ಒಂದು ಕಾಲದಲ್ಲಿ ದೇಶಕ್ಕೇ ಮಾದರಿಯಾಗಿದ್ದ ನಮ್ಮ ಸಹಕಾರ ಕ್ಷೇತ್ರ ಹಳ್ಳ ಹಿಡಿಯುತ್ತಿರುವ ಉದಾಹರಣೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಒಂದಾದ ಬೆನ್ನಲ್ಲೇ ಮತ್ತೊಂದು ಸಹಕಾರ ಬ್ಯಾಂಕ್ ದಿವಾಳಿ, ವಂಚನೆಯ ಹಗರಣಗಳು ಬೆಳಕಿಗೆ ಬರುತ್ತಲೇ ಇವೆ.
ಆರ್ಥಿಕ ದುರ್ಬಲರ, ಬಡ ಕೃಷಿಕರ, ದುಡಿಯವ ವರ್ಗದವರ ಸರ್ವತೋಮುಖ ಅಭಿವೃದ್ಧಿಯ ಆಶಯದೊಂದಿಗೆ ಸಮಾಜದ ಹಿರಿಯ ಆದರ್ಶವಾದಿಗಳು ಸಂಸ್ಥಾಪಿಸಿ, ಬೆಳೆಸಿದ ಸಹಕಾರ ಕ್ಷೇತ್ರ ಇದು ಬಹುತೇಕ ಭ್ರಷ್ಟಾಚಾರ, ಸ್ವ ಹಿತಾಸಕ್ತಿ, ಸ್ವಜನಪಕ್ಷಪಾತದ ಗೂಡಾಗುತ್ತಿರುವುದು ದುರದೃಷ್ಟಕರ. ಸಹಕಾರಿಗಳ ತ್ಯಾಗ ಮನೋಭಾವ ಮತ್ತು ನಿಷ್ಠೆ, ಸೇವೆಯಿಂದಾಗಿ ಇಂದಿಗೂ ಸಹಕಾರಿ ಕ್ಷೇತ್ರ ಉಳಿದಿದೆ ಎಂಬದು ನಿಜವಾದರೂ ಇತ್ತೀಚೆಗೆ ರಾಜ್ಯದಲ್ಲಿ, ಬಹುತೇಕ ಸಹಕಾರ ಬ್ಯಾಂಕ್‌ಗಳು ಮತ್ತು ಸಹಕಾರ ಸಂಘಗಳು ಒಂದಲ್ಲ ಒಂದು ರಾಜಕೀಯ ಪಕ್ಷಗಳ ಹಿಡಿತದಲ್ಲಿವೆ.
ಇಲ್ಲಿಗೆ ಆಯ್ಕೆ ಆಗಿ ಬರುವ ರಾಜಕೀಯ ಹಿನ್ನೆಲೆಯ ನಿರ್ದೇಶಕರುಗಳು, ಪದಾಧಿಕಾರಿಗಳು ತಮ್ಮ ಹಿಂಬಾ ಲಕರಿಗೆ ತಮ್ಮ ಪ್ರಭಾವದಿಂದ, ಸಾಲ ಮರು ಪಾವತಿಯ ಸಾಮರ್ಥ್ಯ ಇಲ್ಲದಿದ್ದರೂ, ಮಾನದಂಡ ಮೀರಿ, ವಾಸ್ತವ ಸಾಲಕ್ಕಿಂತಲೂ ಹೆಚ್ಚು ಸಾಲ ಕೊಡಿಸುವುದು ಸಾಮಾನ್ಯ ಸಂಗತಿಯಾಗಿದೆ. ಹೀಗೆ ಸಾಲ ಪಡೆದವರು ಕನಿಷ್ಠ ಆರು ತಿಂಗಳು ಸಹ ನಿಯತವಾಗಿ ಸಾಲ ಮರುಪಾವತಿಸದೇ ಡಿಫಾಲ್ಟರ್ ಆಗುತ್ತಿದ್ದಾರೆ. ಕೆಲವೆಡೆ, ಉದ್ದೇಶಪೂರ್ವಕ ವಂಚನೆಯ ದೃಷ್ಟಿಯಿಂದಲೇ ಹೆಚ್ಚಿನ ಮೊತ್ತದ ಸಾಲ ಪಡೆದ ಉದಾಹರಣೆಗಳೂ ಕಂಡುಬಂದಿವೆ.
ಇಲ್ಲಿ ಸಾಲಗಾರರ ಮತ್ತು ಪ್ರಭಾವ ಬೀರುವ ನಿರ್ದೇಶಕರುಗಳ ನಡುವೆ ಕಣ್ಣಿಗೆ ಕಾಣದ ಒಪ್ಪಂದಗಳು ನಡೆಯುತ್ತಿರುವುದೂ ಗುಟ್ಟಾಗಿ ಉಳಿದಿಲ್ಲ. ‘ಕಮಿಷನ್’
ಹಾವಳಿಗೆ ನಕಲಿ ದಾಖಲೆ, ಆಧಾರ ಪತ್ರಗಳ ಸೃಷ್ಟಿಯಂಥ ಪ್ರಕರಣಗಳು ಬಯಲಿಗೆ ಬಂದಿವೆ. ಇವೆಲ್ಲದರ ಪರಿಣಾಮ ಸಹಕಾರ ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲ (ಎನ್‌ಪಿಎ)ದ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದ್ದು, ಸಹಜವಾಗಿ ಅವು ದಿವಾಳಿ ಅಂಚನ್ನು ತಲುಪುತ್ತಿವೆ. ಸಹಕಾರಿಗಳಿಗೆ ಆದರ್ಶ ಮತ್ತು ಸ್ಫೂರ್ತಿಯಾಗಿದ್ದ ನೇತಾರರ ಸ್ಥಾನದಲ್ಲಿ ಲಾಭಕೋರರೇ ತುಂಬಿದ್ದಾರೆ. ಎಲ್ಲ ಸಹಕಾರ ಬ್ಯಾಂಕ್‌ಗಳ ಆಡಳಿತವೂ ೨೦೨೦ರ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ತಿದ್ದುಪಡಿಯ ಸುಗ್ರೀವಾಜ್ಞೆಯ ಮೂಲಕ ಭಾರತೀಯ ರಿಸರ್ವ್ ಆಡಿಯಲ್ಲಿ ಬಂದರೂ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ಇನ್ನು ನಷ್ಟದಲ್ಲಿರುವ ಇಂಥ ಬ್ಯಾಂಕ್‌ಗಳ ನೆರವಿಗೆ ರಾಜ್ಯ ಸರಕಾರಗಳೂ ಬರುವುದಿಲ್ಲ. ಹೀಗಾಗಿ ಹಿಂದಿನ ಸ್ಥಾಪಕರ ಆದರ್ಶದ ಮರುಸ್ಥಾಪನೆಯ ಜತೆಗೆ, ಸಹ
ಕಾರ ಕ್ಷೇತ್ರದಲ್ಲಿನ ದಿನನಿತ್ಯದ ಬೆಳವಣಿಗೆಯ ಬದಲಾವಣೆ, ಕಾನೂನು ಕಾಯಿದೆ, ತೊಂದರೆ, ನಿವಾರಣೆ ಮತ್ತು ಪರಿಹಾರಗಳ ಬಗ್ಗೆ ವ್ಯಾಪಕ ಚರ್ಚೆ ಯಾಗಬೇಕಿದೆ.
ಆಧುನಿಕ ಕಾಲದ ಮೊಬೈಲ್-ಆನ್‌ಲೈನ್ ಬ್ಯಾಂಕಿಂಗ್, ಎಟಿಎಂ ಪದ್ಧತಿಗಳಂಥ ವ್ಯವಸ್ಥೆಯ ಪರಿಣತಿಯನ್ನೂ ಸಹಕಾರಿಗಳು ಪಡೆಯುವಂತಾಗಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವುದರ ಜತೆಗೆ ಪ್ರತಿ ಸಹಕಾರ ಬ್ಯಾಂಕ್‌ಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ನ ಅಧಿಕಾರಿ ಯೊಬ್ಬರನ್ನು ಆರ್‌ಬಿಐ ನೇಮಕ ಮಾಡುವ ಮೂಲಕ ಮೇಲ್‌ನಿಗಾ ವಹಿಸುವ ಅನಿವಾರ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ.