ನೆನಪು
ನಂ.ಶ್ರೀ.ಕಂಠಕುಮಾರ್
ಕೆ.ಜನಾ ಕೃಷ್ಣಮೂರ್ತಿರವರು ತಮಿಳು ನಾಡಿನಲ್ಲಿ ಜನಿಸಿ, ವಿದ್ಯಾಭ್ಯಾಸದ ನಂತರ ವಕೀಲರಾಗಿ ವೃತ್ತಿಜೀವನದಲ್ಲಿ ತೊಡಗಿಸಿ ಕೊಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ದಾಂತಕ್ಕೆ ಆಕರ್ಷಿತರಾಗಿ ತನ್ಮೂಲಕ ಭಾರತೀಯ ಜನ ಸಂಘದ ದಕ್ಷಿಣ ಭಾರತದ ಪ್ರಮುಖ ನಾಯಕರಾಗಿ ಆನಂತರ ಭಾರತೀಯ ಜನತಾ ಪಕ್ಷದ ಸ್ಥಾಪಕ ಪ್ರಮುಖ ಸದಸ್ಯರಾಗಿ , ರಾಷ್ಟ್ರೀಯ ಪ್ರಧಾನ
ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಉಪಾಧ್ಯಕ್ಷರಾಗಿ ವಿವಿಧ ಹಂತಗಳಲ್ಲಿ ಸೇವೆಯನ್ನು ಸಲ್ಲಿಸಿ 2001 ರಲ್ಲಿ 7 ನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡು ಪಕ್ಷವನ್ನು ಸಂಘಟಿಸಿದವರಲ್ಲಿ ಪ್ರಮುಖರು. ನಂತರ ಇವರು ಗುಜರಾತ್ನಿಂದ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಗೊಂಡು ಮಾನ್ಯ ಅಟಲ್ ಬಿಹಾರಿ ವಾಜಪು ಅವರ ಮಂತ್ರಿ ಮಂಡಲದಲ್ಲಿ ಕಾನೂನು ಸಚಿವರಾಗಿ ಸೇವೆಯನ್ನು ಸಲ್ಲಿಸಿದರು. ಈ ಸಮಯದಲ್ಲಿ ಆರ್ಥಿಕ, ರಕ್ಷಣಾ ಹಾಗೂ ವಿದೇಶಾಂಗ ನೀತಿಗಳನ್ನು ರೂಪಿಸಲು ವಿವಿಧ ಸಮಿತಿ ಗಳನ್ನು ರಚಿಸಿ ಸರಕಾರಕ್ಕೆ ಸಕ್ರಿಯವಾಗಿ ಸಲಹೆಗಳನ್ನು ನೀಡುತ್ತಿದ್ದರು.
ಪಕ್ಷದ ಸಂಘಟನೆಯ ದಕ್ಷಿಣ ಭಾರತದ ಪ್ರಭಾರಿಯಾಗಿ ಪ್ರಮುಖ ಪಾತ್ರ ವಹಿಸಿದ ಕೆ.ಜನಾ ಕೃಷ್ಣ ಮೂರ್ತಿರವರು ಹಲವಾರು ಬಾರಿ ಕರ್ನಾಟಕ ರಾಜ್ಯಕ್ಕೂ ಭೇಟಿ ನೀಡಿರುವುದು ಸ್ಮರಣೀಯ. 1985 ರಲ್ಲಿ ಕರ್ನಾಟಕ ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚಿನ ತಮಿಳು ಭಾಷಿಕರು ನೆಲೆಸಿದ್ದು ಮತದಾರರನ್ನು ಆಕರ್ಷಿಸಲು ಚುನಾವಣಾ ಪ್ರಚಾರಕ್ಕಾಗಿ ಕ್ಷೇತ್ರದ ಭಾ ಜ ಪ ಕಾರ್ಯಕರ್ತರು ಹಾಗೂ ಅಭ್ಯರ್ಥಿಯಾಗಿದ್ದ ಶಿವಣ್ಣ ರವರ ಅಪೇಕ್ಷೆ ಮೇರೆಗೆ ಅಂದು ಭಾ ಜ ಪ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಇನ್ನಾ ಶ್ರೀನಿವಾಸ ರಾವ್ ಅವರ ಕೋರಿಕೆಯಂತೆ ಹನೂರು ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಒಮ್ಮೆ ಆಗಮಿಸಿದ್ದರು.
ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ಆಗಮಿಸಿ ಇನ್ನಾ ಶ್ರೀನಿವಾಸ ರಾವ್ ಮನೆಯಲ್ಲಿ ಊಟವನ್ನು ಸವಿದು ನಂತರ ಕಾರ್ಯಕರ್ತ ರನ್ನು ಭೇಟಿ ಮಾಡಿ ಹನೂರು ಪಟ್ಟಣಕ್ಕೆ ತೆರಳಲಾಯಿತು. ಅವರೊಡನೆ ಇನ್ನಾ ಶ್ರೀನಿವಾಸ ರಾವ್ ಹಾಗೂ ಕಾರ್ಯಕರ್ತನಾಗಿ ನಾನೂ ಸಹ ಹನೂರು ಪಟ್ಟಣಕ್ಕೆ ಪಕ್ಷದ ಚುನಾವಣಾ ಪ್ರಚಾರಕ್ಕೆ ಅವರ ಅಂಬಾಸಿಡರ್ ಕಾರಿನಲ್ಲೇ ಪ್ರಯಾಣಿಸಿದ್ದು ಇಂದಿಗೂ ಸ್ಮರಣೀಯ. ಹನೂರು ಕ್ಷೇತ್ರದ ಅಭ್ಯರ್ಥಿ ಶಿವಣ್ಣ ಅವರ ಮನೆಯಲ್ಲಿ ಚಹಾ ಸೇವಿಸಿ ನಂತರ ಆಟದ ಮೈದಾನದಲ್ಲಿ ಸಾರ್ವ ಜನಿಕ ಸಭೆಯನ್ನು ಉದ್ದೇಶಿಸಿ ತಮಿಳು ಭಾಷೆಯಲ್ಲಿ ಮಾತನಾಡಿದರು. ಸರಳ ವ್ಯಕ್ತಿತ್ವದ ನಾಯಕರಾಗಿ ರಾಷ್ಟ್ರೀಯ ಮನ್ನಣೆ ಯನ್ನು ಪಡೆದಿದ್ದ ದಕ್ಷಿಣ ಭಾರತದ ಜನಪ್ರಿಯ ನಾಯಕರಲ್ಲಿ ಕೆ.ಜನಾ ಕೃಷ್ಣಮೂರ್ತಿ ಸ್ಮರಣೀಯರು.