Tuesday, 26th November 2024

ಬಿಳಿತಲೆ ಸಾಹಿತಿಯ ಅಕ್ಷರ ಹಾದರದ ಕತ್ತಲೆ ವ್ಯವಹಾರ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಮಾರಾಟಕ್ಕಿವೆ: ಪ್ರಶಸ್ತಿ ಕೊಡಿಸುವ ಲಾಬಿ ಪುರುಷೋತ್ತಮರಿದ್ದಾರೆ

ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಗೌರವ ಎಂದೇ ಗುರುತಿಸಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರನ್ನೂ ಅನುಮಾನದಿಂದ
ನೋಡುವಂತಹ ಸನ್ನಿವೇಶವೊಂದು ಕನ್ನಡದಲ್ಲಿ ನಿರ್ಮಾಣವಾಗಿದೆ. ಕನ್ನಡದಲ್ಲಿ ಉನ್ನತ ಸಾಹಿತ್ಯ ಪ್ರಶಸ್ತಿಗಳನ್ನು ಪಡೆಯಲು, ಕೊಡಿಸಲು ಪ್ರಬಲ ಲಾಬಿ ನಡೆಸಲೇ ಬೇಕು, ಸಾಕಷ್ಟು ‘ಸೇವೆ’ ಸಲ್ಲಿಸಬೇಕೆಂಬ ಆರೋಪಗಳು ಸಾಕಷ್ಟು ಕಾಲದಿಂದ ಕೇಳಿಬರುತ್ತಲೇ ಇವೆ. ಆದರೆ, ಅದಕ್ಕಾಗಿ ತಮ್ಮ ‘ಪುರೊಷೋತ್ತಮ’
ಅವತಾರ ಕಳಚಿ ಬೆತ್ತಲಾಗಿ, ಕೊನೆಗೆ ಹನಿ ಟ್ರಾಪ್‌ಗೆ ಒಳಗಾಗಿ ಇದೀಗ ಅದರಿಂದ ಹೊರಬರಲಾಗದೇ ಪೇಚಾಡುತ್ತಿರುವ ಪ್ರಕರಣ ನಾಡಿನಾದ್ಯಂತ ಗುಲ್ಲೆಬ್ಬಿಸಿದೆ. ಹೇಳಿಕೇಳಿ, ಇದು ಸಾಮಾಜಿಕ ಜಾಲತಾಣಗಳ ಯುಗ.

ನಾವಾಡುವ ಯಾವುದೇ ಮಾತು ಎದುರಿನವರ ಕಿವಿ ತಲುಪುವ ಮುನ್ನವೇ ಫೇಸ್‌ಬುಕ್ ಲೈವ್ ಆಗಿಯೋ, ವಿಡಿಯೋ ತುಣುಕಿನ ರೂಪದಲ್ಲೋ, ರೀಲ್ಸ್‌ಗಳ ಸರಕಾಗಿಯೋ ಜನರನ್ನು ಕ್ಷಣ ಮಾತ್ರದಲ್ಲಿ ತಲುಪುತ್ತದೆ. ಅಂಥದ್ದರಲ್ಲಿ ತಾವೇ ಮುಂದಾಗಿ ಕತ್ತಲಲ್ಲಿ ಬೆತ್ತಲಾಗಿ, ಮೆದ್ದು, ಕಳ್ಳಹೆಜ್ಜೆಯಲ್ಲಿ ಎದ್ದು ಬರುವವರನ್ನು ಜನ
ಟ್ರೋಲ್ ಮಾಡದೇ ಬಿಟ್ಟಾರೆಯೇ? ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೇರಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ, ಸ್ವಯಂ ಘೋಷಿತ ಪಂಡಿತ ಪುರುಷೋತ್ತಮರೊಬ್ಬರು ತಮ್ಮ ಆಪ್ತೆಯೊಬ್ಬರಿಗೆ ಅಕಾಡೆಮಿ ಪ್ರಶಸ್ತಿ ನೀಡಲು, ಅವರಿಂದ ಪಡೆದ ‘ಅಪರೂಪದ ಸೇವೆ’ಯ ಕ್ಷಣಗಳು ಗೊತ್ತಿಲ್ಲದೇ ಸೇವಾಸ್ಪದರಿಂದಲೇ ಟ್ರಾಪ್‌ಗೆ ಒಳಪಟ್ಟಿದೆ.

ವಿಡಿಯೋ ಬಹಿರಂಗ ಮಾಡುವುದಾಗಿ ಬೆದರಿಸಿ ಅಕಾಡೆಮಿ ಪ್ರಶಸ್ತಿಯೊಂದಿಗೆ, ಬೃಹತ್ ಮೊತ್ತದ ‘ಸೇವಾ ತೆರಿಗೆ’ಯನ್ನೂ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.
ಈ ವಿಡಿಯೋದ ಕೆಲ ಸ್ಕ್ರೀನ್ ಶಾಟ್‌ಗಳ ಸ್ಯಾಂಪಲ್ ಹಾಗೂ ಇಬ್ಬರ ನಡುವೆ ನಡೆದಿದ್ದ ‘ಅನ್ಯೋನ್ಯ ಚಾಟಿಂಗ್’ನ ಕೆಲವು ಭಾಗ ಅದು ಹೇಗೋ ಸೇಫ್ ಲಾಕರ್
ನಿಂದ ಹೊರಬಿದ್ದಿದ್ದು (ಒಂದು ಮೂಲದ ಪ್ರಕಾರ ಲೇಖಕಿಯ ಮತ್ತೊಬ್ಬ ಫಲಾನುಭವಿ ಈ ಕೆಲಸ ಮಾಡಿರುವ ಶಂಕೆ), ಇದೀಗ ಸಾಮಾಜಿಕ ಜಾಲತಾಣದಲ್ಲಿ
ಭಾರೀ ಚರ್ಚೆಗೆ ಕಾರಣವಾಗಿದೆಯಲ್ಲದೇ, ಪ್ರಶಸ್ತಿ ಪಡೆದವರ ಮತ್ತು ಕೊಟ್ಟವರ ವೈಯಕ್ತಿಕ ಬದುಕು ಬಟಾಬಯಲಾಗುತ್ತಿದೆ.

ಸಾಹಿತ್ಯ ವಲಯಕ್ಕೆ ತೀರಾ ಅಪರಿಚಿತವಾಗಿರುವ, ಈವರೆಗೆ ಬೆರಳೆಣಿಕೆಯ ಲೇಖನಗಳನ್ನಷ್ಟೇ ಬರೆದಿರುವ ಲೇಖಕಿಗೆ ಗಣ್ಯ ಬರಹಗಾರ್ತಿಯ ಜತೆಗೆ ಅಕಾಡೆಮಿ
ಪ್ರಶಸ್ತಿ ಘೋಷಿಸಿರುವ ಔಚಿತ್ಯದ ಬಗ್ಗೆ ಕನ್ನಡ ಸಾರಸ್ವತ ಲೋಕದಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಜನತೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುವಂತಾಗಿದೆ.
ಲೇಖಕಿಯ ‘ಆಪ್ತ ಬಳಗ’ ತೀರಾ ದೊಡ್ಡದಿದೆ ಎನ್ನಲಾಗಿದ್ದು, ಆಕೆಗೆ ಪ್ರಶಸ್ತಿ ಕೊಡಿಸಲು ಹರಸಾಹಸ ಮಾಡಿರುವ ಇಂಥ ‘ಬಿಳಿತಲೆ’ಯ ಬುದ್ಧಿಜೀವಿ, ಕನ್ನಡ
ಅಭಿವೃದ್ಧಿ ಪ್ರಾಽಕಾರದ ಗದ್ದುಗೆ ಏರಬೇಕೆಂಬ ಹವಣಿಕೆಯಲ್ಲಿ ದೆಹಲಿಯಿಂದ ರಾಜ್ಯಕ್ಕೆ ಬಂದು ಒಂದಿಷ್ಟು ಕನ್ನಡ ಸಾಹಿತ್ತಿಕ ಕಾರ್ಯಕ್ರಮಗಳನ್ನು ಸಂಘಟಿಸುವುದು,
ಅಂತಹ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳನ್ನು ಕರೆದು ಸನ್ಮಾನಿಸಿ, ಮೆಚ್ಚಿಸುವಂತ ಕೆಲಸ ಮಾಡುವ ಜತೆಗೆ, ಸರಕಾರದ ಮಟ್ಟದಲ್ಲಿ ತೀವ್ರ ಕಸರತ್ತು ನಡೆಸಿರುವಾಗಲೇ ಹನಿಟ್ರಾಪ್‌ಗೆ ಒಳಗಾಗಿರುವ ಸುದ್ದಿ ಹರಿದಾಡಲಾರಂಭಿಸಿದೆ. ಇದರಿಂದ ಎಚ್ಚೆತ್ತ ಹನಿಟ್ರ್ಯಾಪ್ ಒಳಗಾದ ಇಂಥ ‘ಪುರುಷೋತ್ತಮ’ರಿಗೆ ವಿಡಿಯೋಗಳು ಯಾವ ಕ್ಷಣದಲ್ಲಾದರೂ ಬಹಿರಂಗಗೊಳ್ಳುವ ಆತಂಕ ಕಾಡುತ್ತಿದೆ.

ಇದರಿಂದ ದಿಕ್ಕುಗಾಣದೇ ತಮಗೆ ಆತ್ಮೀಯರಾದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಮೊರೆ ಹೊಕ್ಕಿದ್ದಾರೆ. ಜತೆಗೆ ‘ಗೊತ್ತಿಲ್ಲದೆ ಮಣ್ಣು ತಿನ್ನುವ ಕೆಲಸ ಮಾಡಿಬಿಟ್ಟಿದ್ದೀನಿ ಮಾರ್ರೆ, ಹೇಗಾದರೂ ಮಾಡಿ ಮಾನ ಕಾಪಾಡಿ’ ಎಂದು ಕಾಂಗ್ರೆಸ್ ಸರಕಾರದ ಉನ್ನತ ಸ್ಥಾನದಲ್ಲಿರುವ ಕರಾವಳಿಯ ಶಾಸಕರೊಬ್ಬರ ಬಳಿ ಅಂಗಾಲಾಚಿ ಪೊಲೀಸರ ಮೇಲೆ ಒತ್ತಡ ತರುವ ಕೆಲವನ್ನೂ ಮಾಡಿದ್ದಾರೆಂಬುದನ್ನು ಹಿರಿಯ ಸಾಹಿತಿಯೊಬ್ಬರೇ ಬಾಯ್ಬಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಜಾಲತಾಣಗಳನ್ನೆಲ್ಲ ಜಾಲಾಡುತ್ತಿರುವ ಪೊಲೀಸರು, ಅವರ ಪರ ಹಾಗೂ ವಿರುದ್ಧ ಪೋಸ್ಟ್‌ಗಳನ್ನು ಮಾಡಿದವರನ್ನು ಸದ್ದಿಲ್ಲದೆ ಕರೆತಂದು
ವಿಚಾರಿಸುತ್ತಿದ್ದಾರಲ್ಲದೇ ‘ವಿಡಿಯೋಗಳು ಎಲ್ಲಿವೆ ಹೇಳಿ’ ಎಂದು ನಿತ್ಯ ಚಿತ್ರಹಿಂಸೆ ಕೊಡುತ್ತಿದ್ದಾರೆನ್ನಲಾಗಿದೆ. ಈ ಬಗ್ಗೆ ಸ್ವತಃ ಕಳೆದ ಕೆಲ ದಿನಗಳಿಂದ ಪೊಲೀಸ್ ಭಾಷೆ, ಆತಿಥ್ಯದಿಂದ ಜುಗುಪ್ಸೆಗೊಂಡಿರುವ ಬರಹಗಾರೊಬ್ಬರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದು, ನಿತ್ಯ ಆತಂಕದಲ್ಲೇ ದಿನ ಕಳೆಯುವಂತಾಗಿದೆ ಎಂದು ಗೋಳು ತೋಡಿಕೊಂಡಿದ್ದಾರೆ.

*

ಈ ಬಗ್ಗೆ ಕುತೂಹಲದಿಂದ ಸಾಹಿತ್ಯ ಕ್ಷೇತ್ರದಲ್ಲಿನ ಒಂದಿಷ್ಟು ಅಕ್ಷರ ಶ್ರಮಿಕರನ್ನು ವಿಚಾರಿಸಿದಾಗ ಆಘಾತಕಾರಿ ಸಂಗತಿಗಳು ಹಾಗೂ ಇನ್ನಷ್ಟು ಸೋಕಾಲ್ಡ್ ಬುದ್ಧಿಜೀವಿ, ಬಿಳಿತಲೆ ಸಾಹಿತಿಗಳ ಕರಿ ಅವತಾರಗಳೂ ಬೆಳಕಿಗೆ ಬಂದಿವೆ. ಅಕ್ಷರದ ಅಭಿಮಾನಿಗಳಲ್ಲಂತೂ ಭ್ರಮನಿರಸನವಾಗಿದ್ದು, ಸಾಂಸ್ಕೃತಿಕ ಕ್ಷೇತ್ರದ ಅಽಕಾರ, ಗೌರವಗಳಿಗಾಗಿ ಮೂರು ಬಿಟ್ಟಂತಹ ಪುರುಷೋತ್ತಮಾವತಾರಿಗಳು ತಮ್ಮ ವಯಸ್ಸಿನ ಅಂಕಿ-ಸಂಖ್ಯೆಗಳನ್ನು ಮರೆತು ರಾತ್ರಿ ಪಾರ್ಟಿಗಳ ಹೆಸರಿನಲ್ಲಿ ಕಂಡಕಂಡಲ್ಲಿ ನುಗ್ಗಿ ಎದ್ದಿದ್ದಾರೆ; ಎಡವಿದ್ದಾರೆ. ಕೇವಲ ಖ್ಯಾತಿ, ಪ್ರಶಸ್ತಿ, ಗೌರವಗಳಿಗಾಗಿ ಹಾತೊರೆಯುವ ಒಂದಷ್ಟು ಬರಹಗಾರ್ತಿಯರ ಪಡೆ ಇಂಥ ‘ಬುದ್ಧಿಜೀವಿ’ಗಳ ಸೇವೆಯನ್ನೇ ಪೂರ್ಣಾವಧಿ ದಂಧೆ ಮಾಡಿಕೊಂಡಿದೆ. ಸಾಲದ್ದಕ್ಕೆ ಇದಕ್ಕೆ ಪ್ರಗತಿಶೀಲತೆ, ಸಮಾನತೆ ಎಂಬಿತ್ಯಾದಿ ವ್ಯಾಖ್ಯಾನ ನೀಡಲಾಗುತ್ತಿದೆ ಎನ್ನುವ ಮಾತು ಬರೆದೇ ಬದುಕುತ್ತಿರುವ ನೈಜ ಸಾಹಿತಿಗಳಿಂದ ವ್ಯಕ್ತವಾಗಿದೆ.