Friday, 22nd November 2024

ಭಯೋತ್ಪಾದನೆ ಚಟುವಟಿಕೆ: ಮಹಿಳೆ ಸೇರಿ ನಾಲ್ವರ ಬಂಧನ

ಹಮದಾಬಾದ್: ಪೋರಬಂದರ್‌ ಮತ್ತು ಸೂರತ್‌ನಲ್ಲಿ ಕಾರ್ಯಾಚರಣೆ ನಡೆಸಿರುವ ಗುಜರಾತ್‌ ಭಯೋ ತ್ಪಾದನೆ ನಿಗ್ರಹ ದಳ ಖೋರಾಸನ್‌ ಪ್ರಾಂತ್ಯದ ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರನ್ನು ಬಂಧಿಸಿದೆ.

ಬಂಧಿತರಲ್ಲಿ ಮೂವರು ಪುರುಷರು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದವರಾಗಿದ್ದು, ಪೋರಬಂದರ್‌ನಲ್ಲಿ ಸೆರೆಸಿಕ್ಕಿದ್ದಾರೆ. ಮಹಿಳೆಯನ್ನು ಸೂರತ್‌ ನಲ್ಲಿ ಬಂಧಿಸಲಾಗಿದೆ.

ಈ ಸಂಬಂಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿ ಕೊಳ್ಳಲಾಗಿದೆ. ಆರೋಪಿಗಳ ಸಂಪರ್ಕ ದಲ್ಲಿರುವ ಉಳಿದ ಶಂಕಿತರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸ ಲಾಗಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ವಿಕಾಸ್‌ ಸಹಾಯ್‌ ತಿಳಿಸಿದ್ದಾರೆ. ಅವರು ಹೇಳಿದ್ದಾರೆ.

ಬಂಧಿತರನ್ನು ಉಬೆದ್‌ ನಾಸಿರ್‌ ಮಿರ್‌, ಹನಾನ್‌ ಹಯಾತ್‌ ಶೋಲ್‌ ಮತ್ತು ಮೊಹಮ್ಮದ್ ಹಜೀಂ ಶಾ ಎಂದು ಗುರುತಿಸಲಾಗಿದೆ. ಐಎಸ್‌ಕೆಪಿ ಎಂಬುದು ಕ್ರಾಂತಿಕಾರಿ ಜಿಹಾದಿ ಸಂಘಟನೆಯಾಗಿದ್ದು, ವಿಶ್ವಸಂಸ್ಥೆಯು ಇದನ್ನು ಉಗ್ರ ಸಂಘಟನೆ ಎಂದು ಗುರುತಿಸಿದೆ.

‘ಸೆರೆಯಾದ ಮೂವರು ಪುರುಷರು ಪೋರಬಂದರ್‌ನಿಂದ ಮೀನುಗಾರಿಕೆ ದೋಣಿಯ ಮೂಲಕ ಅಂತರರಾಷ್ಟ್ರೀಯ ಸಾಗರ ಗಡಿ ರೇಖೆಯನ್ನು ದಾಟಿ, ಇರಾನ್‌ ಮಾರ್ಗವಾಗಿ ಅಫ್ಗಾನಿಸ್ತಾನ ತಲುಪಲು ಹಾಗೂ ಅಲ್ಲಿ ಐಎಸ್‌ಕೆಪಿ ಸೇರಲು ಯೋಜಿಸಿದ್ದರು’ ಎಂದು ವಿಕಾಸ್‌ ಮಾಹಿತಿ ನೀಡಿದ್ದಾರೆ.