ಒಡಿಶಾದ ಬಾಲಸೋರ್‌ನಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿ ನಾಲ್ಕು ದಿನಗಳು ಕಳೆದಿವೆ. ೨೭೫ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಈ ದುರಂತ ಮತ್ತೊಮ್ಮೆ ರೈಲ್ವೆ ಸುರಕ್ಷತೆ, ರೈಲು ಪ್ರಯಾಣದ ಬಗೆಗಿನ ವಿಶ್ವಾಸಾ ರ್ಹತೆಯನ್ನು ಒರೆಗೆ ಹಚ್ಚಿದೆ. ಹಲವು ಕುಟುಂಬಗಳು ಅನಾಥವಾಗಿವೆ.
ಸಾವಿರಾರು ಮಂದಿ ಗಾಯಗೊಂಡು ಬದುಕುಳಿದಿದ್ದರಾದರೂ ಅವರು ಮೊದಲಿನಂತಾಗಲು ವರ್ಷಗಳೇ ಬೇಕಾಗಬಹುದು, ಅಥವಾ ಕೆಲವರು ಇನ್ಯಾ ವತ್ತೂ ಮೊದಲಿನಂತಾಗಲು ಸಾಧಯವೇ ಇಲ್ಲ ಎನ್ನುವ ಸ್ಥಿತಿಗೂ ಬಂದು ತಲುಪಬಹುದು. ಈವರೆಗಿನ ರೈಲ್ವೆ ಅಪಘಾತದಲ್ಲೇ ದೇಶ ಕಂಡ ಅತ್ಯಂತ ಭೀಕರ ರೈಲು ಅಪಘಾತಗಳ ಪೈಕಿ ಒಡಿಶಾ ಘಟನೆ ಮೂರನೇ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದೆ. ಈ ದಶಕ ಕಂಡಂಥ ಮೊದಲ ಭೀಕರ
ಅಪಘಾತ ಎಂಬುದರಲ್ಲಂತೂ ಅನುಮಾನವಿಲ್ಲ. ಹೀಗಿರುವಾಗ ಸಹಜವಾಗಿಯೇ ಒಮ್ಮೆಲೆ ರೈಲು ಪ್ರಯಾಣದ ವಿಶ್ವಾಸಾರ್ಹತೆ ಒಂದು ಹೆಜ್ಜೆ ಹಿಂದಕ್ಕೆ ಹೋಗಿರುವುದಂತೂ ಸತ್ಯ. ಇದು ಮಾಸಲು ಒಂದಷ್ಟು ಕಾಲ ಬೇಕೇಬೇಕು.
ಜತೆಗೆ ಸೂಕ್ತ ತನಿಖೆ ನಡೆದು ಅಪಘಾತಕ್ಕೆ ಕಾರಣ ಪತ್ತೆ ಹಚ್ಚಿ, ಲೋಪವನ್ನು ಸರಿಪಡಿಸಬೇಕಿದೆ. ಈಗ ಸದ್ಯಕ್ಕೆ ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ಲೋಪ, ಇಂಟರ್‌ಲಾಕ್ ವ್ಯವಸ್ಥೆ ಕೈಕೊಟ್ಟಿದ್ದರಿಂದ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ. ಉದ್ದೇಶ ಪೂರ್ವಕ, ನಿರ್ಲಕ್ಷ್ಯ/ಲೋಪದ ಅನುಮಾನವೂ ಹುಟ್ಟಿದೆ.
ದುಷ್ಕೃತ್ಯವನ್ನೂ ಅಲ್ಲಗಳೆಯಾಗದು. ಏನೇ ಇದ್ದರೂ ಆಗಲೇ ಒಂದು ರೈಲು ಇದ್ದ ಹಳಿಯಲ್ಲಿ ಎಕ್ಸ್‌ಪ್ರೆಸ್ ರೈಲೊಂದು ಸಂಚರಿಸಿದ್ದಕ್ಕೆ ಕಾರಣ ತಿಳಿಯು ತ್ತಿಲ್ಲ. ಇನ್ನೂ ವಿಚಿತ್ರವೆಂದರೆ ಆಗಲೇ ಒಂದು ಅಪಘಾತ ಸಂಭವಿಸಿದ ಮಾರ್ಗದಲ್ಲಿ ಇನ್ನೊಂದು ಎಕ್ಸ್‌ಪ್ರೆಸ್ ರೈಲಿಗೆ ಅನುಮತಿ ನೀಡಿದ್ದಾದರೂ ಏಕೆ? ಇದರೊಂದಿಗೆ ಇಡೀ ದೇಶಕ್ಕೆ ದೇಶವನ್ನೇ ಆಘಾತ ಹಾಗೂ ದಿಗ್ಭ್ರಮೆಗೆ ತಳ್ಳಿದ ಘಟನೆಯ ಹಿನ್ನೆಲೆಯಲ್ಲಿ ಹಲವಾರು ಸಂಶಯ, ಪ್ರಶ್ನೆಗಳು ಉದ್ಭವಿಸಿವೆ.
ಸರಕಾರವೇನೋ ಅಪಘಾತದ ತನಿಖೆಯನ್ನು ಸಿಬಿಐಗೆ ವಹಿಸಿದ್ದು, ತನಿಖೆಯೂ ಆರಂಭವಾಗಿದೆ. ಇತ್ತ, ರೈಲ್ವೇ ಸುರಕ್ಷತಾ ಆಯುಕ್ತರಿಂದಲೂ ತನಿಖೆ ಶುರುವಾಗಿದೆ. ಅಪಘಾತಕ್ಕೆ ಕಾರಣವಾದ ಅಂಶಗಳ ಬಗೆಗೆ ಹಲವು ಅಭಿಪ್ರಾಯಗಳು ಕೇಳಿ ಬರುತ್ತಿವೆ. ಏಕೆಂದರೆ ಕಳೆದ ಮೂರು ವರ್ಷಗಳಲ್ಲಿ ಶೂನ್ಯ ಅಪಘಾತದ ಮಟ್ಟವನ್ನು ದಾಖಲಿಸಿದ್ದ ರೈಲ್ವೆ, ಇದ್ದಕ್ಕಿಂದಂತೆ ಇಂಥ ಘೋರ ಅಪಘಾತಕ್ಕೆ ಸಾಕ್ಷಿಯಾಗುತ್ತದೆ ಎಂದರೆ ನಿಜಕ್ಕೂ ಚಿಂತಿಸಬೇಕಾದ ಸಂಗತಿಯೇ. ಅದರಲ್ಲೂ ಮಹತ್ವಾಕಾಂಕ್ಷಿ‘ಕವಚ್’ ವ್ಯವಸ್ಥೆ ಅಳ ವಡಿಕೆಯಾಗುತ್ತಿರುವ ಹಂತದಲ್ಲೇ ಸಂಭವಿಸಿದ ಅಪಘಾತ, ರೈಲ್ವೆಯಲ್ಲಿನ ಮೂಲ ಸೌಕರ್ಯ ಅಭಿವೃದ್ಧಿಯ, ಸುರಕ್ಷತೆಯ ಅಗತ್ಯವನ್ನು ಸಾರುತ್ತಿದೆ.
ಈ ನಡುವೆ ರೈಲ್ವೆ ಸುರಕ್ಷತೆ ಬಗೆಗೆ ಸಿಐಜಿ ವರದಿ, ೨೦೧೨ರ ಕಾಕೋಡ್ಕರ್ ಸಮಿತಿ ಶಿಫಾರಸುಗಳನ್ನು ನಿರ್ಲಕ್ಷಿಸಿದ ಆರೋಪವೂ ಕೇಳಿಬಂದಿದೆ. ಐಎಎಸ್ ಅಧಿಕಾರಿಯಾಗಿ ಸಾಕಷ್ಟು ದಕ್ಷತೆಯಿಂದ ಕೆಲಸ ಮಾಡಿದ್ದ ಅಶ್ವಿನ್ ಶ್ರೀವಾಸ್ತವ್ ಅಂಥವರು ಇಲಾಖೆಯ ಹೊಣೆ ಹೊತ್ತಿದ್ದೂ ಇಂಥ ಅಪಘಾತ
ನಡೆದದ್ದು, ಸಹಜವಾಗಿ ಎಲ್ಲರನ್ನೂ ಅಚ್ಚರಿಗೆ ದೂಡಿದೆ. ವಿಶ್ವದಲ್ಲೇ ನಾಲ್ಕನೆಯ ಅತಿದೊಡ್ಡ ರೈಲ್ವೆ ಜಾಲದ ಖ್ಯಾತಿ ಹೊಂದಿರುವ ಭಾರತೀಯ ರೈಲ್ವೆಯ ಹೆಸರು ಮುಕ್ಕಾಗದಿರಲಿ. ಅಂಥ ಕ್ರಮಗಳು ಶೀಘ್ರ ಅನುಷ್ಠಾನಗೊಳ್ಳಲಿ.