Thursday, 19th September 2024

ಜಯನಗರ ಕ್ಷೇತ್ರದ ಹೈಡ್ರಾಮಾ: ಸಿ.ಕೆ.ರಾಮಮೂರ್ತಿ ಅತ್ಯಲ್ಪ ಅಂತರದ ಗೆಲುವು

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟದ ಹೈಡ್ರಾಮಾಗೆ ಕಡೆಗೂ ತೆರೆ ಬಿದ್ದಿದೆ.

ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ 16 ಮತಗಳ ಅತ್ಯಲ್ಪ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದರು. ಮೊದಲು ಶಾಸಕಿ ಸೌಮ್ಯ ರೆಡ್ಡಿಗೆ ಗೆಲುವು ಒಲಿದಿತ್ತು. ಆದರೆ ಅಂಚೆ ಮತಗಳ ಪುನರ್ ಪರಿಶೀಲನೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತ ಪಡೆದು ವಿಜಯಿಯಾದರು.

ಕ್ಷೇತ್ರದ ಫಲಿತಾಂಶ ತಡರಾತ್ರಿ 12 ಗಂಟೆಗೆ ಪ್ರಕಟವಾಯಿತು. ಮಧ್ಯಾಹ್ನವೇ ಮತ ಎಣಿಕೆ ಮುಗಿದು 160 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಗೆಲುವು ಖಚಿತ ಪಡಿಸಲಾಗಿತ್ತು. ಅಧಿಕೃತ ಪ್ರಕಟಣೆ ಬಾಕಿ ಇತ್ತು. ಆದರೆ ಬಿಜೆಪಿ ಅಭ್ಯರ್ಥಿ ಅಂಚೆ ಮತಗಳ ಪುನರ್ ಪರಿಶೀಲನೆ ನಡೆಸಲು ಪಟ್ಟು ಹಿಡಿದರು.

ಹಿರಿಯ ನಾಗರಿಕರ ಮತಪತ್ರದಲ್ಲಿ ಸೀಲ್ ಇಲ್ಲ ಎಂದು 160 ಅಂಚೆ ಮತಗಳನ್ನು ಅಸಿಂಧು ಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಬಿಜೆಪಿ ಅಭ್ಯರ್ಥಿ ಸೀಲ್ ಇಲ್ಲದ್ದ ಅಧಿಕಾರಿಗಳ ತಪ್ಪೇ ಹೊರತು ಮತದಾರರದ್ದಲ್ಲ. ಹಾಗಾಗಿ ಈ ಮತಗಳ ಪರಿಗಣಿಸಬೇಕು ಎಂದು ಪಟ್ಟು ಹಿಡಿದರು.

ಬಿಜೆಪಿ ಬೇಡಿಕೆಗೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ಮರು ಮತ ಎಣಿಕೆ ಬೇಡ ಎಂದು ಪಟ್ಟು ಹಿಡಿದರು. ಆದರೂ ಮತಗಳ ಮರು ಎಣಿಕೆ ಬದಲು ಪುನರ್ ಪರಿಶೀಲನೆ ನಡೆಸಿತು. ಇದರಲ್ಲಿ ಸೌಮ್ಯರೆಡ್ಡಿ ಹಿನ್ನಡೆ ಎನ್ನುವ ಮಾಹಿತಿ ಬಂತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸೌಮ್ಯರೆಡ್ಡಿ ಮರು ಮತ ಎಣಿಕೆ ಬೇಡಿಕೆ ಇಟ್ಟರು. ಒಟ್ಟು 5 ಬಾರಿ ಅಂಚೆ ಮತಗಳ ಮರು ಪರಿಶೀಲನೆ ನಡೆಸಿದರೂ ಗೊಂದಲ ಪರಿಹಾರವಾಗಲಿಲ್ಲ.ಬಿಜೆಪಿಯಿಂದ ಅಶೋಕ್, ರವಿ ಸುಬ್ರಮಣ್ಯ, ಸಂಸದ ತೇಜಸ್ವಿ ಸೂರ್ಯ, ಅಭ್ಯರ್ಥಿ ರಾಮಮೂರ್ತಿ ಮತ ಎಣಿಕೆ ಕೇಂದ್ರದಲ್ಲಿ ಸಭೆ ನಡೆಸಿದರೆ, ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಸೌಮ್ಯರೆಡ್ಡಿ ಹಾಗು ಇತರ ಕಾಂಗ್ರೆಸ್ ನಾಯಕರು ಸಭೆ ನಡೆಸಿ ಮತ್ತೊಮ್ಮೆ ಮತ ಎಣಿಕೆ ಬೇಡಿಕೆ ಇಟ್ಟರು. ಅಂತಿಮವಾಗಿ ಆರನೇ ಬಾರಿ ಅಂಚೆ ಮತಗಳ ಪುನರ್ ಪರಿಶೀಲನೆ ನಡೆಸಿ ಬಿಜೆಪಿಯ ಸಿ.ಕೆ ರಾಮಮೂರ್ತಿ 16 ಮತಗಳ ಅಂತರದಲ್ಲಿ ಗೆದ್ದಿರುವುದಾಗಿ ಚುನಾವಣಾ ಆಯೋಗದ ಅಧಿಕಾರಿಗಳು ಪ್ರಕಟಿಸಿ ದರು.

ಬಿಜೆಪಿ ಅಭ್ಯರ್ಥಿ ರಾಮಮೂರ್ತಿ 57,797 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ 57,781 ಮತ ಪಡೆದರು. 16 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಕೊರಳಿಗೆ ವಿಜಯದ ಮಾಲೆ ಸಿಕ್ಕಿತು.