Saturday, 23rd November 2024

ಸರ್ಕಾರಿ ಅಧಿಕಾರಿಗಳು Apple ಫೋನ್ ಬಳಸದಂತೆ ರಷ್ಯಾ ನಿರ್ಬಂಧ

ಮಾಸ್ಕೋ: ದೇಶದಲ್ಲಿನ ಸರ್ಕಾರಿ ಅಧಿಕಾರಿಗಳು ಐಫೋನ್​ಗಳನ್ನು ಬಳಸದಂತೆ ರಷ್ಯಾ ಸರ್ಕಾರ ನಿರ್ಬಂಧ ಹೇರಿದೆ.

ಐಫೋನ್​ಗಳ ಮೂಲಕ ಅಮೆರಿಕ ರಷ್ಯಾದ ಮೇಲೆ ಗೂಢಚಾರಿಕೆ ನಡೆಸುತ್ತಿದೆ ಎಂಬ ಭೀತಿಯಿಂದ ರಷ್ಯಾ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಸಾವಿರಾರು ಅಧಿಕಾರಿಗಳಿಗೆ ಐಫೋನ್‌ಗಳು ಮತ್ತು ಐಪ್ಯಾಡ್‌ಗಳಂತಹ ಇತರ ಆಪಲ್ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸು ವಂತೆ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಎಸ್) ಹೇಳಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜು.17 ರಿಂದ ರಷ್ಯಾದ ವಾಣಿಜ್ಯ ಸಚಿವಾಲಯದ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಐಫೋನ್‌ಗಳನ್ನು ಬಳಸುವಂತಿಲ್ಲ ಎಂದು ವರದಿಗಳು ತಿಳಿಸಿವೆ. ಸಚಿವಾಲಯಗಳಲ್ಲಿನ ಭದ್ರತಾ ಅಧಿಕಾರಿಗಳು ಅಂದರೆ ಉಪ ಮಂತ್ರಿಗಳಂತಹ ನಾಗರಿಕ ಸ್ಥಾನಗಳನ್ನು ಹೊಂದಿ ರುವ ಎಫ್‌ಎಸ್‌ಬಿ ಉದ್ಯೋಗಿಗಳು ಐಫೋನ್‌ಗಳನ್ನು ಬಳಸುವುದು ಸುರಕ್ಷಿತವಲ್ಲ ಮತ್ತು ಐಫೋನ್​ ಬದಲು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಆಯಪಲ್ ಸಾಧನಗಳು ಹ್ಯಾಕಿಂಗ್​ಗೆ ಗುರಿಯಾಗಬಹುದು ಎಂಬ ಭಯದಿಂದ ಮಾರ್ಚ್‌ನಲ್ಲಿ ಕ್ರೆಮ್ಲಿನ್ ಆಯಪಲ್ ಉತ್ಪನ್ನ ಗಳನ್ನು ಬಳಸುವುದನ್ನು ನಿಲ್ಲಿಸುವಂತೆ ತನ್ನ ಅಧಿಕಾರಿಗಳಿಗೆ ತಿಳಿಸಿತ್ತು. ಆಯಪಲ್ ಯುಎಸ್ ಗುಪ್ತಚರ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಕಳೆದ ತಿಂಗಳು ರಷ್ಯಾ ಸರ್ಕಾರ ಆರೋಪಿಸಿತ್ತು.