Friday, 22nd November 2024

ಟಾಸ್ ಗೆದ್ದ ಭಾರತ ತಂಡ ಬೌಲಿಂಗ್​ ಆಯ್ಕೆ: ಖ್ವಾಜಾ ಔಟ್

ಲಂಡನ್​: ಬಹುನೀರೀಕ್ಷಿತ 2021-23 ರ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ.

ಓವಲ್​ ಮೈದಾನ ಆತಿಥ್ಯ ವಹಿಸಿದೆ. ಟಾಸ್ ಗೆದ್ದ ಭಾರತ ತಂಡ ಬೌಲಿಂಗ್​ ಆಯ್ದುಕೊಂಡಿದೆ.

ಒಡಿಶಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ರೈಲು ದುರಂತದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.ಭಾರತದ ವೇಗಿ ಮಹಮ್ಮದ್ ಸಿರಾಜ್‌ ದಾಳಿಗೆ ಆಸೀಸ್‌ನ ಉಸ್ಮಾನ್ ಖವಾಜ ವಿಕೆಟ್‌ ಒಪ್ಪಿಸಿದ್ದಾರೆ. ಡೇವಿಡ್‌ ವಾರ್ನರ್‌ ಮತ್ತು ಮಾರ್ನಸ್ ಲಾಬುಶಾನೆ ಕ್ರೀಸ್‌ನಲ್ಲಿದ್ದಾರೆ.

ಭಾರತ ತಂಡ ಈ ಪಿಚ್​ನಲ್ಲಿ ಓರ್ವ ಸ್ಪಿನ್ನರ್​ಗೆ ಮಾತ್ರ ಮಣೆ ಹಾಕಿದೆ. ಬೌಲಿಂಗ್ ಆಲ್​ರೌಂಡರ್​ಗಳಲ್ಲಿ ಜಡೇಜಾ ಮತ್ತು ಶಾರ್ದೂಲ್​ಗೆ 11ರ ಬಳಗದಲ್ಲಿ ಅವಕಾಶ ಸಿಕ್ಕಿದೆ. ನಾಲ್ವರು ವೇಗಿಗಳೊಂದಿಗೆ ರೋಹಿತ್​ ಶರ್ಮಾ ಕಾಂಗರೂ ಪಡೆಯನ್ನು ಕಟ್ಟಿ ಹಾಕಲು ರಣತಂತ್ರ ರೂಪಿಸಿದ್ದಾರೆ.

18 ತಿಂಗಳ ನಂತರ ತಂಡಕ್ಕೆ ಆಯ್ಕೆಯಾದ ಅಜಿಂಕ್ಯ ರಹಾನೆ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿ ನೀಡಲಾಗಿದೆ. ಜಡೇಜಾರನ್ನು ಬಿಟ್ಟು ಬೇರೆ ಎಡಗೈ ಬ್ಯಾಟರ್​ಗಳಿಲ್ಲ. ಬಾರ್ಡರ್​- ಗವಾಸ್ಕರ್​ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ ಶ್ರೀಕರ್ ​ಭರತ್​ ಕೀಪಿಂಗ್​ ಅವಕಾಶ ಸಿಕ್ಕಿದೆ.

ಎದುರಾಳಿ ತಂಡವೂ ಅನುಭವಿ ನಾಥನ್​ ಲಯಾನ್​ ಅವರನ್ನು ಮಾತ್ರ ಸ್ಪಿನ್​ ಬಳಗಕ್ಕೆ ಸೇರಿಸಿಕೊಂಡಿದೆ. ಮಿಕ್ಕಂತೆ ಅನುಭವಿ ವೇಗದ ಬೌಲರ್​ಗಳಾದ ಪ್ಯಾಟ್ ಕಮಿನ್ಸ್​, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್ ಆಸಿಸ್​ ಪಡೆಯಲ್ಲಿದ್ದಾರೆ.

ತಂಡಗಳು ಇಂತಿವೆ..: ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್​ ಕೀಪರ್​​), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

ಆಸ್ಟ್ರೇಲಿಯಾ : ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್​, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್​​ ಕೀಪರ್​), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಯಾನ್, ಸ್ಕಾಟ್ ಬೋಲ್ಯಾಂಡ್