ಸ್ವಾಸ್ಥ್ಯ ಸಂಪದ
Yoganna55@gmail.com
ಯೋಗವು ಭಾರತದ ಪ್ರಾಚೀನ ವೈದ್ಯ ವಿಜ್ಞಾನ. ಇದು ಸುಮಾರು ೫ ಸಾವಿರ ವರ್ಷಗಳ ಹಿಂದೆ ಮನುಷ್ಯನ ಸಮಗ್ರ ಆರೋಗ್ಯ ವೃದ್ಧಿಗೆ ಪ್ರಪಂಚಕ್ಕೆ ಭಾರತ ನೀಡಿದ ಅದ್ವಿತೀಯ ಕೊಡುಗೆ. ಆಧುನಿಕ ವೈದ್ಯವಿಜ್ಞಾನದ ಘಟಾನುಘಟಿ ತಜ್ಞರೂ ಇಂದು ‘ಯೋಗವು ವೈಜ್ಞಾನಿಕವಾದುದು’ ಎಂದು ಒಪ್ಪಿಕೊಂಡು, ಮಾನವ ಕುಲವನ್ನಿಂದು ಕಾಡುತ್ತಿರುವ ಗಂಭೀರ ಸ್ವರೂಪದ ಕಾಯಿಲೆಗಳಾದ ಏರು ರಕ್ತದೊತ್ತಡ, ಹೃದಯಾಘಾತ, ಸಕ್ಕರೆಕಾಯಿಲೆ, ಕ್ಯಾನ್ಸರ್, ಮನೋರೋಗ ಇತ್ಯಾದಿಗಳ ನಿಯಂತ್ರಣ ದಲ್ಲೂ ಯೋಗ ಸಹಕಾರಿಯೆಂದು ಒಪ್ಪಿ ಅನುಸರಿಸಲು ಸಲಹೆ ಮಾಡುತ್ತಿದ್ದಾರೆ.
ಇದು ಪುರಾತನ ಭಾರತೀಯ ವೈದ್ಯವಿಜ್ಞಾನಿಗಳಿಗೆ ಇದ್ದ ವೈಜ್ಞಾನಿಕ ನೋಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಗುಪ್ತಗಾಮಿನಿಯಾಗಿ ಅನುಕರಣೆ ಯಾಗುತ್ತಿದ್ದ ಯೋಗಾಭ್ಯಾಸದ ಮಹತ್ವವನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ೨೦೧೪ರ ಜೂನ್ ೨೧ರಲ್ಲಿ ವಿಶ್ವಸಂಸ್ಥೆಯಲ್ಲಿ ಯೋಗದ ಪ್ರಾಮುಖ್ಯವನ್ನು ಇಡೀ ಪ್ರಪಂಚಕ್ಕೆ ಮನವರಿಕೆ ಮಾಡಿಕೊಟ್ಟ ಪರಿಣಾಮ ದಿಂದಾಗಿ ೨೦೧೫ರ ಜೂನ್ ೨೧ರಿಂದ ಪ್ರಪಂಚಾದ್ಯಂತ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುವ ಪದ್ಧತಿ ಜಾರಿಗೆ ಬಂತು.
ಯೋಗ ಎಂದರೇನು? ಇದರ ವಿಧಗಳಾವುವು? ಅಭ್ಯಾಸ ಹೇಗೆ? ಇತಿಮಿತಿಗಳೇನು? ಮತ್ತು ಸತ್ಪರಿಣಾಮಗಳೇನು ಎಂಬುದರ ಬಗ್ಗೆ ಅಂದು ಪ್ರಪಂಚಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಜರುಗುವ ಹಿನ್ನೆಲೆಯಲ್ಲಿ ಈ ಲೇಖನ. ವಿಶ್ವ ಯೋಗ ದಿನಾಚರಣೆಯ ಪ್ರತಿವರ್ಷವೂ ಘೋಷವಾಕ್ಯವೊಂದನ್ನು ಹೊರಡಿಸಿ ಅದನ್ನು
ಪ್ರಧಾನವಾಗಿಟ್ಟುಕೊಂಡು ಯೋಗದ ಸುತ್ತಮುತ್ತಲಿನ ವಿಚಾರಗಳನ್ನು ಪ್ರಚಾರ ಮಾಡಲಾಗುತ್ತದೆ.
೨೦೨೨ರ ಘೋಷವಾಕ್ಯ ‘ಮಾನವೀಯತೆಗಾಗಿ ಯೋಗ’ ಎಂಬುದಾಗಿದ್ದು, ಈ ವರ್ಷದ ಘೋಷವಾಕ್ಯ ಇಡೀ ವಿಶ್ವವೇ ಒಂದು ಕುಟುಂಬ, ‘ವಸುಧೈವ ಕುಟುಂಬಕಂ’ ಎಂಬುದಾಗಿದೆ.
ಯೋಗ ಎಂದರೇನು?
ಯೋಗ ಎಂದರೆ ಕೂಡಿಸುವುದು ಎಂದರ್ಥ. ಮನುಷ್ಯ ಸೃಷ್ಟಿಯ ವಿಕಾಸ ಕ್ರಿಯೆಯಲ್ಲಿ ಉಗಮಿಸಿದ ಅತ್ಯುನ್ನತ ಜೀವಿಯಾಗಿದ್ದು, ಅವನು ದೇಹ, ಮನಸ್ಸು ಮತ್ತು ಆತ್ಮಗಳನ್ನೊಳಗೊಂಡ ನಿರಂತರವಾಗಿ ಸೃಷ್ಟಿ ಮತ್ತು ಅತೀತಶಕ್ತಿಯೊಡನೆ ಸಂಪರ್ಕ
ಹೊಂದಿರುವ ಇವುಗಳೊಡನೆ ಜೋಡಿತ ಅಧ್ಯಾತ್ಮಿಕ ಜೀವಿಯಾಗಿದ್ದಾನೆ. ಮನುಷ್ಯನ ಬದುಕಿನ ಉದ್ದೇಶ ಅವನು ನಿರಂತರ ವಾಗಿ ಸಂತೋಷವಾಗಿದ್ದು, ಅವನೊಡನೆ ಜೋಡಿತವಾಗಿರುವ ಸೃಷ್ಟಿಯ ಎಲ್ಲವುಗಳನ್ನು ಪೋಷಿಸಿ ಸಂತಾನೋತ್ಪತ್ತಿ ಮಾಡಿ
ಅಸುನೀಗುವುದಾಗಿದೆ.
ಮನುಷ್ಯ ಆರೋಗ್ಯವಾಗಿರಬೇಕಾದಲ್ಲಿ ಪ್ರಥಮ ಹಂತದಲ್ಲಿ ದೇಹ, ಆತ್ಮಮತ್ತು ಮನಸ್ಸುಗಳನ್ನು ಪರಸ್ಪರ ಸಂಯೋಜಿ
ಸಿಕೊಂಡು (ಸ್ವ ಸಂಯೋಗ- ಸೆಲ್ ಯೂನಿಯನ್), ನಂತರ ಪರಿಸರದೊಡನೆ ಸಂಯೋಜನೆಗೊಂಡು (ಪರ ಸಂಯೋಜನೆ), ಅಂತಿಮವಾಗಿ ಸೃಷ್ಟಿಯನ್ನೇ ನಿಯಂತ್ರಿಸುತ್ತಿರುವ ಅತೀತ ಶಕ್ತಿಯೊಡನೆ ತನ್ನನ್ನು ಸಂಯೋಜಿಸಿಕೊಳ್ಳಬೇಕು (ಅತೀತ
ಶಕ್ತಿಯೊಡನೆ ಸಂಯೋಗ). ಯೋಗದ ಪ್ರಮುಖ ಉದ್ದೇಶ ಈ ಸಂಯೋಜನಾ ಕ್ರಿಯೆಗಳಾಗಿವೆ.
ಸಮಗ್ರ ಯೋಗಾಭ್ಯಾಸ ಮನುಷ್ಯನನ್ನು ತನ್ನೊಳಗಿನ ಮನಸ್ಸು, ದೇಹ ಮತ್ತು ಆತ್ಮಗಳೊಡನೆ ಸಂಯೋಜಿಸಿ ನಂತರ ಇಡೀ ಸೃಷ್ಟಿಯೊಡನೆ ಅವನನ್ನು ಕೂಡಿಸಿಕೊಂಡು ನೆಮ್ಮದಿಯಿಂದ ಬದುಕುವಂತಾಗಿಸುವ ಮನೋವೃತ್ತಿಯನ್ನು ತಂದುಕೊಡುತ್ತದೆ.
ಮನುಷ್ಯನ ನಿಯಂತ್ರಣ
ಯೋಗದ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಮನುಷ್ಯನ ರಚನೆ, ಪರಿಸರ ಮತ್ತು ಅತೀತ ಶಕ್ತಿಯೊಡನೆ ಅವನಿಗಿರುವ ಸಂಬಂಧ ಇವೆಲ್ಲವನ್ನು ಅರ್ಥಮಾಡಿಕೊಳ್ಳಬೇಕು. ಮನುಷ್ಯನ ದೇಹ ಜೀವಕೋಶಗಳಿಂದಾಗಿದೆ. ಅವುಗಳ ಉಗಮ
ಮತ್ತು ಪೋಷಣೆ ಪರಿಸರದಲ್ಲಿ ಲಭ್ಯವಿರುವ ಆಹಾರಾಂಶಗಳಿಂದಾಗಿದ್ದು, ಪರಿಸರಕ್ಕೂ ದೇಹಕ್ಕೂ ಅವಿನಾಭಾವ ಸಂಬಂಧ ವಿದೆ.
ಮನುಷ್ಯನನ್ನು ಒಳಗೊಂಡಂತೆ ಸೃಷ್ಟಿಯಲ್ಲಿರುವ ಎಲ್ಲವೂ ವಸ್ತು ಮತ್ತು ಶಕ್ತಿಗಳ ರೂಪವಾಗಿದ್ದು, ದೇಹ ವಸ್ತುವಿನ ಪ್ರತೀಕವಾದರೆ ಅದರೊಳಗಿರುವ ಜೈವಿಕ ವಿದ್ಯುತ್ ಶಕ್ತಿಯ ರೂಪವಾಗಿದೆ. ಜೀವಕೋಶಗಳ ಕಾರ್ಯ ಜರುಗುವುದೇ ಅದರೊಳಗೆ ಉತ್ಪತ್ತಿಯಾಗುವ ಜೈವಿಕ ವಿದ್ಯುತ್‌ನಿಂದಾಗಿ. ದೇಹದೊಳಗಿನ ಜೈವಿಕ ಶಕ್ತಿ ವಿಶ್ವಶಕ್ತಿಯ ಅಣುವಾಗಿದ್ದು, ಇದು ವಿಶ್ವಶಕ್ತಿ ಯೊಡನೆ ಮತ್ತು ಅಂತಿಮವಾಗಿ ಅತೀತ ಶಕ್ತಿಯೊಡನೆ ಸಂಬಂಧವನ್ನು ಹೊಂದಿದೆ.
ವಿಶ್ವಶಕ್ತಿಯನ್ನು ನಿಯಂತ್ರಿಸುವ ಮನುಷ್ಯನ ಒಳಗಿರುವ ಅತೀತ ಶಕ್ತಿಯ ಅಣುವೇ ‘ಆತ್ಮ’ವಾಗಿದೆ. ಆತ್ಮ ಎಂದರೆ ಶಕ್ತಿ
ಎಂದರ್ಥ. ಮನುಷ್ಯನ ಒಳಗಿರುವ ಜೈವಿಕಶಕ್ತಿಯೂ ವಿಶ್ವಶಕ್ತಿಯಿಂದಲೇ ಬಂದಿರುವುದಾದ್ದರಿಂದ ಮನುಷ್ಯನ ಒಳಗಿರುವ ಜೈವಿಕಶಕ್ತಿಗೂ ವಿಶ್ವಶಕ್ತಿಗೂ ಅವಿನಾಭಾವ ಸಂಬಂಧವಿದ್ದು, ಮನುಷ್ಯ ವಿಶ್ವಶಕ್ತಿ ಯಿಂದ ನಿಯಂತ್ರಿಸಲ್ಪಡುತ್ತಾನೆ.
ಇವೆಲ್ಲವೂ ವಿಜ್ಞಾನಿಗಳಿಂದಲೂ ಅನುಮೋದಿತವಾಗಿರುವ ಅಂಶಗಳು. ಮಿದುಳಿನಲ್ಲಿರುವ ಮನಸ್ಸು ಆತ್ಮದ ಹೊರ
ಸಲಕರಣೆಯಾಗಿದ್ದು, ದೇಹದ ಎಲ್ಲ ಭಾಗಗಳನ್ನು ನರವ್ಯವಸ್ಥೆ, ಹಾರ್ಮೋನ್‌ಗಳ ಮೂಲಕ ನಿಯಂತ್ರಿಸುತ್ತದೆ. ಮನಸ್ಸು ಚಂಚಲವಾಗಿದ್ದು, ಅದರಲ್ಲಿ ಉದ್ಭವವಾಗುವ ಆಲೋಚನೆಗಳು ಮತ್ತು ಭಾವಗಳಿಗನುಗುಣವಾಗಿ ದೇಹ ಪ್ರತಿಕ್ರಿಯಿಸುತ್ತದೆ.
ಸಂತೋಷ ಮತ್ತು ಅಸಂತೋಷ
ಚಂಚಲಶೀಲ ಮನಸ್ಸು ಸಕಾರಾತ್ಮಕ, ನಕಾರಾತ್ಮಕ ಭಾವಗಳು ಮತ್ತು ಆಲೋಚನೆಗಳ ನಡುವೆ ಸದಾಕಾಲ ಹೊರಳಾಡು ತ್ತಿರುತ್ತದೆ. ಸಕಾರಾತ್ಮಕ ಭಾವ ಮತ್ತು ಆಲೋಚನೆಗಳು ದೇಹದಲ್ಲಿ ಡೋಪಮಿನ್, ಎಂಡಾರ್ಫಿನ್ ಮತ್ತಿತರ ಸಂತೋಷಕಾರಕ ರಾಸಾಯನಿಕಗಳನ್ನು ಉತ್ಪತ್ತಿಮಾಡಿ ಆರೋಗ್ಯಕ್ಕೆ ಪೂರಕವಾಗುತ್ತವೆ. ನಕಾರಾತ್ಮಕ ಭಾವ ಮತ್ತು
ಆಲೋಚನೆಗಳು ದೇಹದಲ್ಲಿ ಅಽಕ ಪ್ರಮಾಣದಲ್ಲಿ ಅಡ್ರಿನಲಿನ್ ಮತ್ತು ನಾರ್ ಅಡ್ರಿನಲಿನ್, ಕಾರ್ಟಿಕೋಸ್ಟೀರಾಯ್ಡ್‌ನಂಥ ಅಸಂತೋಷಕಾರಕ ರಾಸಾಯನಿಕಗಳನ್ನುಂಟುಮಾಡಿ ದೇಹದೊಳಗಿನ ಸಮಸ್ಥಿತಿಯನ್ನು ಏರುಪೇರುಗೊಳಿಸಿ ಅನಾರೋ
ಗ್ಯಕ್ಕೆ ನಾಂದಿಹಾಡುತ್ತವೆ.
ಮನಸ್ಸು ದೇಹವನ್ನು ನಿಯಂತ್ರಿಸುವುದರಿಂದ ಅದನ್ನು ಸದಾಕಾಲ ಸಂತೋಷ ಸ್ಥಿತಿಯಲ್ಲಿಟ್ಟಲ್ಲಿ ದೇಹದೊಳಗಿನ ಕ್ರಿಯೆ
ಗಳು ಸಹಜವಾಗಿ ಜರುಗಿ ಆರೋಗ್ಯ ಸ್ಥಿತಿ ಉಂಟಾಗುತ್ತದೆ. ಇಲ್ಲದಿದ್ದಲ್ಲಿ ಅನಾರೋಗ್ಯದ ಸ್ಥಿತಿಗೆ ನಾಂದಿಗುತ್ತದೆ. ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಸಂತೋಷ ನೀಡುವ ಆಲೋಚನೆಗಳನ್ನು ಮನಸ್ಸಿನಲ್ಲಿ ಉದ್ಭವವಾಗುವ ರೀತಿ ಮನಸ್ಸನ್ನು ತರಬೇತು ಗೊಳಿಸುವುದರಿಂದ ಮಾತ್ರ ಇದು ಸಾಧ್ಯ. ಯೋಗಾಭ್ಯಾಸ ಮನಸ್ಸನ್ನು ಅಧ್ಯಾತ್ಮಿಕ ಚಿಂತನೆ ಗಳಿಂದ ಕೃಷಿಗೊಳಿಸಿ ನಕಾರಾತ್ಮಕ ಭಾವಗಳನ್ನು ಹತೋಟಿಯಲ್ಲಿಡುತ್ತದೆ.
ಅಧ್ಯಾತ್ಮಿಕ ಆರೋಗ್ಯ ಎಂದರೇನು?
‘ಆರೋಗ್ಯ ಎಂಬುದು ಕೇವಲ ರೋಗ ಅಥವಾ ಊನರಹಿತ ಸ್ಥಿತಿಯಾಗಿರದೆ ಅದು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಇರತಕ್ಕ ಸಂತೋಷ ಸ್ಥಿತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆಯು ವ್ಯಾಖ್ಯಾನಿಸಿದೆ. ದೈಹಿಕ ಆರೋಗ್ಯ ದೇಹಕ್ಕೆ ಸಂಬಂಽಸಿದ್ದಾಗಿದ್ದು, ಇದನ್ನು ನಿಯಂತ್ರಿಸುವ ಅಂಶಗಳು ಹಲವಾರು (ಆಹಾರ, ವ್ಯಾಯಾಮ, ದೇಹದ ತೂಕ, ಚಟಗಳು, ವಂಶವಾಹಿಗಳು ಇತ್ಯಾದಿ). ಸಾಮಾಜಿಕ ಆರೋಗ್ಯ ಇಡೀ ಸಮಾಜ ಮತ್ತು ಪರಿಸರಕ್ಕೆ ಸಂಬಂಽ ಸಿದ್ದಾಗಿದ್ದು, ಸಾಮಾಜಿಕ ನಡವಳಿಕೆಗಳು, ಪರಿಸರ, ವಸತಿ ಇವೆಲ್ಲವೂ ಇದರ ಮೇಲೆ ಪರಿಣಾಮ ಬೀರುತ್ತವೆ. ಅಧ್ಯಾತ್ಮಿಕ ಆರೋಗ್ಯ ಅತೀತಶಕ್ತಿ ಮತ್ತು ಸೃಷ್ಟಿಯ ಪ್ರತಿಯೊಂದರ ನಡುವೆ ಮಾನವ ನಿಗಿರುವ ಪೂರ್ವನಿಗದಿತ ಕಾರ್ಯಗಳನ್ನು ಅರಿತು
ಅವುಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಿ, ಸಮಗ್ರ ದೃಷ್ಟಿಯ ಜೀವನಶೈಲಿಯನ್ನು ರೂಢಿಸಿಕೊಂಡು ನಿರಂತರವಾಗಿ ಆನಂದದಿಂದ ಇರುವ ಸ್ಥಿತಿಯಾಗಿರುತ್ತದೆ. ಈ ಅರಿವಿಗೆ ಸಂಬಂಧಿಸಿದ ಚಿಂತನೆ ಮತ್ತು ಆಲೋಚನೆಗಳನ್ನು ‘ಅಧ್ಯಾತ್ಮಿಕ
ಚಿಂತನೆಗಳು’ ಎನ್ನಲಾಗುತ್ತದೆ.
ಅಧ್ಯಾತ್ಮ ದೇವರುಗಳ, ಧರ್ಮಗಳ ಸುತ್ತ ಕಟ್ಟಿಕೊಂಡಿರುವ ಕಟ್ಟುಕಥೆಗಳಲ್ಲ. ಅದು ಸೃಷ್ಟಿಯ ಉಗಮ, ವಿಕಾಸ,
ಒಂದಕ್ಕೊಂದಿರುವ ಸಂಬಂಧ, ಸೃಷ್ಟಿಯಲ್ಲಿರುವ ಪೂರ್ವ ನಿಗದಿತ ಕಾರ್ಯಚಕ್ರಗಳು, ಬದುಕಿನ ಮೂಲ ಉದ್ದೇಶ, ಮನಸ್ಸಿನ ನಿಯಂತ್ರಣ, ಜವಾಬ್ದಾರಿಗಳು ಇವೆಲ್ಲ ವೈಜ್ಞಾನಿಕ ಅಂಶಗಳ ಹಿನ್ನೆಲೆಯಲ್ಲಿ ಮನುಷ್ಯ ರೂಢಿಸಿಕೊಳ್ಳಬೇಕಾದ ನಿರಂತರ
ವಾಗಿ ಆನಂದ ನೀಡುವ ಜೀವನಶೈಲಿಯಾಗಿರುತ್ತದೆ.
ತಾನೂ ಸಂತೋಷವಾಗಿದ್ದು, ಇತರರನ್ನೂ ಸಂತೋಷದಿಂದಿಡುವ ಸಮಗ್ರ ದೃಷ್ಟಿಯ ಗುರಿಯನ್ನು ಅಧ್ಯಾತ್ಮ ಹೊಂದಿದೆ. ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯಗಳನ್ನು ನಿಯಂತ್ರಿಸುವ ಎಲ್ಲ ಅಂಶಗಳ ಅರಿವಿನ ಹಿನ್ನೆಲೆಯಲ್ಲಿ ಅವೆಲ್ಲವನ್ನು ಸಕಾರಾತ್ಮಕವಾಗಿ ಸಂಯೋಜಿಸಿದ ಸಮಗ್ರ ಜೀವನ ಶೈಲಿಯ ಪರಿಪಾಲನೆಯಿಂದ ಮನಸ್ಸು ಅಧ್ಯಾತ್ಮಿಕವಾಗಿ ಕೃಷಿಗೊಂಡು, ದೇಹದ ಸಹಜ ರೋಗನಿರೋಧಕ ಶಕ್ತಿ ವೃದ್ಧಿಸಿ ನಿರಂತರ ಆರೋಗ್ಯಸ್ಥಿತಿ ಉಂಟಾಗುತ್ತದೆ. ಇದೇ ಅಧ್ಯಾತ್ಮಿಕ
ಆರೋಗ್ಯ. ಅಧ್ಯಾತ್ಮಿಕ ಆರೋಗ್ಯವನ್ನು ಅಂದರೆ ನಿರಂತರ ಸುಖಾನುಭವವನ್ನು ಔಷಧಗಳಿಂದ ಪಡೆಯಲು ಅಸಾಧ್ಯ. ಅದು ಅಧ್ಯಾತ್ಮಿಕ ಚಿಂತನೆಗಳ ಪರಿಪಾಲನೆಯಿಂದ ಮಾತ್ರ ಸಾಧ್ಯ.
ಯೋಗದ ವಿಧಗಳು
ಬಹುಪಾಲು ಜನರು ತಿಳಿದಿರುವಂತೆ ಯೋಗವೆಂಬುದು ಕೇವಲ ಆಸನಗಳ ಕೂಟವಲ್ಲ. ಇದು ಅಧ್ಯಾತ್ಮಿಕ ವಿಜ್ಞಾನವನ್ನು ವಸ್ತುನಿಷ್ಠವಾಗಿ ಪಾಲಿಸುವ ಜೀವನಶೈಲಿಯನ್ನು ಒಳಗೊಂಡಿದ್ದು, ಇದರ ಜ್ಞಾನ ಮತ್ತು ಪಾಲನೆಯನ್ನು ಪ್ರಧಾನವಾಗಿ ೪ ವಿಧಗಳಾಗಿ ವಿಂಗಡಿಸಲಾಗಿದೆ. ಅವೆಂದರೆ ಅಧ್ಯಾತ್ಮಿಕ ಜ್ಞಾನವನ್ನೊಳಗೊಂಡ ಜ್ಞಾನಯೋಗ, ಬದುಕಿನಲ್ಲಿ ಸಂತೋಷ ವಾಗಿರಲು ಕೈಗೊಳ್ಳಬೇಕಾದ ಕರ್ಮ ಗಳನ್ನೊಳಗೊಂಡ ಕರ್ಮಯೋಗ, ಸೃಷ್ಟಿಯ ಮತ್ತು ಮನುಷ್ಯನ ಸೃಷ್ಟಿಗೆ ಹಾಗೂ ಬದುಕಿಗೆ ಸವಲತ್ತು ಗಳನ್ನು ಒದಗಿಸಿದ ಸೃಷ್ಟಿ ಮತ್ತು ಸೃಷ್ಟಿಕರ್ತನಿಗೆ ಕೃತಜ್ಞತೆಯನ್ನು ಅರ್ಪಿಸುವ ಭಾವದಿಂದ
ಮನಸ್ಸನ್ನು ಕೃಷಿಮಾಡುವ ಭಕ್ತಿಯೋಗ ಮತ್ತು ಮನಸ್ಸು, ದೇಹ ಹಾಗೂ ಆತ್ಮಗಳನ್ನು ಸಂಯೋಜಿಸಿ, ನಂತರ ಸೃಷ್ಟಿ ಹಾಗೂ ಅತೀತಶಕ್ತಿಯೊಡನೆ ಸಂಯೋಜಿಸುವ ರಾಜಯೋಗ.
ಜ್ಞಾನಯೋಗವು ಯೋಗಕ್ಕೆ ಸಂಬಂಧಿಸಿದ ಎಲ್ಲಾ ವೈಜ್ಞಾನಿಕ ಮಾಹಿತಿಗಳನ್ನು ಒಳಗೊಂಡಿದೆ. ಕರ್ಮಯೋಗವು ಸೃಷ್ಟಿಯಲ್ಲಿನ ಪರ್ವ ನಿಗದಿತ ಕಾರ್ಯಚಕ್ರಗಳನ್ನು ಪೋಷಿಸಲು ಮಾಡಬೇಕಾದ ಪುಣ್ಯಕಾರ್ಯಗಳನ್ನು ಮತ್ತು ಮಾಡಬಾರದ
ಪಾಪಕಾರ್ಯಗಳನ್ನು ಬೋಧಿಸುತ್ತದೆ. ಭಕ್ತಿಯೋಗವು ಮನಸ್ಸಿನ ಅಹಂ ಅನ್ನು ಮಾಗಿಸಿ ಅತೀತ ಶಕ್ತಿಯ ಅಧೀನದಲ್ಲಿರುವಿಕೆ ಯನ್ನು ಪರಿಚಯಿಸುತ್ತದೆ. ರಾಜಯೋಗವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ
ಮತ್ತು ಸಮಾಽ ಎಂಬ ೮ (ಅಷ್ಟಾಂಗ ಯೋಗ) ಉಪಪ್ರಕಾರಗಳನ್ನು ಒಳಗೊಂಡಿದೆ.
ಯೋಗಾಭ್ಯಾಸದಿಂದ ದೇಹದ ಭಾಗಗಳು, ಉಸಿರು, ಮನಸ್ಸುಗಳ ನಿಯಂತ್ರಣ ಮತ್ತು ಸಮನ್ವಯತೆ ಮೂಡಿ ಮನಸ್ಸು
ಅಧ್ಯಾತ್ಮಿಕವಾಗಿ ಕೃಷಿಯಾಗಿ ಅಧ್ಯಾತ್ಮಿಕ ಶಕ್ತಿಯ ಗಳಿಕೆಯಾಗಿ ಅತೀತ ಶಕ್ತಿಯ ಅರಿವುಂಟಾಗಿ ನಿರಂತರ ಸುಖಾನುಭವ ಉಂಟಾಗುತ್ತದೆ. ಯೋಗಾಭ್ಯಾಸವು ಅಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸುತ್ತದೆ.
ವಿಶ್ವವೇ ಒಂದು ಕುಟುಂಬ
ಯೋಗದ ಸಮಗ್ರ ಅರಿವು ಮತ್ತು ಪರಿಪಾಲನೆಯಿಂದ ನಾನು ವಿಶ್ವದೊಡನೆ ಅನುಕ್ರಮವಾಗಿ ಜೋಡಿತನಾಗಿದ್ದೇನೆ, ವಿಶ್ವದ ಉಳಿವಿನಲ್ಲಿ ನನ್ನ ಉಳಿವೂ ಇದೆ ಎಂಬ ಅರಿವು ಉಂಟಾಗಿ, ವಿಶ್ವವೇ ಒಂದು ಕುಟುಂಬ, ನಾನು ಅದರ ಸದಸ್ಯ ಎಂಬ
ಸಕಾರಾತ್ಮಕ ಭಾವ ಉಂಟಾಗಿ ವಿಶ್ವಪ್ರಜ್ಞೆ ಬೆಳೆಯುತ್ತದೆ.
ಯೋಗವು ಶಿಕ್ಷಣದ ಭಾಗವಾಗಲಿ
ಯೋಗವು ಲಿಂಗ, ಧರ್ಮ, ಜಾತಿ, ವಯಸ್ಸು, ವರ್ಣ, ಪ್ರಾದೇಶಿಕ ಭೇದವಿಲ್ಲದೆ ಮಾನವ ಕುಲದ ಎಲ್ಲರೂ ಅನುಸರಿಸಿ ಪ್ರತಿಯೊಬ್ಬರೂ ಸಂತೋಷದಿಂದಿದ್ದು, ವಿಶ್ವಶಾಂತಿಗೆ ಪೂರಕವಾಗುವ ವೈಜ್ಞಾನಿಕ ಆಚರಣೆಯಾದುದರಿಂದಲೇ ವಿಶ್ವಸಂಸ್ಥೆ ಪ್ರಪಂಚದೆಲ್ಲೆಡೆ ಎಲ್ಲರೂ ಯೋಗಾಭ್ಯಾಸವನ್ನು ಜೀವನಶೈಲಿಯಾಗಿ ಸ್ವೀಕರಿಸಬಹುದೆಂದು ಘೋಷಿಸಿರುತ್ತದೆ.
ಯೋಗದ ವೈಜ್ಞಾನಿಕ ವಿಚಾರಗಳನ್ನು ಪ್ರಾಥಮಿಕ ಹಂತದ ಶಿಕ್ಷಣದಲ್ಲಿಯೇ ಅಳವಡಿಸಿ ಅರಳುವ ಮನಸ್ಸುಗಳಲ್ಲಿಯೇ ಅಧ್ಯಾತ್ಮಿಕ ಚಿಂತನೆಗಳನ್ನು ಬೇರೂರಿಸಿದಲ್ಲಿ ಮಾತ್ರ ಮೌಲ್ಯಯುತ ದೃಢ ಮನಸ್ಸುಗಳನ್ನು ನಿರ್ಮಾಣಮಾಡಿ ಆರೋಗ್ಯ
ಯುತ ಸಮಾಜವನ್ನು ಕಟ್ಟಲು ಸಾಧ್ಯ ಎಂಬ ಅಂಶ ವನ್ನು ಸರಕಾರ ಮತ್ತು ಸಮಾಜ ಮನಗಾಣಬೇಕು.