ವಸಂತ ಗ ಭಟ್
ಟೆಕ್ ಫ್ಯೂಚರ್
ಕನ್ನಡಕದ ಮೂಲಕ ನಮ್ಮ ಜಗತ್ತನ್ನು ಹೊಸ ರೀತಿಯಲ್ಲಿ ಕಾಣುವ ಅನುಭವವನ್ನು ನೀಡಲಿರುವ ಆರಿಯ, ಫೇಸ್ಬುಕ್ ಕೈಗೊಂಡಿರುವ ಒಂದು ಹೊಸ ಸಾಹಸ.
ಒಂದು ಸುಂದರ ಕಾಮನ ಬಿಲ್ಲು ಕಾಣಿಸುತ್ತದೆ. ಕಾಡು ದಾರಿಯಲ್ಲಿ ಹೋಗುವಾಗ ನವಿಲು ನರ್ತಿಸುತ್ತಿರುತ್ತದೆ. ಕ್ಯಾಮೆರಾ ತೆಗೆಯುವ ಮೊದಲು ಅದು ಓಡಿ ಹೋದಾಗ, ನಿಮಗೆ ಅನ್ನಿಸಿರಬಹುದು, ನಮ್ಮ ಕಣ್ಣಿಗೆ ಒಂದು ಕ್ಯಾಮೆರಾ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು.
ಕಣ್ಣಿಗೆ ಇಷ್ಟವಾದುದ್ದನೆಲ್ಲ ಶೇಖರಿಸಿಡುವ ಸಾಮರ್ಥ್ಯವಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೆ! ಮೊದಲನೆಯ ದಿನ ಕೆಲಸಕ್ಕೆ ಹೋದ ಸಂಪೂರ್ಣ ದಿನದ ವಿಡಿಯೋ ಇಂದು ನಿಮಗೆ ಲಭಿಸಿದರೆ ಅದಕ್ಕೆ ಬೆಲೆಕಟ್ಟಲಾಗು ತ್ತದೆಯೇ? ಈಗ ಇಂತಹ ಅನುಭವವನ್ನು ಕಟ್ಟಿಕೊಡುವ ಒಂದು ಹೊಸ ಉಪಕರಣವನ್ನು ಕಂಡು ಹಿಡಿದಿದೆ ಫೇಸ್ಬುಕ್. ಪ್ರಾಜೆಕ್ಟ್ ಆರಿಯ ಹೆಸರಿನಲ್ಲಿ, ಕಣ್ಣಿಗೆ ಹಾಕುವ ಕನ್ನಡಕದ ಮೂಲಕ ಒಂದು ಹೊಸ ಜಗತ್ತನ್ನು ತನ್ನ ಬಳಕೆದಾರನಿಗೆ ಕೊಡುವ ಯೋಜನೆ ಹಾಕಿಕೊಂಡಿದೆ. ಸಧ್ಯ ಇದು ಪರಿಷ್ಕರಣೆಯ ಹಂತದಲ್ಲಿದ್ದು ಫೇಸ್ಬುಕ್ನ ಉದ್ಯೋಗಿಗಳಿಗೆ ಮಾತ್ರ ನೀಡಲಾಗಿದೆ.
ಇದೊಂದು ಸ್ಮಾರ್ಟ್ ಕನ್ನಡಕ
ಮೊದಲು ಲ್ಯಾಪ್ಟಾಪ್ ಅಥವಾ ಡೆಸ್ಕ್ ಟಾಪ್ ಕಂಪ್ಯೂಟರ್ಗಳಲ್ಲಿ ಮಾಡುತ್ತಿದ್ದ ಎಷ್ಟೋ ಕೆಲಸಗಳನ್ನು ಇಂದು ಮೊಬೈಲ್ನಲ್ಲಿ ಮಾಡುತ್ತಿದ್ದೇವೆ. ಮೊಬೈಲ್ನಲ್ಲಿ ಮಾಡುತ್ತಿದ್ದ ಎಷ್ಟೋ ಕೆಲಸಗಳಿಗೆ ಇಂದು ಸ್ಮಾರ್ಟ್ವಾಚ್ ಬಳಕೆ ಸಾಧ್ಯ. ಇದನ್ನೇ ಬಂಡವಾ ವಾಗಿಟ್ಟುಕೊಂಡು ಫೇಸ್ಬುಕ್ ಸಿದ್ಧಪಡಿಸಿರುವ ಉಪಕರಣ ಆರಿಯ. ಆರಿಯ ಒಂದು ಸ್ಮಾರ್ಟ್ ಕನ್ನಡಕ, ಎಲ್ಲವನ್ನೂ ಗಮನಿಸುವ ಬುದ್ಧಿವಂತ ಕನ್ನಡಕ.
ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಗೂಗಲ್ ಮ್ಯಾಪ್ಸ್ ಬಳಕೆ ಇದೆ. ತಿರುವಿನಲ್ಲೂ ಮೊಬೈಲ್ ನೋಡಿ ದಾರಿ ಸರಿಯಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬಹುದು. ಅದರ ಬದಲು ಕನ್ನಡಕವೇ ದಾರಿ ತೋರಿಸುವ ಹಾಗಾದರೆ? ಉದಾಹರಣೆಗೆ ಒಂದು ತಿರುವಿಗೆ ಬಂದಾಗ ಯಾವ ಕಡೆ ಹೋಗಬೇಕು
ಎನ್ನುವುದನ್ನು ಧರಿಸಿದ ಕನ್ನಡಕ ಆಗ್ಯುಮೆಂಟೆಡ್ ರಿಯಾಲಿಟಿಯ ಮೂಲಕ ದಾರಿಯ ಮೇಲೆ ಚಿಹ್ನೆಗಳನ್ನೂ ಹಾಕಿ ತೋರಿಸಿದರೆ ಪ್ರಯಾಣ ಎಷ್ಟೊಂದು ಸುಲಭವಾಗುತ್ತದೆ ಅಲ್ಲವೇ? ಯಾವುದೋ ಪ್ರವಾಸಿ ತಾಣಕ್ಕೆ ಹೋಗಬೇಕು ಎಂದು ಭಾವಿಸೋಣ. ಮೊದಲು ಆ ಸ್ಥಳದ ಚಿತ್ರ, ವಿಡಿಯೋಗಳನ್ನೂ ಅಂತರ್ಜಾಲದಲ್ಲಿ ನೋಡುತ್ತಿರಿ. ಫೇಸ್ಬುಕ್ ಆರಿಯಾ ಗ್ಲಾಸ್ ಇದ್ದರೆ, ಆ ಕನ್ನಡಕದಲ್ಲೇ ಆಗ್ಯುಮೆಂಟೆಡ್ ರಿಯಾಲಿಟಿ ಮೂಲಕ ಆ ಸ್ಥಳದಲ್ಲಿ ಇದ್ದ ರೀತಿಯೇ ಅದನ್ನು ಇಲ್ಲಿಂದಲೇ ನೋಡಬಹುದು. ಇದು ನಿತ್ಯ ಭೇಟಿ ಕೊಡುವ ಅಂಗಡಿ ಅಥವಾ ಮಾಲ್ಗಳಿಗೂ ಅನ್ವಯಿಸುತ್ತದೆ. ನೀವು ಮನೆಯಲ್ಲಿ ಕಾರಿನ ಕೀಲಿ ಕೈ ಮರೆತಾಗ, ಆರಿಯ ನಿಮ್ಮ ನೆರವಿಗೆ ಬಂದು ಕೀಲಿ ಕೈ ಇರುವ ಜಾಗವನ್ನು ಸ್ಪಷ್ಟವಾಗಿ ಹೇಳಲಿದೆ.
ವಿಫಲಗೊಂಡ ಗೂಗಲ್ ಸಾಹಸ
2014 ರಲ್ಲಿ ಬಿಡುಗಡೆಯಾದ ಗೂಗಲ್ ಗ್ಲಾಸ್ ಸಹ ಇಂತಹುದೇ ಒಂದು ಹೊಸ ಜೀವನ ಶೈಲಿಯ ನಿರೀಕ್ಷೆ ಯನ್ನು ಮೂಡಿಸಿತ್ತು. ಆದರೆ ಅಂದುಕೊಂಡಂತೆ ಯಶಸ್ಸು ಗಳಿಸದೆ, ಒಂದೇ ವರ್ಷದಲ್ಲಿ ಗೂಗಲ್ ಆ ಪ್ರಾಜೆಕ್ಟ್ನ್ನು ನಿಲ್ಲಿಸಿಬಿಟ್ಟಿತ್ತು. ಹಾಗಾದರೆ ಆರಿಯ, ಗೂಗಲ್ ಗ್ಲಾಸ್ನಿಂದ ಕಲಿಯಬೇಕಾದಂತಹ ಪಾಠ ಗಳೇನು? ವಾಸ್ತವದಲ್ಲಿ ಗೂಗಲ್ ಗ್ಲಾಸ್ ಬಿಡುಗಡೆಯಾದ ಮೊದಲ ಆರು ತಿಂಗಳು ಇದು ಪರಿಪೂರ್ಣ ಉಪಕರಣವೋ ಅಥವಾ ಕೇವಲ ಪರಿಷ್ಕರಿಸಲು ಒಂದಿಷ್ಟು ಜನಕ್ಕೆ ನೀಡುತ್ತಿದ್ದಾರೋ ಎನ್ನುವುದು ಹೆಚ್ಚಿನ ವರಿಗೆ ಗೊತ್ತಾಗಲಿಲ್ಲ. ಗೂಗಲ್ ಗ್ಲಾಸ್ ನೊಡನೆ ಜೋಡಣೆಯಾದ ಕ್ಯಾಮೆರಾ, ಎದುರಿಗೆ ಬರುವ ಎಲ್ಲಾ ವ್ಯಕ್ತಿ ಮತ್ತು ಸ್ಥಳಗಳ ಚಿತ್ರ ಮತ್ತು ವಿಡಿಯೋವನ್ನು ಒಪ್ಪಿಗೆಯಿಲ್ಲದೆ ತೆಗೆಯುತ್ತಿದ್ದರಿಂದ, ಅದು ಹಲವಾರು ಕಾನೂನಾತ್ಮಕ ತೊಡಕುಗಳನ್ನೂ ಎದುರಿಸಬೇಕಾಯಿತು. ಮುಖ್ಯವಾಗಿ ಗೂಗಲ್ ತಾನು ಈ ಗ್ಲಾಸಿನ ಮುಖಾಂತರ ಯಾವ ಸಮಸ್ಯೆಗೆ ಪರಿಹಾರ ಕೊಡುತ್ತಿದ್ದೇನೆ ಎನ್ನುವುದನ್ನು ಸರಿಯಾಗಿ ಮಾರ್ಕೆಟಿಂಗ್
ಮಾಡಲೇ ಇಲ್ಲ. ಹಾಗಾಗಿ ಈ ಉಪಕರಣ ನಷ್ಟ ಅನುಭವಿಸಿ ಹಿಂದೆ ಸರಿಯಿತು.
ಕನ್ನಡಕದ ಸವಾಲುಗಳು
ಬಳಕೆದಾರನ ಮಾಹಿತಿ ರಕ್ಷಣೆ ಆರಿಯಾದ ಎದುರಿಗಿರುವ ಮೊದಲ ನೈಜ ಸವಾಲು. ಹೋದಲೆಲ್ಲಾ ಜನರ ಅನುಮತಿಯಿಲ್ಲದೆ ಅವರ ಚಿತ್ರ ಅಥವಾ ವಿಡಿಯೋಗಳನ್ನೂ ತೆಗೆದರೆ, ಜನ ಈ ಉಪಕರಣದ ವಿರುದ್ಧವೂ ಕಾನೂನಾತ್ಮಕ ಹೋರಾಟ ಮಾಡಬಹುದು. ಫೇಸ್ಬುಕ್ ಹೇಳುವಂತೆ, ಈ ಉಪಕರಣ ವ್ಯಕ್ತಿಯ ಚಿತ್ರಗಳನ್ನು
ಮಸುಕುಗೊಳಿಸಿ, ಸ್ಥಳ ಮಾಹಿತಿಯನ್ನು ಮಾತ್ರ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಛಾಯಾಚಿತ್ರ ತೆಗೆಯಲು ನಿರ್ಬಂಧವಿರುವ ಸ್ಥಳಗಳ ಮಾಹಿತಿ ಯನ್ನು ಮೊದಲೇ ಕನ್ನಡಕದಲ್ಲಿ ಪ್ರೋಗ್ರಾಮ್ ಮಾಡಲಾಗಿದ್ದು, ಅಲ್ಲಿ ಚಿತ್ರೀಕರಣ ಅಸಾಧ್ಯ.
ಜತೆಗೆ, ಗೂಗಲ್ ತರಹ ಈ ಉತ್ಪನ್ನವನ್ನು ಶೀಘ್ರವಾಗಿ ಮಾರುಕಟ್ಟೆಗೆ ಬಿಡುವ ಯಾವುದೇ ಯೋಜನೆಯನ್ನು ಫೇಸ್ ಬುಕ್ ಹೊಂದಿಲ್ಲ. ಎಲ್ಲಾ ರೀತಿಯಲ್ಲಿಯೂ ಉಪಕರಣ ಬಳಕೆಗೆ ಯೋಗ್ಯ ಎನಿಸಿದ ನಂತರವೇ, ಮಾರು ಕಟ್ಟೆಗೆಯಲ್ಲಿ ದೊರೆಯಲಿದೆ. ಸದ್ಯ ತನ್ನ ಉದ್ಯೋಗಿಗಳ ಮೂಲಕ ಪರಿಶೀಲನೆ ಮಾಡುತ್ತದೆ.
ಕಣ್ಣಿನ ನೋಟದ ಅನುಭವ
ಆರಿಯಾ ಕನ್ನಡಕ ಮಾಡುವ ಮೊದಲು ವಾಚ್ ಅಥವಾ ಬೆಸ್ಲೆಟ್ ಮೂಲಕ ಇದೇ ಅನುಭವವನ್ನು ನೀಡುವ ಉದ್ದೇಶ ಫೇಸ್ಬುಕ್ ಹೊಂದಿತ್ತು. ಆದರೆ ಮನುಷ್ಯನ ಕಣ್ಣಿನ ಮೂಲಕ ನೋಡುವ ಅನುಭವಕ್ಕೆ ಮತ್ಯಾ ವುದೂ ಸರಿಸಮವಾಗುವುದಿಲ್ಲ ಎಂದು ಕೊನೆಗೆ ಈ ಕನ್ನಡಕವನ್ನು ಸಿದ್ಧಪಡಿಸಿತು.