Sunday, 15th December 2024

ಸುಳ್ಳುಸುದ್ದಿಗೆ ಕಡಿವಾಣ: ಐರೋಪ್ಯರನ್ನು ಅನುಸರಿಸಿ

‘ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್ ಹಾವಳಿ ಮಿತಿ ಮೀರಿದೆ. ಸುಳ್ಳು ಸುದ್ದಿಗಳಿಂದಾಗಿ ಜನರಲ್ಲಿ ಅನವಶ್ಯಕ ಗೊಂದಲ ಉಂಟಾಗುತ್ತಿದೆ. ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚಿ ಕ್ರಮ ಜರುಗಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈಬರ್ ಪೊಲೀಸರಿಗೆ ಸೂಚನೆ
ನೀಡಿರುವುದು ಸ್ವಾಗತಾರ್ಹ.

ಆದರೆ ಅದು ಎಷ್ಟರ ಮಟ್ಟಿಗೆ ಯಶಸ್ಸಾಗುತ್ತದೆ ಎಂಬುದು ಇಲ್ಲಿ ಪ್ರಶ್ನೆ. ಸುಳ್ಳು ಸುದ್ದಿಯನ್ನು ಅನಾಯಾಸವಾಗಿ ಹರಿಬಿಡಲು ವಾಟ್ಸ್‌ಆಪ್ ಅಗ್ಗದ ಸಾಧನವಾಗಿದೆ. ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಮೇಲೆ ನಿಗಾವಹಿಸಿ
ಡೇಟಾವನ್ನು ನೀಡುವಂತೆ ತನಿಖಾ ಸಂಸ್ಥೆಗಳು ಒತ್ತಡ ಹೇರುತ್ತಲೇ ಇವೆ. ಹಲವು ಪ್ರಕರಣಗಳಲ್ಲಿ ಡೇಟಾವನ್ನೂ ಪಡೆದಿವೆ. ಆದರೆ ವಾಟ್ಸ್‌ಆಪ್ ಮಾತ್ರ ಖಾಸಗಿತನದ ಹೆಸರಿನಲ್ಲಿ ಸುಳ್ಳು ಸುದ್ದಿಕೋರರಿಗೂ ಆಶ್ರಯ ನೀಡುತ್ತಿದೆ.

ಹೀಗಾಗಿ ಸುಳ್ಳು ಸುದ್ದಿ ಸೃಷ್ಟಿಸಿದ ನಿಜವಾದ ವ್ಯಕ್ತಿಗಳನ್ನು ಬಂಧಿಸಲು ಸಾಧ್ಯವೇ ಇಲ್ಲ ಎಂಬಂತಾ ಗಿದೆ. ಅಲ್ಲದೆ, ಸುಳ್ಳು ಸುದ್ದಿಗಳ ವಿಚಾರದಲ್ಲಿ ಅದನ್ನು ಸ್ವೀಕರಿಸುವ ವ್ಯಕ್ತಿ ಬೇರೊಬ್ಬರಿಗೆ ಕಳುಹಿಸುವ ಮುನ್ನ ಪರಿಶೀಲಿಸಬೇಕು ಎಂಬ ಕಾನೂನು ಕೂಡ ಇಲ್ಲದಿರುವುದು ಸುಳ್ಳು ಸುದ್ದಿಗಳ ಹರಿದಾಟ ಹೆಚ್ಚಾಗಲು ಕಾರಣ. ಸುಳ್ಳು ಸುದ್ದಿಯ ನಿಯಂತ್ರಣಕ್ಕೆ ಐರೋಪ್ಯ ಒಕ್ಕೂಟವು ಈ ಹಿಂದೆಯೇ ರೂಪಿಸಿರುವ ಸೂತ್ರವೊಂದನ್ನು ರಾಜ್ಯ ಸರಕಾರ ಪರಿಗಣಿಸಬಹುದು. ಸುಳ್ಳು ಸುದ್ದಿ ಹಾಗೂ ಆನ್‌ಲೈನ್ ತಪ್ಪು ಮಾಹಿತಿ ಪ್ರಸರಣದ ವಿರುದ್ಧ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಉನ್ನತ ಮಟ್ಟದ ತಜ್ಞರ ಸಮಿತಿಯೊಂದನ್ನು ಒಕ್ಕೂಟ ನೇಮಕ ಮಾಡಿತ್ತು. ಈ ಸಮಿತಿಯು ೨೦೧೮ರಲ್ಲಿ ಕೆಲ ಶಿಫಾರಸುಗಳನ್ನು ಸಲ್ಲಿಸಿತ್ತು.

ಆನ್‌ಲೈನ್ ಸುದ್ದಿಗಳು-ಮಾಹಿತಿಗಳ ಪಾರದರ್ಶಕತೆಯನ್ನು ಹೆಚ್ಚಿಸುವುದು, ಫೇಕ್ ನ್ಯೂಸ್ ಪ್ರಸಾರವನ್ನು ನಿಯಂತ್ರಿಸಲು ಮಾಧ್ಯಮ ಮತ್ತು ಮಾಹಿತಿ ಸಾಕ್ಷರತೆಯನ್ನು ಪ್ರೋತ್ಸಾಹಿಸುವುದು, ಫೇಕ್ ನ್ಯೂಸ್‌ನ್ನು ಒಡನೆಯೇ ಗುರುತಿಸಬಲ್ಲ ತಂತ್ರಜ್ಞಾನ ಸಲಕರಣೆಗಳು ಸೂತ್ರಗಳನ್ನು ಆನ್‌ಲೈನ್ ಮಾಧ್ಯಮದ ಬಳಕೆದಾರರಿಗೆ ನೀಡುವುದು, ಐರೋಪ್ಯ ಸುದ್ದಿ ಮಾಧ್ಯಮದ ವೈವಿಧ್ಯ ಮತ್ತು ವಿಶಿಷ್ಟ ಸೊಗಡನ್ನು ಕಾಪಾಡಿಕೊಳ್ಳುವುದು ಹಾಗೂ ಫೇಕ್ ನ್ಯೂಸ್‌ನ ದುಷ್ಪರಿಣಾಮಗಳ ಕುರಿತಾದ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವುದು ಈ ಶಿಫಾರಸುಗಳ ತಿರುಳು. ರಾಜ್ಯ ಸರಕಾರವೂ ಐರೋಪ್ಯ ಒಕ್ಕೂಟದ ನಿಟ್ಟಿನಲ್ಲಿ ಚಿಂತಿಸಿ, ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕಿದೆ.