Sunday, 15th December 2024

ಕುಡಿಯುವ ನೀರು ಪೂರೈಕೆಗೆ ತುರ್ತು ಕ್ರಮಕೈಗೊಳ್ಳಲು ಸೂಚನೆ

ತುಮಕೂರು: ಟಾಸ್ಕ್ಫೋರ್ಸ್ ಸಭೆ ನಡೆಸಿ ಕುಡಿಯುವ ನೀರು ಪೂರೈಕೆ ಸಂಬಂಧ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಾಪಂ ಇಒಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ  ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕೊಳವೆ ಬಾವಿ ಕೊರೆಸುವಿಕೆ, ಟ್ಯಾಂಕರ್ ಮೂಲಕ ನೀರು ಪೂರೈಸುವಿಕೆ ಮುಂತಾದ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳು ವಂತೆ ಸೂಚಿಸಿದರು.
ಜೆಜೆಎಂ ಯೋಜನೆಯಡಿ ಜಿಲ್ಲೆಗೆ ೨೨೦೫ ಕೋಟಿ ರು ಬಿಡುಗಡೆಯಾಗಿದ್ದು, ಒಟ್ಟು ೪ ಹಂತಗಳಲ್ಲಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಯೋಜನೆಗಳನ್ನು ೧೭೮೭ ಗ್ರಾಮಗಳಲ್ಲಿ ಕೈಗೊಳ್ಳಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ರವೀಶ್ ಸಭೆಗೆ ಮಾಹಿತಿ ನೀಡಿದಾಗ ಪ್ರತಿ ಕ್ರಯಿಸಿದ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ತಮ್ಮ ತಾಲೂಕಿನ ಕಾಮಗಾರಿ ಪ್ರಕರಣವೊಂದರಲ್ಲಿ ೩ನೇ ದರ್ಜೆಯ ಗುತ್ತಿಗೆದಾರರಿಗೆ ಟೆಂಡರ್ ನೀಡಿದ್ದು, ಇದು ಅಕ್ರಮ ಎಂದು ತಿಳಿಸಿದಾಗ, ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್ ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿ ದರು.
 ಜಿಲ್ಲೆಯಾದ್ಯಂತ ೬.೪೦ಲಕ್ಷ ಕುಟುಂಬಗಳಿದ್ದು, ಆದರೆ ೭.೨೦ಲಕ್ಷ ಎಪಿಎಲ್, ಬಿಪಿಎಲ್ ಕಾರ್ಡ್ ಗಳನ್ನು ವಿತರಿಸಿರುವುದಾಗಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಸಭೆಗೆ ಮಾಹಿತಿ ನೀಡಿದಾಗ, ಮಾತನಾಡಿದ ಸಚಿವರು ೨೦೧೧ರನ್ವಯ ಕೈಗೊಳ್ಳಲಾದ ಸಮೀಕ್ಷೆಯನ್ವಯ ೬.೪೦ಲಕ್ಷ ಕುಟುಂಬಗಳಿದ್ದು, ಆದರೆ ಕುಟುಂಬಗಳಿಗಿAತ ಹೆಚ್ಚಿನ ಸಂಖ್ಯೆಯಲ್ಲಿ ಪಡಿತರ ಚೀಟಿ ವಿತರಿಸಿರುವ ಅಂಕಿ-ಅಂಶ ತಾಳೆಯಾಗದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾರ್ಡುಗಳನ್ನು ಮರು ಪರಿಶೀಲಿಸು ವಂತೆ ಮತ್ತು ಬಾಕಿ ಇರುವ ೭೮೧೫ ಅರ್ಜಿಗಳನ್ನು ಸರ್ಕಾರದ ಮಾರ್ಗಸೂಚಿಯನ್ವಯ ವಿತರಿಸುವಂತೆ ಸೂಚಿಸಿದರು.
 ಸಂಸದ ಜಿ.ಎಸ್.ಬಸವರಾಜು, ಸಚಿವ ಕೆ.ಎನ್.ರಾಜಣ್ಣ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭು, ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
೩೯ ಘಟಕಗಳು ಸ್ಥಗಿತ
ಜಿಲ್ಲೆಯಲ್ಲಿ ೧೫೩೩ ಶುದ್ಧನೀರಿನ ಘಟಕಗಳಿದ್ದು, ೩೯ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ರವೀಶ್ ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಯಿಸಿದ ಸಚಿವರು, ೧೫ ದಿನದೊಳಗಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಶುದ್ಧ ಕುಡಿಯುವ ನೀರಿನ ಘಟಕ ಸುಸ್ಥಿತಿಯಲ್ಲಿರುವಿಕೆ ಮತ್ತು ದುರಸ್ಥಿ ಘಟಕಗಳನ್ನು ಪರಿಶೀಲಿಸಿ ಸಂಬಂಧಿಸಿದ ನಿರ್ವಹಣಾ ಏಜೆನ್ಸಿ ಗಳನ್ನು ಕರೆಸಿ ಸಭೆ ನಡೆಸುವಂತೆ ಸೂಚಿಸಿದರು.
ಸೋಮವಾರ ಸಭೆ
೧ ಚೀಲ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ೬೫೦ ಗ್ರಾಂ. ಹೆಚ್ಚುವರಿ ಕೊಬ್ಬರಿಯನ್ನು ರೈತರಿಂದ ಪಡೆಯಲಾಗುತ್ತಿದ್ದು, ಇದು ತರವಲ್ಲ ಮತ್ತು ಗ್ರೇಡ್‌ವಾರು ಕೊಬ್ಬರಿಗಳನ್ನು ಪರಿಗಣಿಸಿ, ಗುಣಮಟ್ಟದ ಕೊಬ್ಬರಿ ತಿರಸ್ಕರಿಸುವುದು ಸರಿಯಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಸಭೆಗೆ ತಿಳಿಸಿದಾಗ, ಸಭೆಯಲ್ಲಿ ಉಪಸ್ಥಿತರಿದ್ದ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಬರುವ ಸೋಮವಾರ ಬೆಂಗಳೂರಿನಲ್ಲಿ ಈ ಕುರಿತಂತೆ ಚರ್ಚಿಸಲು ಕೃಷಿ ಮಾರುಕಟ್ಟೆ ಅಧಿಕಾರಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದರು.