Friday, 27th December 2024

ಗುವಾಹಟಿ ಟೀ: 165 ಮಿಲಿಯನ್ ಕೆಜಿ ಪುಡಿ ಮಾರಾಟ

ಗುವಾಹಟಿ: ಅಸ್ಸಾಂ ತನ್ನ ವಿಶಿಷ್ಟ ರುಚಿಕರವಾದ ಟೀಗೆ ಪ್ರಸಿದ್ದ. ಇಲ್ಲಿನ ಟೀಗೆ ಮನ ಸೋಲದ ಚಹಾ ಪ್ರಿಯರಿಲ್ಲ.

ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ 2022-2023ರ ಹಣಕಾಸು ವರ್ಷದಲ್ಲಿ ರೂ 3,300 ಕೋಟಿಗೂ ಹೆಚ್ಚು ಮೌಲ್ಯದ ಅಸ್ಸಾಂ ಚಹಾ ಪುಡಿ (ಟೀ) ಮಾರಾಟವಾಗಿದೆ ಎಂದು ಗುವಾಹಟಿ ಟೀ ಹರಾಜು ಕೇಂದ್ರದ ಅಧಿಕೃತ ಮಾಹಿತಿ ನೀಡಿದೆ.

2022-23ರ ಅವಧಿಯ ಚಹಾ ಹರಾಜು ಕೇಂದ್ರದಲ್ಲಿ ಪ್ರತಿ ಕೆಜಿ ಪುಡಿಗೆ 191.26 ರೂ.ವಿನಂತೆ ಸುಮಾರು 165 ಮಿಲಿಯನ್ ಕೆಜಿ ಚಹಾ ಪುಡಿ ಮಾರಾಟ ಮಾಡಲಾಗಿದೆ.

ಗುವಾಹಟಿ ಟೀ ಹರಾಜು ಖರೀದಿದಾರರ ಸಂಘದ (ಜಿಟಿಎಬಿಎ) ಕಾರ್ಯದರ್ಶಿ ದಿನೇಶ್ ಬಿಹಾನಿ ಮಾಹಿತಿ ನೀಡಿದ್ದಾರೆ.

2022-23 ರ ವರ್ಷದಲ್ಲಿ 3,300 ಕೋಟಿ ಮೌಲ್ಯದ ಸುಮಾರು 165 ಮಿಲಿಯನ್ ಕೆಜಿ ಚಹಾ ಪುಡಿಯನ್ನು ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ ಮಾರಾಟ ಮಾಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹರಾಜಿನ ಸರಾಸರಿ ಬೆಲೆ ಪ್ರತಿ ಕೆಜಿಗೆ 8.10 ರೂ.ವರೆಗೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ವಿಶೇಷ ಟೀ ಮನೋಹರಿ ಗೋಲ್ಡನ್ ಟೀ ಕೆಜಿಗೆ 99,999 ರೂ.ಗೆ ಹರಾಜಾಗಿತ್ತು. ಗುವಾಹಟಿ ಟೀ ಹರಾಜು ಕೇಂದ್ರ ದಲ್ಲಿ ಸಾಂಪ್ರದಾಯಿಕ ಚಹಾ ಪುಡಿ ಸುಮಾರು 5,100 ರೂ.ಗೆ ಹರಾಜು ಮಾಡಲಾಗಿದೆ. ಹಾಗೆ ಜಾಗತಿಕ ಮಟ್ಟದಲ್ಲಿ ಅಸ್ಸಾಂ ಚಹಾಕ್ಕೆ ಬೇಡಿಕೆ ಹೆಚ್ಚುತ್ತಿದೆ. ಕಳೆದ ಎರಡು-ಮೂರು ವರ್ಷಗಳಲ್ಲಿ, ರಫ್ತುದಾರರ ಬೇಡಿಕೆಗಳು ಕೂಡ ಹೆಚ್ಚಾಗಿವೆ.

ಈ ಹಣಕಾಸು ವರ್ಷದಲ್ಲಿ ಸಹ ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ ಹೆಚ್ಚಿನ ಚಹಾ ಪುಡಿ ಮಾರಾಟವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ದಿನೇಶ್ ಬಿಹಾನಿ ಹೇಳಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ಗುಹಾವಟಿ ಟೀ ಹರಾಜು ಕೇಂದ್ರ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಮನೋಹರಿಯೆಂಬ ಗೋಲ್ಡ್​ ಚಹಾ ಪುಡಿ ಬರೋಬ್ಬರಿ 1.15 ಲಕ್ಷ ರೂಗೆ ಮಾರಾಟವಾಗಿದೆ.

ಅಸ್ಸಾಂನ ಈ ಪ್ರಸಿದ್ಧ ಟೀ ಪುಡಿಯನ್ನು ಹೈದರಾಬಾದ್‌ನ ಹೋಟೆಲ್ ಉದ್ಯಮಿ ಕೆ ಬಾಬುರಾವ್ ಜಿಟಿಎಸಿ ನಡೆಸಿದ ಹರಾಜಿನಲ್ಲಿ 1.15 ಲಕ್ಷ ರೂಪಾಯಿಗಳ ದಾಖಲೆ ಬೆಲೆಗೆ ಖರೀದಿಸಿದ್ದಾರೆ.