Sunday, 15th December 2024

ಘಟಬಂಧನ: ಕೊನೆವರೆಗೂ ಉಳಿಯುವುದೇ ಒಗ್ಗಟ್ಟು?

ಬಿಜೆಪಿಯನ್ನು ಒಗ್ಗಟ್ಟಾಗಿ ಎದುರಿಸುವ ದೃಷ್ಟಿಯಿಂದ ನಾಳೆಯಿಂದ ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ ನಡೆಯಲಿದ್ದು, ೨೩ ಪಕ್ಷಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಹಿಂದೆ ಪಟ್ನಾದಲ್ಲಿ ನಡೆದ ಮೊದಲ ಸಭೆಯಲ್ಲಿ ೧೫ ಪಕ್ಷಗಳು ಭಾಗವಹಿಸಿದ್ದವು. ಇದೀಗ ೨೩ ಪಕ್ಷಗಳು ಭಾಗಿಯಾಗಲು ಸಿದ್ಧವಾಗಿರುವುದು ಪ್ರತಿಪಕ್ಷಗಳ ಉತ್ಸಾಹ ಹೆಚ್ಚಿದೆ ಎಂಬುದನ್ನು ತೋರಿಸುತ್ತದೆ. ಒಂದೇ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿರುವ ಪಕ್ಷಗಳು ಈಗಾಗಲೇ ಹನ್ನೊಂದು ರಾಜ್ಯಗಳಲ್ಲಿ ಸರಕಾರ ಗಳನ್ನು ರಚಿಸಿವೆ ಮತ್ತು ಆಯಾ ರಾಜ್ಯಗಳ ಚುನಾವಣೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮತಗಳನ್ನೂ ಗಳಿಸಿವೆ.

ಈ ಪಕ್ಷಗಳ ನಾಯಕರಲ್ಲಿ ಪ್ರಭಾವಿಗಳಿದ್ದಾರೆ. ಚುನಾ ವಣೆ ತಂತ್ರ ಹಾಗೂ ಪ್ರಚಾರದಲ್ಲಿ ಪಳಗಿದವರೂ ಇದ್ದಾರೆ. ಆಡಳಿತದಲ್ಲಿ ಅನುಭವಿಗಳೂ ಹೌದು. ಈ ಎಲ್ಲ ಅಂಶಗಳು ಪ್ರತಿಪಕ್ಷಗಳ ವೇದಿಕೆಗೆ ಬಲ ತುಂಬಬಲ್ಲವು ಎಂದೇ ಭಾವಿಸಲಾಗಿದೆ. ಬೆಲೆ ಏರಿಕೆ, ಮಣಿಪುರ ಗಲಭೆ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದಾದ ಅವಕಾಶವೂ ಇದೆ. ಆದರೆ ಈ ಘಟಬಂಧನಕ್ಕೆ ಅಷ್ಟೇ ಸವಾಲುಗಳೂ ಇವೆ. ಜನಪ್ರಿಯತೆಯಲ್ಲಿ ಮೋದಿ ಅವರ ವರ್ಚಸ್ಸಿಗೆ ಸರಿ ಸಮನಾದ ವರ್ಚಸ್ಸು ಹೊಂದಿ ರುವ ನಾಯಕ ಪ್ರತಿಪಕ್ಷಗಳ ಪಾಳಯದಲ್ಲಿ ಯಾರೊಬ್ಬರೂ ಕಾಣಸಿಗುತ್ತಿಲ್ಲ.

ಕೆಲವು ಜನಪ್ರಿಯ ನಾಯಕರಿದ್ದರೂ ಅವರ ಪ್ರಭಾವ ದೇಶಾದ್ಯಂತ ಒಂದೇ ರೀತಿ ಇಲ್ಲ. ಅಲ್ಲದೆ, ಒಟ್ಟಾಗಲು ಹೊರಟಿರುವ ಕೆಲವು ಪಕ್ಷಗಳಲ್ಲಿ ಆಂತರಿಕ ತಿಕ್ಕಾಟಗಳಿವೆ. ಪಟ್ನಾ ಸಭೆಯ ಬೆನ್ನ ಹಿಂದೆಯೇ ಕಾಂಗ್ರೆಸ್ ವಿರುದ್ಧ ಎಎಪಿ ಭಿನ್ನರಾಗ ತೆಗೆದಿದ್ದರೆ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಇಬ್ಭಾಗವಾಗಿದ್ದೇ ಇದಕ್ಕೆ ಸಾಕ್ಷಿ. ಅಲ್ಲದೆ, ಈ ಪಕ್ಷಗಳು ಹೆಚ್ಚಿನ ಯಶಸ್ಸು ಗಳಿಸಿರುವುದು ವಿಧಾನ ಸಭೆ ಚುನಾವಣೆಗಳಲ್ಲಿ.

ಲೋಕಸಭೆ ಚುನಾವಣೆಯಲ್ಲಿ ಚರ್ಚೆಯಾಗುವ ವಿಷಯಗಳಿಗೂ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಚರ್ಚೆಯಾಗುವ ವಿಷಯಗಳಿಗೂ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಮೋದಿ ಅವರನ್ನು ಮತ್ತು ಬಿಜೆಪಿಯನ್ನು ವಿರೋಧಿಸುವ ಕಾರಣಕ್ಕೆ ಮಾತ್ರ ವಲ್ಲದೆ ಜನ ತಮ್ಮನ್ನು ಏಕೆ ಬೆಂಬಲಿಸಬೇಕು ಎಂಬುದನ್ನು ಜನರ ಮುಂದೆ ವಿವರಿಸುವಂತಹ ಕೆಲಸವನ್ನೂ ಈ ಘಟಬಂಧನ ಮಾಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ, ತಾವೊಂದು ವೇಳೆ ಅಽಕಾರಕ್ಕೆ ಬಂದರೆ ಒಟ್ಟಾಗಿ ಮುನ್ನಡೆಯುವುದಾಗಿಯೂ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ.