Friday, 27th December 2024

ರಾಜ್ಯದಲ್ಲಿ ಬಿಜೆಪಿ ಸೋತಿದ್ದಾದರೂ ಏಕೆ ?

ದಾಸ್ ಕ್ಯಾಪಿಟಲ್

dascapital1205@gmail.com

ಜನಾದೇಶಕ್ಕೆ ಬಿಜೆಪಿ ಸೋತಿದೆ ಎಂದು ಪೂರ್ಣ ಪ್ರಮಾಣದಲ್ಲಿ ಹೇಳಲು ಸಾಧ್ಯವಿಲ್ಲ. ಏಕೆಂದರೆ, ಮತಗಳು ಬಿಜೆಪಿಗೂ ಸಂದಿವೆ. ಆದರೆ ಪ್ರಜಾ ಪ್ರಭುತ್ವದಲ್ಲಿ ಅಧಿಕಾರ ಪ್ರಾಪ್ತಿಗೆ ಬೇಕಾದ ಬಹುಮತದ ಮತಗಳು ಸಿಗಲಿಲ್ಲ ಎಂಬ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರ ರಾಜಕೀಯದ ಸರ್ಧೆಯಲ್ಲಿ ಸೋತಿದೆ. ಜೆಡಿಎಸ್ ನಂಥ ಕೆಲವು ಪ್ರಾದೇಶಿಕ ಪಕ್ಷಗಳು ತನ್ನ ರಾಷ್ಟ್ರೀಯ ಚಿಂತನೆಯಲ್ಲಿ ಯಾವತ್ತೂ ನಾಡು ನುಡಿ ಸಂಸ್ಕೃತಿಯ ಚಿಂತನೆಯಲ್ಲಿ ಅನುರಕ್ತಿಯಾಗದೆ ಪಾಳೇಗಾರಿಕೆಗೆ ಒತ್ತುಕೊಟ್ಟಂತೆ ಹುಟ್ಟಿಕೊಂಡ ಪಕ್ಷಗಳಾಗಿದ್ದರಿಂದ ಸ್ಥಳೀಯರ ಭಾವನೆಗಳನ್ನು ಎನ್ಕ್ಯಾಶ್ ಮಾಡಿಕೊಂಡು, ಕಾಂಗ್ರೆಸ್ಸಿನ ಧೋರಣೆಗಳನ್ನೇ ಹೊಂದಿಯೂ ಜೆಡಿಎಸ್ ಈ ಚುನಾವಣೆಯಲ್ಲಿ ಹೀನಾಯವಾಗಿ ಸೋತಿತು.

ಮುಖ್ಯವಾಗಿ, ಮುಸ್ಲಿಮರು ಜೆಡಿಎಸ್ ಅನ್ನು ತಿರಸ್ಕರಿಸಿದ್ದು ಎದ್ದು ಕಾಣುತ್ತಿದೆ. ತಮ್ಮದೇ ಸಮುದಾಯದ ಸಿ.ಎಂ.ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರಾದರೂ ಮುಸ್ಲಿಮರು ಜೆಡಿಎಸ್ ಕೈಹಿಡಿಯಲಿಲ್ಲ ಎಂದರೆ ಮುಸ್ಲಿಂ ವೋಟುಗಳು ಹೇಗೆ ಕಾಂಗ್ರೆಸ್ಸಿಗೆ ಕೇಂದ್ರೀಕೃತವಾಗಿದೆ ಎಂದು ಯೋಚಿಸಬೇಕು.

ಮತದಾನ ಎಂಬುದು ಗುಪ್ತವಾಗಿದ್ದರೂ ಜಾತಿ ಲೆಕ್ಕಾಚಾರದ ಮೇಲೆ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆ ಗಳು ನಡೆಯುತ್ತವೆ. ಈ ಎರಡೂ ಬಗೆಯ ಸಮೀಕ್ಷೆ ಗಳಲ್ಲಿ ಬಿಜೆಪಿಗೆ ಸಮಾನಾಂತರವಾಗಿ ಮತ್ತು ಸೂಕ್ತ ಮತ್ತು ಸಮರ್ಪಕ ನೆಲೆಯಲ್ಲಿ ವಿರೋಧ ಪಕ್ಷವಾಗಿ ಕಾಂಗ್ರೆಸ್ ಇತ್ತೇ ವಿನಾ ಜೆಡಿಎಸ್ ಇರಲಿಲ್ಲ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂಬ ಹೆಚ್ಚಿನ ಎಕ್ಸಿಟ್ ಸಮೀಕ್ಷೆಗಳು ಹೇಳಿದ್ದರೂ ಜನತೆಗೆ ಬಿಜೆಪಿಯ ಮೇಲೆಯೇ ವಿಶ್ವಾಸವಿತ್ತು. ಬಿಜೆಪಿಗಂತೂ ಅತಿಯಾದ ಆತ್ಮವಿಶ್ವಾಸ ಇತ್ತು.

ಈ ಅತಿಯಾದ ಆತ್ಮವಿಶ್ವಾಸದ ಹಿಂದೆ ಇದ್ದದ್ದು ಮೋದಿಯೆಂಬ ಗೆಲ್ಲುವ ಕುದುರೆ! ಈ ಗೆಲ್ಲುವ ಕುದುರೆಯನ್ನು ಮುಂದಿಟ್ಟು ಕೊಂಡೇ ಅನೇಕ ಪ್ರಯೋಗಗಳನ್ನು ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ತರಲಾಯಿತು. ಹೊಸಬರಿಗೆ ಮಣೆಹಾಕಲಾಯಿತು. ತಕ್ಕಮಟ್ಟಿಗೆ ಯಶಸ್ಸು ಕಂಡರೂ ಮಂತ್ರಿಗಳಾಗಿದ್ದ ಹಲವರೇ ಸೋತು ಸುಣ್ಣವಾದರು!

ಹಾಗೆ ತಂದ ಮೊದಲ ಬದಲಾವಣೆಯೇ ಯಡಿಯೂರಪ್ಪರನ್ನು ಒತ್ತಾಯ ಮತ್ತು ಒತ್ತಡದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು! ಇದು ಅನಪೇಕ್ಷಿತ ಬದಲಾವಣೆಯಷ್ಟೇ ಆಗಿ ಉಳಿಯದೆ ಬಿಜೆಪಿಗೆ ರಾಜ್ಯಮಟ್ಟದಲ್ಲಿ ಬಹುದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ವೀರಶೈವ ಲಿಂಗಾಯತ ಮತಕ್ಕೆ ನೋವಾಯಿತು. ಈ ಡ್ಯಾಮೇಜನ್ನು ಸರಿಪಡಿಸಲು ಬಿಜೆಪಿಗೆ ಕೊನೆಯವರೆಗೂ ಸಾಧ್ಯವಾಗಲಿಲ್ಲ. ಯಡಿಯೂರಪ್ಪರನ್ನು ಪೂರ್ಣಾವಽಗೆ ಸಿಎಂ ಆಗಲು ಬಿಟ್ಟಿದ್ದರೆ ಇಂಥ ದುಃಸ್ಥಿತಿ ಬರುತ್ತಿರಲಿಲ್ಲ. ಏಕೆಂದರೆ, ಯಡಿಯೂರಪ್ಪರಿಗೆ ಸಮರ್ಥವಾದ ಬದಲಿ ನಾಯಕತ್ವ ಅದರಲ್ಲೂ ಮಾಸ್ ನಾಯಕತ್ವ ಬಿಜೆಪಿಯಲ್ಲಿ ಇಲ್ಲವಾಗಿದ್ದೇ ಬಿಜೆಪಿಗೆ ಹಿನ್ನಡೆಯಾಗುತ್ತಾ ಬಂದು ಈಗ ಈ ಹಂತವನ್ನು ತಲುಪಿತು.

ಮತ್ತೊಂದು ವಿಚಾರವೆಂದರೆ, ಬಿಜೆಪಿಯಲ್ಲಿರುವ ಬಣ ರಾಜಕೀಯ! ಇದು ಬಹುದೊಡ್ಡ ರೀತಿಯಲ್ಲಿ ಪಕ್ಷದೊಳಗೆ ಶೈಥಿಲ್ಯವನ್ನು
ಹುಟ್ಟುಹಾಕಿದ್ದು! ಬೊಮ್ಮಾಯಿ ಮುಖ್ಯಮಂತ್ರಿಯಾದರೂ ಉತ್ತಮ ನಾಯಕತ್ವದ ಚಹರೆಗಳು ಕಾಣದೇ ಹೋದದ್ದು ಮತ್ತೊಂದು ದೊಡ್ಡ ಹಿನ್ನಡೆ. ಕೆಲವು ಇಲಾಖೆಗಳಲ್ಲಿ ಭ್ರಷ್ಟಾಚಾರದ ವಾಸನೆ ದೊಡ್ಡಮಟ್ಟದ ಸುದ್ದಿಯಾಯಿತು. ೪೦ ಪರ್ಸೆಂಟ್
ಕಮಿಷನ್ ಕೂಡ ಅಂಥದ್ದರಲ್ಲಿ ದೊಡ್ಡ ಸುದ್ದಿಯಾಗಲು ಕಾರಣವಾಯಿತು. ಕಾಂಗ್ರೆಸ್ ಕೇಳಿದ ಪ್ರಶ್ನೆಗಳಿಗೆ ಬಿಜೆಪಿ ಸೂಕ್ತ ಉತ್ತರವನ್ನು ನೀಡದೇ ಇರುವುದು ಗುಮಾನಿಗೆ ಕಾರಣ ವಾಯಿತು. ಡಿಜೆ ಹಳ್ಳಿ ಗಲಭೆ, ಕೆಜೆಹಳ್ಳಿ ರಾದ್ಧಾಂತಗಳಿಗೆ ಸರಕಾರ ಸ್ಪಂದಿಸಲೇ ಇಲ್ಲ. ಕೇವಲ ಬಾಯಿ ಮಾತಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದಿತೇ ವಿನಾ ಯಾವುದೇ ತೀಕ್ಷ್ಣ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಲಿಲ್ಲ ಎಂಬುದು ಜನತೆ ಅರಿವಾಯಿತು.

ಸಂಘ ಪರಿವಾರದ ಹಿನ್ನಲೆಯುಳ್ಳ ಕಾರ್ಯಕರ್ತರ ಕೊಲೆಗಳು ನಡೆದವು. ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲವಾಗಲೀ, ಹಿಂದೂಗಳಿಗೆ ಬೆಂಬಲವಾಗಿ ನಿಲ್ಲುವ ಯಾವ ಸೂಚನೆಯೂ ಸಿಗಲಿಲ್ಲ ಎಂಬುದು ನೇರ ಸಂದೇಶವಾಯಿತು. ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ದ್ವೇಷ ರಾಜಕೀಯದಿಂದ ಕೇಸ್ ಹಾಕಲ್ಪಟ್ಟು ಕೋರ್ಟಿಗೆ ಅಲೆಯುತ್ತಿದ್ದ ಹಿಂದೂ ಕಾರ್ಯಕರ್ತರ ಕೇಸನ್ನು ಹಿಂಪಡೆಯಲಿಲ್ಲ ಎಂಬ ನೋವು ಹತಾಶೆ ಹಿಂದೂ ಕಾರ್ಯಕರ್ತರಲ್ಲಿ ಮನೆಮಾಡಿತ್ತು. ಕೇವಲ ಹಿಂದೂ, ಹಿಂದುತ್ವ, ರಾಷ್ಟ್ರೀಯತೆಯ ಸೋಗಿನಲ್ಲಿ ಬಿಜೆಪಿ ಸರಕಾರ ಮಾಧ್ಯಮದೆದುರು, ವೇದಿಕೆಯಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಅಭಿವ್ಯಕ್ತಿಸಿತೇ ವಿನಾ ಅಂಥಾದ್ದೇನೂ ಮಹತ್ವದ ಕಾರ್ಯ ಮಾಡಲಿಲ್ಲ ಎಂಬ ಮಾತು ಬಿಜೆಪಿ ಕಾರ್ಯಕರ್ತರಲ್ಲೂ, ಸಂಘ ಪರಿವಾರದಲ್ಲೂ ಇತ್ತು ಎಂಬುದು ಪಬ್ಲಿಕ್ ಸೀಕ್ರೆಟ್! ಹಾಗಂತ ಬಿಜೆಪಿ ಏನೂ ಮಾಡಲಿಲ್ಲ ಎಂಬುದು ಸುಳ್ಳು!

ಆದರೆ, ಮಾಡಿzಲ್ಲವೂ ಸರಕಾರದ ಮಟ್ಟದಲ್ಲಿ ನಡೆದುಹೋದ ಭ್ರಷ್ಟಾಚಾರದಲ್ಲಿ ತೇಲಿಹೋಯಿತು. ಈ ವಿಚಾರದಲ್ಲಿ ಸಂಘವು ಹೈಕಮಾಂಡ್ ಗಮನಕ್ಕೆ ಸರಕಾರದ ಕಾರ್ಯವೈಖರಿಯನ್ನು ತರಬೇಕಾದ ಹೊಣೆಗಾರಿಕೆಯನ್ನು ತೋರ್ಪಡಿಸದೇ ಇದ್ದದ್ದು ದೊಡ್ಡ ದೌರ್ಬಲ್ಯವಾಗಿ ಕಂಡಿತು. ಇದು ಕಾಂಗ್ರೆಸ್ಸಿಗೆ ಚುನಾವಣಾ ಅಸವಾಗಿ ಪರಿಣಮಿಸಿತು. ಸದನದಲ್ಲಿ ಎದೆಗುಂದದೆ ಎದೆಗಾರಿಕೆಯಿಂದ ಸರಕಾರದ ವಿರುದ್ಧ ಎದ್ದ ಎಲ್ಲ ಬಗೆಯ ಆರೋಪ, ಆಕ್ಷೇಪಗಳಿಗೆ ಸರಿಯಾಗಿ ವಿಶ್ಲೇಷಣೆ ಮಾಡಿ ಪ್ರತ್ಯುತ್ತರ ನೀಡದೇ ಹೋದದ್ದು ಸರಕಾರದ ಮತ್ತೊಂದು ದೊಡ್ದ ದೌರ್ಬಲ್ಯ. ತಪ್ಪನ್ನು ತಪ್ಪು ಎಂದು ಹೇಳುವ ಯಾವ ಧೈರ್ಯ ಬಿಡಿ, ಅದರ ವಿರುದ್ಧ ಮಾತನಾಡುವ ನೈತಿಕತೆಯೂ ಪಕ್ಷದಲ್ಲಿ ಯಾರಿಗೂ ಇಲ್ಲವೇನೋ ಎಂಬಷ್ಟು ಪ್ರತಿಪಕ್ಷಗಳು ರಾಜಾರೋಷವಾಗಿ ಸರಕಾರದ ವೈಫಲ್ಯಗಳನ್ನು ಜಗಜ್ಜಾಹೀರು ಮಾಡಿಕೊಂಡೇ ಬಂದವು.

ಚುನಾವಣೆಯ ಸಂದರ್ಭದಲ್ಲಿ ಇವೆಲ್ಲ ತಮಗೆ ಮುಳುವಾಗಬಹುದೆಂಬ ಎಚ್ಚರದ ಅರಿವು ಪಕ್ಷಕ್ಕೆ ಆಗಲೇ ಇಲ್ಲ. ಪ್ರತಿಯೊಂದು ದುರ್ಘಟನೆಗಳು ಸಂಭವಿಸಿದಾಗಲೂ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ, ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದ ಮತದಾರರಿಗೂ ಬೆಂಬಲವಾಗಿ ಸರ್ಕಾರ ನಿಲ್ಲಲಿಲ್ಲ ಎಂಬ ಹತಾಶಾ ಭಾವನೆ ಹೆಚ್ಚುತ್ತಲೇ ಹೋಯಿತು. ಪಾರ್ಟಿ ವಿಥ್ ಡಿಫರೆ ಎಂಬ ಸ್ಲೋಗನ್‌ನಲ್ಲಿ ಬಿಜೆಪಿಯ ಸೈದ್ಧಾಂತಿಕ ನಿಲುವುಗಳು ಅಧಿಕಾರಕ್ಕೆ ಬಂದಮೇಲೆ ಹುಸಿಯಾಗ ತೊಡಗಿದವು.

ಕೆಳಹಂತದಲ್ಲಿ ನಾಯಕರನ್ನು ಬೆಳೆಸುವ ಔದಾರ್ಯ ಬಿಜೆಪಿಯ ನಾಯಕರಿಗೆ ಇಲ್ಲವೇ ಇಲ್ಲ ಎಂಬುದು ಅನೇಕ ಸಂಗತಿಗಳಲ್ಲಿ ಕಾರ್ಯಕರ್ತರಿಗೇ ಗೊತ್ತಾಗಿ ಹೋಗಿತ್ತು. ಆಪ್‌ರೇಷನ್ ಕಮಲ ಮಾಡಿ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬ ದುರಹಂಕಾರ ಪಕ್ಷದ ಮುಖಂಡರಲ್ಲಿ ಮನೆಮಾಡಿತ್ತು. ಅಂದರೆ, ಕಾರ್ಯಕರ್ತರ ಆವಶ್ಯಕತೆಯೇ ಇಲ್ಲ ಎಂಬ ಒಣ ಧಾರ್ಷ್ಟ್ಯ! ಮೋದಿ ಹೆಸರಿನಲ್ಲಿ ಗೆಲುವು ನಮ್ಮದೇ ಎಂಬಷ್ಟು ಅವಿವೇಕತನ ಬಿಜೆಪಿ ಸೋಲಿಗೆ ಕಾರಣವಾಯಿತು.

ಪಾಪ, ಮೋದಿಯಾದರೂ ಏನು ಮಾಡಲು ಸಾಧ್ಯ ಹೇಳಿ? ಅವರು ಬಂದು ಹೋದದ್ದಕ್ಕಾದರೂ ಇಷ್ಟು ಸೀಟುಗಳು ಗೆದ್ದಿವೆ ಎಂಬ ಸಮಾಧಾನ ಬಿಜೆಪಿಗೆ ವೋಟು ಹಾಕಿದ ಹಿಂದೂಗಳಲ್ಲಿದೆ. ಆದರೂ ಮೋದಿ, ಯೋಗಿಗಿದು ಅವಮಾನವಾಯಿತು! ಬಾಯಿ ಬಿಟ್ಟರೆ ಬಂಡವಾಳ ಬಯಲು ಎಂಬಂತೆ, ಯುಪಿ ಮಾಡೆಲ್ ಮಾಡ್ತೇವೆ, ಗುಜರಾತ್ ಮಾದರಿ ಮಾಡ್ತೇವೆ ಎಂದುಕೊಂಡು ಬೊಬ್ಬೆ ಹೊಡಿದರೇ ವಿನಾ ಜನಸಂಖ್ಯಾ ನಿಯಂತ್ರಣ ಕಾನೂನು, ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ತಾಕತ್ತು ಬಿಜೆಪಿಗೆ ಇಲ್ಲದೇ ಹೋಯಿತು!

ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಹಿಂಪಡೆಯುತ್ತೇವೆ ಎಂದು ರಾಜಾರೋಷವಾಗಿ ಹೇಳುವ ಕಾಂಗ್ರೆಸಿನ ಧೈರ್ಯ ಬಿಜೆಪಿಗೆ ಇಲ್ಲದೆ ಹೋದದ್ದು ಹಿಂದೂಗಳ ದೌರ್ಭಾಗ್ಯವೇ ಸರಿ! ಕಟ್ಟರ್ ಹಿಂದೂಗಳ ಪಕ್ಷವಾಗಿ ಬಿಜೆಪಿ ತನ್ನನ್ನು ತಾನು ಪ್ರಾಜೆಕ್ಟ್ ಮಾಡಿ ಕೊಳ್ಳಲು ವಿಫಲವಾದದ್ದೇ ಇಂದಿನ ಹೀನಾಯ ಹಿನ್ನಡೆಗೆ ಮೂಲ ಕಾರಣ ಎಂಬುದು ಇನ್ಮುಂದಾದರೂ ಬಿಜೆಪಿಗೆ ಮನವರಿಕೆ ಯಾಗಬೇಕಿದೆ.

ಅಧಿಕಾರ ಸಿಕ್ಕಿದ್ದೇ ತಡ, ಬಾಚಿ ಬಾಚಿ ತಿಂದು ಮುಕ್ಕುವ ಹಪಹಪಿಯ ದಂಧೆಗೆ ಬಿದ್ದುದ್ದು ಬಿಜೆಪಿಯ ಸೋಲಿಗೆ ಕಾರಣವಲ್ಲ ಅಂತ ಅನ್ನಲು ಸಾಧ್ಯವಿದೆಯೇ? ಸಿದ್ರಾಮಯ್ಯ ಸರಕಾರದ ಸಂದರ್ಭದಲ್ಲಿ ನಡೆದುಹೋದ ಹತ್ತಾರು ಹತ್ಯೆಗಳಿಗೆ ಕೊನೆಗೂ ಮುಕ್ತಿಯೇ ಸಿಗಲಿಲ್ಲ. ಪರೇಶ್ ಮೇಸ್ತನ ಭೀಕರ ಕೊಲೆಯ ರಿಪೋರ್ಟು ಟುಸ್ಸಾಗಿ ಹೋಯ್ತು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ತನಿಖೆ ಆರಂಭದಲ್ಲಿ ಅಡ್ಡದಾರಿ ಹಿಡಿದು ಕೊನೆಗೊಂಡಿತು!- ಇವಕ್ಕೆಲ್ಲ ಬಿಜೆಪಿ ತನ್ನ ಅಧಿಕಾರದಲ್ಲಿ ಸರಿಯಾಗಿ ತನಿಖೆ ನಡೆಸಿ ಮುಕ್ತಿ ಕೊಡುತ್ತದೆ ಎಂಬ ಜನತೆಯ ನಿರೀಕ್ಷೆಗೆ ಬಿಜೆಪಿ ಹೇಗೆ ಸ್ಪಂದಿಸಿತು? ಹೇಗೆ ಪ್ರತಿಕ್ರಿಯಿಸಿತು ಎಂಬುದು ಈ ನಾಲ್ಕು ವರ್ಷದಲ್ಲಿ ರಾಜ್ಯದ ಜನತೆ ಕಣ್ತುಂಬಿಕೊಂಡಿತು! ಡಿಕೆಶಿ ಇಡಿ ಪ್ರಕರಣದ ಬಗ್ಗೆ ರಾಜ್ಯ ಬಿಜೆಪಿಯ ನಿಲುವು ಅಚ್ಚರಿ ಹುಟ್ಟಿಸಿದ್ದು ಸುಳ್ಳೇ? ಕಾಂಗ್ರೆಸ್ಸಿನೊಂದಿಗೆ ಬಿಜೆಪಿ ನಾಯಕರದ್ದು ಒಳ ಒಪ್ಪಂದ ಇದೆಯೆಂಬ ಮಾತು ಲಾಗಾಯ್ತಿನಿಂದಲೂ ಇದ್ದೇ ಇದೆಯೆಂಬ ಮಾತು ಸುಳ್ಳೇ?. ಅದನ್ನು ಪ್ರೂವ್ ಮಾಡುವಂತೆ ಬಿಜೆಪಿ ನಾಯಕರ ವರ್ತನೆಗಳೂ ಅಭಿವ್ಯಕ್ತವಾಗಿವೆ.

ತಾನು ಸಚಿವ, ಶಾಸಕ ಎಂಬ ದರ್ಪದ ಬಿಜೆಪಿ ನಾಯಕರು ಇದ್ದುಬಿಟ್ಟರೆ ಪಕ್ಷದ ಸೈದ್ಧಾಂತಿಕ ಮುಖವಾಣಿಯಾಗಿ ಕೆಲಸ ಮಾಡಲೇ ಇಲ್ಲ ಎಂದರೆ ತಪ್ಪಾದೀತೆ? ಆರೆಸ್ಸೆಸ್ ಮುಖವಾಣಿ ಬೇಕು, ರಾಷ್ಟ್ರೀಯತೆ ಮತ್ತು ಹಿಂದುತ್ವ, ಭಾರತೀಯತೆಯ ಮುಖವಾಡ ಕೇವಲ ಅಧಿಕಾರದ ಪ್ರಾಪ್ತಿಯ ವಾಂಛೆಯಾಗಿ ಬೇಕೇ ವಿನಾ ಅವುಗಳ ಕಟ್ಟರ್ ಪ್ರತಿನಿಧಿಯಾಗಿ ಬಿಜೆಪಿ ಹಿಂದೂಗಳಿಗೆ ನೈತಿಕ ಸ್ಥೈರ್ಯವಾಗಿ ನಿಲ್ಲಲಿಲ್ಲ ಎಂದರೆ ಅತಿಶಯೋಕ್ತಿಯಲ್ಲ!

ತನ್ನ ಕಾಲದದ ಅಭಿವೃದ್ದಿಯ ಮಾದರಿಗಳನ್ನು ಹಿಡಿದು ಜನರ ಮುಂದೆ ಹೋಗಬೇಕು ಎಂಬ ಸಾಮಾನ್ಯ ಪ್ರಜ್ಞೆಯೂ ಬಿಜೆಪಿಗಿಲ್ಲದೆ ಹೋದದ್ದು ವಿಪರ್ಯಾಸ! ಅಧಿಕಾರ ಮತ್ತು ದುಡ್ಡಿನ ಸೊಕ್ಕು ಬಿಜೆಪಿಯ ಮೈಮನದಲ್ಲಿ ಹಾಸುಹೊಕ್ಕಿದ್ದು ಸುಳ್ಳು ಅಂತೀರಾ? ಅಷ್ಟಕ್ಕೂ ಜನಪ್ರಿಯ ಯಾವ ಯೋಜನೆಗಳೂ ಬಿಜೆಪಿ ಸರಕಾರದಿಂದ ಬರಲೇ ಇಲ್ಲ. ಮಂತ್ರಿಗಳು ಯಾರೂ ದಕ್ಷರಾಗಿ ಕಾಣಿಸಲೇ ಇಲ್ಲ. ಕಮಿಷನ್ ಲೂಟಿ ಮಾಡಿ ಹಣ ಹೊಡೆಯುವುದರ ಬಿಜೆಪಿ ಹೆಚ್ಚಿನ ಮಂತ್ರಿಗಳು ಮುಳುಗಿಹೋದರು. ಇದು ಸಾಕಾಗದೆ ಮಂತ್ರಿಗಿರಿಗಾಗಿ ಲಾಭಿ ನಡೆಸುವ ಕಾರ್ಯಕ್ಕೆ ಮುಂದಾದರೇ ವಿನಾ ಪಕ್ಷಕ್ಕೆ, ಆರಿಸಿ ಕಳಿಸಿದ ಕ್ಷೇತ್ರಕ್ಕೆ ನಿಷ್ಠಾ ವಂತರಾಗಿರಲು ಪ್ರಯತ್ನಿಸಲಿಲ್ಲ. ಜನರ ಬೇಕು-ಬೇಡಗಳಿಗೆ ಒದಗಲಿಲ್ಲ.

ಇವೆಲ್ಲವೂ ಸೋಲಿಗೆ ಕಾರಣವಲ್ಲದೆ ಇನ್ನೇನಾದೀತು? ಮೊದಲೆರಡು ವರ್ಷ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕರೋನಾ ಸಂಕಷ್ಟದಿಂದ ಪಾರು ಮಾಡುವುದಕ್ಕೇ ಹೆಣಗಿದರೇ ವಿನಾ ಅವರಿಂದಲೂ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಆನಂತರ ಅವರನ್ನು ಕೆಳಗಿಳಿಸಲಾಯಿತು. ಇದನ್ನೇ ಕಾಂಗ್ರೆಸ್ ಬಹುದೊಡ್ಡ ಅಸವಾಗಿ ಚುನಾವಣೆಯ ಸಂದರ್ಭ ದಲ್ಲಿ ಎನ್ ಕ್ಯಾಶ್ ಮಾಡಿ ಸಫಲವಾಯಿತು. ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡಿಗೆ ಮನಸೋತು ಜನತೆ ಓಟು ಹಾಕಿದ್ದು ಕೂಡ ಸುಳ್ಳಲ್ಲ!