Sunday, 24th November 2024

ಗಿರಕಿ ಹೊಡೆಯುವ ಸಂಬಂಧಗಳು

ಸಂಸಾರ ಎಂದಾಗ ಮನಸ್ತಾಪ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು, ತಾಳ್ಮೆ ಯಿಂದ ಪರಿಹರಿಸಿಕೊಂಡಾಗಲೇ ಸಂಸಾರದ ಸರಿಗಮದ ಶ್ರುತಿ ಮಧುರವಾಗುತ್ತದೆ.

ರಶ್ಮಿ ಹೆಗಡೆ

ವರ್ಷದ ಹಿಂದಷ್ಟೇ ವಿವಾಹವಾಗಿ ಗಂಡನ ಮನೆಯಲ್ಲಿ ಸಂಸಾರ ಹೂಡಿದ್ದ ಮಗಳು ಬೇಸರ, ಅಸಮಾಧಾನಗಳನ್ನು ಹೊತ್ತು ತವರಿಗೆ ಬಂದಳು. ‘‘ಗಂಡ, ಅತ್ತೆ ಹಾಗೂ ನಾದಿನಿ ಸದಾ ನನ್ನೊಂದಿಗೆ ಜಗಳವಾಡುತ್ತಾರೆ. ಗಂಡನೂ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ಆ ಮನೆಯ ಆಚಾರ, ವಿಚಾರ, ಸಂಸ್ಕಾರ ಗಳೆಲ್ಲ ನನ್ನ ನಿರೀಕ್ಷೆಗೆ ವಿರುದ್ಧವಾಗಿವೆ. ಒಂದು ಸಮಸ್ಯೆ ಬಗೆಹರಿಯಿ ತೆಂದರೆ ಇನ್ನೊಂದು ಹುಟ್ಟಿಕೊಳ್ಳುತ್ತದೆ. ಇನ್ನು ನಾನಲ್ಲಿ ಬದುಕಲಾರೆ’’ ಎಂದು ತಾಯಿ ಯೊಂದಿಗೆ ತನ್ನ ನೋವನ್ನೆಲ್ಲ ತೋಡಿ ಕೊಂಡು ಅತ್ತಳು ಮಗಳು.

ತಾಯಿಯು ಏನೊಂದೂ ಮಾತನಾಡದೆ ಮಗಳನ್ನು ಅಡುಗೆಮನೆಗೆ ಕರೆದೊ ಯ್ದಳು. ಮೂರು ಪಾತ್ರೆಗಳನ್ನು ತೆಗೆದುಕೊಂಡು ಒಂದರಲ್ಲಿ ಗಜ್ಜರಿ, ಎರಡನೆಯದರಲ್ಲಿ ಮೊಟ್ಟೆ ಹಾಗೂ ಮೂರನೆಯದರಲ್ಲಿ ಕಾಫೀ ಬೀಜಗಳನ್ನು ಹಾಕಿ ನೀರಿನಲ್ಲಿ ಕುದಿಯ ಲಿಟ್ಟು, ಬೆಂದ ನಂತರ ಮೂರನ್ನೂ ತೆಗೆದು ಒಂದು ತಟ್ಟೆೆಯಲ್ಲಿಟ್ಟಳು.

ಕಾಫಿ ಬೀಜವನ್ನು ಕುದಿಸಿದಾಗ

ಮಗಳಿಗೆ ತಾಯಿಯ ಈ ನಡೆಯು ವಿಚಿತ್ರವೆನಿಸಿತು. ‘‘ಮಗಳೇ, ಸರಿಯಾಗಿ ನೋಡು. ನಾನು ಮೂರೂ ವಸ್ತುಗಳನ್ನು ಬೇಯಿಸಿದ್ದು ಒಂದೇ ರೀತಿಯ ಪ್ರತಿಕೂಲ ವಾತಾವರಣದಲ್ಲಿ. ಆದರೆ ಮೂವರೂ ಪ್ರತಿಕ್ರಿಯಿಸಿದ್ದು ವಿಭಿನ್ನವಾದ ರೀತಿಯಲ್ಲಿ. ಗಜ್ಜರಿಯನ್ನು ಬೇಯಿಸಿದಾಗ ಅದು ತನ್ನ ಗಟ್ಟಿತನವನ್ನು ತೊರೆದು ಮೆದುವಾಗಿಬಿಟ್ಟಿತು.

ಹೊರಗಿನಿಂದ ಗಟ್ಟಿಯಾಗಿದ್ದರೂ ಒಳಗಿನಿಂದ ದುರ್ಬಲವಾಗಿದ್ದ ಮೊಟ್ಟೆಯು, ಬೆಂದ ನಂತರ ಗಟ್ಟಿಯಾಯಿತು. ಕಾಫಿ ಬೀಜವು ನೀರಿಗೆ ಇಳಿಯುತ್ತಿದ್ದಂತೆ ತನ್ನ ವಿಶಿಷ್ಟವಾದ ರುಚಿ, ಬಣ್ಣ ಹಾಗೂ ಪರಿಮಳವನ್ನು ಎಲ್ಲೆಡೆ ಪಸರಿಸಿ, ನೀರಿನ ಮೂಲ ಬಣ್ಣ ಹಾಗೂ ಸ್ವಾದವನ್ನೇ ಬದಲಿಸಿಬಿಟ್ಟಿತು. ಈಗ ಹೇಳು, ನೀನು ಏನಾಗಬಯಸುವೆ? ಕುದಿಯುವ ನೀರು ನಿನಗೊದಗಿ ಬಂದ ಪ್ರತಿಕೂಲ ಪರಿಸ್ಥಿತಿಯಾದರೆ, ಅದರಲ್ಲಿ ಬೆಂದ ಗಜ್ಜರಿ, ಮೊಟ್ಟೆ ಹಾಗೂ ಕಾಫಿ ಬೀಜಗಳು ನಿನ್ನ ಮನೋಭಾವವನ್ನು ಸೂಚಿಸು ತ್ತದೆ. ನೀನೇನಾಗಬೇಕೆಂದು ನೀನೇ ನಿರ್ಧರಿಸು. ಕಷ್ಟ ಬಂದಾಗ ಗಜ್ಜರಿಯಂತೆ ಮೃದುವಾಗಿ, ಸೋತು ಕರಗಿ ಹೋಗುವೆಯೋ, ಮೊಟ್ಟೆಯಂತೆ ಒಳಗಿನಿಂದ ಹಾಗೂ ಹೊರಗಿನಿಂದ ನಿನ್ನವರೊಂದಿಗೆ ಕಠಿಣವಾಗಿರುವೆಯೋ? ಅಥವಾ ಕಾಫೀ ಬೀಜದಂತೆ ನಿನ್ನ ಅಸ್ತಿತ್ವದಿಂದ, ನಿನ್ನ ಶ್ರೇಷ್ಠ ನಡವಳಿಕೆಯಿಂದ ಸುತ್ತಮುತ್ತಲಿನವರ ಮನಸ್ಥಿತಿಯನ್ನೂ ಬದಲಾಯಿಸಿ, ಸಕಾರಾತ್ಮಕ ಬದಲಾವಣೆ ಯನ್ನು ತರುತ್ತೀಯೋ? ಆಯ್ಕೆ ನಿನ್ನದು.

ಸಂಬಂಧಗಳನ್ನು ಕಟ್ಟಿಕೊಳ್ಳುವುದರ ಜತೆಯಲ್ಲೇ, ಅದನ್ನು ಉಳಿಸಿಕೊಂಡು ಹೋಗುವುದು ಅತಿ ಮುಖ್ಯ.’’ ಎಂದು ಮಗಳಿಗೆ ತಿಳಿ ಹೇಳಿದ್ದಳು. ತಾಯಿಯ ಬುದ್ಧಿಮಾತು ಮಗಳಲ್ಲಿ ಹೊಸತನವನ್ನು ಹುಟ್ಟುಹಾಕಿತ್ತು. ಜೀವನದ ಸವಾಲುಗಳನ್ನು ಸ್ವೀಕರಿಸಿ ಮಗಳು ಮುನ್ನಡೆದಳು. ಪ್ರತಿಯೊಬ್ಬ ಪಾಲಕನೂ ಮಕ್ಕಳನ್ನು ಹೀಗೆ ತಿದ್ದಿ, ತೀಡುತ್ತಿದ್ದರೆ ಬಹುಶಃ ಅದೆಷ್ಟೋ ಸಂಸಾರಗಳು ಒಡೆದು ಚೂರಾಗುವುದರಿಂದ ಬಚಾವಾದೀತು.

ಹೊಂದಿಕೊಳ್ಳುವುದು ಮುಖ್ಯ

ಸಂಸಾರದಲ್ಲಿ ತಾಪತ್ರಯ ಹಾಗೂ ಮನಸ್ತಾಪ ಸಾಮಾನ್ಯ. ಒಬ್ಬರ ಮಾತು ಇನ್ನೊಬ್ಬರಿಗೆ ಹಿಡಿಸದಿರುವುದು, ಒಬ್ಬರ ಆಸೆ ಇನ್ನೊಬ್ಬರಿಗೆ ನೋವುಂಟುಮಾಡುವುದು ಸಹಜ. ಕುಟುಂಬದ ಸದಸ್ಯರ ನಡುವೆ ಮನಸ್ತಾಪ ಬಂದಾಗ ಆದಷ್ಟು ತಾಳ್ಮೆಯಿಂದ, ಬುದ್ಧಿವಂತಿಕೆಯಿಂದ ಎಲ್ಲರೊಂದಿಗೆ ಕುಳಿತು ಸಮಸ್ಯೆಯ ಬಗ್ಗೆ ಚರ್ಚಿಸಿದಾಗ ಅವರಿಗೂ ತಮ್ಮ ತಪ್ಪಿನ ಅರಿವಾಗಿ, ಬದಲಾಗಲು ಪ್ರಯತ್ನಪಟ್ಟಾರು. ಆ ಕ್ಷಣಕ್ಕೆ ಕೋಪದಿಂದಲೋ ಅಥವಾ ಅಸಹಾಯಕತನದಿಂದಲೋ ತೆಗೆದುಕೊಳ್ಳುವ ನಿರ್ಧಾರ ನಮ್ಮ ಇಡೀ ಜೀವನವನ್ನೇ ನಕಾರಾತ್ಮಕವಾಗಿ ಬದಲಿಸೀತು. ನಮ್ಮ ಪ್ರಬುದ್ಧ ನಡವಳಿಕೆ ಹಾಗೂ ಧನಾತ್ಮಕ ದೃಷ್ಟಿಕೋನಕ್ಕೆ ಕೆಟ್ಟ ಮನಸ್ಸನ್ನೂ ಒಳ್ಳೆಯದಾಗಿಸುವ ವಿಶಿಷ್ಟವಾದ ಶಕ್ತಿಯಿದೆ.

ಜೀವನದ ಕಠಿಣ ಸಮಯವನ್ನು ಉತ್ತಮವಾಗಿಸುವ ಜಾಣ್ಮೆಯನ್ನು ಮೈಗೂಡಿಸಿಕೊಳ್ಳುವುದೂ ಒಂದು ಕಲೆ. ಸಂಬಂಧಗಳು ಕೆಲವು ಮೂಲ ತತ್ವಗಳ ಸುತ್ತ ಗಿರಕಿ ಹೊಡೆಯುತ್ತಿರುತ್ತವೆ. ಆ ತತ್ವಗಳನ್ನ ಮೀರಿ ನಡೆದಾಗ ಸಂಸಾರವೆಂಬ ಸಾಗರದಲ್ಲಿ ಅಲ್ಲೋಲ ಕಲ್ಲೋಲಗಳೆದ್ದು ಸುನಾಮಿಯನ್ನೇ ಸೃಷ್ಟಿಸಿಬಿಡಬಹುದು. ಕಾಲದ ಇತಿಮಿತಿಗೂ ಮೀರಿ ಬೆಳೆದು ಬಂದಂಥದ್ದು ಕೌಟುಂಬಿಕ ಬಾಂಧವ್ಯಗಳು. ಮನೆಯ ಹಿರಿಯನಿಂದ ಹಿಡಿದು ಚಿಕ್ಕ ಮಗುವಿನವರೆಗಿನ ಮಾನಸಿಕ ಹಾಗೂ ದೈಹಿಕ ಸೌಖ್ಯವನ್ನು ಕಾಪಾಡಿಕೊಂಡು ಹೋಗುವುದು ಆ ಸಂಸಾರದ ಮೌಲ್ಯಗಳು.

ಗುಡಿಸಲೇ ಇರಲಿ ಅಥವಾ ಅರಮನೆಯೇ ಇರಲಿ, ಮನೆಯಲ್ಲಿ ನೆಮ್ಮದಿ, ಸಂತೋಷ ತುಂಬಿರಲಿ ಎನ್ನುವುದು ಸಾರ್ವಕಾಲಿಕ ಸತ್ಯ. ಸಂಬಂಧಗಳು ಸೀರೆಯಲ್ಲಿನ ಸೂಕ್ಷ್ಮವಾದ ರೇಶಿಮೆ ಎಳೆಯಂತೆ. ಒಂದನ್ನು ಬಿಚ್ಚಿದರೆ ಬಾಕಿ ಎಳೆಗಳು ತಾವಾಗಿಯೇ ಹೊರ ಬಂದು ಬಿಡುತ್ತವೆ. ಆ ಒಂದು ಎಳೆಯೇ ಪ್ರಮುಖವಾದದ್ದು ಎಂಬುದನ್ನು ಮರೆಯಬಾರದು. ನಾವೂ ಬೆಳೆದು, ಸಂಸಾರವನ್ನೂ ಬೆಳೆಸಿಕೊಂಡು ಹೋಗುವುದು ಪತಿ, ಪತ್ನಿ ಮತ್ತು ಕುಟುಂಬದ ಎಲ್ಲ ಸದಸ್ಯರ ಜವಾಬ್ದಾರಿ ಹಾಗೂ ಕರ್ತವ್ಯ.

ಭಾವನಾತ್ಮಕ ಬೆಸುಗೆ

ಕುಟುಂಬದ ಸದಸ್ಯರ ನಡುವಿನ ಭಾವನಾತ್ಮಕ ಬೆಸುಗೆಯೇ ಸುಖೀ ಸಂಸಾರದ ಬುನಾದಿ. ಒಂದೊಳ್ಳೆಯ ಮನೆಯೆಂದರೆ ಅದು ಕೇವಲ ಇಟ್ಟಿಗೆ, ಕಟ್ಟಿಗೆ, ಐಷಾರಾಮಿ ಸಾಮಗ್ರಿಗಳಿಂದ ತುಂಬಿದ ಸ್ಥಳವಲ್ಲ. ಕುಟುಂಬದ ಸದಸ್ಯರ ನಡುವಿನ ಪ್ರೀತಿ, ವಿಶ್ವಾಸ, ಸಂಸ್ಕಾರಗಳ ಆಗರ.