Saturday, 21st December 2024

ಮಳೆಗಾಲದ ಪ್ರಯಾಣ ಏಕಿಷ್ಟು ಪ್ರಯಾಸ ?

ಭಾರತಿ ಎ., ಕೊಪ್ಪ

ಮಳೆಗಾಲದ ದೈನಂದಿನ ಪ್ರಯಾಣ ಎಂಬಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಇಲಾಖೆಯ ಕೆಲಸಕ್ಕೆ ಪ್ರಯಾಣಿಸುತ್ತಿದ್ದೆ. ಶಕ್ತಿ ಯೋಜನೆಯ ಸಾರ್ಥಕತೆ ಎಂಬಂತೆ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮಳೆರಾಯನ ಆರ್ಭಟ ಜೋರಾಗಿದ್ದುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡ ಅಲ್ಲಲ್ಲಿ ಕಾಲುವೆಯಂತೆ ನೀರು ಹರಿಯುತ್ತಿತ್ತು.

ಕೆಲವೆಡೆ ರಸ್ತೆಯ ತಗ್ಗು ಭಾಗದಲ್ಲಿ ಕೆರೆಯಂತೆ ನೀರು ನಿಂತಿತ್ತು. ವೇಗವಾಗಿ ಹೋಗುತ್ತಿದ್ದ ಬಸ್‌ನ ಮುಂದಿನ ಎಂಜಿನ್ ಬಳಿಯ ಗೇರ್ ಬಾಕ್ಸ್ ತೆರೆದುಕೊಂಡು ರಸ್ತೆಯ ಕೊಳಚೆ ನೀರು ಕಾರಂಜಿ ಯಂತೆ ಚಿಮ್ಮಲಾ ರಂಭಿಸಿತು. ಚಾಲಕ ಬಸ್ಸನ್ನು ಹಿಡಿತಕ್ಕೆ ತರುವ ಮೊದಲೇ ಬಸ್‌ನ ಮುಂದಿನ ೨-೩ ಸೀಟ್‌ನ ಜನರ ಮೈಯೆಲ್ಲ ಕೆಸರು, ನೀರಿನಿಂದ ತೊಯ್ದು ಹೋಯ್ತು. ಪ್ರಯಾಣಿಕರು ಹೌಹಾರಿದರು. ತಮ್ಮ ಲಗೇಜ್, ಬಟ್ಟೆ, ಮೈಯೆಲ್ಲ ಒದ್ದೆಯಾಗಿ ಮುಂದಿನ ಪ್ರಯಾಣವನ್ನು ಅತ್ಯಂತ ಮುಜುಗರದಿಂದ ಮಾಡುವಂತಾಯಿತು. ಬಸ್ಸಿನ ಒಳಭಾ ಗವೆಲ್ಲ ಕೆಸರು ಗದ್ದೆಯಂತಾಗಿತ್ತು!

ಮಳೆಗಾಲದ ಜನಜೀವನಕ್ಕೆ ಒಂದಿಷ್ಟು ಪೂರ್ವತಯಾರಿ ಬೇಕೇ ಬೇಕು. ಗ್ರಾಮೀಣ ಭಾಗದಲ್ಲಿ ಮನೆಯ ಚಾವಣಿ ರಿಪೇರಿ, ಜಮೀನಿನ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗುವ ಕಾಲುವೆಯನ್ನು ಕಸಕಡ್ಡಿಗಳಿಂದ ಮುಕ್ತ ಗೊಳಿಸುವುದು, ಮನೆಯಂಗಳದಲ್ಲಿ ಓಡಾಡುವಾಗ ಕಾಲು ಜಾರದಂತೆ ಅಡಿಕೆ ಸಿಪ್ಪೆ, ದರಗು (ಒಣಗಿದ ಎಲೆ ಗಳು) ಇನ್ನೂ ಮುಂತಾದ ಪೂರ್ವ ತಯಾರಿ ಮಾಡಿಕೊಳ್ಳುತ್ತಾರೆ. ಅಂಥ ಮಳೆಗಾಲದ ಪೂರ್ವ ತಯಾರಿ ಸಾರ್ವಜನಿಕ ಸ್ಥಳಗಳು, ಸಂಚಾರ ವ್ಯವಸ್ಥೆ ಎಲ್ಲದರಲ್ಲೂ ಇರಬೇಕಲ್ಲವೆ? ಸೋರುವ ಬಸ್, ಬಿಡಿಭಾಗಗಳ ಅಸಮರ್ಪಕ ನಿರ್ವಹಣೆ ಯಿಂದ ಬಸ್ ಒಳಗೆಲ್ಲ ನೀರು ಬೀಳುವ ಅವ್ಯವಸ್ಥೆ ಇವೆಲ್ಲವನ್ನೂ ತಪ್ಪಿಸಲು ಮಳೆಗಾಲದ ಆಗಮನದ ಮುನ್ನ ಒಂದಿಷ್ಟು ಪೂರ್ವತಯಾರಿ ಸಾಧ್ಯವಿಲ್ಲವೆ? ಎಂಬುದು ಬಹಳಷ್ಟು ಪ್ರಯಾಣಿಕರ ಪ್ರಶ್ನೆಯಾಗಿದೆ.

ಶಕ್ತಿ ಯೋಜನೆಯಂಥ ಜನಸ್ನೇಹಿ ಉಪಕ್ರಮದ ಜತೆಗೆ ಪ್ರಯಾಣದಲ್ಲಿನ ಇಂಥ ತೊಂದರೆಗಳನ್ನು ಕೂಡ ತಪ್ಪಿಸುವಂತಾಗಬೇಕು. ಮಳೆಗಾಲದ ಆರಂಭಕ್ಕೂ ಮುನ್ನವೇ ಮೇ ತಿಂಗಳ ಮೂರನೇ ವಾರದಲ್ಲಿ ಬೆಂಗಳೂರಿನಲ್ಲಿ ಸುರಿದ ಆಲಿಕಲ್ಲು ಮಳೆ ರಸ್ತೆ ತುಂಬೆಲ್ಲಾ ನೀರು ತುಂಬುವಂತೆ ಮಾಡಿ, ಕೆ.ಆರ್. ವೃತ್ತದ ಬಳಿ ಇರುವ ಅಂಡರ್‌ಪಾಸ್ (ಕೆಳ ಸೇತುವೆ) ಸಂಪೂರ್ಣ ನೀರು ತುಂಬಿ, ಆ ಮೂಲಕ ತೆರಳಿದ ಕಾರು ಮಳೆಗೆ ಮುಳುಗಡೆಯಾಗಿತ್ತು. ಆ ಕಾರಿನಲ್ಲಿದ್ದ ಕುಟುಂಬಸ್ಥರು ಹೀಗೆ ಸಂಕಷ್ಟದಲ್ಲಿ ಸಿಲುಕಿಕೊಂಡಿರುವಾಗ ಕೂಡಲೇ ಅಲ್ಲಿದ್ದ ಆಟೋ ಚಾಲಕರು ಗಮನಿಸಿ ರಕ್ಷಣೆಗೆ ಮುಂದಾಗಿದ್ದರೂ, ಆ ಕಾರಿನಲ್ಲಿದ್ದ ಆರು ಮಂದಿ ಪೈಕಿ ಒಬ್ಬಳು ಯುವತಿ ಸಾವಿಗೀಡಾದ ಘಟನೆ ಇನ್ನೂ ಹಚ್ಚ ಹಸಿರಾಗಿದೆ. ಮಳೆಗಾಲದಲ್ಲಿ ರಸ್ತೆಗಳ ಮತ್ತು ಚರಂಡಿಗಳ ಸಮರ್ಪಕ ನಿರ್ವಹಣೆ ಮಾಡಿದಾಗ ಮಾತ್ರ ಇಂಥ ಅಪಾಯಕಾರಿ ಸನ್ನಿವೇಶಗಳನ್ನು ತಪ್ಪಿಸಬಹುದಾಗಿದೆ.

ಮಳೆಗಾಲದ ಪ್ರಯಾಣದಲ್ಲಿ ಬಸ್ ನಿಲ್ದಾಣದ ಶೌಚಾಲಯ ಬಳಕೆಯೂ ಸ್ವಲ್ಪ ಜಾಸ್ತಿ ಎಂದೇ ಹೇಳಬಹುದು. ಇತ್ತೀಚೆಗೆ ಜಿಲ್ಲಾ ಕೇಂದ್ರವೊಂದರ ಬಸ್ ನಿಲ್ದಾಣ ದಲ್ಲಿನ ಹಣ ಕೊಟ್ಟು ಬಳಸುವ ಶೌಚಾಲಯಕ್ಕೆ ಹೋದಾಗಲೂ ಶುಚಿತ್ವ ದೂರದ ಮಾತೇ ಅನ್ನಿಸಿತ್ತು. ಡಯಾಬಿಟಿಸ್ ರೋಗಿಯಾಗಿರುವ ಪರಿಚಿತ ಮಹಿಳಾ
ಪ್ರಯಾಣಿಕರೊಬ್ಬರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸಿ, ಬಸ್ ನಿಲ್ದಾಣದ ಶೌಚಾಲಯ ಬಳಸಿ ಸ್ವಚ್ಛತೆಯ ಕೊರತೆಯಿಂದ ಸೋಂಕಿಗೆ ಗುರಿಯಾಗಿ ಚಿಕಿತ್ಸೆ ಪಡೆದ ಅಹಿತಕರ ಘಟನೆಯನ್ನು ಹಂಚಿಕೊಂಡಿದ್ದರು! ಶೌಚಾಲಯ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರವೂ ಬಹಳ ಮುಖ್ಯವಾದುದಾಗಿದೆ.

ಪ್ರಯಾಣಿಕರ ಪ್ರಯಾಣದ ಕಹಿ ಅನುಭವಗಳು ಒಂದೆಡೆಯಾದರೆ ಪಾದಚಾರಿಗಳಿಗೆ ಇನ್ನೊಂದು ಕಹಿ ಘಟನೆ ಮಳೆಗಾಲದಲ್ಲಿ ಕಾದಿರುತ್ತದೆ. ಶಾಲಾ ಕಾಲೇಜು ಗಳ ಮಕ್ಕಳು ಸಮವಸ ಧರಿಸಿ ನಡೆದುಕೊಂಡು ಹೋಗುವಾಗಲೋ, ನಾಗರಿಕರು ಶುಭ್ರ ಬಟ್ಟೆ ಧರಿಸಿ ದೈನಂದಿನ ಉದ್ಯೋಗ, ವ್ಯಾವಹಾರಿಕ ಕೆಲಸಗಳಿಗೆ ನಡೆದುಕೊಂಡು ಹೋಗುವಾಗಲೋ, ರಸ್ತೆಯಲ್ಲಿ ಗುಂಡಿಯಲ್ಲಿ ನಿಂತಿರುವ ನೀರಿನ ಮೇಲೆ ವಾಹನಗಳು ರಭಸವಾಗಿ ಚಲಿಸಿದಾಗ ಪಾದಚಾರಿಗಳಿಗೆ ಕೊಳಚೆ ನೀರಿನ ಸ್ನಾನವೇ ಆದಂತಾಗು ತ್ತದೆ. ಇದರಿಂದ ಪಡುವ ಪಾಡು ಹೇಳತೀರದು. ರಸ್ತೆಗಳ ಸಮರ್ಪಕ ನಿರ್ವಹಣೆ ಜತೆಗೆ ವಾಹನ ಚಾಲಕರ ಕಾಳಜಿಯ ಚಾಲನೆ ಯೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮುಂಗಾರು ಮಳೆಯನ್ನು ಕಾಯುತ್ತ ಮಳೆಯ ನಿರೀಕ್ಷೆಯಲ್ಲಿದ್ದ ನಾಡಿಗೆ ಮುಂಗಾರು ತಡವಾಗಿ ಆಗಮಿಸಿ ದರೂ ಬಿರುಸಾಗಿ ಸುರಿಯುತ್ತಿದೆ. ಭಾರಿ ಮಳೆಗೆ ಅಲ್ಲಲ್ಲಿ
ಪ್ರವಾಹ, ಮರದ ಕೊಂಬೆಗಳು ಮುರಿದು ಅಪಾಯ ವಾಗುವುದು, ವಿದ್ಯುತ್ ತಂತಿ ತುಂಡಾಗಿ ಅವಘಡ ಇವೆಲ್ಲವೂ ಜನಜೀವನಕ್ಕೆ ಎಚ್ಚರಿಕೆಯ ಪಾಠವನ್ನು ಕಲಿಸುತ್ತಿವೆ. ಪ್ರಯಾಣದ ಸಂದರ್ಭದಲ್ಲಿ ಎದುರಾಗುವ ಆಕಸ್ಮಿಕ ತೊಂದರೆಗಳನ್ನು ತಡೆಯಲು, ರಸ್ತೆಯ ಪಕ್ಕದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿಯಲ್ಲಿರುವ ಮರದ ಕೊಂಬೆ ಗಳನ್ನು ಕತ್ತರಿಸುವುದು, ವಿದ್ಯುತ್ ತಂತಿಗಳ ಸುಸ್ಥಿತಿಯ ಬಗ್ಗೆ ಆಗಾಗ ಪರಿಶೀಲನೆ, ಕೆರೆಗಳ ಏರಿಗಳ ಪಕ್ಕದಲ್ಲಿ ಸಾಗುವ ರಸ್ತೆಗೆ ಸೂಕ್ತ ತಡೆಗೋಡೆ ಅಥವಾ ರಕ್ಷಣಾ -ನ್ಸ್ ಗಳ ದುರಸ್ತಿ ಅತ್ಯವಶ್ಯಕ ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ. ರಸ್ತೆಗಳು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಳೆಗಾಲ ದಲ್ಲಿ ಹಿತಕರ ಪ್ರಯಾಣ ಮಾಡುವಂಥ ಸುವ್ಯವಸ್ಥಿತ ನಿರ್ವಹಣೆ ಇರಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ಆ ನಿಟ್ಟಿನಲ್ಲಿ ಸಕಾರಾತ್ಮಕ ಬದಲಾವಣೆ ನಿರೀಕ್ಷಿಸೋಣವೆ?