Sunday, 24th November 2024

ಪಬ್’ಜಿ ನಿಷೇಧ ಯಾರಿಗೆ ನಷ್ಟ ?

ಬಡೆಕ್ಕಿಲ ಪ್ರದೀಪ

ಟೆಕ್ ಟಾಕ್

ಕಳೆದ ಒಂದೆರಡು ತಿಂಗಳಲ್ಲಿ ಚೀನಾದ ನೂರಾರು ಆ್ಯಪ್ ಗಳನ್ನು ನಮ್ಮ ಸರಕಾರ ನಿಷೇಧಿಸಿತು. ಅದರಲ್ಲಿ ಪಬ್‌ಜಿ ಎಂಬ ಅತಿ ಚಟಬೆಳೆಸುವ ಮೊಬೈಲ್ ಆಟವೂ ಒಂದು. ಅದನ್ನು ಆಡುವ ಚಟಕ್ಕೆ ಬಿದ್ದವರು, ಈಗ ಅದಿಲ್ಲದೇ ಏನು ಮಾಡುತ್ತಿದ್ದಾರೆ? ಪಬ್‌ಜಿ ಬ್ಯಾನ್‌ನಿಂದ ಬೇರಾವ ಗೇಮಿಂಗ್ ಕಂಪನಿ ಲಾಭ ಗಳಿಸೀತು? ಟಿಕ್‌ಟಾಕ್ ಇತ್ಯಾದಿ ಆ್ಯಪ್‌ಗಳ ಬ್ಯಾನ್‌ಗಳ ನಂತರ ಯುವಜನತೆಯನ್ನು ಮೊಬೈಲ್ ಸ್ಕ್ರೀನಿಗೆ ಅಂಟಿ ಹಿಡಿಸಿದ್ದ ಪಬ್‌ಜಿ ಬ್ಯಾನ್ ಆಗಿದ್ದೂ ಆಯ್ತು, ಇದೀಗ ಒಂದೊಂದಾಗಿ ಇದರ ಪರಿಣಾಮಗಳು ಹೊರಬರುತ್ತಿವೆ.

ಒಂದೆಡೆ ಕಂಪೆನಿ ಹೇಗೆ ನಷ್ಟವನ್ನ ನುಭವಿಸಲಿದೆ ಅನ್ನುವುದಾದರೆ, ಉಳಿದ ಕಂಪೆನಿಗಳು ಇದರಿಂದ ಯಾವ ರೀತಿ ಲಾಭ ಪಡೆದುಕೊಳ್ಳಲಿದೆ ಎನ್ನುವುದು ಇನ್ನೊಂದೆಡೆ. ಇದರಿಂದಾಗಿ ಭಾರತದ ಮೊಬೈಲ್ ಗೇಮಿಂಗ್ ಉದ್ಯಮ ಯಾವ ರೂಪವನ್ನು ಪಡೆದುಕೊಳ್ಳಲಿದೆ ಅನ್ನುವುದೂ ಕುತೂಹಲಕಾರಿ. ಇದೆಲ್ಲದರ ನಡುವೆ, ಪಬ್‌ಜಿ ಕೇವಲ ಒಂದು ಗೇಮ್ ಆಗಿದ್ದು ಅದನ್ನು ಆಟವಾಗಿ ಆಡಿದ್ದಿದ್ದರೆ ಇದರ ಪರಿಣಾಮ ಇಷ್ಟೊಂದಿರ ಲಿಲ್ಲ. ಈ ಬ್ಯಾನ್‌ನಿಂದಾಗಿ ಮನನೊಂದಿರುವ ದೊಡ್ಡ ಸಂಖ್ಯೆಯ ಯುವ ಪೀಳಿಗೆ ಇದೆ ಎನ್ನುವ ನಿರೀಕ್ಷಿತ, ಆದರೂ ಆಘಾತಕಾರಿ ವಿಷಯ ಸಹ ಇದೆ.

ಒಬ್ಬರ ನಷ್ಟ ಇನ್ನೊಬ್ಬರ ಲಾಭ ಇದು ಎಲ್ಲೆಡೆಯೂ ಸಹಜ. ಗೇಮಿಂಗ್ ಲೋಕದಲ್ಲಿ ದೊಡ್ಡ ಪಾರುಪತ್ಯ ಮೆರೆಯುತ್ತಿದ್ದ ಪಬ್‌ಜಿ ಬ್ಯಾನ್ ಆಗುತ್ತಿದ್ದಂತೆ, ಅದರ ಹತ್ತಿರದ ಪ್ರತಿಸ್ಪರ್ಧಿ ಕಾಲ್ ಆಫ್ ಡ್ಯೂಟಿ ಅನ್ನುವ ಗೇಮ್, ಮೊದಲು ದಿನಕ್ಕೆ ಆರೋ ಏಳೋ ಸಾವಿರ ಡೌನ್‌ಲೋಡ್‌ಗಳನ್ನು ಕಾಣುತ್ತಿದ್ದರೆ, ಇದೀಗ ಸರಾಸರಿ 67 ಸಾವಿರ ಡೌನ್‌ಲೋಡ್‌ಗಳನ್ನು ನೋಡುತ್ತಿದೆ. ಅದನ್ನು ಆಡುವವರ ಸಂಖ್ಯೆ 2 ಲಕ್ಷದಿಂದ, 4.8 ಲಕ್ಷಕ್ಕೇರಿದೆ ಎಂದಿದೆ. ಈ ಗೇಮ್ ಅನ್ನು ಅಭಿವೃದ್ಧಿಪಡಿಸಿದ ಸಂಸ್ಥೆ. ಆದರೆ ಇದು, ಪಬ್‌ಜಿಗಿದ್ದ ಸುಮಾರು 5 ಕೋಟಿ ದೈನಂದಿನ ಆಟಗಾರರಿಗೆ ಹೋಲಿಸಿದರೆ ಏನೂ ಅಲ್ಲ!

ಟೆನ್ಸೆೆಂಟ್‌ಗೆಷ್ಟು ನಷ್ಟ?

ಬ್ಯಾನ್ ನಿಂದಾಗಿ ಬೇರೆ ಗೇಮ್ ಆಡುವ ಆಟಗಾರರ ಸಂಖ್ಯೆ ಜಾಸ್ತಿಯಾಗಿರುವುದು ಒಂದೆಡೆಯಾದರೆ, ಪಬ್‌ಜಿ ಮೊಬೈಲ್ ನಡೆಸುವ ಚೀನಾ ಮೂಲದ ಟೆನ್ಸೆೆಂಟ್ ಕಂಪೆನಿಗೆ ಸುಮಾರು ಎರಡು ಶೇಕಡಾದಷ್ಟು ಅಂದರೆ ಸರಿಸುಮಾರು 13 ರಿಂದ 14 ಶತಕೋಟಿ ಡಾಲರ್‌ನಷ್ಟು ಆರ್ಥಿಕ ನಷ್ಟ ಉಂಟಾಗುತ್ತಿದೆ ಎನ್ನಲಾಗುತ್ತಿದೆ. ಇನ್ನು ಪಬ್‌ಜಿಯ ಒಟ್ಟೂ ಡೌನ್‌ಲೋಡ್‌ಗಳ ಪೈಕಿ 24 ಶೇಕಡಾದಷ್ಟು ಭಾರತದಲ್ಲೇ ಆಗಿತ್ತು! ಕಳೆದ ತಿಂಗಳು ಅಮೆರಿಕ ಇದೇ ಟೆನ್ಸೆೆಂಟ್ ನಡೆಸುವ ಇನ್ನೊಂದು ಆಪ್ ವಿಚ್ಯಾಟ್ ‌ಅನ್ನು ಬ್ಯಾನ್ ಮಾಡಿದಾಗ, ಸುಮಾರು 66 ಶತಕೋಟಿಯಷ್ಟನ್ನು ಅಂದರೆ ಒಟ್ಟೂ ಶೇರುಗಳ 10 ಶೇಕಡಾದಷ್ಟನ್ನು ಕಳೆದು ಕೊಂಡಿತ್ತು.

ಗೇಮಿಂಗ್ ಲೋಕದಲ್ಲೇ ಬದಲಾವಣೆ ಮೊಬೈಲ್ ಗೇಮಿಂಗ್‌ಗೇ ಹುಚ್ಚೆದ್ದುಹೋಗುವ ಯುವಜ ನಾಂಗದ ದೊಡ್ಡ ಸಾಲೊಂದನ್ನು ಕಣ್ಣೆದುರು ನಿಲ್ಲಿಸಿದ ಪಬ್‌ಜಿ ಹೇಗಿತ್ತು ಎಂದರೆ, ಗೇಮ್ ಅಂದರೆ ಪಬ್‌ಜಿ, ಪಬ್‌ಜಿ ಅಂದರೆ ಮಾತ್ರ ಗೇಮ್ ಅನ್ನೋ ಥರ. ಪಬ್‌ಜಿ ಗೇಮ್ ಮೊಬೈಲ್‌ನಲ್ಲಿ ಡೌನ್‌ಲೋಡ್ ಹಾಗೂ ರನ್ ಆಗ ಬೇಕಿದ್ದರೆ ಸ್ವಲ್ಪ ಹೆಚ್ಚಿನ ಸಾಮರ್ಥ್ಯ ಬೇಕಿತ್ತಾದ್ದ ರಿಂದ, ಜನ ತಮ್ಮ ಫೋನ್ ಅಪ್‌ಗ್ರೇಡ್ ಮಾಡುವುದು ಅಥವಾ ಅದೇ ಸಾಮರ್ಥ್ಯದ ಫೋನ್‌ಗಳಿಗಾಗಿ ತವಕಿಸುವುದು ಸಾಮಾನ್ಯ ವಾಗಿತ್ತು. ಇನ್ನು ಇದೇ ಕಾರಣ ದಿಂದಾಗಿ ಈ ಫೀಚರ್‌ಗಳನ್ನು ಅಥವಾ ಸ್ಪೆೆಸಿಫಿಕೇಶನ್‌ಗಳನ್ನು ಹೊಂದಿರುವ ಫೋನ್‌ಗಳನ್ನು ಅಭಿವೃದ್ಧಿ ಪಡಿಸಿದ ಕಂಪೆನಿಗಳು ಒಂದೋ ಆ ಮಾಡೆಲ್ ಗಳನ್ನು ಲಾಂಚ್ ಮಾಡಿವೆ ಅಥವಾ ಮಾಡುವ ತಯಾರಿ ಯಲ್ಲಿದ್ದವು. ಆದರೀಗ ಈ ರೀತಿಯ ಬ್ಯಾನ್‌ನಿಂದ ಅವರೆಲ್ಲಾ ಪ್ಲಾನ್‌ಗಳೂ ಮೇಲೆ ಕೆಳಗಾಗಿದೆ. ಜಾಸ್ತಿ ವೇಗದ ಪ್ರಾಸೆಸರ್, ಹೆಚ್ಚು ರಿಫ್ರೆಶ್‌ರೇಟ್ ಹೊಂದಿರುವ ಸ್ಕ್ರೀನ್ ಗಳು, ಲಿಕ್ವಿಡ್ ಕೂಲಿಂಗ್ ಅಥವಾ ಆಂತರಿಕ ಫ್ಯಾನ್‌ಗಳನ್ನು ಹೊಂದಿ ರುವ ಫೋನ್‌ಗಳನ್ನು ಲಾಂಚ್ ಮಾಡಿದವರೀಗ ತಲೇ ಮೇಲೆ ಕೈ ಇಟ್ಟುಕೊಳ್ಳು ವಂತಾಗಿದೆ.

ಪಬ್‌ಜಿ ಮೊಬೈಲ್ ಆಟದ ಬ್ಯಾನ್‌ನಿಂದಾಗಿ, ಮೊಬೈಲ್ ಗೇಮಿಂಗ್ ಮಾರ್ಕೆಟ್‌ನ ಭವಿಷ್ಯ ಏನಾಗುತ್ತದೆ ನೋಡೋಣ. ಹೊಸ ರೀತಿಯ ಚಿಪ್‌ಸೆಟ್‌ಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಕ್ವಾಲ್‌ಕಾಮ್ ಹಾಗೂ ಮೀಡಿಯಾಟೆಕ್ ಕೂಡ ನಷ್ಟದ ನಿರೀಕ್ಷೆ ಯಲ್ಲಿದ್ದಾರೆ. ಈ ಗೇಮ್ ಗೋಸ್ಕರ ಡಿಸೈನ್ ಆದ ಫೋನ್‌ಗಳ ಮಾರಾಟದಲ್ಲಿ ಇಳಿಕೆ ಕಂಡುಬರುವ ಸಾಧ್ಯತೆ ಇದ್ದರೂ, ಒಟ್ಟಾರೆ ಫೋನ್ ಸೇಲ್ಸ್ ‌‌ಗೆ ಏನೂ ಪರಿಣಾಮ ಆಗದು ಎನ್ನುತ್ತಿದ್ದಾರೆ ಮಾರುಕಟ್ಟೆ ತಜ್ಞರು.

ಪಬ್‌ಜಿ ಚಟ ಬೆಳೆಸಿಕೊಂಡವರು
ಪಬ್‌ಜಿ ಗೇಮ್ ಆಡುತ್ತಿದ್ದವರ ಮೇಲೆ ಹೇಗೆ ಅದು ಪರಿಣಾಮ ಬೀರುತ್ತಿತ್ತು ಎನ್ನುವುದು ಕಳವಳಕಾರಿ ಅಂಶ.
ಉಳಿದ ಚಟಗಳ ಹಾಗೇ ಇದೂ ಒಂದು ಚಟವಾಗಿದ್ದು, ಇದರ ದುಷ್ಪರಿಣಾಮಗಳು ತುಂಬಾನೇ ಇರುವುದು
ಒಂದೆಡೆಯಾದರೆ, ಇದೀಗ ಒಮ್ಮೆಲೇ ಈ ಗೇಮ್ ಬ್ಯಾನ್ ಆಗಿರುವುದರಿಂದ ಇದರ ಹೊಸ ಅಪ್ಡೇಟ್‌ಗಳು ಬಾರದೆ, ಹೊಸ ಮ್ಯಾಪ್ ಹಾಗೂ ಯುದ್ಧೋಪಕರಣಗಳಿಲ್ಲದೆ ಆಡುವುದು ಹೇಗೆ ಅನ್ನುವ ಚಿಂತೆಯಲ್ಲಿ ಇದರ ಅಡಿಕ್ಟ್ ಗಳು ಇದ್ದಾರೆ. ಆ ಗುಂಗಿನಿಂದ ಹೊರಬರುವುದಕ್ಕಾಗದೇ ಮಾನಸಿಕ ಹಿಂಸೆಯನ್ನನುಭವಿಸುವ ಸಾಧ್ಯತೆ ಇದ್ದು, ಅದನ್ನು ಗಮನಿಸಿದರೆ, ಮನೆಯವರು ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ಚಿಕಿತ್ಸೆೆಯನ್ನು ನೀಡಬೇಕಾದ ಅನಿವಾರ್ಯತೆ ಇದೆ.

ಗೇಮಿಂಗ್ ಡಿಸಾರ್ಡರ್ ಎನಿಸುವ ಈ ಚಟದಿಂದ ಉಂಟಾಗುವ ಅಸ್ವಸ್ಥತೆಗೆ ಮಾನಸಿಕ ತಜ್ಞರ ಸಲಹೆ, ಸಹಾಯ ಅಗತ್ಯ ಎನಿಸಿದೆ.