Friday, 22nd November 2024

ಸತತ 100 ಗಂಟೆಗಳ ಕಾಲ ಅಡುಗೆ: ಗಿನ್ನೆಸ್ ವಿಶ್ವ ದಾಖಲೆ

ಅಬುಜಾ: ನೈಜೀರಿಯಾದ ಯೂಟ್ಯೂಬರ್ ಹಾಗೂ ಬಾಣಸಿಗ ಹಿಲ್ಡಾ ಬಾಸಿ ಅವರು 100 ಗಂಟೆಗಳ ಕಾಲ ನಿರಂತರ ಅಡುಗೆ ಮಾಡುವ ಮೂಲಕ ಹೊಸ ಜಾಗತಿಕ ದಾಖಲೆ ನಿರ್ಮಿಸಿದ್ದಾರೆ.

ಕಳೆದ ಗುರುವಾರದಿಂದ ಅಡುಗೆ ಮಾಡುತ್ತಿದ್ದ ಅವರು ಪ್ರಸ್ತುತ ದಾಖಲೆ ಮುರಿದಿದ್ದಾರೆ. 2019 ರಲ್ಲಿ ಭಾರತೀಯ ಬಾಣಸಿಗರಾದ ‘ಲತಾ ಟಂಡನ್’ ಅವರು ನಿರ್ಮಿಸಿದ 87 ಗಂಟೆ 45 ನಿಮಿಷಗಳ ಗಿನ್ನೆಸ್ ವಿಶ್ವ ದಾಖಲೆಯನ್ನು ಇವರು ಪುಡಿಗಟ್ಟಿದ್ದಾರೆ.

ಸೋಮವಾರ ನೈಜೀರಿಯಾದ ವಾಣಿಜ್ಯ ಕೇಂದ್ರವಾದ ಲಾಗೋಸ್‌ನ ಲೆಕ್ಕಿ ಪ್ರದೇಶದಲ್ಲಿ ಬಾಸಿ 100 ಗಂಟೆಗಳ ಕಾಲ ಸತತವಾಗಿ ಅಡುಗೆ ಮಾಡಿದರು. ಕೆಲವು ನಿಮಿಷಗಳ ನಂತರ ಆಕೆ ಅಡುಗೆ ಮಾಡುವುದನ್ನು ನಿಲ್ಲಿಸಿದಾಗ ಸ್ಥಳದಲ್ಲಿ ನೆರೆದಿದ್ದ ಸಾವಿರಾರು ಜನರು ಹರ್ಷ ವ್ಯಕ್ತಪಡಿಸಿದರು.

ಅಡುಗೆ ಮಾಡುವ ದಾಖಲೆಯನ್ನು ಮುರಿದ ಹಿಲ್ಡಾ ಬಾಸಿ ಪ್ರಯತ್ನದ ಬಗ್ಗೆ ಗಿನ್ನಿಸ್ ವಿಶ್ವ ದಾಖಲೆ ಪುಟದಲ್ಲಿ ಟ್ವೀಟ್ ಮಾಡಲಾಗಿದೆ.

“ದಾಖಲೆಯನ್ನು ಅಧಿಕೃತವಾಗಿ ದೃಢೀಕರಿಸುವ ಮೊದಲು ನಾವು ಮೊದಲು ಎಲ್ಲಾ ಪುರಾವೆಗಳನ್ನು ಪರಿಶೀಲಿಸಬೇಕಾಗಿದೆ” ಎಂದು ಜಾಗತಿಕ ಬ್ರ್ಯಾಂಡ್ ಹೇಳಿದೆ. ದಾಖಲೆ ಯನ್ನು ಮುರಿಯಲು ಪ್ರಯತ್ನಿಸುವ ಮೂಲಕ ಹಿಲ್ಡಾ ಬಾಸಿ ಅವರು ನೈಜೀರಿ ಯಾದ ಜನರು ಎಷ್ಟು ಕಷ್ಟಪಟ್ಟು ದುಡಿಯುತ್ತಾರೆ ಮತ್ತು ದೃಢನಿಶ್ಚಯದಿಂದ ಕೂಡಿರುತ್ತಾರೆ ಎಂಬುವುದನ್ನು ತೋರಿಸಲು ಬಯಸಿದ್ದರು ಎಂದು ಹೇಳಿದೆ.

ಗಂಟೆಗೆ ಕೇವಲ ಐದು ನಿಮಿಷಗಳ ವಿರಾಮವನ್ನು ಪಡೆದಿದ್ದಾರೆ. 12 ಗಂಟೆಗಳ ನಂತರ ಕೇವಲ ಒಂದು ಗಂಟೆಯಲ್ಲಿ ಸ್ನಾನ ಹಾಗೂ ವೈದ್ಯಕೀಯ ತಪಾಸಣೆ ಪೂರ್ಣಗೊಳಿಸಿದ್ದರು.