅದನ್ನು ತಿನ್ನಲು ನಮಗೆ ಖುಷಿ. ಪ್ರತಿ ಬೇಸಗೆ ರಜೆಯಲ್ಲಿ ನಾನು ಅಬ್ಲಿಕಟ್ಟೆಯ ಅಜ್ಜಿಯ ಮನೆಗೆ ಹೋಗಿ, ಎರಡು ಮೂರು ವಾರ ಠಿಕಾಣಿ ಹೂಡುತ್ತಿದ್ದೆ. ಆಗೆಲ್ಲಾ, ಈ ರುಚಕರ ಕಾಟು ಮಾವಿನ ಹಣ್ಣನ್ನು ತಿಂದದ್ದೇ ತಿಂದದ್ದು. ಅದರಲ್ಲಿ ಸಾವಿರಾರು ಕಾಯಿಗಳಾಗುತ್ತಿದ್ದವು. ಅವರ ಮನೆಗೆ ತಾಗಿಕೊಂಡೇ ಬೆಳೆದಿದ್ದ ಆ ಮರವು ವಿಶಾಲವಾಗಿ ತನ್ನ ರೆಂಬೆಕೊಂಬೆಗಳನ್ನು ಹರಡಿಕೊಂಡಿತ್ತು.
ಬೇಸಗೆಯಲ್ಲಿ ಗಾಳಿ ಮಳೆ ಅಪರೂಪಕ್ಕೆ ಬಂದಾಗ, ಒಂದೇ ದಿನ ನೂರಾರು ಹಣ್ಣುಗಳು ಅಂಗಳದ ತುಂಬಾ ಹರಡಿ ಬೀಳುತ್ತಿದ್ದವು. ಅಲ್ಲೇ ಸುತ್ತಮುತ್ತ ಇನ್ನೂ ನಾಲ್ಕಾರು ಕಾಟು ಮಾವಿನ ಮರಗಳಿದ್ದವು. ಕೆಲವು ಕಾಟು ಮಾವಿನ ಮರದ ಹಣ್ಣಗಳು ಪುಟಾಣಿ ಗಾತ್ರದ ಹುಳಿ ರುಚಿಯ ಹಣ್ಣುಗಳು; ಒಮ್ಮೆ ತಿಂದ ನಂತರ ಇನ್ನೊಮ್ಮೆ ತಿನ್ನಬೇಕು ಎನಿಸುತ್ತಿರಲಿಲ್ಲ. ‘ಈ ಮರದ ಮಿಡಿಗಳು ಉಪ್ಪಿನ ಕಾಯಿಗಷ್ಟೇ ಉಪಯೋಗ, ಹಣ್ಣು ತಿನ್ನಲು ಸಾಧ್ಯವಿಲ್ಲ’ ಎಂದು ಅಬ್ಲಿಕಟ್ಟೆ ದೊಡ್ಡಮ್ಮ ಹೇಳುತ್ತಿದ್ದರು. ಆದರೆ ಇನ್ನು ಕೆಲವು ಮರಗಳ ಹಣ್ಣು ತಮ್ಮದೇ ರುಚಿ ಹೊಂದಿರುತ್ತಿದ್ದವು.
ಮನೆ ಸುತ್ತ, ಕಾಡಿನಂಚಿನಲ್ಲಿ, ಕಾಡಿನ ನಡುವೆ – ಹೀಗೆ ಎಲ್ಲೆಂದರಲ್ಲಿ ಬೆಳೆಯುತ್ತಿದ್ದ ಕಾಟು ಮಾವಿನ ಹಣ್ಣುಗಳ ಇನ್ನೊಂದು ವಿಶೇಷತೆ ಎಂದರೆ, ಒಂದು ಹಣ್ಣಿನಂತೆ ಇನ್ನೊಂದರ ರುಚಿ ಇಲ್ಲ! ನಮ್ಮ ಹಳ್ಳಿಯ ಸುತ್ತಲಿನ ಫಸಲೆಯಲ್ಲಿ ಅಕ್ಷರಶಃ ಸಾವಿರಾರು ಕಾಟು ಮಾವಿನ ಮರಗಳಿದ್ದವು, ಒಂದೊಂದಕ್ಕೂ ಒಂದೊಂದು ರುಚಿ. ಕೆಲವು ತಿನ್ನಲು ಬಹು ರುಚಿಕರ. ಇನ್ನು ಕೆಲವು ಮರಗಳ ಕಾಯಿಗಳನ್ನು ಹದವಾಗಿ ಬೆಳೆದಾಗ ಕೊಯ್ದು, ಮಿಡಿ ಉಪ್ಪಿನ ಕಾಯಿ ಮಾಡುವುದೇ ಒಳ್ಳೆಯದು. ಇನ್ನು ಕೆಲವು ಮಿಡಿಗಳು ಕೊಚ್ಚು ಉಪ್ಪಿನ ಕಾಯಿ ಮಾಡುವದಕ್ಕಷ್ಟೇ ಸೂಕ್ತ; ಆದರೆ, ಇವೆಲ್ಲಾ ಮರಗಳ ಮಿಡಿಗಳನ್ನು ಕೊಯ್ದು, ಉಪ್ಪಿನ ಕಾಯಿ ಮಾಡಿ, ಉಳಿದ ಮಿಡಿಗಳು ಬಲಿತು ಹಣ್ಣಾದಾಗ, ಮರದ ಕೆಳಗೆ ಬೀಳುತ್ತವೆ; ನಾವೆಲ್ಲಾ ಮಕ್ಕಳು ಅವುಗಳನ್ನು
ಹೆಕ್ಕಿ ತಿನ್ನುವುದು ಪರಿಪಾಠ.
ಮನೆಯ ಮಹಿಳೆಯರು ಈ ರೀತಿಯ ಕಾಟು ಮಾವಿನ ಹಣ್ಣುಗಳ ರಸವನ್ನು ತೆಗೆದು, ಗೆರಸೆಯಲ್ಲಿ ಹಾಕಿ ಒಣಗಿಸಿ, ಹತ್ತಾರು ದಿನ ಅದೇ ಕೆಲಸ ಮಾಡಿ, ತಯಾರಿಸುವ ಹಣ್‌ಚೆಟ್‌ನ ಆಯಾವಮೇ ವಿಭಿನ್ನ. ಈಚಿನ ದಶಕಗಳಲ್ಲಿ ಕಾಟು ಮಾವಿನ ಮರಗಳ
ವೈವಿಧ್ಯತೆಯೇ ಕಡಿಮೆಯಾಗಿದೆ; ಕೃಷಿ ಭೂಮಿಯ ವಿಸ್ತರಣೆ, ಕಾಡಿನ ನಾಶ ಒಂದು ಕಾರಣವಾದರೆ, ನಮ್ಮ ಜನರಿಗೆ (ನನ್ನನ್ನೂ ಸೇರಿಸಿಕೊಂಡೇ ಈ ಟೀಕೆ) ಕಾಟು ಮಾವಿನ ಮರಗಳನ್ನು ಉಳಿಸಿಕೊಳ್ಳಬೇಕು ಎಂಬ ಪ್ರಜ್ಞೆ, ವ್ಯವಧಾನವೂ ಇಲ್ಲದಂತಾಗಿದೆ.
ಒಂದು ಕಾಟು ಮಾವಿನ ಮರವು ಬೆಳೆದು, ವಿಶಾಲವಾದ ಕ್ಯಾನೊಪಿಯನ್ನು ರೂಪಿಸಿಕೊಂಡು, ಸಾವಿರಾರು ಮಾವಿನ ಮಿಡಿಗಳನ್ನು ಕೊಡಲು ಹತ್ತಿಪ್ಪತ್ತು ವರ್ಷ ಅಗತ್ಯ ಬೇಕು. ಅಷ್ಟು ಕಾಲ ಕಾಯುವ ತಾಳ್ಮೆಯನ್ನೇ ನಾವು ಕಳೆದುಕೊಂಡಿದ್ದೇವೆ
ಎನಿಸುತ್ತದೆ; ಬೇಕೆನಿಸಿದರೆ, ಅಂಗಡಿಯಿಂದಲೋ, ದೂರದೂರಿನಿಂದಲೋ ದುಡ್ಡು ಕೊಟ್ಟು ಉಪ್ಪಿನ ಕಾಯಿಯನ್ನೋ, ಮಿಡಿಯನ್ನೋ ಖರೀದಿಸಿದರಾಯ್ತು ಎಂಬ ಭಾವ.
ಇಂತಹ ಅವಜ್ಞೆಯಿಂದಾಗಿಯೇ, ನಮ್ಮ ಸುತ್ತಲಿನ ಅವೆಷ್ಟೋ ಅಪರೂಪದ, ಅನನ್ಯ ಎನಿಸಿದ ಸಂಗತಿಗಳನ್ನು, ಜೀವವೈವಿಧ್ಯ ವನ್ನು, ತಳಿಗಳನ್ನು, ಪದ್ಧತಿಗಳನ್ನು, ಜೀವನ ವಿಧಾನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದಂತೂ ಕಟು ಸತ್ಯ.