Friday, 27th December 2024

ವೈದಿಕ ಧರ್ಮದ ಲಕ್ಷಣಗಳು

ದಾಸ್ ಕ್ಯಾಪಿಟಲ್

dascapital1205@gmail.com

ವೇದದ ಎಂಬುದು ವಿದ್ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ವಿದ್ ಎಂದರೆ ಜ್ಞಾನ, ತಿಳಿವಳಿಕೆ ಎಂದರ್ಥ. ವೇದೇನ ವೈದೇವಾ
ಅಸುರಾಣಾಂ ವಿತ್ತಂ ವೇದ್ಯಮವಿಂದತ- ಅಸುರರ ಸಿರಿ, ಪರಮಾತ್ಮನ ಕೃಪೆ, ದೊರಕಿಸಲು ಕಾರಣವಾದುದರಿಂದ ಅಪೌರು ಷೇಯವಾದ ಶಬ್ದರಾಶಿಯು ವೇದವೆನಿಸಿದೆ. ವೇದವು ಎಲ್ಲ ವಿದ್ಯೆಗಳ ಆಗರ. ಜ್ಞಾನದಿಂದಲೇ ಜ್ಞಾನವನ್ನು ತಿಳಿಯಬೇಕು. ತಿಳಿದಿರುವುದರಿಂದ ತಿಳಿಯ ದಿರುವುದನ್ನು ತಿಳಿಯಬೇಕು.

ಆದ್ದರಿಂದ ಇದೊಂದು ಬದುಕಿನ ಧರ್ಮ. ಜೀವನಮೌಲ್ಯಗಳನ್ನು ಉಣಿಸುವ ನಿಧಿ. ವೇದಗಳನ್ನು ನಿತ್ಯ ಆಗಮ ಎಂಬುದಾಗಿ ನಮ್ಮ ಪರಂಪರೆ ಅಂಗೀ ಕರಿಸಿದೆ. ಶ್ರುತಿ, ತ್ರಯೀ, ಅಮ್ನಾಯ, ಅನುಪೂರ್ವಿ, ಅನಂತಪಾರ, ಅನುವಚನ ಮೊದಲಾದ ಇತರ ಅನೇಕ ಹೆಸರುಗಳಿಂದ ಇವು ಪ್ರಸಿದ್ಧ ವಾಗಿವೆ. ಸದಾ ಇರುವುದರಿಂದ ವೇದ . ಶ್ರವಣದಿಂದಲೇ ಅದರ ಅಧ್ಯೇತ್ರ ಗಳು ಅವುಗಳನ್ನು ತಿಳಿದು ಅಧ್ಯಯನ ಮಾಡುವುದರಿಂದ ಶ್ರುತಿ.

ಅರ್ಥದಿಂದ ಮಾತ್ರವಲ್ಲದೆ ಶಬ್ದದಿಂದಲೂ ಸಹ ಅವುಗಳಲ್ಲಿ ನಿತ್ಯತ್ವ ಇರುವದರಿಂದ ಆಮ್ನಾಯ. ಆನುಪೂರ್ವಿಯಲ್ಲಿ ಯಾವುದೇ ವ್ಯತ್ಯಾಸ ಎಂದೂ ಇಲ್ಲದಿರುವುದರಿಂದ ಆನುಪೂರ್ವಿ. ವಿನಾಶ ಹಾಗೂ ಪರಿಮಿತಿ ಗಳಿಂದ ರಹಿತವೆಂದು ಅನಂತಾಪಾರ-ಗಳೆಂದು ಆಯಾ ಹೆಸರುಗಳಿಗೆ ಅನ್ವರ್ಥಕವಾಗಿರುವುದನ್ನು ಕಾಣಬಹುದು. ಬಹುತೇಕ ಆಧುನಿಕ ವಿದ್ವಾಂಸರು ಸಹ ಇವುಗಳನ್ನು ಮನುಕುಲದ ಅತೀ ಪ್ರಾಚೀನ ಕೃತಿಗಳೆಂದು ಅಂಗೀಕರಿಸಿರುವರು.

ಧರ್ಮದ ಎಂಟು ಮೂಲ ಲಕ್ಷಣಗಳನ್ನು ವೈದಿಕ ಧರ್ಮದಲ್ಲಿ ಹೀಗೆ ಉಲ್ಲೇಖಿತವಾಗಿವೆ. ಅವೆಂದರೆ: ೧) ಸತ್ಯ ೨) ಔದಾರ್ಯ ೩) ನ್ಯಾಯ ೪) ಶೌರ್ಯ ೫) ದೀಕ್ಷೆ ೬) ತಪಸ್ಸು ೭) ಜ್ಞಾನ ೮) ತ್ಯಾಗ. ಇವುಗಳನ್ನೇ ಸಂಸ್ಕೃತದಲ್ಲಿ ಮನು ಮಹರ್ಷಿಯು ಹತ್ತು ಲಕ್ಷಣಗಳಲ್ಲಿ ದಾಖಲಿಸಿದ್ದಾನೆ.

ಅವು: ೧) ಧೃತಿ ೨) ಕ್ಷಮಾ ೩) ದಮ ೪) ಅಸ್ತೇಯ ೫) ಶೌಚ ೬) ಇಂದ್ರಯನಿಗ್ರಹ ೭) ಧಿ ೮) ವಿದ್ಯಾ ೯) ಸತ್ಯ ೧೦) ಅಕ್ರೋಧ. ಧೃತಿಯೆಂದರೆ, ಸಾತ್ವಿಕ ಧೈರ್ಯ, ಆತ್ಮಶಕ್ತಿ, ಆತ್ಮವಿಶ್ವಾಸ, ನಿರ್ಭಯತೆ. ಸಾಮಾನ್ಯವಾಗಿ ಮಕ್ಕಳಲ್ಲಿ ಈ ಗುಣಗಳಿರುತ್ತವೆ. ಮಕ್ಕಳನ್ನು ಭಯಭೀತಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಹುಚ್ಚರಲ್ಲೂ ಈ ಗುಣಗಳಿರುತ್ತವೆ. ಎಲ್ಲವನ್ನೂ ತಿಳಿದ ಜ್ಞಾನಿಗಳಿಗೂ ಯಾವ ಭಯವೂ ಇರಲಾರದು.

ಜ್ಞಾನಿಯಾದವನು ಮಗುವಿನಂತೆ ಮುಗ್ಧನಾಗುತ್ತಾನೆ. ಆತ್ಯಂತಿಕವಾಗಿ ಮಗುವೇ ಆಗುತ್ತಾನೆ. ಧಿಃಶಕ್ತಿ ಅಂತಾರಲ್ಲ ಅದು ಧೃತಿ
ಯನ್ನು ಜ್ಞಾನದಿಂದ ಗಳಿಸಿದ ಮಹಾಪುರುಷರು ಚರಿತ್ರೆಯಲ್ಲಿ ಕಾಣಸಿಗುತ್ತಾರೆ. ಧೃತಿಯಿದ್ದರೆ ಅಂಥವರು ಕಾಣುತ್ತಾರೆ. ಕ್ಷಮಾ ಅಂದರೆ ನ್ಯಾಯಕ್ಕಾಗಿ ಹೋರಾಡುವಾಗ ಎದುರಾಗುವ ಎಲ್ಲ ಬಗೆಯ ವೈಯಕ್ತಿಕ ವಿರೋಧಗಳನ್ನು, ಕಷ್ಟ ನಷ್ಟಗಳನ್ನು ಯಾವ ರಾಗದ್ವೇಷವೂ ಇಲ್ಲದೆ ಸ್ವೀಕರಿಸುವುದು.

ನಮ್ಮಿಂದ ತಪ್ಪು ಆದಾಗಲೂ ನಾವು ಹೃದಯಪೂರ್ವಕವಾಗಿ ಕ್ಷಮೆಯನ್ನು ಕೇಳುವುದು. ನಮ್ಮಿಂದಲೂ ತಪ್ಪು ಆಗದಂತೆ
ವ್ಯವಹರಿಸುವುದು. ಸಣ್ಣ ಸಣ್ಣ ತಪ್ಪುಗಳನ್ನು ದೊಡ್ಡದು ಮಾಡದೆ ಹೊಂದಾಣಿಕೆಯ ಬದುಕನ್ನು ಬಾಳುವುದನ್ನು ಕಲಿತರೆ ಲಾಭವೇನೆಂದರೆ, ನಮ್ಮಿಂದಲೂ ಯಾವ ದೊಡ್ಡ ತಪ್ಪುಗಳೂ ಸಂಭವಿಸುವುದಿಲ್ಲ. ದಮ ಎಂದರೆ ದುಷ್ಟ ಆಲೋಚನೆಗಳಿಗೆ ಈಡಾಗದಂತೆ ಮನಸ್ಸನ್ನು ನಿಯಂತ್ರಿಸುವುದು. ಮನಸ್ಸು ಅಂದರೆ ಅಸಂಖ್ಯ ಆಲೋಚನೆ, ಚಿಂತನೆ, ಯೋಚನೆ, ಭಾವನೆಗಳ ಸಂಕೀರ್ಣ.

ಒಂದಲ್ಲ ಒಂದು ಬಗೆಯಲ್ಲಿ ಮನಸ್ಸು ಇದರಲ್ಲಿ ಮುಳುಗಿರುತ್ತದೆ. ಮನಸ್ಸನ್ನು ಸನ್ನಡತೆಯ ಕಡೆಗೆ ಒಗ್ಗಿಸಿಕೊಳ್ಳುವುದು. ಒಂದು ವಿಷಯವನ್ನು ಸದಾಕಾಲ ಮನಸ್ಸು ಯೋಚಿಸತೊಡಗಿದರೆ ಕ್ರಮೇಣ ಅದನ್ನು ಜಾರಿಗೆ ತರಲು ಪ್ರಯತ್ನಿಸುತ್ತದೆ. ಮತ್ತು ಕಾರ್ಯರೂಪಕ್ಕೆ ತಂದೇ ತರುತ್ತದೆ. ಅದು ಒಳ್ಳೆಯದಾಗಿರಲಿ, ಅಥವಾ ಕೆಟ್ಟದ್ದಾಗಿರಲಿ. ನಾವು ಕಲಿತ ವಿದ್ಯೆಗೆ ಒಳ್ಳೆಯದನ್ನೇ ಮನಸ್ಸು ರೂಢಿಸಿಕೊಳ್ಳುವಂತೆ ತರಬೇತುಗೊಳಿಸಬೇಕು. ಇದಕ್ಕೆ ಬಹುದೊಡ್ಡ ಪ್ರಯತ್ನ ಬೇಕೇ ಬೇಕು. ಮುಖ್ಯವಾಗಿ, ಮನಸ್ಸನ್ನು ಅತಿ ದುರಾಸೆಯಿಂದ ದೂರವಿಡಬೇಕು. ಹೇಗೆ ಬೇರೆಯವರು ಒಳ್ಳೆಯದನ್ನೇ ನಮಗೆ ಮಾಡಬೇಕೆಂದು ಬಯಸು ತ್ತೇವೆಯೋ ಹಾಗೆಯೇ ನಮ್ಮ ಮನಸ್ಸನ್ನು ಒಳ್ಳೆಯದಾಗಿಟ್ಟುಕೊಳ್ಳಬೇಕು.

ಅಸ್ತೇಯ ಎಂದರೆ ಅಪಹರಿಸುವುದು, ಕದಿಯುವುದು ಎಂದು ಅರ್ಥ. ಆಸ್ತಿ, ಸಂಪತ್ತು, ಅಧಿಕಾರವನ್ನು ಅನ್ಯಾಯ, ಅಧರ್ಮದ ಹಾದಿಯಲ್ಲಿ ಪಡೆಯುವುದು ಸ್ತೇಯವೆನಿಸುತ್ತದೆ. ಸ್ತೇಯದ ವಿರುದ್ಧವೇ ಅಸ್ತೇಯ. ಅನ್ಯರ ಮನಸ್ಸನ್ನು ನೋಯಿಸುವುದು ಕೂಡ ಸ್ತೇಯವೆನಿಸುತ್ತದೆ. ಅಽಕಾರಕ್ಕೋಸ್ಕರ ತತ್ವ, ಸಿದ್ಧಾಂತಗಳಿಗೆ ಎಳ್ಳುನೀರು ಬಿಡುವುದು, ಒಳ್ಳೆಯವರ ಏಳಿಗೆಯನ್ನು ದಮನಿಸುವುದು ಕೂಡ ಸ್ತೇಯವೆನಿ ಸುತ್ತದೆ.

ಅಧರ್ಮವನ್ನು, ಅನ್ಯಾಯವನ್ನು ಪ್ರೋತ್ಸಾ ಹಿಸುವುದು ಕೂಡ ಸ್ತೇಯವೇ ಆಗಿದೆ. ಅಜಾತಶತ್ರು ಎಂದು ಸಂಬೋಧಿಸಲ್ಪಟ್ಟ
ಅಟಲ್ ಬಿಹಾರಿ ವಾಜಪೇಯಿ ಅವರು ಅಸ್ತೇಯವನ್ನು ಸ್ವಭಾವವಾಗಿ ಹೊಂದಿದ್ದರು ಎಂಬುದು ನನ್ನ ಭಾವನೆ. ಶೌಚ ಧರ್ಮದ ಐದನೆಯ ಗುಣ. ಶೌಚ ಎಂದರೆ, ದೇಹವನ್ನು ನಿತ್ಯ ಸ್ನಾನ, ಸಾತ್ವಿಕ ಆಹಾರ ಸೇವನೆಯಿಂದಲೂ, ಮನಸ್ಸನ್ನು ಜ್ಞಾನ ದಿಂದಲೂ, ನಾಲಗೆಯನ್ನು ನಲ್ನುಡಿಗಳಿಂದಲೂ ಶುದ್ಧವಾಗಿಟ್ಟುಕೊಳ್ಳುವುದು. ಜೈಸಾ ಖಾವೇ ಅನ್ ವೈಸಾ ಆವೇ ಮನ್ ಅಂತ ಒಂದು ಮಾತಿದೆ. ತಿನ್ನುವ ಆಹಾರ ಸಾತ್ವಿಕದ್ದಾಗಿರಬೇಕು. ಆಹಾರ ದೇಹಕ್ಕೆ ಬಲ ನೀಡುತ್ತದೆ.

ಸ್ನಾನವೂ ಶಕ್ತಿಯ ಪ್ರಪುಲ್ಲತೆಯನ್ನು ನೀಡುತ್ತದೆ. ಜ್ಞಾನವು ಬೌದ್ಧಿಕ, ವೈಚಾರಿಕ ಮತ್ತು ಮಾನಸಿಕತೆ ತಾಕತ್ತನ್ನು ಕೊಡುತ್ತದೆ. ಹಾಗೆಯೇ ಧ್ಯಾನವೂ ಕೂಡ ಆತ್ಮಕ್ಕೆ ಅಂತಃಶ್ಶಕ್ತಿ ನೀಡುತ್ತದೆ. ಅಥವಾ ಧ್ಯಾನದಿಂದ ಆತ್ಮದ ಶಕ್ತಿ ಹೆಚ್ಚುತ್ತದೆ. ಇವೆಲ್ಲವೂ
ಶೌಚದ ಪರಿಣಾಮಗಳೇ ಆಗಿವೆ. ಇಂದ್ರಿಯ ನಿಗ್ರಹ ಧರ್ಮದ ಆರನೆಯ ಗುಣ. ಇಂದ್ರಿಯಗಳಲ್ಲಿ ಎರಡನೇ ಭಾಗಗಳಿವೆ. ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು.

ಎಲ್ಲ ಇಂದ್ರಿಯಗಳನ್ನೂ ನಿತ್ಯ ಜೀವನದ ಎಲ್ಲ ಕೆಲಸಗಳಲ್ಲೂ ವಿನಿಯೋಗಿಸಬೇಕು. ಮತ್ತು  ಅವುಗಳ ಮೇಲೆ ನಿಗ್ರಹದ ಶಕ್ತಿಯನ್ನು ಹೊಂದಿರಬೇಕು. ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ- ಇವು ಜ್ಞಾನೇಂದ್ರಿಯಗಳು. ಕೈ, ಕಾಲು, ಗುದ, ಉಪಸ್ಥ, ಬಾಯಿ- ಇವು ಕರ್ಮೇಂದ್ರಿಯಗಳು. ಇವೆಲ್ಲವುಗಳನ್ನು ನಿಯಂತ್ರಿಸೋದು ಹನ್ನೊಂದನೆಯ ಇಂದ್ರಿಯವಾದ ಮನಸ್ಸು. ಇದು
ಆತ್ಮ ಮತ್ತು ದೇಹದ ನಡುವೆ ಕೆಲಸ ಮಾಡುವ ಒಂದು ಮಜಭೂತವಾದ ಶಕ್ತಿ. ಇದರ ನಿಯಂತ್ರಣದಲ್ಲೇ ಎಲ್ಲವೂ ಇರುವು ದರಿಂದ ಇದು ಅಪಾರ ಶಕ್ತಿಯನ್ನು ಅಂತರ್ಗತಗೊಳಿಸಿಕೊಂಡಿದೆ.

ಇಂದ್ರಿಯ ನಿಗ್ರಹ ಅಂದಾಕ್ಷಣ ನೆನಪಿಗೆ ಬರುವುದು ಬ್ರಹ್ಮಚರ್ಯ. ತಿಂದ ಆಹಾರ ಕ್ರಮವಾಗಿ ರಸವಾಗಿ, ರಕ್ತವಾಗಿ, ಮಾಂಸವಾಗಿ, ಮೇದಸ್ಸಾ(ಜಿಚಿಣ)ಗಿ, ಅಸ್ತಿಯಾಗಿ, ಮಜ್ಜೆಯಾಗಿ, ವೀರ್ಯವಾಗಿ ಬದಲಾಗುತ್ತದೆ. ಈ ಪ್ರಕ್ರಿಯೆಗೆ ಸುಮಾರು ೫೦-೬೦ ದಿನಗಳು ಬೇಕಾಗುತ್ತದೆ. ಈ ವೀರ್ಯವನ್ನು ಓಜಸ್ಸಾಗಿ ಪರಿವರ್ತಿಸಿ ಎಲ್ಲ ಇಂದ್ರಿಯಗಳಿಗೂ ಶಕ್ತಿಯಾಗಿ ಮಾರ್ಪ ಡಿಸುವ ಕಲೆಯೇ ಬ್ರಹ್ಮಚರ್ಯ.

ಇಂಥ ಬ್ರಹ್ಮಚರ್ಯವನ್ನು ಜೀವನದ ಆರಂಭದ ವರ್ಷಗಳಲ್ಲಿ ಜತನದಿಂದ ಕಾಪಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ದೇಹದಲ್ಲಿ
ಕಾಂತಿಯಿರುವುದಿಲ್ಲ. ಧಿಃ ಧರ್ಮದ ಏಳನೆಯ ಗುಣ. ಧಿಃ ಅಂದರೆ ಬುದ್ಧಿಶಕ್ತಿ. ಮೇಧಾಶಕ್ತಿ. ಲೌಕಿಕ ಮತ್ತು ಆಧ್ಯಾತ್ಮಿಕ ಜಗತ್ತಿನಲ್ಲಿ ಗಳಿಸುವ ಶಕ್ತಿ. ಸರಿಯಾದ ಸಮಯದಲ್ಲಿ, ಪ್ರಸಕ್ತವಾದ ಸಂದರ್ಭದಲ್ಲಿ ಸೂಕ್ತವಾದ ನಿರ್ಧಾರವನ್ನು ಸ್ವೀಕರಿಸುವ ಆತ್ಮಶಕ್ತಿಯೇ ಧಿಃ ಶಕ್ತಿ. ಉಜ್ವಲ ಭವಿಷ್ಯ ನಿರ್ಮಾಣದ ಸಾಧ್ಯತೆ ಇದರಲ್ಲಡಗಿದೆ.

ಗಳಿಸಿದ ಜ್ಞಾನ, ಸತ್ಯ, ಅನುಷ್ಠಾನ, ಬದುಕಿನ ಅನುಭವಗಳ ಆಧಾರದ ಮೇಲೆ ಒಬ್ಬನ ಧಿಃ ಶಕ್ತಿ ಪ್ರಮಾಣ ಅವಲಂಬಿತ ವಾಗಿರುತ್ತದೆ. ಸತ್ಯ ಧರ್ಮದ ಒಂಬತ್ತನೆಯ ಗುಣ. ಈ ಜಗತ್ತಿನ ನಿತ್ಯ ವ್ಯವಹಾರಗಳು ನಡೆಯುವುದು ಸತ್ಯದಿಂದಲೇ ಎಂಬುದು ಜಗತ್ತು ಅರಿತಿರುವ ಸಂಗತಿ. ಇಲ್ಲಿ ಯಾವುದೂ ಸುಳ್ಳಲ್ಲ. ಜ್ಞಾನ ಸತ್ಯಮುಖಿಯಾಗಿರುತ್ತದೆ. ಅಜ್ಞಾನ ಸುಳ್ಳಿನ ಮುಖವನ್ನು ಹೊಂದಿರುತ್ತದೆ. ಆದ್ದರಿಂದ ಸತ್ಯವಂತರಾದಷ್ಟೂ ಜ್ಞಾನ ನಮಗೊದಗುತ್ತದೆ. ಮನಸ್ಸು ವರ್ತಸಿದಂತೆ ಮಾಡುವುದು ಮತ್ತು ಕಾರ್ಯಗತಗೊಳಿಸುವುದು ಸತ್ಯವಾಗಿದೆ.

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಂ ಅಪ್ರಿಯ. ಸತ್ಯವನ್ನೇ ಹೇಳಬೇಕು. ಪ್ರಿಯವಾದುದನ್ನೇ ಹೇಳಬೇಕು. ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಾಮಾಣಿಕತೆಯಲ್ಲಿ ನಂಬಿಕೆಯಿಟ್ಟುಕೊಳ್ಳಬೇಕು. ಪ್ರಾಮಾಣಿಕ ರಾಗಿರಬೇಕು. ಸತ್ಯವನ್ನು ವ್ರತದಂತೆ ಪಾಲಿಸಿದ ಮಹನೀಯರನ್ನು ಗೌರವಿಸಬೇಕು. ಅಂಥವರ ಬದುಕಿನ ಚರಿತ್ರೆಯನ್ನು ಓದಬೇಕು. ಅಕ್ರೋಧ ಧರ್ಮದ ಹತ್ತನೆಯ ಗುಣ. ಶಾಂತಿ, ಅಹಿಂಸೆ, ಸ್ಥಿತಪ್ರಜ್ಞತೆ, ಸಹನೆ- ಇವೆಲ್ಲವೂ ಅಕ್ರೋಧದ ಬಹುಮುಖಗಳು.

ಕ್ರೋಧ ಅಂದರೆ ಸಿಟ್ಟು, ಕೋಪ. ಅಕ್ರೋಧ ಇವು ಇಲ್ಲದೆ ಇರುವಂಥ ಸ್ಥಿತಿ. ಇದು ಧರ್ಮದಿಂದಲೂ ನ್ಯಾಯದಿಂದಲೂ ಕೂಡಿರುವಂಥ ಸ್ಥಿತಿ. ಮನಸ್ಸು ರೋಗವನ್ನು ಸೃಷ್ಟಿಸಬಲ್ಲುದು; ಗುಣಪಡಿಸಬಲ್ಲುದು. ಇದು ರಾಗದ್ವೇಷ ರಹಿತವಾದ ಸ್ಥಿತಿ. ಇದುವೇ ನಿರ್ಭಯದ ಸ್ಥಿತಿ.