Monday, 25th November 2024

ಮೂಸೆವಾಲಾ ಹತ್ಯೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ

ವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಎನ್‍ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಬಂಧಿಸಿದೆ. ದುಬೈನಿಂದ ದರೋಡೆಕೋರ ವಿಕ್ರಮ್ ಬ್ರಾರ್‌ನ್ನು ಹಸ್ತಾಂತರಿಸಲಾಗಿದ್ದು, ಆತನನ್ನು ಭಾರತಕ್ಕೆ ಕರೆತರಲು ಎನ್‍ಐಎ ತಂಡ ದುಬೈಗೆ ತೆರಳಿತ್ತು.

ಆರೋಪಿ ವಿಕ್ರಮ್ ಬ್ರಾರ್ ನಟ ಸಲ್ಮಾನ್ ಖಾನ್‍ಗೆ ಸಹ ಬೆದರಿಕೆ ಒಡ್ಡಿದ್ದ. ಅಲ್ಲದೇ, ಮೂಸೆವಾಲಾ ಹತ್ಯೆಯ ಪ್ರಮುಖ ಆರೋಪಿ ಎನ್ನಲಾಗಿದೆ. ಮೂಸೆವಾಲಾ ಹತ್ಯೆಯಲ್ಲಿ ವಿಕ್ರಮ್ ಬ್ರಾರ್‌ನ ಕೈವಾಡವಿದೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಅಲ್ಲದೇ, ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ಇತರರ ಸಹಾಯದಿಂದ ಉದ್ಯಮಿಗಳ ಹತ್ಯೆಗಳಲ್ಲಿ ಭಾಗಿ ಯಾಗಿದ್ದ. ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಆತ ಸಂಪರ್ಕ ಹೊಂದಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳ ಪೊಲೀಸರ ಮನವಿ ಮೇಲೆ ದರೋಡೆಕೋರ ವಿಕ್ರಮ್ ಬ್ರಾರ್ ವಿರುದ್ಧ 11 ಲುಕ್‍ಔಟ್ ನೋಟಿಸ್‍ಗಳನ್ನು ಹೊರಡಿಸಲಾಗಿತ್ತು. ಆತ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಆಜ್ಞೆಯ ಮೇರೆಗೆ ಕ್ರಿಮಿನಲ್ ಚಟುವಟಿಕೆ ಗಳನ್ನು ನಡೆಸುತ್ತಿದ್ದ.

ಅಲ್ಲದೇ, ಗಣ್ಯ ವ್ಯಕ್ತಿಗಳಿಗೆ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.