Sunday, 24th November 2024

ಶಿಕ್ಷಕರಿಗೆ ಪಾಠ ಮಾಡಲು ಬಿಡಿ

ಪಾಠ ಮಾಡುವ ಕೆಲಸಕ್ಕೆ ನಿಯೋಜಿತರಾಗಿರುವ ನಮ್ಮ ಶಿಕ್ಷಕರು ಅದೊಂದನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿದ್ದಾರೆ. ಸರಕಾರದ ಯಾವುದೇ ಹೆಚ್ಚುವರಿ ಕೆಲಸವಿರಲಿ, ಮೊದಲು ಕಣ್ಣಿಗೆ ಕಾಣುವುದೇ ಶಾಲೆಯ ಶಿಕ್ಷಕರು ಹಾಗೂ ರಾಜಕಾರಣಿಗಳ ಯಾವುದೇ ಕಾರ್ಯಕ್ರಮವಿರಲಿ ಕಾಣುವುದು ಶಾಲಾ ಮಕ್ಕಳು ಎಂಬಂತಾಗಿದೆ.

ಉಳಿದೆಲ್ಲ ನೌಕರರಿಗೆ ಹೋಲಿಸಿದರೆ ಸಂಖ್ಯಾದೃಷ್ಟಿಯಿಂದ ಹೆಚ್ಚಿರುವುದೇ ಶಿಕ್ಷಕರ ವೃತ್ತಿಗೆ ಮುಳುವಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಕೂಗೆದ್ದಿದ್ದರೂ, ನಿರ್ಬಂಧ ಆದೇಶವಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಇದೀಗ ಮತ್ತೊಮ್ಮೆ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ (ಬಿಎಲ್ಒ) ಹಾಗೂ ಬೋಧನೇತರ ಕಾರ್ಯಗಳಿಗೆ ನಿಯೋಜನೆ ಮಾಡದಂತೆ ಚುನಾವಣಾ ಆಯೋಗಕ್ಕೆ ಶಿಕ್ಷಣ ಇಲಾಖೆ ಆಯುಕ್ತರಾದ ಬಿ. ಬಿ. ಕಾವೇರಿ ಅವರು ಪತ್ರ ಬರೆದು ಒತ್ತಾಯಿಸಿರುವುದು ಸೂಕ್ತವಾಗಿಯೇ ಇದೆ. ಈ ಸಂಬಂಧ ಸರಕಾರಿ ಆದೇಶ ಹಾಗೂ ಹೈಕೋರ್ಟ್‌ನಲ್ಲಿ ಸಲ್ಲಿಸಿದ ರಿಟ್ ಅರ್ಜಿಯ ಉಲ್ಲೇಖ ವನ್ನೂ ಅವರು ಮಾಡಿದ್ದಾರೆ.

ಶಾಲಾ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಯಾ ತರಗತಿಗಳಲ್ಲಿ ನಿಗದಿಗೊಳಿಸಲಾಗಿರುವ ಪಠ್ಯವನ್ನು ಪೂರ್ಣ ಗೊಳಿಸಲು ಬೇಕಾದ ಅವಽಯನ್ನು ಮತ್ತು ಶಾಲಾ ರಜಾದಿನಗಳನ್ನು ಗಣನೆಗೆ ತೆಗೆದುಕೊಂಡರೆ ಶಿಕ್ಷಕರಿಗೆ ಸಿಗುವುದೇ ಕನಿಷ್ಠ ೨೪೪ ದಿನಗಳು ಮಾತ್ರ. ಅದರಲ್ಲೂ ಜನಗಣತಿ, ಚುನಾವಣಾ ಕಾರ್ಯ, ಮಕ್ಕಳಗಣತಿ, ಆರೋಗ್ಯ ಆಂದೋಲನ ಹೀಗೆ ಹತ್ತು ಹಲವು ಕಾರ್ಯಗಳಿಗೆ, ಹೊಣೆಗಾರಿಕೆಗೆ ಶೀಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ.

ಇದಲ್ಲದೇ ಪರೀಕ್ಷೆಗಳು ಮತ್ತು ಮೌಲ್ಯಂಕನ, ಸ್ಪರ್ಧೆಯಂಥ ಪಠ್ಯೇತರ ಚಟುವಟಿಕೆಗಳು, ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ
ಹೀಗೆ ವೃತ್ತಿಯದ್ದೇ ಭಾಗವಾಗಿ ೬೪ ದಿನಗಳು ಕಳೆದುಹೋಗುತ್ತವೆ. ಇವೆಲ್ಲ ಕಳೆದು ವಿದ್ಯಾರ್ಥಿಗಳ ಬೋಧನಾ-ಕಲಿಕಾ ಪ್ರಕ್ರಿಯೆಗೆ ಉಳಿಯುವುದು ಕೇವಲ ೧೮೦ ದಿನಗಳು ಮಾತ್ರ. ಇದನ್ನು ಹೊರತುಪಡಿಸಿ ಎಲ್ಲ ನೌಕರರಂತೆ ವೈಯಕ್ತಿಕ ರಜೆಗಳನ್ನು ಶಿಕ್ಷಕರಿಗೆ ನೀಡಲೇಬೇಕು. ಇವೆಲ್ಲದರ ಪರಿಣಾಮ ಬೋಧನೆಯನ್ನು ಕುಂಠಿತಗೊಳಿಸುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬುದು ಗಮನಾರ್ಹ. ಇದರಿಂದ ರಾಜ್ಯದಲ್ಲಿ ಪ್ರಮುಖ ಘಟ್ಟದ ತರಗತಿಗಳ ಫಲಿತಾಂಶ ಕುಸಿಯುವ ಅಪಾಯಗಳಿವೆ.

ಹೀಗಾಗಿ ಶಿಕ್ಷಕರುಗಳು ಬೋಧನಾ ಕಾರ್ಯಕ್ಕೆ ಹೆಚ್ಚು ಒತ್ತು ಕೊಟ್ಟು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ತೊಡಗಿಸಿಕೊಳ್ಳಬೇಕೇ ವಿನಾ ಉಳಿದೆಲ್ಲವುಗಳಿಂದ ಅವರನ್ನು ಮುಕ್ತಗೊಳಿಸಬೇಕಿದೆ.