Saturday, 23rd November 2024

ಸಾಲಕ್ಕಾಗಿ ಸುಳ್ಳು ದಾಖಲೆ: ಭಾರತ್ ಇನ್​ಫ್ರಾ ಎಕ್ಸ್​ಪೋರ್ಟ್ಸ್ ಕಚೇರಿಗೆ ದಾಳಿ

ಬೆಂಗಳೂರುಭಾರತ್ ಇನ್​ಫ್ರಾ ಎಕ್ಸ್​ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಸಂಸ್ಥೆಯ ಬೆಂಗಳೂರು ಹಾಗೂ ದಾವಣ ಗೆರೆ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ಮಾಡಿ (ED Raid) ದಾಖಲೆಗಳನ್ನು ಪರಿಶೀಲಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 113.38 ಕೋಟಿ ರೂ ಸಾಲ ಬಾಕಿ ಉಳಿಸಿಕೊಂಡ ಹಾಗೂ ಸಾಲದ ಹಣಕ್ಕಾಗಿ ಸುಳ್ಳು ದಾಖಲೆಗಳನ್ನು ಕೊಟ್ಟ ಆರೋಪ ಭಾರತ್ ಇನ್​ಫ್ರಾ ಮೇಲಿದೆ. ಈ ಪ್ರಕರಣದ ಮೇಲೆ ಇಡಿ ಅಧಿಕಾರಿಗಳ ತಂಡಗಳು ಜೂನ್ 5 ರಂದು ರೇಡ್ ನಡೆಸಿರುವುದು ತಿಳಿದುಬಂದಿದೆ . ಜೂನ್ 7 ರಂದು ಇಡಿ ಈ ರೇಡ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

ಬೆಂಗಳೂರು ಮತ್ತು ದಾವಣಗೆರೆಯ ಭಾರತ್ ಇನ್​ಫ್ರಾ ಸಂಸ್ಥೆಯ ಕಚೇರಿಗಳ ಮೇಲೆ ನಡೆದ ದಾಳಿಗಳಲ್ಲಿ 100 ಕೋಟಿ ರೂ ಮೌಲ್ಯದ ಚಿರಾಸ್ತಿಗಳನ್ನು ಇಡಿ ಅಧಿಕಾರಿಗಳು ಜಫ್ತಿ ಮಾಡಿಕೊಂಡಿವೆ. ಈ ವೇಳೆ 14.5 ಲಕ್ಷ ರೂ ನಗದು ಹಣ, ಹಲವು ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಸಂಬಂಧಿತ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನೂ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಇಡಿ ಮಾಹಿತಿ ನೀಡಿದೆ.

ಎಸ್​ಬಿಐನ ಬೆಂಗಳೂರು ಸಿಟಿ ಶಾಖೆಯಿಂದ ಭಾರತ್ ಇನ್​ಫ್ರಾ ಸಂಸ್ಥೆ ವಿವಿಧ ರೂಪದಲ್ಲಿ ಸಾಲ ಪಡೆದಿತ್ತು. ಈ ಸಾಲ ತೀರದೇ ಹಾಗೆ ಉಳಿದಿದ್ದರಿಂದ 2017ರ ಜನವರಿ 17ರಂದು ಎಸ್​ಬಿಐ ಈ ಸಾಲವನ್ನು ಅನುತ್ಪಾದಕ ಸಾಲ (ಎನ್​ಪಿಎ) ಎಂದು ವರ್ಗೀಕರಿಸಿತ್ತು. ಆಗ ಸಾಲ ಬಾಕಿ ಉಳಿದದ್ದು ಒಟ್ಟು 113.38 ಕೋಟಿ ರೂ.

ಎಸ್​ಬಿಐನಿಂದ ಪಡೆದ ಸಾಲದ ಹಣವನ್ನು ಭಾರತ್ ಇನ್​ಫ್ರಾ ದುರುಪಯೋಗಿಸಿಕೊಂಡಿದ್ದು ಇಡಿ ತನಿಖೆಯಿಂದ ತಿಳಿದುಬಂದಿದೆ. ಅಂದರೆ ಈ ಸಾಲದ ಹಣವನ್ನು ಬೇರೆ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಬ್ಯಾಂಕಿಗೆ ನಕಲಿ ಇನ್​ವಾಯ್ಸ್ ಮತ್ತು ದಾಖಲೆಗಳನ್ನು ನೀಡಿ ದಾರಿ ತಪ್ಪಿಸ ಲಾಗಿತ್ತು.