40 ಕೋಟಿ ರೂ.ನಷ್ಟು ಆದಾಯ ಮುಚ್ಚಿಟ್ಟಿರುವ ಬಗ್ಗೆ ಇಮೇಲೆ ಬರೆದಿರುವ ಬಿಬಿಸಿಗೆ ಐಟಿ ಇಲಾಖೆ ಉತ್ತರಿಸಿದ್ದು, ಇಮೇಲ್ ಕಳುಹಿಸಿದರೆ ಅದು ಕಾನೂನಾತ್ಮಕ ಎನಿಸುವುದಿಲ್ಲ. ಪರಿಷ್ಕೃತ ಐಟಿ ರಿಟರ್ನ್ಸ್ ಅರ್ಜಿ ಸಲ್ಲಿಸಬೇಕು. ಎಲ್ಲಾ ಬಾಕಿ ತೆರಿಗೆ, ಬಡ್ಡಿ, ದಂಡ ಇತ್ಯಾದಿ ಹಲವು ಕೋಟಿ ರೂ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಕೆಲ ತಿಂಗಳ ಹಿಂದೆ ಬಿಬಿಸಿಯ ಭಾರತೀಯ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ ಘಟನೆ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎನ್ನುವ ಆರೋಪ ನಿರಾಧಾರ ಎಂಬುದು ಈ ಬೆಳವಣಿಗೆಯಿಂದ ಸಾಬೀತಾಗಿದೆ. ಬಿಬಿಸಿ ವಿರುದ್ಧ ತೆರಿಗೆ ವಂಚನೆ ನಡೆದಿರುವ ಬಗ್ಗೆ ಐಟಿಗೆ ಬಲವಾದ ಮಾಹಿತಿ ಇದ್ದದ್ದರಿಂದಲೇ ರೇಡ್ ನಡೆದಿತ್ತು ಎಂದು ಹೇಳಲಾಗಿದೆ.
ದೇಶದ ಕಾನೂನು ಎಲ್ಲರಿಗೂ ಒಂದೇ. ಮಾಧ್ಯಮ ಸಂಸ್ಥೆ ಎಂದೋ ಅಥವಾ ವಿದೇಶೀ ಸಂಸ್ಥೆ ಎಂದೋ ವಿಶೇಷ ವಿನಾಯಿತಿ ಇರುವುದಿಲ್ಲ. ನಿಯಮದ ಪ್ರಕಾರ ಬಿಬಿಸಿ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕು. ಈ ಪ್ರಕರಣವು ತಾರ್ಕಿಕವಾಗಿ ಅಂತ್ಯಗೊಳ್ಳುವವರೆಗೂ ಐಟಿ ಇಲಾಖೆಯು ಕ್ರಮ ಕೈಗೊಳ್ಳಲು ಸಿದ್ಧವಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಫೆಬ್ರುವರಿಯಲ್ಲಿ ಬಿಬಿಸಿ ಕಚೇರಿಗಳ ಮೇಲೆ ದಾಳಿ
ಬಿಬಿಸಿ ಅಥವಾ ಬ್ರಿಟಿಷ್ ಬ್ರಾಡ್ಕ್ಯಾಸ್ಟಿಂಗ್ ಕಾರ್ಪೊರೇಷನ್ ಸಂಸ್ಥೆ ಬ್ರಿಟನ್ ಮೂಲದ್ದಾಗಿದ್ದು, ಭಾರತದಲ್ಲಿ ಕಚೇರಿ ಹೊಂದಿದೆ. 2023 ಫೆಬ್ರುವರಿ ತಿಂಗಳಲ್ಲಿ ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡಗಳು ಸರ್ವೆ ಕೈಗೊಂಡಿದ್ದವು.