ಸುಪ್ತ ಸಾಗರ
rkbhadti@gmail.com
ಅವತ್ತು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಆ ಹಬ್ಬದ ರಾತ್ರಿ. ಸುತ್ತೆಲ್ಲ ರಂಗಿನ ಬೆಳಕು ಚೆಲ್ಲಿ ಮುಗಿದು ಎಲ್ಲವೂ ಮಂಕಾದ ಸಮಯ. ದಿನದ ಸಂಭ್ರಮ, ಗದ್ದಲ, ಪಟಾಕಿಯ ಕಿವಿಗಡಚಿಕ್ಕುವ ಸದ್ದುಗಳಡಗಿ ಹೋದ ಗಳಿಗೆಯದು. ಮತ್ತೆಲ್ಲ ಕಡು ಕತ್ತಲಾಗಿ ಹೋಗಿದ್ದ ನೀರವದಲ್ಲೇ ಬಂದು ನೀನು ಬಿಡಿಸಿ ಹೋದೆಯಲ್ಲಾ ಕಪ್ಪು ಬಿಳುಪಿನ ಆ ಚಿತ್ತಾರ, ಅದು ಮತ್ತೆ ಮತ್ತೆ ನನ್ನ ಕಣ್ಣ ಮುಂದೆ ಬರುತ್ತಿದೆ. ಅಷ್ಟೇ ಆಗಿದ್ದರೆ ನೆನಪುಗಳ ಚೆಚ್ಚನೆಯ ಬಿಗಿಯಪ್ಪುಗೆಯಲ್ಲಿ ಮುದುಡಿ ಮಲಗಿಬಿಡುತ್ತಿದ್ದೆ.
ಬೇರೆಯವರಿಗೆ ಕಾಣದಂತೆ ಮಸುಕೆಳೆದುಕೊಂಡು ಒಳಗೊಳಗೆ ಬೆವರಿ ಆ ಘಮಲನ್ನು ಅನುಭವಿಸುತ್ತ ಇದ್ದು ಬಿಡುತ್ತಿದ್ದೆ. ನನ್ನುಸಿರನ್ನೇ ಮತ್ತೆ ಮತ್ತೆ ಬಿಸಿಯಾಗಿಸಿಕೊಂಡು, ನಿಡುಸುಯ್ದು ಮತ್ತೆ ಎಳೆದುಕೊಳ್ಳುತ್ತ ಮಗ್ಗುಲು ಬದಲಿಸುತ್ತಿದ್ದೆ. ಆದರೆ ಅದನ್ನು ಹಾಗೆ ಅದುಮಿಟ್ಟುಕೊಳ್ಳುವ ಪ್ರಮೇಯವೇ ಇಲ್ಲವೆಂದೆನಿಸುತ್ತಿದೆ. ಅಚ್ಚರಿಯೆಂದರೆ ಆ ಚಿತ್ರವೀಗ ಚಿತ್ರ ವಿಚಿತ್ರ ಬಣ್ಣಗಳನ್ನು ಪಡಕೊಳ್ಳತೊಡಗಿದೆ. ಕೊನೇ ಪಕ್ಷ ಅದರಲ್ಲಿನ ಬಣ್ಣಗಳೆಷ್ಟು ಎಂಬುದನ್ನೂ ಗುರುತಿಸಲಾರದಷ್ಟು ವೈವಿಧ್ಯದ ರಂಗು ನನ್ನ ಮೈ-ಮನಗಳನ್ನು ಆವರಿಸಿ ಕೊಳ್ಳುತ್ತಿದೆ. ಬಣ್ಣಗಳಲ್ಲಿ ಇಷ್ಟೊಂದು ವಿಧಗಳಿವೆ ಎಂಬುದು ಅಂದು ಕಲ್ಪನೆಗೂ ನನಗೆ
ನಿಲುಕಿರಲಿಲ್ಲ.
ಏಕೆಂದರೆ ಆ ಕತ್ತಲೆಯಲ್ಲೂ ನನಗೆ ಸ್ಪಷ್ಟವಾಗಿ ಕಂಡದ್ದು ನಿನ್ನ ವ್ಯಕ್ತಿತ್ವಲ್ಲ, ಮುಖವಲ್ಲ. ಕೇವಲ ದೇಹವೂ ಅಲ್ಲ. ಅದರ ನೆರಳಿನ ಛಾಯೆ ಮಾತ್ರವೇ! ಹಿಡಿಯಷ್ಟು ಪ್ರೀತಿ ಆಂತರ್ಯದಲ್ಲಿ ಉಳಿದದ್ದೇ ಆದಲ್ಲಿ ಅದೆಂಥದೇ ಮರಳುಗಾಡಿಲಿ, ಸಂಬಂಧಗಳ ಓಯಸಿಸ್ ಗಳನ್ನು ಹುಡುಕಿಕೊಂಡು ಸಾಗಬಹುದಂತೆ. ಕಷ್ಟಕ್ಕೆ ಬಂದದ್ದು ಅಲ್ಲಿಯೇ! ಆ ದಿನಗಳಲ್ಲಿ, ನಮ್ಮ ಬಾಲ್ಯದಲ್ಲಿ ಪಕ್ಕ ದೂರಿನ ಜಾತ್ರೆಯಲ್ಲಿ ಸೇರಿಯೇ ನಾವಂದು ಪೀಪಿಯನ್ನು ಊದಿದ್ದು. ಅಂದು ನಾವಿಬ್ಬರೂ ಬೇರೆಬೇರೆ ಎಂದು ಅನ್ನಿಸಿಯೇ ಇರಲಿಲ್ಲ.
ನಮಗೆ ನಮ್ಮಿಬ್ಬರ ಎಂಜಲು ಯಾವತ್ತಿಗೂ ಇಶ್ಶೀ ಅಂತ ಅನ್ನಿಸಿಯೂ ಇರಲಿಲ್ಲ. ಹೀಗಾಗಿ ಒಂದೇ ಪೀಪಿಯಲ್ಲಿ ಭಿನ್ನ ಉಸಿರುಗಳು ಒಳ ಹೊರಗೆ ಆಡಿದಾಗಲೂ ಬಂದದ್ದು ಒಂದೇ ರಾಗ. ಅದಕ್ಕಿದ್ದ ಹೆಸರು ಯಾವುದೆಂದು ಯಾರಿಗೆ ಗೊತ್ತು. ಆದರೆ ನಮ್ಮ ಪಾಲಿಗೆ ಮಾತ್ರ ಅದು ಸುಶ್ರಾವ್ಯವಾಗಿಯೇ ಕೇಳಿಸಿತ್ತು. ಬಹುಶಃ ಮೋಹನ ಮುರಲೀ ಇದ್ದರೂ ಇದ್ದಿರಬಹುದೆ? ಏಕೆಂದರೆ ಅದು
ಮೋಹದ ಕವಿತೆ, ಭಾವದುಂಬಿದ ಸರಿತೆ. ಹಾಗೆ ನಿನ್ನ ಎಂಜಲೆಲ್ಲಾ ಗೊತ್ತಿದ್ದೋ ಗೊತ್ತಿಲ್ಲದೆಯೋ ನನ್ನೊಳಗೆ ಸೇರಿದಾಗಲೆಲ್ಲ ಒಳಗೊಳಗೇ ಪುಳಕಗೊಳ್ಳುತ್ತಿದ್ದುದಂತೂ ಸತ್ಯ.
ಬಾಯಾರಿಕೆಗೆ ಬಿದ್ದವಳಂತೆ ಅದನ್ನು ಹೀರಿದ್ದೆ, ಚಪ್ಪರಿಸಿದ್ದೆ. ಆ ನಂತರದ ಇಷ್ಟೂ ದಿನಗಳೂ ಒಡಲೊಳಗೆ ಏನೇನೋ
ಸುತ್ತುತ್ತಿದ್ದ ಭ್ರಮೆ. ಅದು ನಿಜವೋ ಎನ್ನುವ ಅನುಮಾನ ಕಾಡಿದ್ದು ನನ್ನ ಎದೆಗಳು ಎತ್ತರೆತ್ತರಕ್ಕೆ ಚಿಗುರಲಾರಂಭಿಸಿದ ದಿನಗಳಲ್ಲಿ. ಎಂಜಲಿನಲ್ಲಿ ಅಂಥ ಸಾಮರ್ಥ್ಯ ಇರದು ಎಂಬ ಸಾಮಾನ್ಯ ಜ್ಞಾನವೂ ನನ್ನಲ್ಲಿರಲಿಲ್ಲವೆಂಬ ಸಂಗತಿ ನನಗೀಗ
ನಗು ತರಿಸುತ್ತದೆ. ಅದು ಪಾಪ ಪ್ರಜ್ಞೆಯೂ ಇದ್ದಿರಬಹುದು. ಮನಸ್ಸಿನೊಳಗಣ ಅeತ ಅಂಜಿಕೆಯ ಫಲವಿದು.
ಅದನ್ನು ಇನ್ನಷ್ಟು ಕಾಲ ಅಜ್ಞಾತವಾಗಿಡುವ ಹುನ್ನಾರವಾಗಿ ನಾವು ನಮ್ಮ ಸುತ್ತಲೂ ಎಂತೆಂಥದ್ದೋ ಹುಸಿ ಭದ್ರತಾ ವಲಯ ಗಳನ್ನು ಸೃಷ್ಟಿಸಿಕೊಂಡಿದ್ದೆವು. ಅದಕ್ಕೆ ಕಾರಣ ನಮ್ಮನ್ನು ಗೇಲಿಮಾಡುತ್ತ, ರೇಗಿಸುತ್ತ ತಮ್ಮೊಳಗಿನ ವಾಂಛೆಗಳನ್ನೆಲ್ಲ ಆ ಮೂಲಕ ಅಭಿವ್ಯಕ್ತಿಗೊಳಿಸುತ್ತಿದ್ದ ದೊಡ್ಡವರು. ಬಾಲ್ಯದಲ್ಲಿ ತಮಾಷೆ, ಮೋಜಾಗಿ ಕಾಣುತ್ತಿದ್ದ ‘ಗಂಡ-ಹೆಂಡತಿ’ ಎಂಬ ಪದವೇ ನಮ್ಮೊಳಗೆ ಇದ್ದಿರದಿದ್ದ ಆಸೆಗಳನ್ನು ಬಿತ್ತಿದ್ದವೇನೋ.
ಇದು ಆಗ ರೇಗಿಸುತ್ತಿದ್ದ ದೊಡ್ಡವರಿಗೇ ಹೇಗೆ ಗೊತ್ತಾಗಬೇಕು? ಆದರೆ ಒಮ್ಮೆ ಹಾಗೆ ನಮ್ಮೊಳಗೆ ಮೊಳೆತ ಪ್ರೀತಿ ಬಾಲ್ಯ ಕಳೆದು ಯವ್ವನದಲ್ಲೂ ಬಲಿಯುತ್ತಿದ್ದೆ ಎಂಬುದು ಗೊತ್ತಾಗುತ್ತಿದ್ದಂತೆ ರಂಪಾಟವೇ ನಡೆದು ಹೋಯಿತು. ‘ಗಂಡ-ಹೆಂಡತಿ’ ಅಂತ
ರೇಗಿಸಿದ್ದವರೇ ನಮ್ಮನ್ನು ಬೇರ್ಪಡಿಸಲು ನಿಂತಿದ್ದರು. ಈ ಜಗತ್ತೇ ಹಾಗಿರಬೇಕು ಅಲ್ಲವೇನೋ ಗೆಳೆಯಾ? ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಕ್ಕೂ ಹೋಗದೆ ಅವರಿಗಿಂತ ನಾವು ಬಲಿಷ್ಠರೆಂದು ತೋರಿಸಿಕೊಳ್ಳಲು ಹವಣಿಸುತ್ತೇವೆ. ಇಂಥ ಹವಣಿಕೆಗಳಲ್ಲಿ ಪ್ರೀತಿಗೆಲ್ಲಿ ಜಾಗ? ಪ್ರೀತಿ ಎಂದರೆ ಅದು ಸಂವಹನ ಸ್ವರೂಪಿ. ಅದು ನಿಂತಲ್ಲಿ ನಿಲ್ಲಲಾರದು. ನಿರಂತರ ಹರಿಯುವಿಕೆ ಅದರ ಜನ್ಮಗುಣ.
ಇಂಥ ಚಲನಶೀಲತೆಯೇ ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ರಹದಾರಿಯಾಗುತ್ತದೆ. ಪರಸ್ಪರ ಸ್ಪಂದನದ ಫಲವಾಗಿ ಸಂಬಂಧಗಳು ದೃಢಗೊಳ್ಳುತ್ತವೆ. ಹಾಗೆ ದೃಢಗೊಂಡದ್ದೇ ಆ ಹಬ್ಬದ ದಿನದ ಕತ್ತಲೆಯಲ್ಲಿ ಮೂರ್ತಗೊಂಡ ಚಿತ್ತಾರಕ್ಕೆ ಕಾರಣವಾಗಿಬಿಟ್ಟಿತೇನೋ? ವ್ಯಕ್ತಿಯಲ್ಲಿ ಆಂತರಂಗಿಕ ತೊಳಲಾಟಗಳಿರಬಹುದು. ಮಾನಸಿಕ ಅಸ್ತವ್ಯಸ್ಥತೆ ಕಾಡುತ್ತಿರಬಹುದು. ಅದು ಬೇರೆಲ್ಲೋ ಧುತ್ತನೆ ಪ್ರತ್ಯಕ್ಷವಾಗಿ ಬಿಡಬಹುದಾದ ಅಪಾಯಗಳಿವೆ. ಸಮಕಾಲೀನ ಸಮಾಜದ ಬದುಕಿಗೆ ಬೇಕಾಗಿ ರೂಢಿಸಿಕೊಂಡಿರುವ ಶಿಸ್ತು ಮಾನಸಿಕ ವಿಪ್ಲವಗಳಿಗೆ ಪರಿಹಾರ ದೊರಕಿಸಿಕೊಡದು.
ಅಂಥ ವಿಪ್ಲವಗಳು ಅಂತರಂಗದಲ್ಲಿ ಹುಡುಕಿಕೊಂಡು ಹಠಮಾರಿಯಾಗುತ್ತ ಸಾಗುತ್ತದೆ. ವ್ಯಕ್ತಿಗತ ಭಯ, ದ್ವೇಷಗಳಿಗೆ ಇದೇ ಕಾರಣವಾಗುತ್ತದೆ. ಪ್ರತ್ಯೇಕವಾದಗಳಂಥವು ಇಲ್ಲಿಂದಲೇ ಹುಟ್ಟು ಪಡೆಯುತ್ತವೆ. ಇದನ್ನೇ ಮಹತ್ವಾಕಾಂಕ್ಷೆಯೆಂದು ನಾವು
ಪರಿಭಾವಿಸುತ್ತೇವೆ. ಇದರ ಹಿಂದಿನ ಸಮಸ್ಯೆಯನ್ನು ಗ್ರಹಿಸುವ ಪ್ರಯತ್ನಕ್ಕೂ ನಾವು ಮುಂದಾಗುವುದಿಲ್ಲ. ಹಾಗೆ ಮೊಳೆತ ಹಠವೇ ನಮ್ಮಲ್ಲಿ ಅಕ್ರಮವೆಂದಾದರೂ ಸರಿಯೇ ನಾವಿಬ್ಬರೂ ಬೆಸೆದುಕೊಳ್ಳಲೇಬೇಕೆಂಬ ಬಯಕೆಯನ್ನು ಉದ್ದೀಪಿಸಿದ್ದಿರಬಹುದು. ಅದು ಆಗಿಯೂ ಹೋಯಿತು. ನನಗೆ ಗೊತ್ತು, ಮಾನವ ಸಂಬಂಧಗಳನ್ನು ಅರ್ಥ ಮಾಡಿಕೊಂಡಾಗ ಭಯಕ್ಕೆ ಸ್ಥಾನವೇ ಇರುವುದಿಲ್ಲ.
ಮನುಷ್ಯ ಸಹಜ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸಹ್ಯವಾಗಿಸಿಕೊಳ್ಳಲು ಅದರ ಸೂಕ್ಷ್ಮತೆಗಳು, ನೋವು ನಲಿವು ಗಳನ್ನು ಕರಗಿಸಿಕೊಳ್ಳಲು ಆತನಿಗೆ ಅಪಾರ ಕ್ರಿಯಾಶೀಲತೆ ಅಗತ್ಯ. ಜಡ ಸಮಾಜದ ಕಟ್ಟುಪಾಡುಗಳಿಗೆ ವಿಧೇಯವಾದ, ನಿಷ್ಕ್ರಿಯ ಸಾಮರಸ್ಯವನ್ನು ಹೊಂದಿರುವ ವ್ಯಕ್ತಿಯಿಂದ ಇದು ಅಸಾಧ್ಯ. ಪೂರ್ವಗ್ರಹ ಪೀಡಿತವಲ್ಲದ ಅನ್ವೇಷಣೆ ಹಾಗೂ ಸ್ವಪ್ರಯತ್ನ ದಿಂದ ಸ್ಥಾಪಿತವಾಗುವ ಮೌಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಇಂಥ ಕ್ರಿಯಾಶೀಲತೆಯನ್ನು ಧಕ್ಕಿಸಿಕೊಳ್ಳಲು ಸಾಧ್ಯ.
ಮತ್ತೆ ಅಂದು ರಾತ್ರಿ ಚಿತ್ತಾರದ ರಂಗು ಕಾಡಿಸುತ್ತಿದೆ. ಹೇಳಿದೆನಲ್ಲ, ನನ್ನ ಕೆನ್ನೆ ಅಂದಿಗಿಂತಲೂ ಕೆಂಪಗಾಗಿದೆ. ಮೈ ಕೈ ಮತ್ತಷ್ಟು ತುಂಬಿಕೊಂಡಿದೆ. ಎದೆಯ ಮೇಲಿನ ನಸುಗಪ್ಪು ದಿನದಿನಕ್ಕೆ ವಿಸ್ತಾರವಾಗುತ್ತಿದೆ. ಸಪಾಟಾಗಿದ್ದ ಒಡಲು ಮತ್ತೆ ಮತ್ತೆ ನನ್ನ ಕೈಗಳ ಸಾಗಂತ್ಯವನ್ನು ಬೇಡುತ್ತದೆ. ಹಾಗೆ ಕೈಯಾಡಿಸಿಕೊಂಡಾಗಲೆಲ್ಲ ಅದರ ವೃದ್ಧಿ ಗೊತ್ತಾಗದ್ದೇನಲ್ಲಾ? ಮನಸ್ಸು ನೂರೆಂಟು ಕಾಮನೆಗಳ ಕಾಮನಬಿಲ್ಲು. ಅದರ ಪ್ರತಿ-ಲವೇ ಚಿತ್ತಾರದ ಮೇಲಿನ ರಂಗಿನ ರಂಗೀಲಾ!
ಈ ಅವಸ್ಥೆಯಲ್ಲೇ ಅಲ್ಲವೇನೋ ನಮ್ಮನ್ನು ಬಸುರಿ ಅಂತ ಕರೆಯುವುದು? ಹಾಗೊಮ್ಮೆ ಹೌದಾದರೆ ನನ್ನ-ನಿನ್ನ ನಡುವಿನ ಸಂಬಂಧಕ್ಕೇನು ಹೆಸರು? ಒಳಗೊಳಗೇ ಬೆಳೆಯುತ್ತಿದ್ದುದಕ್ಕೆ ನಾನೇನು ಅಮ್ಮ; ನೀನು ಏನಾಗಿ ಬರುತ್ತೀಯಾ? ಬೇಗ ಹೇಳು ಪ್ಲೀಸ್. ಈಗ ಹೇಳದಿದ್ದರೆ ಮುಂದೆಂದೂ ಅದನ್ನು ಹೇಳುವ ಅವಕಾಶ ನಿನಗೆ ಸಿಗುವುದಿಲ್ಲ. ಸಿಕ್ಕರೂ ನಿನ್ನ ಮಾತನ್ನು ಯಾರೂ ನಂಬುವುದಿಲ್ಲ. ಏಕೆಂದರೆ ಅದನ್ನು ಪುಷ್ಟೀಕರಿಸಿಬೇಕಾದ ನಾನು ಬಹುಶಃ ಆ ಮನಃಸ್ಥಿತಿಯಲ್ಲಿ ಇರಲಿಕ್ಕಿಲ್ಲ.
***
ಅಲ್ಲಿ ನೀನು ಚೆಲ್ಲಿದ್ದ ಹೂವ ಕಂಡು ಎಲ್ಲವೂ ಅಷ್ಟೇ ಸುಕೋಮಲವೆಂದು ಬಗೆದು ಬಂದಿದ್ದೆ. ಆ ಹೂವ ಹಾಸಿಗೆಯ ಮೆತ್ತನೆಯ ಸ್ಪರ್ಶಕ್ಕೆ ಮನಸೋತು ನಡೆದು ಬರುತ್ತಿದ್ದೇನೆ. ದಾರಿ ಮುಗಿಯುತ್ತಲೇ ಇಲ್ಲ. ಹೀಗೆ ನನ್ನ ಸ್ವಾಗತಕ್ಕೆ ಅಣಿಗೊಳಿಸಿಟ್ಟ ನೀನು, ಇಗೋ, ಇನ್ನಷ್ಟೇ ದೂರ ನಡೆದು ಬಿಟ್ಟರೆ ಸಿಕ್ಕೇ ಸಿಗುತ್ತೀಯಾ ಎಂಬ ನೀರೀಕ್ಷೆಗಳೊಂದಿಗೆ ಕಾಲೆತ್ತಿ ಹಾಕುತ್ತಲೇ ಇದ್ದೇನೆ. ಆದರೆ ಇಷ್ಟು ದೂರಕ್ಕೆ ಬಂದರೂ ಸುಳಿವಿಲ್ಲ. ನಾ ನಡೆವ ಹಾದಿಯ ನಿರ್ಧರಿಸಿ, ಆ ನೆಲದ ಕಣದಲ್ಲಿ ಅಡಗಿರುವ ಮುಳ್ಳು-ಕಲ್ಲುಗಳ ನಿರುಕಿಸಿ ಅದು ಸೋಂಕದಂತೆ ತಡೆದೆಯಲ್ಲಾ ಮಾಯಗಾರ ಯಾರು ನೀನು? ಆದರೂ ನನ್ನದು ಹುಂಬತನ. ಇಲ್ಲಿಯೇ ನಡೆಯ
ಬೇಕೇಕೆ ಅಂದುಕೊಂಡು ತುಸು ಪಕ್ಕಕ್ಕೆ ಜರುಗಿಕೊಂಡಾಗಲೇ ಅರಿವಾದದ್ದು ನೀನು ಹಾಸಿದ ಹೂವ ಪಕಳೆಗಳಡಿಗೆ ಎಂಥಾ
ಕಠಿಣ ಕಾರ್ಪಣ್ಯಗಳಿದ್ದೀತೆಂಬುದು.
ಬೆಚ್ಚಿ ಮತ್ತೆ ನಿನ್ನ ಹಾದಿಗೇ ಹಾರಿ ನಿಂತ ನನ್ನ ಮೂರ್ಖತನಕ್ಕೆ ಮರೆಯಲ್ಲೇ ನಿಂತು ನಕ್ಕು ಸುಮ್ಮನಾದಿಯೆಲ್ಲಾ ಯಾಕೊ ನಿನಗೆ ಈ ಕಿಲಾಡಿತನ? ಎಲ್ಲ ಬಲ್ಲವನಾಗಿ, ಬಂಧುವೇ ನಿನಾಗಿ ಕಣ್ಣಾಚೆಯಲ್ಲೇ ನಿಂತು ಬಿಟ್ಟೆಯಲ್ಲಾ ಯಾರು ನೀನು? ನಿನಗೇನು ಹೆಸರು? ಬಾಳ ಯಾನದ ಗೀತೆಗೆ ಇಂಥ ಇಂಪು ತುಂಬಿ ತೆರೆಯ ಹಿಂದೆಯೇ ಉಳಿದು ಹೋದ ನಿನ್ನ ಉದ್ದೇಶವಾದರೂ ಏನು? ನೀಲಬಾನಿನ ನಡುವೆ ನಗುವಚೆಂದಿರನ ಸಣ್ಣ ಚೂರೊಂದ ತಂದು ನನ್ನ ಕಣ್ಣಕಾಂತಿಯಾಗಿ ನಿಲ್ಲಿಸಿದೆ.
ಅದರ ಸೊಬಗಿಗೆ ಸೋತು ಉಬ್ಬರಕ್ಕೇಳುವ ಸಾಗರದ ಅಲೆಗಳು ತಂದು ಎದೆಯ ಗೂಡಿಗೆ ಬೆಸೆದಿರುವೆ. ಶುಕ್ಲಪಕ್ಷದಲ್ಲೊಮ್ಮೆ ಹುಣ್ಣಿಮೆಯ ಕಾಂತಿಗೆ ಏರಿ, ಪಕ್ಷ ಕೃಷ್ಣಕ್ಕೆ ತಿರುಗಿದಾಗಿನ ಕತ್ತಲೆಗೆ ಇಳಿಯದೇ ಇದ್ದೀತೆ ಬದುಕು? ಏರು ಇಳಿಗಳಿಗೆ ಸಿಲುಕಿ ಏದುಸಿರು ಬಿಡುತ ಹಾದಿ ಸವೆಸುತ್ತಲೇ ಇರುವ ನನಗೊಮ್ಮೆ ನಿನ್ನ ಮೊಗವ ತೋರದೇ ಉಳಿದಿರುವೆ ಏಕೆ? ಅದಾವ ಶಕ್ತಿ ನೀನು? ಯಾವ ಭವದ ಭಕುತಿಗೆ ನಿಲುಕುವೆ ಹೇಳಿಯಾದರೂ ಹೇಳೊಮ್ಮೆ, ಭಕ್ತನಾಗಿ ಬಿಡುವೆ ನಿನಗೆ. ನೂರು ನೆನಪುಗಳ ಸರಣಿಯ
ಚೂರುಗಳು ಸೇರಿ ದೃಶ್ಯಕಾವ್ಯವ ಬರೆದಿವೆಯಂತೆ ಈ ಬುವಿಯ ಮೇಲೆ. ಅದನ್ನಲ್ಲವೇ ನಾವು ಊರೆಂದು ಕರೆಯುತಿರುವುದು? ಆ ಊರಲ್ಲಿ ನನ್ನ ಬದುಕನು ಊರಿ, ನೀನಾದರೂ ತೂರಿ ಹೋಗಿರುವೆ ಎಲ್ಲಿಗೆ? ಅಂದವಾದ ನಿನ್ನ ಒಂದೇ ಒಂದು ಮಂದಹಾಸವ ಕಾಣಲು ಕಾತರಿಸಿ ಭ್ರಮೆಯ ಬೆನ್ನೇರಿ ಹರಸಾಹಸವನ್ನೇ ಮಾಡುತ್ತಿದ್ದೇನೆ.
ನಿನ್ನ ಈ ಅದೃಶ್ಯದಾಟಕ್ಕೆ ಕೊನೆಯೆಂದು? ಒಮ್ಮೆ ಸಿಕ್ಕರೆ ನೀನು ಹೇಳುವುದಿದೆ ನಿನ್ನಲ್ಲಿ ಹಲವು ಹದನ. ಚಾಡಿಕೋರನೆಂದರೂ ಸರಿಯೇ, ಸರಿ ಇಲ್ಲ ಈ ಜಗ. ಎಲ್ಲರೂ ಇಲ್ಲಿ ನನ್ನ ನೋಡಿ ನಗುವವರೇ; ಎಡವಿದರೂ ಸರಿಯೆ. ನಡೆದರೂ ಬಿಡರು. ನಿಂತರಂತೂ ಭಲೇ ಆಕ್ಷೇಪ. ಬಿದ್ದರೆ ಗೊತ್ತೇ ಇದೆ ಆಳಿಗೊಂದು ಕಲ್ಲು. ಮೋಡದ ಹುರಿ ಹತ್ತಿಯ ಸುರುಳಿಗಳ ನಡುವೆ ಅಡಗಿ ಕುಳಿತಿದ್ದ ಸಾಲುಗಳ ನಡುವೆ ಒಂದೆರಡನ್ನು ಹೆಕ್ಕಿ ಹಣೆಬರಹವನ್ನಾಗಿಸಿ ನನ್ನ ಇಲ್ಲಿಗೆ ತಂದು ಬಿಟ್ಟೆಯಲ್ಲಾ, ಇದು ಸರಿಯೇ? ಕೊನೆ ಪಕ್ಷ ಅದರೊಳಗಿನ ರಾಶಿಯಲ್ಲಿ ನನ್ನ ಆಯ್ಕೆಗೂ ಅವಕಾಶವಾಗದಂತೆ ಉಳಿದೆಲ್ಲವನ್ನೂ ಅಳಿಸಿ ಹಾಕಿಬಿಟ್ಟೆಯಲ್ಲಾ, ಬೊಮ್ಮನೆಂಬೋ ಚತುರ ನೀನು! ಓಡುವ ನದಿಯಲಿ ಹಾಯುವ ದೋಣಿಯಲ್ಲಿ ನನ್ನ ಕುಳ್ಳಿರಿಸಿ, ಹರಿಗೋಲ ಕೊಡದೇ
ಒಂಟಿಯಾಗಿ ಬಿಟ್ಟು ಹೋದೆಯಲ್ಲೋ, ನೀನೇನಾ ಹರಿಯೆಂದರೆ? ಇರಬೇಕಿದ್ದರೆ ಈಜಲೇ ಬೇಕೆಂಬ ಇಚ್ಛೆಯ ಮೊಳೆಸಿದ್ದಕ್ಕೆ ಈಶನೆನ್ನುವರೇನು ನಿನ್ನ? ಕನಸುಗಳ ಹಗಲಿಗಿಟ್ಟು, ನೆನಪುಗಳ ಇರುಳಿಗಟ್ಟಿ ಇನಿತೂ ಸಮಯ ಕೊಡದೇ ಸತಾಯಿಸುವ ನಿನಗೆ ಸರ್ವಪೂಜೆಗಳೇಕೆ? ಆದರೂ ಅದೇನೋ ಸೆಳೆತ ನೀನೆಂದರೆ; ಅದು ಪೂಜೆಯಲ್ಲ, ಪ್ರೀತಿ. ಭಯವಲ್ಲ, ಭಕುತಿ.
ದೇಹ ತಂತಿಯ ಮೀಟಿ ಹಲವು ಸ್ವರಗಳ ಹೊಮ್ಮಿಸಿ, ಅದಕೆ ಪ್ರೇಮ- ಕಾಮಗಳ ಹೆಸರ ಮಡಗಿ, ಮೋಹ- ಮದ- ಮತ್ಸರಗಳ ಪಕ್ಕ ವಾದ್ಯಗಳ ಜತೆಗೂಡಿಸಿಬಿಟ್ಟೆಯಲ್ಲಾ? ಮಾಯೆಗೆ ಸಿಲುಕಿದೆನೆಂದು ಜರೆಯುತ್ತಿದ್ದಾರೆ ಜನ, ದಿಟವೇನು ಇದು? ಆದರೂ ಆ ಮೋಡಿಯಿಂದ ಹೊರಬರಲಾರದೇ ಉಳಿಸಿದ ಮಾಯಾವಿ, ಒಮ್ಮೆ ಮರೆಯಿಂದ ಹೊರ ಬರಲಾರೆಯಾ? ಕನಸುಗಳ ಕೊಟ್ಟ
ಮೇಲೆ, ಮನಸ ಇಟ್ಟ ಬಳಿಕ ನಿನ್ನ ಕೂಡುವ ಗಳಿಗೆಗೆ ವಯಸಿನ ನಿರ್ಬಂಧವನ್ನೇಕೆ ಹೇರಿಬಿಟ್ಟೆ? ಇಲ್ಲೇ ಎಲ್ಲೋ, ಸುತ್ತಿ ಸುಳಿವ ಗಾಳಿಯಂತೆ ಇದ್ದೂ ಕಾಣದಂತೆ, ಅನುಭವಕೆ ಸಿಕ್ಕೂ ಬಣ್ಣನೆಗೆ ನಿಲುಕದಂತೆ ಇರುವ ನಿನ್ನ ಸುಳಿವು ದೊರೆಯವುದೆಂದೋ ದೊರೆಯೇ? ಪರಿಮಳಕ್ಕೆ ಪಾರಿಜಾತದ ಉಪಮೆ, ಬಂಧಕ್ಕೆ ಗಂಧದ ಉಪಮೆ.
ಅಡರಿದರೂ ಆಡಲಾರೆ, ಮೆತ್ತಿದ್ದರು ಕಾಣಲಾರೆ ಸಾಧನೆಗೆ ಮಾತ್ರ ದಕ್ಕುವ ಸಮಾಧಿಯಲಷ್ಟೇ ಮೂರ್ತಗೊಳುವ ದೇವರಂತೆ ನೀನು! ರೆಕ್ಕೆಗಳ ಜೋಡಿಸಿ ಬಿಟ್ಟ ಮೇಲೆ ಹಾರುವ ಹಕ್ಕಿಯಾಗಿಹೆ ನಾನು, ಒಂಟಿಯಾಗಿ ತಲುಪಲಾರೆ ದಿಗಂತವ. ತಂಟೆ
ಮಾಡದೇ ದನಿಯಾಗಿ, ಜೀವ ಹನಿಯಾಗಿ ಬಂದು ಸ್ವೀಕರಿಸು ನನ್ನ ಧನ್ಯವಾದಗಳ ಬೇಗ. ಈ ರಾಧೆ ಕಾದಿಹಳು ನಿನಗಾಗಿ ಈಗ…
***
ಅಲ್ಲಿ ಮೂಡುತ್ತಿದ್ದುದು ತೀರಾ ಅಸ್ಪಷ್ಟ ಗೆರೆಗಳೇನೂ ಅಲ್ಲ. ಮತ್ತೆ ಮತ್ತೆ ಏಳುತ್ತಿದ್ದ, ಹಠಬಿಡದೇ ಹಿಂಬಾಲಿಸುತ್ತಿದ್ದ ಅಲೆಗಳ ಜಾಲ ಅವನ್ನು ಅಳಿಸಿ ಹಾಕುತ್ತಿದ್ದವಷ್ಟೇ. ಹಾಗೆಂದು ಸಾಗರ ತೀರದ ಆ ಮರಳು ಹಾಸಿನ ಮೇಲೆ ಮೂಡುತ್ತಿದ್ದ ನನ್ನ ಹೆಜ್ಜೆ ಗುರುತುಗಳೇನೂ ಸುಳ್ಳಾಗಿರಲಿಲ್ಲ. ಎಷ್ಟೇ ಗಟ್ಟಿಯಾಗಿ ನಾನು ಕಾಲೂರಿ, ಅದು ಅಚ್ಚಳಿಯದ ಹಾಗೆ ನಿಂತು ಮುಂದೆ ಸಾಗಿದರೂ, ಮರು ಕ್ಷಣ ಸುತ್ತೆಲ್ಲ ಹರವನ್ನು ಆವರಿಸಿಕೊಳ್ಳುತ್ತಿದ್ದ ಮತ್ತವೇ ಅಲೆಗಳು ಅವನ್ನು ಒಂಚೂರೂ ಗುರುತು ಸಿಗದಂತೆ ತನ್ನೊಡಲಿಗೆ ಸೇರಿಸಿಕೊಂಡು ಹೋಗಿಬಿಡುತ್ತಿದ್ದವಲ್ಲಾ, ಹೀಗೇಕೆ? ಆ ತೀರದ ಅಲೆಗಳಿಗೆ ನನ್ನ ಮೇಲಿನ ದ್ವೇಷವಾದರೂ ಏನು? ಮನದಾಳ ದಲ್ಲೂ ಅಂಥದೇ ಪ್ರಕ್ರಿಯೆ. ಅಲ್ಲಿ ಉದ್ದೇಶ ಪೂರ್ವಕ ಮೂಡಿಸಿರುತ್ತಿದ್ದ ಅವೆಷ್ಟೋ ನಿರ್ಧಾರಗಳನ್ನು ಆಳದಿಂದ ಮೇಲೆದ್ದು ಬರುವ ತೀರದ ಆಸೆಗಳು ಅಳಿಸಿ ಹಾಕಿಬಿಡುತ್ತಿದ್ದವಲ್ಲಾ! ಹಾಗೆಂದು ಒಂದು ಗುರುತೂ ಉಳಿದೇ ಇಲ್ಲವೆಂತಲ್ಲ.
ಗೊಂದಲ ಇರುವುದೇ ಅಲ್ಲಿ. ಮಾರುದ್ದ ನಡೆದು ಹಿಂತಿರುಗಿ ನೋಡಿದರೆ ಮೂಡಿರುತ್ತಿದ್ದ ಸಾವಿರ ಸಾವಿರ ಹೆಜ್ಜೆಗಳಲ್ಲಿ ನನ್ನದ್ಯಾವುದು, ಬೇರೆಯವರದ್ದು ಯಾವುದೆಂಬುದನ್ನು ಗುರುತಿಸಲಾಗದ ಅಸಹಾಯಕತೆ. ಆಕಾರ, ಗಾತ್ರ, ಸ್ವರೂಪಗಳಲ್ಲಿ ವೈವಿಧ್ಯವ ಕಾಪಿಟ್ಟುಕೊಂಡ ಹೆಜ್ಜೆಗಳ ಹಚ್ಚೆಯಲ್ಲಿ ಮೆತ್ತಗೆ ಪಾದ ತೂಗಿಸಿ ಸರ್ವೆಗಿಳಿದಿರೆ ಅಷ್ಟರಲ್ಲಿ ನನ್ನನ್ನೇ ನಾನು ಸಂಬಾಳಿಸಿಕೊಳ್ಳಲಾಗದೇ ದೇಹದ ಭಾರ ಕಾಲ ಮೇಲೆ ಬಿದ್ದು ಸಮತೋಲನ ತಪ್ಪಿ ಹೆಜ್ಜೆ ಊರಿ ಹೋಗಿರುತ್ತಿತ್ತು. ಯಾರದೋ
ಹೆಜ್ಜೆ ಗುರುತುಗಳಲ್ಲಿ ಮತ್ತೀಗ ನನ್ನ ಹೆಜ್ಜೆಯೇ. ಹಳೆಯದೆಲ್ಲ ಅಳಿಸಿ ಹೊಸತೊಂದರ ಸೃಷ್ಟಿ. ಇದನ್ನೇ ಗಟ್ಟಿಗೊಳಿಸಿ ಹೋಗೋಣವೆನ್ನುವಷ್ಟರಲ್ಲಿ ಮತ್ತೆ ಯಾವ್ಯವುದೋ ನೆನಪಿನ ಅಲೆಗಳ ಲಾಸ್ಯ.
ನೆನಪುಗಳ ರೀಲು ಬಿಚ್ಚುತ್ತಾ ಹೋದಂತೆಲ್ಲ ಚಿತ್ರಗಳು ದೃಶ್ಯಗಳಾಗಿ ಒಂದೊಂದಾಗಿ ತೆರದುಕೊಳ್ಳಬೇಕಿತ್ತು. ಈಸ್ಟ್ ಮನ್ ಕಲರ್‌ನಲ್ಲಾದರೂ ಮುಖಗಳನ್ನು ಗುರುತಿಸಲಾರ ದಷ್ಟು ಮಾಸಲು ಮಾಸಲೇನಲ್ಲ. ಹೃದಯದ ಕಿಂಡಿಗೆ ನೆಗೆಟಿವ್‌ಗಳ ಸಿಕ್ಕಿಸಿ ಹಿನ್ನೆಲೆಯಿಂದ ಕಣ್ಣಂಚಿನ ಟಾರ್ಚ್‌ನ ಬೆಳಕು ತೂರಿಸಿ ಮನಃಪಟಲದ ಮೇಲೆ ಭಿತ್ತಿಯನ್ನು ಮೂಡಿಸುವ ಕಸರತ್ತು ಫಲ ನೀಡುತ್ತಿತ್ತೇನೋ!
ರೀಲುಗಳು ಬಿಚ್ಚಿಕೊಳ್ಳುವ ಭರದಲ್ಲಿ ಒಂದಕ್ಕೊಂದು ಸುತ್ತಿಕೊಂಡು ಸಿಕ್ಕುಸಿಕ್ಕಾಗಿ ಜಗಟು ಬಿಡಿಸಲಾರದೇ, ಎಲ್ಲವೂ ಮತ್ತೆ ಒಗಟೇ? ಹೊಸ್ತಿಲಿನಿಂದಾಚೆಯಿಂದ ಕೇಳಿ ಬರುತ್ತಿದ್ದ ದನಿಗಳು ನೂರಾರು. ನಡು ಮನೆಯಲ್ಲೇ ನಿಂತು ಕಿವಿಗೊಟ್ಟರೆ ಒಳಗೊಳಗೇ ಒತ್ತಡವ ಇಮ್ಮಡಿಸುತ್ತಿದ್ದ ಕುತೂಹಲ. ಯಾವ ಕೊಳಲಿನ ದನಿಗೆ ಯಾರ ಉಸಿರು ಬೆರೆತಿದೆಯೋ, ಆ ಉಸಿರಿನ ಒಡೆಯನದ್ದು ಯಾವ ನಿಲುವೋ, ಇಂಪು ತುಂಬಿರುವವನ ದೇಹದ ಕಂಪು ಎಷ್ಟು ಹಿತವೋ? ಇಲ್ಲ ಇನ್ನು ಅದುಮಿಟ್ಟುಕೊಳ್ಳಲಾಗದೇ ಕುಂತ ಇರಿಕೆಯ ಸಡಿಲಿಸಿ ಹೊರವಾಗಿಲ ತನಕ ಬಂದು ಇಣುಕಿದರೆ… ನನ್ನದೆಂದು ಗುರುತಿಸಲಾಗದ ಹತ್ತೆಂಟು ಮುಖಗಳು.
ಅವುಗಳಲ್ಲಿ ನೈಜ ಯಾವುದು, ಮುಖವಾಡ ಯಾವುದು ಎಂಬದನ್ನು ಗುರುತಿಸಲಾಗದ ಸೋಲು. ಎಲ್ಲವೂ ವರ್ಣರಂಜಿತ. ಒಂದಕ್ಕಿಂತ ಮನೋಹರ. ಎಲ್ಲದರಲ್ಲಿಯೂ ನನ್ನಿಯನ ಹುಡುಕುವ ಯತ್ನ! ತಪ್ಪು ನನ್ನದಲ್ಲ, ಹರೆಯದ್ದು. ಈಗ ಕತ್ತೆಯೂ ಸುಂದರವಾಗಿ ಕಾಣುತ್ತದೆಯಂತೆ. ಸತ್ಯವೂ ಇರಬಹುದು, ಅಲ್ಲದಿದ್ದರೆ ನನ್ನ ಉಬ್ಬಿದ ಗುಲಾಬಿಯೆದೆ ಸುಮ್ಮಸುಮ್ಮನೆ ಏಕೆ
ಬಿಗುವಾಗಬೇಕು? ಹೊಟ್ಟೆಯ ಕೆಳಗೆ ಅಲ್ಲೇನೋ ಚುಳುಕು. ಹೊತ್ತು ಜಾರುತ್ತಿದ್ದರೆ ಮತ್ತದೇ ಬೇಸರ, ಅದೇ ಏಕಾಂತದೊಂದಿಗೆ ಚಿಗುರೊಡೆಯುವ ಹಂಬಲ. ಕಿತ್ತು ಹೋಗುವ ತಾಳ್ಮೆಯ ಕಟ್ಟಿ ನಿಲಿಸಬಲ್ಲವನ ಬಯಕೆ.
ಮನವಷ್ಟೇ ಅಲ್ಲ, ದೇಹದ್ದೂ ಹುಡುಕಾಟವೇ! ಅದಕ್ಕಾಗಿಯೇ ಸುತ್ತಾಟ, ದಿಕ್ಕು ದೆಸೆಯಿಲ್ಲದೇ. ಹಾದಿ ಯಾವುದೆಂದು ಗುರುತಿಸಲಾಗದ ಅಸಹಾಯಕತೆ. ಹೆಬ್ಬಾವಿನಂತೆ ಮಲಗಿದ್ದ ನುಣುಪು ಡಾಂಬರು ರೋಡುಗಳೆಲ್ಲವೂ ನನ್ನದೆಂಬ ಭ್ರಮೆ. ಕಿಕ್ಕಿರಿದ ಮಾರ್ಕೇಟು, ಗೊಂಬೆ ಸಾಲುಗಳಂತೆ ದೇವರ ಮೂರ್ತಿಗಳ ನಿಲ್ಲಿಸಿದ ಆ ಕಾರ್ಪೊರೇಟ್ ಯುಗದ ಗುಡಿ, ಗಿಲೀಟುಗಳನ್ನು ಹೊತ್ತು ಕರೆಯುವ ಬಜಾರು, ಒಬೇಸಿಟಿಗೆ ಬೆದರಿದ ವಯ್ಯಾರಿಯರು ಬೆವರಿಳಿಸಿಕೊಂಡು ಓಡುತ್ತಿರುವ ಪಾರ್ಕು, ಸಿಟಿ ಬಸ್‌ನ ರೂಟುಗಳೆಲ್ಲವೂ ಮುಗಿದರೂ ನನ್ನದೆಂಬ ಹಾದಿ ದಕ್ಕಿಸಿಕೊಳ್ಳಲಾಗದ ನಿರಾಸೆ.
ಕೊನೆಗೂ ಇರುಳು ಕವಿದರೆ, ಮತ್ತದೇ ಕನಸಿನ ನೂರು ಚೂರುಗಳು. ಯಾರ ಕೈಯಿಂದ ಜಾರಿ ಬಂದ, ಇನ್ನಾರ ಬೇಗುದಿಯನ್ನು ತೂರಿ ನಿಂದ ಕನವರಿಕೆಗಳೆಲ್ಲವೂ ನನ್ನ ಹೂವಿನ ಚಿತ್ತಾರದ ತಲೆದಿಂಬನ್ನು ದಾಟಿ, ತಲೆಯೊಳಗೆ ಹೊಕ್ಕು ಸುಂದರ ಸಪ್ನಗಳಾಗಿ ಮರುಕಳಿಸುತ್ತಿವೆ? ಅವನ ರೋಮ ಭರಿತ ಎದೆ ಹರವಿಗೊರಗಿದ ನನ್ನ ತಲೆ ನೇವರಿಕೆ ಅನುಭವಕ್ಕೆ ಬರುತ್ತಿದೆ. ಸೋಲಿಗೆ ಸಾಂತ್ವನ, ಚಂಚಲತೆಗೆ ವಿರಾಮ, ಕಾತರಿಕೆಗೆ ಕೊನೆ ಸಿಕ್ಕ ಧನ್ಯತೆ. ನೀವುತ್ತಿದ್ದ ಬಲಿಷ್ಠ ಬಾಹುಗಳ ಇರುಕಿನಲ್ಲೇ ದಿಟ್ಟಿಸಿದರೆ ಅಲ್ಲವೂ ಅಯೋಮಯ… ಕೇಳಿದರೆ ನೀನಾರು ಉತ್ತರವಿಲ್ಲ. ಮುಖವ ತೋರಲೊಲ್ಲ. ಬಿಮ್ಮನೆ ಬಿಗಿಯುತ್ತಿರುವ ತುಟಿಗಳೆಡೆ ಯಿಂದ ಇನ್ನು ತಾಳಿಕೊಳ್ಳಲಾರದ ಬಿಕ್ಕಳಿಕೆ. ನನ್ನವ ಸಿಕ್ಕಾನೆ? ದೂರ ಮರೆಯಲ್ಲಿ ನನಗಾಗಿ ಅಂವ ಕಾದಂತೆ.
ಸುತ್ತಮುತ್ತಲೂ ಕುಣಿಯುವ ವೇಷಗಳ ನಡುವೆ ಎಲ್ಲ ಕಳಚಿ ಬೆತ್ತಲಾದ, ಬರಿದೇ ನಗುವನುಟ್ಟು ನಿಂತ ಮುಗುದ. ಸಾಕಿನ್ನು ಕಾದಾಟ, ಹುಡುಕಾಟದ ಹುಡುಗಾಟ. ಕನಸು ಕಳೆದರೂ ಭಯವಿಲ್ಲ. ವಾಸ್ತವವೀಗ ಭಿನ್ನ ಅಲ್ಲವೇ ಅಲ್ಲ. ದಿನರಾತ್ರಿ ಅವನೇ ನನ್ನವ! ಮಿಸ್ ಮಾಡ್ಕೊಬೇಡ ಮತ್ತೇ !