Thursday, 28th November 2024

ಕಣ್ಣು ಮತ್ತು ಮೂಢನಂಬಿಕೆ, ತಪ್ಪುಕಲ್ಪನೆಗಳು

ವೈದ್ಯ ವೈವಿಧ್ಯ

drhsmohan@gmail.com

ಗ್ರಾಮೀಣ ಜನತೆ ಕಾಯಿಲೆಯಾದಾಗ ಭೂತ ದೆವ್ವ ಪಿಶಾಚಿ ಎಂದು ಯಾವುದೋ ಕಲ್ಲಿಗೆ, ಮರದ ಬುಡಕ್ಕೆ, ಗುಡಿಗೆ ತೆಂಗಿನಕಾಯಿ ಒಡೆದು ಪೂಜೆ ಮಾಡಿಸಿ ಎಲ್ಲವೂ ಸರಿ ಹೋಗುತ್ತದೆ ಎಂದು ಕಾಯಿಲೆಯ ಆರಂಭದ ಸಮಯವನ್ನು ಅನಗತ್ಯ ವಾಗಿ ವ್ಯಯಿಸಿ ಉಲ್ಬಣಾವಸ್ಥೆಯ ಹಂತದಲ್ಲಿ ವೈದ್ಯರಲ್ಲಿಗೆ ಬಂದು ಕಾಯಿಲೆ ವಾಸಿಯಾಗಬೇಕೆಂದು ನಿರೀಕ್ಷಿಸುತ್ತಾರೆ.

ಭಾರತದಂತಹ ದೇಶದಲ್ಲಿ ಯಾವುದೇ ವಿಚಾರದಲ್ಲಿ ನಂಬಿಕೆಗಳು ಹಾಗೂ ಮೂಢನಂಬಿಕೆಗಳು ಇದ್ದೇ ಇರುತ್ತವೆ. ಅದೂ ಆರೋಗ್ಯದ ವಿಚಾರದಲ್ಲಿ ಆಯಾ ಪ್ರಾಂತ್ಯ, ಸ್ಥಳಕ್ಕನುಗುಣವಾಗಿ ಒಂದು ಜನಾಂಗದ ಸಾಮಾಜಿಕ, ಶೈಕ್ಷಣಿಕ ಮಟ್ಟಕ್ಕನು ಸಾರವಾಗಿ ಇವು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಸ್ತರದಲ್ಲಿ ಇರುತ್ತವೆ.

ಅಜ್ಞಾನ, ಕುರುಡುನಂಬಿಕೆ, ಬಡತನ, ಜನಸಂಖ್ಯಾ ಹೆಚ್ಚಳ – ಈ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿರುವ ನಮ್ಮ ಗ್ರಾಮೀಣ ಜನತೆ ಯಾವುದೇ ದೈಹಿಕ ವ್ಯತ್ಯಾಸ ಅಥವಾ ಸೋಂಕು ಅಥವಾ ಕಾಯಿಲೆಯಾದಾಗ ಭೂತ ದೆವ್ವ ಪಿಶಾಚಿ ಎಂದು ಯಾವುದೋ ಕಲ್ಲಿಗೆ, ಯಾವುದೋ ಮರದ ಬುಡಕ್ಕೆ ಅಥವಾ ಯಾವುದೋ ಗುಡಿಗೆ ತೆಂಗಿನಕಾಯಿ ಒಡೆದು ಪೂಜೆ ಮಾಡಿಸಿ ಎಲ್ಲವೂ ಸರಿ ಹೋಗುತ್ತದೆ ಎಂದು ಕಾಯಿಲೆಯ ಆರಂಭದ ಬಹುಮುಖ್ಯ ಸಮಯವನ್ನು ಅನಗತ್ಯವಾಗಿ ವ್ಯಯಿಸಿ ಕಾಯಿಲೆ ಉಲ್ಬಣಾವಸ್ಥೆಯ ಹಂತದಲ್ಲಿ ವೈದ್ಯರಲ್ಲಿಗೆ ಬಂದು ದಿಢೀರ್ ಎಂದು ಕಾಯಿಲೆ ವಾಸಿಯಾಗಬೇಕೆಂದು ನಿರೀಕ್ಷಿಸುತ್ತಾರೆ. ಉದಾಹರಣೆಗೆ ಕಾರ್ನಿಯದ ಸೋಂಕು.

೨೫ ವರ್ಷದ ಯುವತಿಗೆ ನಿಂಬೆ ಹಣ್ಣನ್ನು ಮಂತ್ರಿಸುವುದರಿಂದ ಹಿಡಿದು ಯಾವುದೋ ಪೂಜಾರಿ ಹೇಳಿದ ಎಂದು ವಿಶೇಷ ಪೂಜೆ ಮಾಡಿಸಿ ತಮ್ಮಲ್ಲಿದ್ದ ಹಣವನ್ನೆಲ್ಲ ಕಳೆದುಕೊಂಡು ಕೊನೆಯ ಪ್ರಯತ್ನವಾಗಿ ನೇತ್ರ ವೈದ್ಯರಲ್ಲಿಗೆ ಬಂದರೆ ಅಷ್ಟರಲ್ಲಿ ಸೋಂಕು ತೀವ್ರವಾಗಿ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ, ವೆಚ್ಚವೂ ಜಾಸ್ತಿ ಆಗುತ್ತದೆ. ಅದಕ್ಕಿಂತ ಮುಖ್ಯವಾಗಿ ಕಣ್ಣನ್ನು ಕಾಯಿಲೆ ಪೂರ್ವದ ಸ್ಥಿತಿಗೆ ತರಲು ಸಾಧ್ಯವಾಗುವುದಿಲ್ಲ. ಇದೇ ಯುವತಿ ಕಾಯಿಲೆ ಆರಂಭದ ದಿನವೇ ನೇತ್ರ ವೈದ್ಯರ ಸಲಹೆಯ ಮೇರೆಗೆಚಿಕಿತ್ಸೆ ಆರಂಭಿಸಿದ್ದರೆ ಒಂದೇ ವಾರದಲ್ಲಿಯೇ ಪೂರ್ಣ ಪ್ರಮಾಣದ ಗುಣ ಸಾಧ್ಯ. ಖರ್ಚೂ ಕಡಿಮೆ, ನಷ್ಟವೂ ಕಡಿಮೆ.

೩೦ ವರ್ಷದ ಪುರುಷನಿಗೆ ಕಣ್ಣು ಒಂದು ವಾರದಿಂದ ಕೆಂಪಾಗಿದೆ. ಬಹುಶಃ ಉಷ್ಣದಿಂದ ಹೀಗಾಗಿದೆ ಎಂದು ಈತ ಒಂದು ವಾರ ತಡವಾಗಿ ನೇತ್ರ ವೈದ್ಯರಲ್ಲಿ ಬಂದರು. ಆಗಲೇ ಒಂದು ಕಣ್ಣು ಆಂಶಿಕವಾಗಿ ಮಂಜು ಮಾಡಿತ್ತು ಈ ಕಾಯಿಲೆ. ಅದನ್ನು ಕಡಿಮೆ ಮಾಡಲು ದಿನಕ್ಕೆ ನಾಲ್ಕು ಮಾತ್ರೆ ಸೇವಿಸುವಂತೆ ಸೂಚಿಸಿದರೆ ಅಲೋಪತಿ ಮಾತ್ರೆಗಳು ದೇಹಕ್ಕೆ ಉಷ್ಣವಾಗುತ್ತದೆ ಎಂಬ
ತನ್ನದೇ ತರ್ಕದಲ್ಲಿ ಒಂದು ಮಾತ್ರೆ ಮಾತ್ರ ಸೇವಿಸಿ ಒಂದು ವಾರದ ನಂತರ ವೈದ್ಯರಲ್ಲಿಗೆ ಬಂದಾಗ, ಕಾಯಿಲೆ ತೀರಾ ಉಲ್ಬಾಣಾವಸ್ಥೆಗೆ ಹೋಗಿತ್ತು.

ಆತನನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ತರಹದ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಒದಗಿತು. ೩೫ ವರ್ಷದ ಒಬ್ಬರಿಗೆ ಕಣ್ಣು ಕೆಂಪಾಯಿತು. ಆಗ ಊರಿನಲ್ಲಿ ಬಹಳ ಜನರಿಗೆ ಕಣ್ಣು ಕೆಂಪಾಗಿದ್ದು ವಿವಿಧ ಔಷಧಗಳನ್ನು ಉಪಯೋಗಿಸುತ್ತಿದ್ದರು. ಕಣ್ಣಿನ ಹೊರಗಿನ ಪದರದ ಸೋಂಕಾದ ಕಂಜಕ್ಟವೈಟಿಸ್ ಇರಬೇಕೆಂದು ಇವರೂ ಅದೇ ಔಷಧಿಗಳನ್ನು ಉಪಯೋಗಿಸತೊಡಗಿದರು. ೧೦ ದಿನಗಳ ನಂತರ ಕಣ್ಣು ವಿಪರೀತ ಕೆಂಪಾಗಿ ದೃಷ್ಟಿ ಕಡಿಮೆ ಯಾದಾಗ ವೈದ್ಯರಲ್ಲಿ ಓಡಿ ಬಂದರು. ಅದು ತಾರಕೆಯ ಸೋಂಕು ಎಂಬ ಗಂಭೀರ ಕಾಯಿಲೆ ಎಂದು ವೈದ್ಯರು ತೀವ್ರ ತರಹದ ಚಿಕಿತ್ಸೆಗೆ ತೊಡಗಿದರು.

ಜನಸಾಮಾನ್ಯರಲ್ಲಿ ಕಣ್ಣು ಕೆಂಪಾಗಿದೆ ಎಂದ ಕೂಡಲೇ ಕಂಜಕ್ಟವೈಟಿಸ್ ಎಂದು ಅಲಕ್ಷಿಸಿ ತೀವ್ರ ತರಹದ ಪರಿಣಾಮಗಳನ್ನು ಎದುರಿಸಿದ ಉದಾಹರಣೆಗಳು ಹೇರಳವಾಗಿವೆ.

ತಪ್ಪು ಕಲ್ಪನೆ: ಹಾಗೆ ಕೆಂಗಣ್ಣು, ಕೆಂಪು ಕಣ್ಣು, ಕೋಳಿ ಕಣ್ಣು, ಮದ್ರಾಸ್ ಕಣ್ಣು ಎಂದು ವಿವಿಧ ರೀತಿಯಲ್ಲಿ ಕರೆಯಲ್ಪಡುವ ಕಣ್ಣಿನ ಕೆಂಪು ಕಣ್ಣಿನ ಹೊರಗಿನ ಪದರದ ಸೋಂಕಾದ ಕಂಜಕ್ಟವೈಟಿಸ್ ಕಾಯಿಲೆಯ ತತ್ಸಮವಾದ ಕನ್ನಡ ಪದವಾಗಿ ಬಳಸಲ್ಪಡು ತ್ತಿದೆ. ಅದು ಶುದ್ಧ ತಪ್ಪು. ಏಕೆಂದರೆ ಕೆಂಗಣ್ಣು ಒಂದು ರೋಗ ಲಕ್ಷಣವೇ ಹೊರತು ಒಂದು ಕಾಯಿಲೆಯಲ್ಲ (ಉದಾ: ಜ್ವರ ಹೇಗೆ ಕಾಯಿಲೆಯಲ್ಲ, ರೋಗಲಕ್ಷಣ ಮಾತ್ರ ಎಂದು ಹೇಳುತ್ತೇವೆಯೋ ಹಾಗೆ ).

ಕೆಂಗಣ್ಣು ಕಂಜಂಕ್ಟವೈಟಿಸ್ ಕಾಯಿಲೆ ಅಲ್ಲದೆ ಇನ್ನೂ ಎಷ್ಟೋ ವ್ಯಾಧಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಉದಾ: ಗ್ಲೊಕೋಮಾ, ತಾರಕೆಸುತ್ತಿನುರಿತ ಕಾರ್ನಿಯದ ಮೇಲಿನ ಹುಣ್ಣು ಇತ್ಯಾದಿ. ಅಲ್ಲದೆ ಹೆಚ್ಚಿನ ಸಂದರ್ಭಗಳಲ್ಲಿ ಈ ಕಂಜಕ್ಟವೈಟಿಸ್ ವೈರಸ್‌ನ
ಸೋಂಕಾದ್ದರಿಂದ ಏನೂ ತೀವ್ರ ಚಿಕಿತ್ಸೆ ಇಲ್ಲದೆ ಅದು ತನ್ನಷ್ಟಕ್ಕೆ ಗುಣವಾಗುವ ಸಾಧ್ಯತೆಗಳಿವೆ. ಆದರೆ ಮೇಲೆ ಹೆಸರಿಸಿದ ಕಾಯಿಲೆಗಳಿಗೆ ನಿರ್ದಿಷ್ಟವಾದ ಚಿಕಿತ್ಸೆಯನ್ನು ಆದಷ್ಟು ಶೀಘ್ರ ಕೈಗೊಳ್ಳಬೇಕು.

ರೂಢಿಯಲ್ಲಿರುವ ಕೆಲವು ತಪ್ಪು ಕಲ್ಪನೆಗಳು ಹಾಗೂ ಅವುಗಳ ವೈಜ್ಞಾನಿಕ ವಿವರಗಳು ಇಲ್ಲಿವೆ. ತಪ್ಪು ಕಲ್ಪನೆ ೧. ಕನ್ನಡಕವನ್ನು ಯಾವಾಗಲೂ ಧರಿಸುವುದರಿಂದ ಕನ್ನಡಕದ ನಂಬರ್ ಕಡಿಮೆಯಾಗುತ್ತದೆ.

ವಸ್ತು ಸ್ಥಿತಿ: ಕನ್ನಡಕವನ್ನು ಯಾವಾಗಲೂ ಧರಿಸುವುದರಿಂದ ನಂಬರ್ ಕಡಿಮೆಯಾಗುವುದಿಲ್ಲ. ಆದರೆ ಆತನ ಕಣ್ಣಿಗೆ ಉತ್ತಮ ದೃಷ್ಟಿ ಲಭ್ಯವಾಗುತ್ತದೆ. ಅದರಿಂದ ಆತನ ಕಣ್ಣಿಗೆ ಆಯಾಸವಾಗುವುದು ಕಡಿಮೆಯಾಗುತ್ತದೆ. ೨. ೪೦ ವರ್ಷ ಸುಮಾರಿಗೆ ಬರುವ ಚಾಳಿಸ್ ತೊಂದರೆಗೆ (ಸಮೀಪದಲ್ಲಿ ಸಣ್ಣ ಅಕ್ಷರಗಳು ಕಾಣಿಸುವುದಿಲ್ಲ) ಅಥವಾ ತುಂಬಾ ದೂರದ ವಸ್ತುಗಳು
ಕಾಣಿಸುವುದಿಲ್ಲ ಎಂಬ ದೃಷ್ಟಿದೋಷ ಇರುವವರಲ್ಲಿ ಕನ್ನಡಕಗಳು ಉಪಯೋಗವಾಗುತ್ತವೆ.

ವಸ್ತುಸ್ಥಿತಿ: ತಪ್ಪು. ಕನ್ನಡಕಗಳು ಇತರ ದೃಷ್ಟಿದೋಷಗಳಾದ ಅಸಮನಿಟ್ಟು ಮತ್ತು ಹೆಚ್ಚಿನ ನಂಬರಿನ ದೂರ ದೃಷ್ಟಿ – ಈ ದೋಷಗಳಲ್ಲಿ ಸಹಿತ ಅವಶ್ಯಕ. ಈ ಎರಡೂ ದೃಷ್ಟಿದೋಷಗಳಲ್ಲಿ ಕನ್ನಡಕ ಧರಿಸದಿದ್ದರೆ ವಿಪರೀತ ತಲೆನೋವು ಬರುವ
ಸಾಧ್ಯತೆ ಇದೆ. ೩. ಕಣ್ಣಿನ ವ್ಯಾಯಾಮ ಕೆಲವು ಮಾಡುವುದರಿಂದ ಹಾಗೂ ಕೆಲವು ಸಸ್ಯಜನ್ಯ ಔಷಧಿಗಳನ್ನು ಕಣ್ಣಿಗೆ
ಹಾಕುವುದರಿಂದ ಕನ್ನಡಕದ ನಂಬರ್‌ಗಳನ್ನು ಕಡಿಮೆ ಮಾಡಬಹುದು. ಅಲ್ಲದೆ ಕಾಲಕ್ರಮೇಣ ಕನ್ನಡಕ ಹಾಕುವುದನ್ನೇ ನಿಲ್ಲಿಸಬಹುದು.

ವಸ್ತು ಸ್ಥಿತಿ: ಈ ಮೇಲಿನ ಅಂಶಗಳನ್ನು ಸಾಬೀತುಪಡಿಸುವ ವೈಜ್ಞಾನಿಕ ಪುರಾವೆಗಳಿಲ್ಲ. ಕನ್ನಡಕದ ನಂಬರುಗಳನ್ನು ಕಡಿಮೆ ಮಾಡುವ ಯಾವ ಉಪಾಯಗಳೂ ಈವರೆಗೆ ಇಲ್ಲ. ೪. ಎಲ್ಲಾ ಅಂಗಾಂಶವನ್ನು ಮಾತ್ರೆಯ ರೂಪದಲ್ಲಿ ಅಥವಾ ಎಲ್ಲಾ ಅಂಗಾಂಶ ಇರುವ ಕ್ಯಾರೆಟ್ ಸೇವಿಸುವುದರಿಂದ ಕಣ್ಣಿನ ಎಲ್ಲಾ ತೊಂದರೆಗಳನ್ನು ಸರಿ ಮಾಡಿಕೊಳ್ಳಬಹುದು.

ವಸ್ತುಸ್ಥಿತಿ : ಎಲ್ಲಾ ಅಂಗಾಂಶ ಕಡಿಮೆ ಇರುವವರಲ್ಲಿ ಮಾತ್ರ ಎಲ್ಲಾ ಅಂಗಾಂಶವನ್ನು ಮಾತ್ರೆ ಅಥವಾ ತರಕಾರಿ ರೂಪದಲ್ಲಿ
ಕೊಡಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಅಂಗಾಂಶ ಕಡಿಮೆ ಇರುವ ಹುಡುಗರು ಅಥವಾ ರೋಗಿಗಳು ತುಂಬಾ ಕಡಿಮೆ.ಅನಗತ್ಯವಾಗಿ ಎಲ್ಲಾ ಅಂಗಾಂಶ ಸೇವಿಸುವುದರಿಂದ ಅದು ಯಕೃತ್ತಿನಲ್ಲಿ ಶೇಖರಗೊಂಡು ವಿವಿಧ ರೀತಿಯ
ಭೌತಿಕ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಕಣ್ಣಿನ ವೈದ್ಯರ ಸೂಕ್ತ ಸಲಹೆ ಇಲ್ಲದೆ ಎಲ್ಲಾ ಅಂಗಾಂಶವನ್ನು
ಹೆಚ್ಚು ಸೇವಿಸಬಾರದು. ವೈದ್ಯರು ಮತ್ತು ಕಣ್ಣಿನ ವೈದ್ಯರೇ ಅಲ್ಲದವರು ಕಣ್ಣಿನ ಕಾಯಿಲೆಯ ಬಗ್ಗೆ ತಮಗೆ ಏನೂ ತಿಳಿಯ ದಿದ್ದಾಗ ಅನವಶ್ಯಕವಾಗಿ ಎಲ್ಲಾ ಅಂಗಾಂಶ ಸೇವಿಸಲು ಸಲಹೆ ಕೊಡುತ್ತಾರೆ. ೫. ಓರೆಗಣ್ಣು, ಮೆಳ್ಳೆಗಣ್ಣು ಅಥವಾ ಕೋಸುಗಣ್ಣು ಶುಭ ಸೂಚಕ, ಹಾಗಾಗಿ ಇದನ್ನು ಚಿಕಿತ್ಸೆ ಮಾಡದೆ ಬಿಟ್ಟರೆ ಒಳ್ಳೆಯದು.

ವಸ್ತುಸ್ಥಿತಿ : ಈ ಅಭಿಪ್ರಾಯ ಸಂಪೂರ್ಣ ತಪ್ಪು. ಸುಮಾರು ಶೇಕಡ ೫೦ ರಷ್ಟು ಮೆಳ್ಳೆಗಣ್ಣನ್ನು ಸರಿಯಾದ ಕನ್ನಡಕ ಧರಿಸುವು ದರಿಂದಲೇ ಚಿಕಿತ್ಸೆ ಮಾಡಬಹುದು. ಮೆಳ್ಳೆಗಣ್ಣಿನ ಚಿಕಿತ್ಸೆಯನ್ನು ಮಗುವಿಗೆ ಆರರಿಂದ ಎಂಟು ವರ್ಷ ಆದಾಗ – ಈ ಅವಧಿ ಯಲ್ಲಿ ಚಿಕಿತ್ಸೆ ಮಾಡುವುದರಿಂದ ಫಲಪ್ರದವಾಗುತ್ತದೆ.ಇಲ್ಲದಿದ್ದರೆ ತುಂಬಾ ಓರೆ ಇರುವ ಕಣ್ಣಿನಲ್ಲಿ ದೃಷ್ಟಿ ಕಡಿಮೆ ಆಗುತ್ತಾ ಹೋಗುತ್ತದೆ. ತುಂಬಾ ವರ್ಷಗಳವರೆಗೆ ಚಿಕಿತ್ಸೆ ಇಲ್ಲದಿದ್ದರೆ ಅದು ದೃಷ್ಟಿವಿಹೀನವೂ ಆಗುತ್ತದೆ. ಹಾಗಾಗಿ ಮೆಳ್ಳೆಗಣ್ಣು
ಇರುವವರಲ್ಲಿ ಬೇಗ ಕಾಯಿಲೆ ಪತ್ತೆ ಹಚ್ಚಿ ಚಿಕಿತ್ಸೆ ಆದಷ್ಟೂ ಬೇಗನೆ ಕೈಗೊಳ್ಳುವುದು ತೀರಾ ಅವಶ್ಯಕ.

೬. ಕಣ್ಣನ್ನು ತಣ್ಣೀರಿನಿಂದ ತೊಳೆಯುವುದರಿಂದ, ನೀರನ್ನು ಕಣ್ಣಿನೊಳಗೆ ಚಿಮಿಕಿಸುವುದರಿಂದ ಕಣ್ಣನ್ನು ಬಹಳ ಸ್ವಚ್ಛವಾಗಿಟ್ಟು ಕೊಳ್ಳಬಹುದು.

ವಸ್ತು ಸ್ಥಿತಿ : ಹಾಗೆ ಮಾಡುವ ಅವಶ್ಯಕತೆ ಇಲ್ಲ. ಕೆಲವೊಮ್ಮೆ ಅಪಾಯಕಾರಿ ಕೂಡ. ಕಣ್ಣಿಗೆ ಬೇಕಾಗುವ ದ್ರವದ ಅಂಶ ಕಣ್ಣೀರಿನಿಂದ ೨೪ ಗಂಟೆಯೂ ತಡೆಯಿಲ್ಲದೇ ಲಭ್ಯವಾಗುತ್ತಿರುತ್ತದೆ. ಕೆಲವೊಮ್ಮೆ ನೀರಿನಲ್ಲಿರುವ ಬ್ಲೀಚಿಂಗ್ ಪೌಡರ್ ಕಣ್ಣಿನಲ್ಲಿ ಸ್ವಲ್ಪ ಪ್ರಮಾಣದ ರಾಸಾಯನಿಕ ಕ್ರಿಯೆಯನ್ನೂ ಉಂಟು ಮಾಡಬಹುದು.

೭. ನಿಂಬೆರಸ ಜೇನುತುಪ್ಪ ಕೆಲವು ಸಸ್ಯಜನ್ಯ ಎಣ್ಣೆಗಳು ಕೆಂಗಣ್ಣನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲವು.

ವಸ್ತುಸ್ಥಿತಿ : ಇದು ಸತ್ಯವಲ್ಲ. ಕೆಂಗಣ್ಣಿನ ರೋಗಲಕ್ಷಣವಿದ್ದಾಗ ಯಾವ ಕಾಯಿಲೆಯಿಂದ ಕೆಂಗಣ್ಣು ಆಗಿದೆ ಎಂದು ಮೊದಲು ಪತ್ತೆ
ಹಚ್ಚಬೇಕು, ಅದರ ಮೇರೆಗೆ ಚಿಕಿತ್ಸೆ ನಡೆಸಬೇಕು.

೮. ಹಲ್ಲುಗಳನ್ನು ಕೀಳುವುದರಿಂದ ಕಣ್ಣಿಗೆ ಸೋಂಕಾಗಬಹುದು ಅಥವಾ ದೃಷ್ಟಿ ಕಡಿಮೆ ಆಗಬಹುದು.

ವಸ್ತು ಸ್ಥಿತಿ : ಇದು ಸತ್ಯವಲ್ಲ, ಹಲ್ಲು ಕೀಳಿಸುವುದರಿಂದ ಕಣ್ಣಿಗೆ ಸೋಂಕಾಗುವುದೂ ಇಲ್ಲ. ದೃಷ್ಟಿ ಕಡಿಮೆಯಾಗುವುದೂ ಇಲ್ಲ.
೯. ಅಲೋಪತಿ ಅಲ್ಲದೆ ಬೇರೆ ಔಷಧಿಗಳನ್ನು ಹಾಕುವುದರಿಂದ ಕಣ್ಣಿನ ಪೊರೆಯನ್ನು ಗುಣಪಡಿಸಬಹುದು.

ವಸ್ತುಸ್ಥಿತಿ : ಇದುವರೆಗೆ ಕಣ್ಣಿನ ಪೊರೆ ಗುಣಪಡಿಸಲು ಶಸಕ್ರಿಯೆ ಅಲ್ಲದೆ ಬೇರೆ ರೀತಿಯ ಚಿಕಿತ್ಸೆ ಇಲ್ಲ. ೧೦. ಕಣ್ಣಿನ ಪೊರೆ ಸಂಪೂರ್ಣ ಬೆಳೆದಾಗ ಮಾತ್ರ ಶಸ್ತ್ರಕ್ರಿಯೆ ಮಾಡಬೇಕು.

ವಸ್ತುಸ್ಥಿತಿ : ಕೆಲವು ವರ್ಷಗಳ ಮೊದಲು ಈ ಪರಿಸ್ಥಿತಿ ಇತ್ತು. ಈಗ ಮಾಡುತ್ತಿರುವ ಆಧುನಿಕ ಕಣ್ಣಿನ ಶಸ್ತ್ರಕ್ರಿಯೆಗಳಲ್ಲಿ ಸಂಪೂರ್ಣವಾಗಿ ಬೆಳೆಯುವವರೆಗೆ ಕಾಯುವ ಅವಶ್ಯಕತೆ ಇಲ್ಲ. ಕಣ್ಣಿನ ದೃಷ್ಟಿ ಗಮನಾರ್ಹವಾಗಿ ಕಡಿಮೆಯಾದಾಗ ಶಸ್ತ್ರಕ್ರಿಯೆ
ಮಾಡಬಹುದು.

೧೧. ಸೂರ್ಯನನ್ನು ನೇರವಾಗಿ ನೋಡುವುದು ಹಾಗೂ ಸೂರ್ಯನ ಕಿರಣಗಳನ್ನು ದಿಟ್ಟಿಸುವುದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ರೀತಿ ಮಾಡುವುದರಿಂದ ಕನ್ನಡಕದ ನಂಬರ್‌ಗಳು ಕಡಿಮೆ ಆಗುತ್ತದೆ ಎಂದು ಸಲಹೆ ಕೊಡುತ್ತಾರೆ.

ವಸ್ತುಸ್ಥಿತಿ : ತೀರಾ ಅವೈಜ್ಞಾನಿಕ, ಹಾಗೆ ಮಾಡಲೇಕೂಡದು. ಸೂರ್ಯನ ಬೆಳಕಿನಲ್ಲಿರುವ ಮತ್ತು ಅಲ್ಟ್ರಾವೆಯೋಲೆಟ್ ಮತ್ತು ಇನ್ ಫ್ರಾರೆಡ್ ಕಿರಣಗಳು ಕಣ್ಣಿನ ಹೊರಭಾಗದ ಪಾರದರ್ಶಕ ಪಟಲ ಕಾರ್ನಿಯ ಹಾಗೂ ಕಣ್ಣಿನೊಳಗಿರುವ ಅಕ್ಷಿಪಟಲ ಎರಡಕ್ಕೂ ಅಪಾಯಕಾರಿ. ನಿಜವಾಗಿ ಹೇಳುವುದಾದರೆ ಶಕ್ತಿಯುತವಾದ ಸೂರ್ಯನ ಕಿರಣಗಳು (ಸೂರ್ಯ ಗ್ರಹಣದ
ಸಮಯದಲ್ಲಿರುವಂತೆ) ನೇರವಾಗಿ ಕಣ್ಣಿನ ಅಕ್ಷಿಪಟಲದ ಮಧ್ಯಭಾಗ ಮ್ಯಾಕ್ಯುಲವನ್ನು ಸುಟ್ಟು ಅಥವಾ ನಾಶಮಾಡಿ ಗಮನಾರ್ಹವಾದ ಅಂಧತ್ವ ಉಂಟು ಮಾಡುತ್ತದೆ.

೧೨. ಕಣ್ಣಿನ ಕಸಿ ಶಸ ಕ್ರಿಯೆಯಿಂದ ಯಾವುದೇ ಅಂಧತ್ವ ಗುಣಪಡಿಸಬಹುದು ಹಾಗೂ ಈ ಶಸ್ತ್ರಕ್ರಿಯೆಯಲ್ಲಿ ಇಡೀ ಕಣ್ಣು ಅಥವಾ ಕಣ್ಣು ಗುಡ್ಡೆಯನ್ನೇ ಕಸಿ ಮಾಡುತ್ತಾರೆ.

ವಸ್ತುಸ್ಥಿತಿ : ಕಣ್ಣಿನ ಕಸಿ ಶಸಕ್ರಿಯೆಯಿಂದ ಕಣ್ಣಿನ ಭಾಗ ಪಾರದರ್ಶಕ ಪಟಲ ಕಾರ್ನಿಯಾದಲ್ಲಿರುವ ಅಂಧತ್ವವನ್ನು ಮಾತ್ರ ಗುಣಪಸಬಹುದು. ಇಡೀ ಕಣ್ಣು ಗುಡ್ಡೆಯನ್ನು ಕಸಿ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಕಣ್ಣನ್ನು ದಾನಿ (ಶವದಿಂದ) ಶಸಕ್ರಿಯೆ ಮಾಡಿ ತೆಗೆಯುವಾಗ ದೃಷ್ಟಿ ನರವಾದ ಆಪ್ಟಿಕ್ ನರವನ್ನು ಕತ್ತರಿಸಿಯೇ ಹೊರ ತೆಗೆಯಬೇಕಾಗುತ್ತದೆ.