Thursday, 28th November 2024

ಮನಸ್ಸು ಪಲ್ಲಟಿಸುವ ಟಾಕ್ಸೋಪ್ಲಾಸ್ಮಾ

ವೈದ್ಯ ವೈವಿಧ್ಯ

drhsmohan@gmail.com

ಹೆಚ್ಚಿನ ಬಿಸಿರಕ್ತದ ಪ್ರಾಣಿಗಳಿಗೆಲ್ಲ ಟಾಕ್ಸೋಪ್ಲಾಸ್ಮಾ ಸೋಂಕು ಹರಡಬಲ್ಲದು. ಸಮುದ್ರದ ನೀರುನಾಯಿಗಳ ಸಂತತಿ ಕಡಿಮೆ ಯಾಗುವುದರಲ್ಲಿ ಟಾಕ್ಸೋಪ್ಲಾಸ್ಮಾ ಬಹಳಷ್ಟು ಕಾರಣ ಎನ್ನಲಾಗುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ ಸೋಂಕಿನಿಂದ ಸತ್ತ ನೀರುನಾಯಿಗಳಲ್ಲಿ ಶೇ. ೩೮ರಲ್ಲಿ ಟಾಕ್ಸೋಪ್ಲಾಸ್ಮಾ ಇರುವುದು ಪತ್ತೆಯಾ ಗಿದೆ.

ನಮ್ಮ ನಿಮ್ಮೆಲ್ಲರ ದೇಹದಲ್ಲಿ ಈ ಪರಾವಲಂಬಿ ಜೀವಿ ಇರುವ ಸಾಧ್ಯತೆ ಇದೆ. ಭೂಮಿಯ ಹೆಚ್ಚಿನ ಪ್ರಾಣಿಗಳಿಗೆ ಸೋಂಕು ತರುವ ಸಾಧ್ಯತೆ ಇರುವ ಈ ಜೀವಿಯೇ ಟಾಕ್ಸೋಪ್ಲಾಸ್ಮಾ ಗೊಂಡೈ. ಇದರಿಂದ ಬರುವ ಕಾಯಿಲೆಯನ್ನು ಟಾಕ್ಸೋ ಪ್ಲಾಸ್ಮೋ ಸಿಸ್ ಎನ್ನಲಾಗುತ್ತದೆ. ಅದು ಹಲವು ಪ್ರಾಣಿ, ಮನುಷ್ಯರಲ್ಲಿ ನರವ್ಯೂಹದ ಮೇಲೆ ಪ್ರಭಾವ ಬೀರಬಲ್ಲದಾದುದರಿಂದ ಅದನ್ನು ‘ಮನಸ್ಸು ಪಲ್ಲಟಿಸುವ ಪರಾವಲಂಬಿ’ ಎಂದೂ ಕರೆಯಲಾಗುತ್ತದೆ.

ಕೆಲವೊಮ್ಮೆ ಮನುಷ್ಯರಲ್ಲಿ ಇದು ಪ್ರವೇಶ ಪಡೆದು ದೇಹದಲ್ಲಿದ್ದರೂ ಯಾವ ರೀತಿಯ ರೋಗಲಕ್ಷಣಗಳನ್ನೂ ತೋರಿಸದೆ ಇರುವ ಸಾಧ್ಯತೆಯೂ ಇದೆ. ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಜನರಲ್ಲಿ ಈ ಜೀವಿ ಇದೆ ಎಂಬುದೊಂದು ಅಂದಾಜು. ಹಾಗೆಯೇ ಉಷ್ಣರಕ್ತ ಪ್ರಾಣಿಗಳಲ್ಲಿ ಬಹುತೇಕ ಪ್ರಾಣಿಗಳಲ್ಲಿ ಇದು ಇರುವ ಸಾಧ್ಯತೆ ಇದೆ. ಇಷ್ಟೆಲ್ಲಾ ಆಗಿಯೂ ಈ ಜೀವಿಯ ಬಗ್ಗೆ ನಮಗೆ ಗೊತ್ತಿಲ್ಲದ ಅಂಶಗಳು ಬೇಕಾದಷ್ಟಿವೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಬೆಕ್ಕುಗಳು ತಮ್ಮ ಮಲದಲ್ಲಿ ಹೊರಹಾಕುವ ಮೊಟ್ಟೆಗಳ ಸಂಪರ್ಕಕ್ಕೆ ಬಂದಾಗ ಮನುಷ್ಯನಿಗೆ ಟಾಕ್ಸೋಪ್ಲಾಸ್ಮಾದ ಸೋಂಕು ಅಕಸ್ಮಾತ್ತಾಗಿ ಬರುತ್ತದೆ. ಮನುಷ್ಯರು ಕಲುಷಿತ ನೀರು ಕುಡಿದಾಗ, ಗಿಡಗಂಟಿಗಳ ನಡುವೆ ಅಥವಾ ತೋಟದಲ್ಲಿ ಕೆಲಸ ಮಾಡಿ ನಂತರ ಸರಿಯಾಗಿ ಕೈ ಸ್ವಚ್ಛ ಮಾಡದೆ ಆಹಾರ ಸೇವಿಸಿದಾಗ, ಸರಿಯಾಗಿ ಸ್ವಚ್ಛಪಡಿಸದ ತರಕಾರಿಗಳನ್ನು ಸೇವಿಸಿ ದಾಗ ಈ ಸೋಂಕು ಬರುವ ಸಾಧ್ಯತೆ ಇದೆ. ಹಾಗೆಯೇ ಸರಿಯಾಗಿ ಬೇಯಿಸದಿರುವ ಹಂದಿ, ಕೋಳಿ, ಮೀನುಗಳ ಮಾಂಸ ವನ್ನು ತಿಂದಾಗಲೂ ಈ ಸೋಂಕು ಬರಬಹುದು.

ಗರ್ಭಕೋಶದಲ್ಲಿರುವ ಶಿಶುವಿಗೆ ತಾಯಿಯಿಂದ ಸೋಂಕು ರವಾನೆಯಾಗಬಹುದು. ಹಾಗೆಯೇ ರಕ್ತ ಮರುಪೂರಣ ಮಾಡು ವಾಗ, ಅಂಗಾಂಗ ಬದಲಾವಣೆ ಶಸಕ್ರಿಯೆಯ ಸಂದರ್ಭದಲ್ಲಿಯೂ ಈ ಸೋಂಕು ಬರಬಹುದು. ಟಾಕ್ಸೋಪ್ಲಾಸ್ಮಾ ಸೋಂಕು ಒಬ್ಬ ವ್ಯಕ್ತಿಯ ದೇಹದಲ್ಲಿ ಪ್ರವೇಶ ಪಡೆದು ಬಹಳ ದಿನಗಳಾದರೂ ಹೆಚ್ಚಿನ ಸಂದರ್ಭ ಯಾವುದೇ ರೋಗಲಕ್ಷಣ ಇರುವುದಿಲ್ಲ ವಾದ್ದರಿಂದ ಅಂತಹ ವ್ಯಕ್ತಿಗೆ ಈ ಸೋಂಕಿನ ಬಗ್ಗೆ ಅರಿವೇ ಇರುವುದಿಲ್ಲ. ಕೆಲವರಲ್ಲಿ ಮಾತ್ರ ಸಣ್ಣ ಪ್ರಮಾಣದ – ರೀತಿಯ ಲಕ್ಷಣ ಗಳು ಕಾಣಿಸಿಕೊಳ್ಳಬಹುದು. ಅವೆಂದರೆ, ಮಾಂಸ ಖಂಡಗಳಲ್ಲಿ ನೋವು, ತಲೆನೋವು, ಜ್ವರ, ಶ್ವಾಸಕೋಶ ದಲ್ಲಿ ಸೋಂಕಿನ ಲಕ್ಷಣಗಳು, ಕಣ್ಣಿನಲ್ಲಿ ಅದರಲ್ಲಿಯೂ ಅಕ್ಷಿಪಟಲದಲ್ಲಿ ಸೋಂಕಿನ ಲಕ್ಷಣ ಗಳು (ಛಿಠಿಜ್ಞಿಜಿಠಿಜಿo) ಕಾಣಿಸಿಕೊಂಡು ಕಣ್ಣಿನ ದೃಷ್ಟಿ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಆದರೆ ಗರ್ಭಿಣಿಯರು, ೧-೨ ವರ್ಷಗಳ ಒಳಗಿನ ಮಕ್ಕಳು, ಪ್ರತಿರೋಧ ವ್ಯವಸ್ಥೆ ವಿವಿಧ ಕಾರಣಗಳಿಂದ ಕುಂಠಿತಗೊಂಡ ವ್ಯಕ್ತಿಗಳಲ್ಲಿ ಬಹಳ ಭೀಕರ ರೀತಿಯ ಟಾಕ್ಸೋಪ್ಲಾಸ್ಮೊಸಿಸ್ ಕಾಣಿಸಿಕೊಳ್ಳಬಹುದು. ಅಂಥವರಲ್ಲಿ ದೂರಗಾಮಿಯ ಪರಿಣಾಮ
ವಾಗಿ ಅವರ ಮಿದುಳು, ಕಣ್ಣು ಈ ರೀತಿಯ ಅಂಗಗಳಲ್ಲಿ ಹಾನಿಯಾಗಿದ್ದು ಗೊತ್ತಾಗಬಹುದು. ಕೆಲವೊಮ್ಮೆ ಒಬ್ಬ ವ್ಯಕ್ತಿಯಲ್ಲಿ ಏನೂ ಲಕ್ಷಣ ತೋರಿಸದೆ ವರ್ಷಗಟ್ಟಲೆ ಸುಮ್ಮನಿದ್ದು ನಂತರ ಯಾವಾಗಲೋ ಕಾಯಿಲೆಯ ಲಕ್ಷಣ ಕಾಣಿಸಿಕೊಳ್ಳಬಹುದು. ಒಂದು ಸರಳ ರಕ್ತಪರೀಕ್ಷೆ ಮಾಡಿ ಈ ಸೋಂಕನ್ನು ಪತ್ತೆಹಚ್ಚಬಹುದು.

ಈ ಸೋಂಕಿಗೆ ನಿಖರವಾದ ಮತ್ತು ಸಂಪೂರ್ಣ ಸರಿಪಡಿಸುವ ಚಿಕಿತ್ಸೆ ಇಲ್ಲ ಎಂದೇ ಹೇಳಬೇಕು. ಈ ಕಾಯಿಲೆಯ ಲಕ್ಷಣ ಗಳನ್ನು ವೈದ್ಯರು ಪೈರಿಮೆಥ ಮೀನ್ ಮತ್ತು -ಲಿನಿಕ್ ಆಮ್ಲ ಅಥವಾ ಸಲಾಡಯಜೀನ್ ಔಷಧಿಗಳನ್ನು ಉಪಯೋಗಿಸಿ
ಚಿಕಿತ್ಸೆ ಮಾಡುತ್ತಾರೆ. ತೀವ್ರ ರೋಗಲಕ್ಷಣಗಳಿದ್ದಾಗ ಅಥವಾ ಆ ವ್ಯಕ್ತಿಯ ಸೋಂಕು ತುಂಬಾ ಗಂಭೀರವಾದ ಹಂತ ತಲುಪಿದಾಗ ಮಾತ್ರ ವೈದ್ಯರು ಈ ರೀತಿಯ ಚಿಕಿತ್ಸೆಗೆ ತೊಡಗುತ್ತಾರೆ. ಒಬ್ಬ ವ್ಯಕ್ತಿಯ ದೇಹದಲ್ಲಿ ಈ ಜೀವಿ ಪ್ರವೇಶ ಪಡೆದು ಸೋಂಕು ತಂದರೆ ಆ ವ್ಯಕ್ತಿಯಲ್ಲಿ ಜೀವಮಾನ ಪರ್ಯಂತ ಆ ಸೋಂಕು ಉಳಿಯುತ್ತದೆ. ದೇಹ ಪ್ರವೇಶಿಸಿದ ಈ ಜೀವಿಯನ್ನು ಸಂಪೂರ್ಣವಾಗಿ ದೇಹದಿಂದ ಹೊರಹಾಕುವ ಯಾವ ಚಿಕಿತ್ಸೆಯೂ ಈವರೆಗೆ ಲಭ್ಯವಿಲ್ಲ.

ಹಾಗಾಗಿ ಇಂಥ ವ್ಯಕ್ತಿಯಲ್ಲಿ ಆಗಾಗ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಈವರೆಗೆ ವ್ಯಾಕ್ಸಿನ್ ಲಭ್ಯವಿಲ್ಲ. ಆದರೆ ಇಂಗ್ಲೆಂಡ್‌ನಲ್ಲಿ ಕುರಿಗಳಿಗೆ ಸೋಂಕು ಬರದಿರುವಂತೆ ಮಾಡುವ ವ್ಯಾಕ್ಸಿನ್ ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ ತಿಳಿಸಿದಂತೆ ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಜನರು ಈ ಜೀವಿಯನ್ನು ದೇಹದಲ್ಲಿ ಹೊಂದಿದ್ದಾರೆ.

೨೦೧೪ರಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ಜಗತ್ತಿನ ಜನಸಂಖ್ಯೆಯ ಶೇ.೩೦ರಿಂದ ೫೦ರಷ್ಟು ಜನರು ಈ ಜೀವಿಯ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಈ ಸೋಂಕಿನ ಪ್ರಮಾಣ ಜಗತ್ತಿನ ವಿಭಿನ್ನ ಭಾಗಗಳಲ್ಲಿ ಬೇರೆ ಬೇರೆ ಪ್ರಮಾಣ ದಲ್ಲಿದೆ. ಸುಮಾರು ೪೦ ಮಿಲಿಯನ್ ಅಮೆರಿಕನ್ನರಲ್ಲಿ ಅಂದರೆ ಶೇ. ೧೨ರಷ್ಟು ಜನರಲ್ಲಿ ಈ ಸೋಂಕು ಇದ್ದರೆ, ೨೦೨೦ರ ಇನ್ನೊಂದು ಅಧ್ಯಯನದ ಪ್ರಕಾರ ಇಥಿಯೋಪಿಯಾ ದೇಶದ ಶೇ.೬೪ರಷ್ಟು ಗರ್ಭಿಣಿಯರಲ್ಲಿ ಈ ಸೋಂಕು ಇತ್ತು.

ನರಗಳ ಮೇಲಿನ ಪ್ರಭಾವ: ನರಗಳ ಮೇಲೆ ಈ ಜೀವಿ ಪ್ರಭಾವ ಬೀರುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.
ಇದು ಇಲಿಗಳಲ್ಲಿ ಅವುಗಳ ವರ್ತನೆಯನ್ನು ತೀವ್ರವಾಗಿ ಬದಲಾಯಿಸುತ್ತದೆ ಎನ್ನಲಾಗಿದೆ. ಮನುಷ್ಯರಲ್ಲಿ ಮಿದುಳು ಮತ್ತು ನರವ್ಯೂಹವನ್ನೊಳಗೊಂಡು ೨ ಗಂಭೀರ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಸ್ಕಿಜೋ-ನಿಯಾ ಮತ್ತು ಬೈಪೋಲಾರ್ ಕಾಯಿಲೆ ಇವೆರಡು ಈ ಸೋಂಕಿನಿಂದ ಬರುತ್ತವೆ ಎನ್ನಲಾಗಿದೆ. ತಾಯಿಯ ಗರ್ಭದಲ್ಲಿ ಶಿಶುವಿಗೆ ಈ ಸೋಂಕು ಬಂದಿದ್ದರೆ, ಆ
ಹಂತದಲ್ಲಿ ಸೋಂಕಿಗೆ ಒಳಗಾಗದ ಮಕ್ಕಳಿಗಿಂತ ಇಂಥವರಿಗೆ ವಯಸ್ಕರಾದ ನಂತರ ಅಂಥ ವ್ಯಕ್ತಿಗೆ ಸ್ಕಿಜೋ-ನಿಯಾ ಕಾಣಿಸಿಕೊಳ್ಳುವ ಸಾಧ್ಯತೆ ಜಾಸ್ತಿ.

೨೦೧೪ರಲ್ಲಿ ‘ಜರ್ನಲ್ ಆಫ್ ನರ್ವಸ್ ಆಂಡ್ ಮೆಂಟಲ್ ಡಿಸೀಸ್’ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಸ್ಕಿಜೋ-ನಿಯಾ ಮತ್ತು ಬೈಪೋಲಾರ್ ಕಾಯಿಲೆ ಹೊಂದಿದ ವ್ಯಕ್ತಿಗಳ ರಕ್ತದಲ್ಲಿ ಮೊದಲು ಸೋಂಕು ಬಂದು ಹೋದ ಪುರಾವೆಯಾಗಿ ಈ ಜೀವಿಯ ಆಂಟಿಬಾಡಿ ಬಹಳ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ ಎನ್ನಲಾಗಿದೆ. ಹಾಗೆಯೇ ಈ ಸೋಂಕು ಮನುಷ್ಯನ
ವರ್ತನೆಯಲ್ಲಿ ಬದಲಾವಣೆ ಉಂಟುಮಾಡುತ್ತದೆ.

೨೦೧೫ರಲ್ಲಿ ‘ಜರ್ನಲ್ ಆಫ್ ಸೈಕಿಯಾಟ್ರಿಕ್ ರೀಸರ್ಚ್’ನಲ್ಲಿ ಪ್ರಕಟವಾದ ಒಂದು ಅಧ್ಯಯನವು, ‘ಈ ಸೋಂಕು ಬಂದ ವ್ಯಕ್ತಿಗಳು ಒಮ್ಮೆಲೇ ಉದ್ರೇಕಕಾರಿ ವರ್ತನೆ ತೋರುತ್ತಾರೆ. ಹಾಗೆಯೇ ಅಂಥವರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಯೂ ಜಾಸ್ತಿ’ ಎಂದು ತಿಳಿಸಿದೆ. ಮಿದುಳಿನ ಮೇಲೆ ಇಷ್ಟೆಲ್ಲ ಪ್ರಭಾವ ಬೀರುತ್ತದೆ ಎನ್ನಲಾದ ಈ ಸೋಂಕು ಅದರ ವಿರುದ್ಧದ ಅಭಿ
ಪ್ರಾಯವನ್ನೂ ಕೆಲವು ವಲಯದಲ್ಲಿ ಹೊಂದಿದೆ. ಟಾಕ್ಸೋಪ್ಲಾಸ್ಮಾ ಸೋಂಕಿಗೂ ಮತ್ತು ಮಿದುಳಿಗೂ ಇರುವ ಕಾರ್ಯಕಾರಣ ಸಂಬಂಧ ತೀರಾ ಅಸ್ಪಷ್ಟ ಎಂದು ಹಲವು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

ನರಗಳ ಮೇಲೆ ಈ ಸೋಂಕು ಪ್ರಭಾವ ಬೀರುತ್ತದೆ ಎಂದು ಕೆಲವು ಅಧ್ಯಯನಗಳು ಅಭಿಪ್ರಾಯಪಟ್ಟಿದ್ದರೂ ಇನ್ನೂ ಹಲವು ಅಧ್ಯಯನಗಳು ಈ ಸಂಬಂಧವನ್ನು ಪ್ರಶ್ನೆ ಮಾಡುತ್ತವೆ. ೨೦೧೬ರಲ್ಲಿ ‘ಪಿಎಲ್‌ಒಎಸ್‌ಒನ್ ಜರ್ನಲ್’ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಟಾಕ್ಸೋಪ್ಲಾಸ್ಮಾ ಆಂಟಿಬಾಡಿ ಹೊಂದಿ ಹುಟ್ಟಿದ ೮೦೦ ವ್ಯಕ್ತಿಗಳಲ್ಲಿ ಮಾನಸಿಕ ಕಾಯಿಲೆಗಳು, ವ್ಯಕ್ತಿತ್ವದ ಬದಲಾವಣೆ ಇವ್ಯಾವುಗಳ ಬಗ್ಗೆಯೂ ಸ್ಪಷ್ಟವಾದ ಪುರಾವೆ ದೊರಕಲಿಲ್ಲ ಎನ್ನಲಾಗಿದೆ.

ಹೆಚ್ಚಿನ ಬಿಸಿರಕ್ತದ ಪ್ರಾಣಿಗಳಿಗೆಲ್ಲ ಈ ಟಾಕ್ಸೋಪ್ಲಾಸ್ಮಾ ಸೋಂಕು ಹರಡಿ ಅವುಗಳ ದೇಹ ಪ್ರವೇಶಿಸಬಲ್ಲದು. ೨೦೦೫ರಲ್ಲಿ ‘ಇಂಟರ್ ನ್ಯಾಷನಲ್ ಜರ್ನಲ್ ಆಫ್ ಪ್ಯಾರಾಸೈಟಾಲಜಿ’ಯಲ್ಲಿ ಪ್ರಕಟಗೊಂಡ ಒಂದು ಅಧ್ಯಯನದಲ್ಲಿ ಸಮುದ್ರದ ನೀರು ನಾಯಿಗಳ ಸಂತತಿ ಕಡಿಮೆಯಾಗುವುದರಲ್ಲಿ ಟಾಕ್ಸೋಪ್ಲಾಸ್ಮಾ ಬಹಳಷ್ಟು ಕಾರಣ ಎನ್ನಲಾಗುತ್ತಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸೋಂಕಿನಿಂದ ಸತ್ತ ನೀರುನಾಯಿಗಳಲ್ಲಿ ಶೇ. ೩೮ರಲ್ಲಿ ಟಾಕ್ಸೋ ಪ್ಲಾಸ್ಮಾ ಇರುವುದು ಪತ್ತೆಯಾಗಿದೆ. ಹಾಗೆಯೇ ಪೆಂಗ್ವಿನ್‌ಗಳಿಗೂ ಇದು ಗಂಭೀರವಾದ ಸೋಂಕು ತರುತ್ತದೆ ಎನ್ನಲಾಗಿದೆ. ೨೦೧೯ರಲ್ಲಿ ‘ವೆಟರ್ನರಿ
ಪ್ಯಾರಾಸೈಟಾಲಜಿ’ಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಚಿಲಿ ದೇಶದ ಮ್ಯಾಗ್ದಲೀನಾ ದ್ವೀಪದಲ್ಲಿ ಶೇ. ೪೨ರಷ್ಟು ಪೆಂಗ್ವಿನ್‌ಗಳು ಟಾಕ್ಸೋಪ್ಲಾಸ್ಮಾ ಸೋಂಕಿಗೆ ಒಳಗಾಗಿದ್ದವು ಎನ್ನಲಾಗಿದೆ.

ಮತ್ತೊಂದು ಮುಖ್ಯ ವಿಚಾರ ಎಂದರೆ ಆ ದ್ವೀಪದಲ್ಲಿ ಬೆಕ್ಕುಗಳೇ ಇರಲಿಲ್ಲ. ಇದರರ್ಥ, ಈ ಪ್ರಾಣಿಗಳಿಗೆ ರವಾನೆಯಾದ
ಸೋಂಕು ಮನುಷ್ಯರ ಮೂಲದಿಂದ ಬಂದಿದ್ದು. ಹಲವಾರು ಪ್ರಾಣಿಗಳಲ್ಲಿ ಈ ಟಾಕ್ಸೋಪ್ಲಾಸ್ಮಾ ಕಂಡುಬರುವುದಾದರೂ ಅದು ಬೆಕ್ಕು ಮತ್ತು ಬೆಕ್ಕಿನ ಕುಟುಂಬ -ಲಿದೇಯಲ್ಲಿ ಮಾತ್ರ ವಂಶಾಭಿವೃದ್ಧಿ ಮಾಡುತ್ತದೆ. ಈ ಕುಟುಂಬದಲ್ಲಿ ಸಾಮಾನ್ಯವಾಗಿ
ನಮ್ಮಲ್ಲಿ ಕಂಡುಬರುವುದು ಮನೆಯ ಬೆಕ್ಕು. ಅದರ ಕಾಡಿನ ಸಂಬಂಧಿಗಳಾದ ಸಿಂಹ, ಚಿರತೆ ಮತ್ತು ಹುಲಿ ಇವೂ ಸೇರಿವೆ. ಹೆಚ್ಚಿನ ಸಂದರ್ಭ ಈ ಪರಾವಲಂಬಿ ಜೀವಿ ಮನೆಯ ಬೆಕ್ಕಿನಲ್ಲಿಯೇ ಕಂಡುಬರುತ್ತದೆ.

ಬೇರೆ ಪ್ರಾಣಿಗಳಲ್ಲಿ ಇದು ಏಕೆ ವಂಶಾಭಿವೃದ್ಧಿ ಮಾಡುವುದಿಲ್ಲ ಎಂಬುದರ ಬಗ್ಗೆ ಸ್ಪಷ್ಟವಾಗಿ ಗೊತ್ತಿಲ್ಲ. ಈ ಜೀವಿಯ  ವಾತಾ ವರಣ ಪ್ರವೇಶ ಬೆಕ್ಕಿನ ಮಲದಿಂದ ಮಾತ್ರ ಎನ್ನಲಾಗಿದೆ. ೨೦೧೮ರಲ್ಲಿ ಮಾಡಿದ ಅಂದಾಜಿನ ಪ್ರಕಾರ ಭೂಮಿಯಲ್ಲಿ ೩೭೩ ಮಿಲಿಯನ್‌ನಷ್ಟು ಮನೆ ಯಲ್ಲಿ ಸಾಕಿದ ಬೆಕ್ಕುಗಳಿವೆ. ತಾವು ಸೋಂಕಿಗೆ ಒಳಗಾಗಿ ಒಂದರಿಂದ ಮೂರು ವಾರದ ಒಳಗೆ
ಬೆಕ್ಕು ಊಸೈಟ್‌ಗಳನ್ನು ಹೊರಹಾಕುತ್ತದೆ. ಅದರ ನಂತರ ಈ ಜೀವಿಯ ಹರಡುವಿಕೆ ಇರುವುದಿಲ್ಲ.

ಬೆಕ್ಕಿನ ಸೋಂಕುಗಳ ಮಧ್ಯೆ ಹಲವು ಸಣ್ಣ ಹಕ್ಕಿಗಳು ಮತ್ತು ರೋಡೆಂಟ್‌ಗಳು ಮಧ್ಯವರ್ತಿ ಪ್ರಾಣಿಗಳಾಗಿ ವರ್ತಿಸುತ್ತವೆ. ಈ ಟಾಕ್ಸೋಪ್ಲಾಸ್ಮಾ ಬೆಕ್ಕುಗಳಲ್ಲಿ ಮಾತ್ರ ವಂಶಾಭಿವೃದ್ಧಿ ಮಾಡುವುದಾದರೂ, ಈ ಮೇಲಿನ ಪ್ರಾಣಿಗಳಲ್ಲಿಯೂ ಅದು ಕಂಡು
ಬರುತ್ತದೆ. ಬೆಕ್ಕಿನ ಮಲದಿಂದ ಕಲುಷಿತಗೊಂಡ ಬೀಜವನ್ನು ತಿನ್ನುವುದರಿಂದ ಹಕ್ಕಿಗೆ ಈ ಸೋಂಕು ಬರಬಹುದು. ಈ ಹಕ್ಕಿ ತನ್ನ ಉದರದಲ್ಲಿ ಸೋಂಕಿಗೆ ಒಳಗಾದ ಸಿಸ್ಟ್ ಒಂದನ್ನು ಬೆಳೆಸಿಕೊಳ್ಳುತ್ತದೆ.

ನಂತರ ಇದೇ ಹಕ್ಕಿ ಮತ್ತೊಂದು ಬೆಕ್ಕಿನಿಂದ ತಿನ್ನಲ್ಪಟ್ಟಾಗ ಅದಕ್ಕೆ ಸೋಂಕು ರವಾನೆಯಾಗುತ್ತದೆ. ಹೀಗಾಗಿ ಈ ಸಣ್ಣ ಹಕ್ಕಿಗಳು ಮತ್ತು ಉಳಿದ ರೋಡೆಂಟ್‌ಗಳು (ದಂಶಕ ಪ್ರಾಣಿ), ಬೆಕ್ಕುಗಳು ಮತ್ತೆ ಮತ್ತೆ ಸೋಂಕಿಗೆ ಒಳಗಾಗುವಂತೆ ಮಾಡಿ ಈ ಸೋಂಕಿನ ಪ್ರಸಾರದಲ್ಲಿ ಮುಖ್ಯಪಾತ್ರ ವಹಿಸುತ್ತವೆ.

ಟಾಕ್ಸೋಪ್ಲಾಸ್ಮಾ ಸೋಂಕಿಗೆ ಒಳಗಾದ ಮೇಲಿನ ದಂಶಕ ಪ್ರಾಣಿಗಳು ಬೆಕ್ಕಿನ ಬಗ್ಗೆ ಹೆದರಿಕೆ ಕಳೆದುಕೊಳ್ಳುತ್ತವೆ. ೨೦೧೧ರಲ್ಲಿ
ಕೈಗೊಂಡ ಒಂದು ಅಧ್ಯಯನದಲ್ಲಿ ಸೋಂಕಿಗೆ ಒಳಗಾದ ಇಲಿಗಳು ಬೆಕ್ಕಿನ ಮೂತ್ರದ ವಾಸನೆಗೆ ಒಂದು ರೀತಿಯಲ್ಲಿ ಲೈಂಗಿಕ ಆಕರ್ಷಣೆಗೆ ಒಳಗಾಗುತ್ತವೆ ಎನ್ನಲಾಗಿದೆ. ಅದೇ ಅಧ್ಯಯನವನ್ನು ಮನುಷ್ಯರಲ್ಲಿಯೂ ಮಾಡಿದಾಗ ಆಶ್ಚರ್ಯವೆಂಬಂತೆ
ಸೋಂಕಿಗೆ ಒಳಗಾದ ಪುರುಷರು ಬೆಕ್ಕಿನ ಮೂತ್ರದ ವಾಸನೆಗೆ ಸ್ವಲ್ಪ ಆಕರ್ಷಿತರಾದರೆ ಮಹಿಳೆಯರಲ್ಲಿ ಅದು ಕಂಡುಬರಲಿಲ್ಲ ಎನ್ನಲಾಗಿದೆ.

೨೦೨೦ರಲ್ಲಿ ಪ್ರಕಟವಾದ ಇನ್ನೊಂದು ಅಧ್ಯಯನದಲ್ಲಿ ಸೋಂಕಿತ ಇಲಿಗಳಲ್ಲಿ ಆತಂಕಿತ ಪ್ರವೃತ್ತಿ ದೂರಮಾಡಿ ಅವು ಹೆಚ್ಚು ಆಕ್ರಮಣಕಾರಿಯಾಗುವಂತೆ ಮಾಡುತ್ತವೆ ಎನ್ನಲಾಗಿದೆ. ಇಷ್ಟೆಲ್ಲಾ ಅಂಶಗಳು ಈ ಜೀವಿಯ ಬಗ್ಗೆ ಗೊತ್ತಾಗಿದ್ದರೂ ಗೊತ್ತಿ
ಲ್ಲದ ವಿಷಯಗಳು ಇನ್ನೂ ಬಹಳ ಇವೆ ಎಂದು ವಿಜ್ಞಾನಿಗಳ ಅಭಿಮತ.