Tuesday, 26th November 2024

ಜಿಲ್ಲೆಯಲ್ಲಿ ‘ಕೈ’ಗೆ ಶರಣಾದ ಕಮಲ-ದಳ

ತುಮಕೂರು: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಕಮಲ ಪಾಳಯದ ಘಟಾನುಘಟಿಗಳು ಜಿಲ್ಲೆಯ ೧೧ ಕ್ಷೇತ್ರದಲ್ಲಿ ಹಗಲಿರುಳು ಪ್ರಚಾರ ನಡೆಸಿದರೂ ಸಹ ಈ ಬಾರಿಯ ಕದನದಲ್ಲಿ ಕೇವಲ ಎರಡು ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿ ಬಿಜೆಪಿಗೆ ಮುಖಭಂಗವಾಗಿದೆ.
೨೦೧೮ರಲ್ಲಿ ಚಿ.ನಾ.ಹಳ್ಳಿ ಮಾಧುಸ್ವಾಮಿ, ತಿಪಟೂರಿನ ನಾಗೇಶ್, ತುರುವೇಕೆರೆಯ ಮಸಾಲೆ ಜಯರಾಮ್, ತುಮಕೂರು ನಗರದ ಜ್ಯೋತಿಗಣೇಶ್ ಹಾಗೂ ೨೦೨೦ ರ ಉಪ ಕದನದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿಯಿಂದ ಶಿರಾ ಕ್ಷೇತ್ರದಲ್ಲಿ ರಾಜೇಶ್ ಗೌಡ ಜಯಗಳಿಸಿದ್ದರು. ಈ ಕದನದಲ್ಲಿ ನಗರ ಹಾಗೂ ಗ್ರಾಮಾಂತರ ಹೊರತುಪಡಿಸಿ ಉಳಿದ ಕ್ಷೇತ್ರದಲ್ಲಿ ಕಮಲ ಬಾಡಿ ಹೋಗಿದೆ.

ದಳ ಕೋಟೆ ಛಿದ್ರ ಮಾಡಿದ ಕೈ
ಜಿಲ್ಲೆಯಲ್ಲಿ ಒಕ್ಕಲಿಗ ಸಮದಾಯ ಸೇರಿ ಹಿಂದುಳಿದ, ಅಲ್ಪ ಸಂಖ್ಯಾತ ಸಮುದಾಯದ ಪ್ರಾಬಲ್ಯವಿದ್ದರೂ ಸಹ ದಳಪತಿಗಳು ಜೆಡಿಎಸ್ ಭದ್ರ ಕೋಟೆಯನ್ನು ಕೈ ಪಾಳಯಕ್ಕೆ ಬಿಟ್ಟುಕೊಟ್ಟಿದ್ದಾರೆ. ಪಂಚರತ್ನ ರಥ ಯಾತ್ರೆ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವರಿಷ್ಠಾರಾದ ಎಚ್.ಡಿ.ದೇವೇಗೌಡ ಸೇರಿದಂತೆ ಪ್ರಮುಖ ನಾಯಕರು ಜಿಲ್ಲೆಯಲ್ಲಿ ಸಂಚರಿಸಿ ತಮ್ಮ ಪ್ರಭಾವ ಬೀರಿದ್ದರೂ ಚಿ.ನಾ.ಹಳ್ಳಿ ಮತ್ತು ತುರುವೇಕೆರೆಯಲ್ಲಿ ಮತದಾರರು ಕೈ ಹಿಡಿದಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಜಿಲ್ಲೆಯಲ್ಲಿ ಜೆಡಿಎಸ್ ಭದ್ರಕೋಟೆ ನಿರ್ಮಿಸಿಕೊಳ್ಳುತ್ತಿತ್ತು. ೨೦೧೮ರಲ್ಲಿ ಗುಬ್ಬಿ ಶ್ರೀನಿವಾಸ್, ಮಧುಗಿರಿಯ ವೀರಭದ್ರಯ್ಯ ,ತುಮಕೂರು ಗ್ರಾಮಾಂತರದ ಗೌರಿಶಂಕರ್, ಶಿರಾದ ಸತ್ಯನಾರಾಯಣ, ಜಯಗಳಿಸಿದ್ದರು. ಸತ್ಯನಾರಾಯಣ ನಿಧನ ನಂತರ ಶಿರಾ ಕೈ ವಶವಾಗಿದೆ ಹಾಗೂ ಕಾರಣಾಂತರದಿAದ ದಳ ಬಿಟ್ಟು ಕಾಂಗ್ರೆಸ್ ಸೇರಿದ್ದ ಶ್ರೀನಿವಾಸ್ ಗುಬ್ಬಿಯಲ್ಲಿ ಕಾಂಗ್ರೆಸ್ ಕೋಟೆ ಕಟ್ಟಿದ್ದಾರೆ.

ಪುಟಿದೆದ್ದ ಕಾಂಗ್ರೆಸ್
ಜಿಲ್ಲೆಯಲ್ಲಿ ಪರಮೇಶ್ವರ್, ಜಯಚಂದ್ರ, ರಾಜಣ್ಣ, ಷಡಕ್ಷರಿ ಸೇರಿ ಹಲವು ಮಂದಿ ಹಿರಿಯರು ಕಣಕ್ಕಿಳಿದಿದ್ದರು. ೨೦೧೮ರಲ್ಲಿ ಕೊರಟಗೆರೆ, ಕುಣಿಗಲ್. ಪಾವಗಡದಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್  ಈ ಕದನದಲ್ಲಿ ಸದರಿ ಮೂರು ಸ್ಥಾನಗಳನ್ನು ಉಳಿಸಿ ಕೊಂಡು ಗುಬ್ಬಿ, ತಿಪಟೂರು, ಶಿರಾ, ಮಧುಗಿರಿ ಕ್ಷೇತ್ರಗಳಲ್ಲಿ ಖಾತೆ ತೆರೆದಿದ್ದು ಸಮೀಕ್ಷೆಗಳನ್ನು ಉಲ್ಟಾ ಮಾಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಇತರ ನಾಯಕರು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಕೈ ಬಲಪಡಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದರು. ಕೊನೆಗೂ ಮತದಾರರು ಕೈ ಹಿಡಿದಿದ್ದು ಜಿಲ್ಲೆಯಲ್ಲಿ ಕೈ ಪುಟಿದೇಳುವಂತೆ ಮಾಡಿದ್ದಾರೆ.