ತುಮಕೂರು: ಸಿಎಸ್ ಫೌಂಡೇಷನ್ ಪರೀಕ್ಷೆಯಲ್ಲಿ ವಿದ್ಯಾನಿಧಿ ಕಾಲೇಜಿನ ಐದುಮಂದಿ ವಿದ್ಯಾರ್ಥಿಗಳು ಉತ್ತಮ ನಿರ್ವಹಣೆ ತೋರಿ ಮುಂದಿನ ಹಂತಕ್ಕೆ ಅರ್ಹತೆಯನ್ನು ಪಡೆದು ಕೊಂಡಿದ್ದಾರೆ.
ಕುಶಾಲ್ ಕಂಕರಿಯಾ (166), ಶಬಾದಿ ನೇಹಾ (146), ಸಂಜನಾ ಎಲ್.ಎಸ್. (145), ಪ್ರಿಯಾಂಕಾ ಪಿ.ಜಿ. (132), ಭವಾನಿ ಎಸ್. (124) ಹರ್ಷಿತ್ ಜೆ. (100) ಅಂಕಗಳನ್ನು ಗಳಿಸಿ ಈ ಸಾಧನೆಯನ್ನು ತೋರಿದ್ದಾರೆ.
ಪಿಯುಸಿ ಹಂತದಿಂದಲೇ ವೃತ್ತಿಪರತೆಯನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದೇವೆ. ಪಠ್ಯದೊಂದಿಗೆ ಸಿಎ ಮತ್ತು ಸಿಎಸ್ ಫೌಂಡೇಷನ್ ತರಗತಿಗಳನ್ನು ನಡೆಸಿ, ಅದಕ್ಕೆ ಪೂರಕವಾದ ಕಲಿಕೆಗೆ ಅನುವು ಮಾಡಿ ಕೊಟ್ಟಿರುವುದನ್ನು ವಿದ್ಯಾರ್ಥಿಗಳು ಧನಾತ್ಮಕವಾಗಿ ಸ್ವೀಕರಿಸಿದ್ದಾರೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ. ಪದವಿ ಮುಗಿಯುವ ಹಂತದಲ್ಲಿ ವಿದ್ಯಾರ್ಥಿಗಳು ಸಿಎಸ್ ಪ್ರೊಫೆಷನಲ್ ಪರೀಕ್ಷೆ ತೆಗೆದು ಕೊಳ್ಳಲು ಸಿದ್ಧರಾಗಿರುತ್ತಾರೆ. ಇತರ ವಿದ್ಯಾರ್ಥಿಗಳು ಇನ್ನೂ ಬದುಕಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಷ್ಟರಲ್ಲಿ ಇಂತಹ ಮಕ್ಕಳು ತಮ್ಮ ಕಾಲ ಮೇಲೆ ನಿಂತಿರುತ್ತಾರೆ ಎಂಬುದು ಎಲ್ಲ ವಿದ್ಯಾರ್ಥಿಗಳಿಗೂ ಸ್ಫೂರ್ತಿ ದಾಯಕವಾಗಲಿ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಶ್ಲಾಘಿಸಿದರು.
ಪ್ರಥಮ ಪಿಯುಸಿಗೆ ಸೇರುವ ಹಂತದಲ್ಲಿಯೇ ನಮಗೆ ಈ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತಿಳಿಸಿಕೊಟ್ಟಿರುವುದಲ್ಲದೇ ಪ್ರತೀವಾರವೂ ಹೆಚ್ಚುವರಿಯಾಗಿ ಸಿಎ, ಸಿಎಸ್ ಬೋಧನಾ ತರಗತಿಗಳನ್ನು ನಡೆಸುತ್ತಿದ್ದರು. ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡಾಗ ಯಾವುದೇ ಒತ್ತಡವಿಲ್ಲದಂತೆ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗುತ್ತದೆ ಎಂಬುದನ್ನು ಅರ್ಥೈಸಿದರು. ನಮ್ಮ ಗುರಿಯನ್ನು ಒಂದು ಹೆಜ್ಜೆ ಹತ್ತಿರವಾಗಿಸಿಕೊಂಡ ಬಗ್ಗೆ ಹೆಮ್ಮೆಯೆನಿಸುತ್ತದೆ. ಇದಕ್ಕೆ ಕಾರಣವೆನಿಸಿದ ನಮ್ಮ ವಿದ್ಯಾನಿಧಿ ಕಾಲೇಜಿಗೆ ನಾವು ಆಭಾರಿಗಳಾಗಿದ್ದೇವೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಧಕರನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲ ಸಿದ್ದೇಶ್ವರಸ್ವಾಮಿ ಎಸ್.ಆರ್., ತರಬೇತುದಾರರಾದ ಸಿಎಸ್. ಪ್ರೇಮ್, ಜೆ.ಪಿ. ಸುಧಾಕರ್ ಮತ್ತು ಉಪನ್ಯಾಸಕವೃಂದದವರು ಉಪಸ್ಥಿತರಿದ್ದರು.