Friday, 22nd November 2024

ಜಳಕವೆಂಬ ಜಾದೂ

ದೇಹದ ನೋವು ಮರೆಸುವ, ಮನದ ದುಗುಡ ತೊಳೆಯುವ ಬಿಸಿನೀರಿನ ಸ್ನಾನದ ಸುಖವನ್ನು ವರ್ಣಿಸಲು ಪದಗಳು ಸಾಲವು.

ಶ್ರೀರಂಜನಿ

ನನಗೆ ಶಿವರಾಮ ಕಾರಂತರ ‘ಬೆಟ್ಟದ ಜೀವ’ ಇಷ್ಟವಾಗಲು ಇರುವ ಹಲವು ಕಾರಣಗಳಲ್ಲಿ ಪ್ರಮುಖವಾದದ್ದು- ಕಾದಂಬರಿಯಲ್ಲಿ ಸ್ನಾನಕ್ಕೆೆಂದೇ ಮೀಸಲಾದ ಮೂರು ನಾಲ್ಕು ಪುಟಗಳ ದೀರ್ಘವಾದ ಚೇತೋಹಾರಿ ವಿವರಣೆ, ಸ್ನಾನವನ್ನೂ ಕೂಡ ಒಂದು ಆಚರಣೆಯಂತೆ ಪ್ರತಿದಿನ ಸಂಭ್ರಮಿಸುವ ಗೋಪಾಲರಾಯರ ಜೀವನೋತ್ಸಾಹ. ‘ಮೈಗೆಲ್ಲಾ ಎಣ್ಣೆೆ ಸವರಿ ಬೆಂಕಿಯ ಮುಂದೆ ಕೂತಿದ್ದಾಗಲಂತೂ ಅವರು ಸಂಜೆದೇವನಂತೆ ಕಾಣುತ್ತಿದ್ದರು’ ಎಂಬ ವಿಶೇಷಣ ಮರೆಯಲಾಗದ್ದು. ಇದನ್ನು ಓದಿದಾಗ ಮೊದಲು ನೆನಪಾಗುವುದು ನನ್ನ ದೊಡ್ಡ ತಂದೆಯವರು.

ಥೇಟ್ ಗೋಪಾಲರಾಯರಂತೆ ಮೈಗೆಲ್ಲಾ ಎಣ್ಣೆ ಹಚ್ಚಿಕೊಂಡು, ಅದನ್ನು ದೇಹ ಚೆನ್ನಾಗಿ ಹೀರಲು ಬಿಟ್ಟು, ಮಡಲು ಹೆಣೆ
ಯುತ್ತ, ಮಧ್ಯೆೆ ಮಧ್ಯೆೆ ಒಲೆಗೆ ಕಟ್ಟಿಗೆ ತೂರುತ್ತ, ಕುದಿಕುದಿ ನೀರನ್ನು ಮಿಂದು ಬರುವುದು ಅವರ ಪ್ರತಿದಿನದ ದಿನಚರಿ. ಈಗ ಅವರಿಲ್ಲದಿದ್ದರೂ ಬೆಟ್ಟದ ಜೀವದ ಮೂಲಕ ಅವರ ಸ್ನಾನದ ಗತ್ತುಗೈರತ್ತನ್ನು ಇನ್ನೂ ನೆನಪಿಸಿಕೊಳ್ಳಬಲ್ಲೆ, ಕುವೆಂಪುರವರ ‘ಅಜ್ಜಯ್ಯನ ಅಭ್ಯಂಜನ’ವು ಅನನುಭವಿಗಳೂ ಕೂಡ ಸಾಕ್ಷಾತ್ ಕಡುಚಳಿಯ ಮಲೆನಾಡಿನ ಸ್ನಾನದ ಖುಷಿಯನ್ನು ಅನುಭವಿಸು ವಂತೆ ಮಾಡುವ ಬರಹ.

ಸ್ನಾನವೆಂದರೆ ಹಾಗೇನೇ! ದಿನದ ಜಾಡ್ಯವನ್ನೆಲ್ಲಾ ಬದಿಗೆ ಸರಿಸಿ, ದೇಹಕ್ಕೆ ಮರುಪೂರೈಸುವ ಕಸು, ಲವಲವಿಕೆ ಅದು. ಸೆಟೆದು ಕೊಂಡಿದ್ದ ಮಾಂಸಪೇಶಲಗಳಿಗೆ ಎಣ್ಣೆ ಹಾಕಿ ತಿಕ್ಕಿ ತೀಡುವ ಮಸಾಜಿನಿಂದ ಆಹಾ! ಮೈಮನಗಳಲ್ಲಿ ಪುಟಿದೇಳುವಂತೆ
ಮಾಡುವ ಚೈತನ್ಯ. ಸ್ನಾನವಾಯಿತೆಂದರೆ ಅದೆಲ್ಲೋ ಅಡಗಿದ್ದ ಉತ್ಸಾಹ ಚಿಮ್ಮನೆ ಜಿಗಿಯುತ್ತದೆ. ಸ್ನಾನವೆಂದರೆ ಅದೊಂದು
ಗಡಿ. ಮುಂದಿನ ಕೆಲಸಕ್ಕೆ ಸಿಗುವ ಲೈಸೆನ್ಸು. ಸ್ನಾನವಾಯಿತೋ, ಶಾಲೆಗೆ, ಆಫೀಸಿಗೆ ಹೊರಡಲು ಸಿಗುವ ಹಸಿರು ಸಿಗ್ನಲ್.
ಮದುವೆಗೆ, ಪೂಜೆಗೆ ಮೈ ಜೊತೆ ತಲೆಗೂ ಅಭಿಷೇಕವಾಯಿತೆಂದರೆ ಶುಭಕಾರ್ಯಕ್ಕೆ ಸಿದ್ಧ.

ಬಾಣಂತಿ ಸ್ನಾನ

ಬಾಣಂತಿಯರಿಗೆ ಎಣ್ಣೆ ಮತ್ತು ನೀರಿನ ಸ್ನಾನವೆಂದರೆ ಹೆತ್ತ ಆಯಾಸವನ್ನೆಲ್ಲಾ ನೀಗಿಸಲು ಇರುವ ರಹದಾರಿ. ನಾಟಿ ಔಷಧಿ ಗಳಂಥ ಅಪೂರ್ವದ ಗುಟ್ಟುಗಳನ್ನೆಲ್ಲಾ ಎಣ್ಣೆಯೊಳಗೆ ಧಾರೆಯೆರೆದು ನಂತರ ಸುಡುಸುಡು ನೀರಿನ ಜಳಕ ಮುಗಿಸಿದರೆ ದೇಹದ ನಂಜೆಲ್ಲಾಾ ತೊಳೆದೇಹೋಯಿತು ಎಂಬ ನೆಮ್ಮದಿ. ತಾಯಿ ಮಗುವಿನ ಆರೋಗ್ಯಕ್ಕೆ ಎಣ್ಣೆ-ಸ್ನಾನ ಅಡಿಗಲ್ಲು ಎಂಬುದು ಹಿರಿಯರ ನಿಡುಗಾಲದ ಆಚಾರ. ನಾನು ಹಡೆದಿದ್ದ ಸಮಯದಲ್ಲಿ ಬಾಣಂತಿ ಆರೈಕೆಗೆ ಬರುತ್ತಿದ್ದ ಮಹಿಳೆಗೆ ನೀರು ಬಿಸಿಯಾ ದಷ್ಟೂ ಸಾಲದು. ಕರಾವಳಿಯ ಬಿಸಿಲಿಗೆ ಅಷ್ಟೊಂದು ಬಿಸಿಯಾದ ನೀರಿನಿಂದ ಸ್ನಾನ ಮಾಡಿದರೆ ಬೆಂದೇ ಹೋಗಬೇಕು. ‘ಈ ನೀರಿಗಿಂತ ನಿಮ್ಮ ಮಗುವಿನ ಉಚ್ಚೆಯೇ ಬಿಸಿಯಿದೆ’ ಎನ್ನುತ್ತಾ ಇನ್ನಷ್ಟು ಕೊಳ್ಳಿಗಳನ್ನು ಒಲೆಗೆ ತುಂಬಿಸಿ, ಉಸಿರು ತೆಗೆಯಲೂ ಪುರುಸೊತ್ತು ಬಿಡದಂತೆ, ತಲೆಮೇಲೆ ದಳ ದಳ ಹೊಯ್ಯುವ ಹಿಂಸಾನಂದದಿಂದ ಎಂದು ಪಾರಾದೇನು ಎಂದೆನ್ನಿಸುತ್ತಿತ್ತು.

ಅಂಥ ಸುಡು ನೀರು, ನೆತ್ತಿಗೇರಿ ಕಣ್ಣುಮಂಜಾಗಿ ತಲೆತಿರುಗಿ ಬೀಳುವಂತಾದಾಗೆಲ್ಲಾ ಮಗುವನ್ನು ಹೆರಲೂ ಇಷ್ಟು ಕಷ್ಟಪಟ್ಟಿರ ಲಿಲ್ಲವಲ್ಲ ಅನ್ನಿಸುತ್ತಿತ್ತು. ಇಂತಹ ಬಿಸಿನೀರಿನ ಜಳಕ ಮುಗಿಸಿ ಹೊರಬರುತ್ತಲೇ ನಂತರದ್ದು ಬೆವರಿನ ಸ್ನಾನ! ಬಾಣಂತಿ ಸ್ನಾನ
ಎಂಬ ವಿಶೇಷಣ ರೂಢಿಗೆ ಬಂದದ್ದು ಇದಕ್ಕೇ ಇರಬೇಕು. ದೀರ್ಘ ಸ್ನಾನಕ್ಕೆೆ ‘ಊರ್ಮಿಳಾ ಸ್ನಾನ’ ಎಂದೂ ಕರೆಯುವುದುಂಟು. ಲಕ್ಷ್ಮಣ ಸೋದರನೊಡನೆ ವನವಾಸಕ್ಕೆ ಹೊರಟೊಡನೆ, ಸ್ನಾನಗೃಹದೊಳಗೆ ಹೊಕ್ಕ ಊರ್ಮಿಳಾ ಮತ್ತೆ ಹಿಂದಿರುಗಿದ್ದು ಲಕ್ಷ್ಮಣ ಮರಳಿ ಬಂದ ಮೇಲಂತೆ!

ಇದೀಗ ತಾನೇ ಹುಟ್ಟಿದ ಕೂಸಿಗೂ ಸ್ನಾನವೆಂದರೆ ಯಾರು ಹೇಳಿಕೊಟ್ಟರು ಎಂಬುದು ಯಕ್ಷಪ್ರಶ್ನೆ. ಅಂಗಿ ತೆಗೆದು ಬೆಚ್ವಗಿನ ಎಣ್ಣೆ ಮೈಗೆಲ್ಲಾ ಬಳಿದು, ಉಗುರುಬೆಚ್ಚಗಿನ ನೀರು ಹಾಕಿ ಮೀಯಿಸಲು ಶುರು ಮಾಡಿದರೆ ಅಷ್ಟರವರೆಗಿದ್ದ ಅದರ ಹಠ, ಅಳು ನಾಪತ್ತೆ. ಅದರ ಮೌನವೇ ಸ್ನಾನವನ್ನು ಆಸ್ವಾದಿಸುತ್ತಿರುವುದಕ್ಕೆೆ ಸಾಕ್ಷಿ. ಇನ್ನಷ್ಟು ಬೇಕು ಎಂದು ಮಂದಸ್ಮಿತವಾಗಿ ಎಲ್ಲವನ್ನು ಸಾದರವಾಗಿ ಸ್ವೀಕರಿಸಿ ನಲಿಯುತ್ತದೆ. ಸ್ನಾನ ಮುಗಿಯಿತೋ ಆ ಸುಸ್ತಿಗೆ ಮಧ್ಯಾಹ್ನದವರೆಗೆ ಗಡದ್ದು ನಿದ್ದೆ. ತುಂಬಿ ತುಳುಕುವ ಸಂಸಾರದಲ್ಲಿ ಪ್ರತೀದಿನ ಸ್ನಾನದ್ದೇ ಒಂದು ಡೌಲು. ಅಲ್ಲಿ ಕಟ್ಟಿಗೆ ಸುಡುವುದೊಂದು ನಿರಂತರ ಪ್ರಕ್ರಿಯೆ. ನೀರು ತುಂಬುವುದು, ಬರಿದು ಮಾಡುವುದು – ಎರಡಕ್ಕೂ ಮುಗಿತಾಯವಿಲ್ಲ. ಹಂಡೆಯ ನೀರನ್ನು ನೇರವಾಗಿ ಮೈಮೇಲೆ ಹಾಕಿಕೊಳ್ಳುವಂತಿಲ್ಲ.

ಕುದಿಯುತ್ತಿರುವ ನೀರನ್ನು ಇನ್ನೊಂದು ಬಾಲ್ದಿಗೆ ತೋಡಿ ಮೈಗೆ ಹಿತವಾಗುವಷ್ಟು ತಣ್ಣೀರನ್ನು ಬೆರಸಿದ ಮೇಲೆ ಸ್ನಾನ ಆರಂಭಿಸ ಬೇಕು. ಹಂಡೆಯ ನೀರು ಬಿಸಿಯಿದ್ದಷ್ಟೂ ಅದರ ಒದಗುವಿಕೆ ಜಾಸ್ತಿ. ಇಲ್ಲದಿದ್ದರೆ ಹಂಡೆಯ ನೀರೇ ಬರಿದು. ಸ್ನಾನ ಮುಗಿಸಿದ ಮೇಲೆ, ಒಮ್ಮೆಲೇ ಬಚ್ಚಲ ಬಾಗಿಲು ತೆರೆದೊಡನೆ ಗವ್ ಎಂದು ಹೊಗೆ ಹೊರಹೊಮ್ಮುವಾಗ, ಒಳಗೆ ನಡೆದದ್ದು ನೀರಿನ ಸ್ನಾನವೋ ಅಥವಾ ಹೊಗೆಯ ಸ್ನಾನವೋ ಎಂಬ ಅನುಮಾನ ಮೂಡದೇ ಇರದು. ಹೀಗಾಗಿ ಇಂಥ ಮನೆಗಳಲ್ಲಿ ಕೊನೆಯಲ್ಲಿ ಹೋದವರಿಗೆ ಬಿಸಿನೀರಿನ ಬುಗ್ಗೆೆ ಕುದಿಯುತ್ತಿರುತ್ತದೆ.

ಕವಿ ಕುಮಾರವ್ಯಾಸ ಮಾತ್ರ ಬಿಸಿನೀರಿನ ಸ್ನಾನವನ್ನು ಮೆಚ್ಚುತ್ತಿರಲಿಲ್ಲ. ‘ಕಾದುದಕದಾಸ್ನಾನವೆಂಬುದ ಫಲವನೀಯವು ರಾಯ ಕೇಳೆಂದ’ ಎಂಬಲ್ಲಿ ತಣ್ಣೀ೦ರಿನ ಸ್ನಾನವೇ ಉತ್ತಮ ಎಂದಿದ್ದ. ಕ್ಲಿಯೋಪಾತ್ರ ಮಾತ್ರ ಈ ಬಿಸಿನೀರು, ತಣ್ಣೀರಿನ ರಗಳೇಯೇ ಬೇಡವೆಂದು ಹಾಲಿನಲ್ಲೇ ಸ್ನಾನ ಮಾಡುತ್ತಿದ್ದಳಂತೆ! ಗೊಮ್ಮಟೇಶ್ವರರಿಗೆ ಹನ್ನೆರಡು ವರ್ಷಗಳಲ್ಲಿ ನಡೆಯುವ ಮಜ್ಜನವು ಅವನ ಅನುಯಾಯಿಗಳಿಗೆ ಭಕ್ತಿಯ ಸ್ನಾನ, ಇತರರಿಗೆ ಪುಳಕದ ಸ್ನಾನವನ್ನೀಯುತ್ತದೆ. ಆಗೆಲ್ಲಾ ಸು.ರಂ.ಎಕ್ಕುಂಡಿಯವರ ‘ನನ್ನ ಹಾಗೆಯೇ’ ಕವನದ ಮುಗ್ಧ ಬಾಲಕನ ಪ್ರಶ್ನೆ, ಅದಕ್ಕೆ ಬದುಕಿನ ಸತ್ಯದ ಕುರಿತು ಅಜ್ಜ
ನೀಡಿದ ಉತ್ತರಗಳು -ನೆನಪಾಗವೇ?

ಸೋಲಾರ್ ಬಿಸಿ ನೀರು

ಇತ್ತೀಚಿನ ದಿನಗಳಲ್ಲಿ ಒಲೆಹೂಡಿ, ಸ್ನಾನ ಮಾಡುವ ತಾಳ್ಮೆ ಯಾರಲ್ಲಿದೆ? ಕಟ್ಟಿಗೆಯನ್ನು ತುಂಬುತ್ತಾ ಅದರೊಂದಿಗೆ, ಕಣ್ಣೀರಿನ ಸ್ನಾನವನ್ನು ಮಾಡುತ್ತಾ, ನೀರು ಕಾಯುವುದನ್ನು ಕಾಯುವವರು ಎಲ್ಲಿದ್ದಾರೆ? ನಲ್ಲಿ ತಿರುಗಿಸಿದರೆ ಬರುವ ಸೋಲಾರಿನ, ಗೀಸರಿನ ಬಿಸಿನೀರು ಸ್ನಾನಕ್ಕೆ ಜತೆಯಾಗಿದೆ. ಐದು ನಿಮಿಷದಲ್ಲಿ ತಯಾರಿಸುವ ಅಡುಗೆಯನ್ನು ಎರಡೇ ನಿಮಿಷ ದಲ್ಲಿ ಮುಗಿಸುವ ಫಾಸ್ಟ್ ಫುಡ್ ಜಗತ್ತಿನಲ್ಲಿ ಸ್ನಾನಕ್ಕೆ ಇಷ್ಟೊಂದು ಸಮಯವನ್ನು ಉದಾರವಾಗಿಸುವ ಗುಣ ಯಾರಲ್ಲಿದೆ? ವರ್ಷಕ್ಕೊಮ್ಮೆ ಬರುವ ದೀಪಾವಳಿಯ ಅಭ್ಯಂಜನವೂ ಈಗ ಹೊರೆ. ಆ ಸ್ನಾನವನ್ನು ಸಂಭ್ರಮಿಸುವ ಮನೋಭಾವವೂ ಮರೆತು ಹೋಗಿದೆ. ಆಚರಿಸುವ ಮನಃ ಸ್ಥಿತಿಗೂ ಕೊಕ್. ಸ್ನಾನವೂ ಕಮರ್ಶಿಯಲ್ ಆಗಿ, ಅಭ್ಯಂಗ ಎಂಬ ಹೆಸರಿನಲ್ಲಿ ಎಷ್ಟೋ ಮಸಾಜು ಸೆಂಟರುಗಳು ಪೂರ್ವಜರ ಒಳಗುಟ್ಟುಗಳನ್ನು ತಮ್ಮದಾಗಿಸಿಕೊಂಡು ಜನರ ಆರೋಗ್ಯದ ಹಕ್ಕುಗಳನ್ನು ಬೇಷರತ್ ಆಗಿ ತಾವೇ ಪಡೆದಂತೆ ವರ್ತಿಸುತ್ತಿವೆ. ಆಕ್ಷೇಪವೇನಲ್ಲ!

ಹಬ್ಬ ಇರಲಿ, ಇರದಿರಲಿ ದೇಹದ ಕೊಳೆಯನ್ನು ತೆಗೆಯುವಲ್ಲಿ ಸ್ನಾನಕ್ಕೆ ಎಷ್ಟು ಮಹತ್ವವಿದೆಯೋ, ಒಳಗಿನ ದೇಹವನ್ನೂ
ಸ್ವಚ್ಛವಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಸರ್ವಜ್ಞನಂದಂತೆ ‘ಮೀಪೊಡೆ ಪೋಪೊಡೆ ಪಾಪವೇನದು ಕೆಸರೇ’ ಎನ್ನುವುದು
ಎಲ್ಲರೂ ಎಲ್ಲಾ ಕಾಲಕ್ಕೂ ಮರೆಯಲಾಗದ ಮಾತು, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನೀತಿ.