Sunday, 24th November 2024

ಆಕರ್ಷಕ ವಿನ್ಯಾಸದ ಎಸ್‌’ಯುವಿ

ಶಶಿಧರ ಹಾಲಾಡಿ
ಹಾಹಾಕಾರ್‌

ಕಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಈ ಹೊಸ ಕಾರು ನಮ್ಮ ದೇಶದ ಕೋವಿಡೋತ್ತರ ಮಾರುಕಟ್ಟೆಗೆ ಲಗ್ಗೆ ಹಾಕಿದೆ. ಎಸ್‌ಯುವಿ ವಾಹನಗಳ ಪೈಕಿ ಹೆಚ್ಚು ಸ್ಪೋರ್ಟಿ  ಲುಕ್ ಹೊಂದಿರುವ ಕಾರು ಎನಿಸಿದೆ.

ದಕ್ಷಿಣ ಕೊರಿಯಾದ ಕಿಯಾ ಮೋಟಾರ‍್ಸ್ ಸಂಸ್ಥೆಯು ನಮ್ಮ ದೇಶದಲ್ಲಿ ಸಾಕಷ್ಟು ವೇಗದಿಂದ ಮುನ್ನಡೆಯುತ್ತಿದೆ. ಕಿಯಾ
ಸೆಲ್ಟೋಸ್ ಮತ್ತು ಕಿಯಾ ಕಾರ್ನಿವಲ್ ಲಕ್ಸುರಿ ಎಂಪಿವಿ ವಾಹನಗಳ ನಂತರ, ಈಗ ಕಿಯಾ ಸೋನೆಟ್ ಕಾರು ರಸ್ತೆಗೆ ಇಳಿದಿದೆ. ಕಳೆದ ವಾರ ನಮ್ಮ ದೇಶದಲ್ಲಿ ಬಿಡುಗಡೆಯಾದ ಈ ಕಾರು ಒಂದು ಎಸ್‌ಯುವಿ ಎಂದು ಕರೆದುಕೊಂಡಿದ್ದು, ಮಾರುತಿ ಬ್ರೆಜಾ, ಟಾಟಾ ನೆಕ್ಸನ್, ಹುಂಡೈ ವೆನ್ಯೂ ಮೊದಲಾದ ವಾಹನಗಳೊಂದಿಗೆ ಸ್ಪರ್ಧಿಸಬಲ್ಲದು.

ಇಂದಿನ ಕೋವಿಡೋತ್ತರ ಯುಗದಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವವೆಂದರೆ ಕಾರುಗಳು. ಈ ಸಮಯದಲ್ಲಿ ಹೊರ ಬಂದಿ ರುವ ಕಿಯಾ ಸೋನೆಟ್ ಸಾಕಷ್ಟು ಹೆಸರು ಮಾಡುವ ನಿರೀಕ್ಷೆೆಯಲ್ಲಿದೆ. ಹುಂಡೈ ವೆನ್ಯೂ ಮತ್ತು ಮಾರುತಿ ಸುಜುಕಿ ಬ್ರೆೆಜಾ ರೀತಿಯ ಎಸ್ ಯುವಿ ಸಾಲಿಗೆ ಕಿಯಾ ಸೋನೆಟ್ ಸರಸಮನಾಗಿ ನಿಲ್ಲಬಲ್ಲವಾಗಿದ್ದು, ಭಾರತದ ರಸ್ತೆಗಳಿಗೆ ಹೆಚ್ಚು ಸೂಕ್ತ ಎಂದು ಕಾರು ಪಂಡಿತರು ಹೇಳುತ್ತಿದ್ದಾರೆ.

ವಿನ್ಯಾಸ
ಎಸ್‌ಯುವಿ ಕಾರಿನ ಮುಖ್ಯ ಆಕರ್ಷಣೆ ಎಂದರೆ ವಿನ್ಯಾಸ. ಹುಂಡೈ ವೆನ್ಯೂನ ವಿನ್ಯಾಸವನ್ನು ಹೋಲುವಂತಿದ್ದರೂ, ಕಿಯಾ ಸೋನೆಟ್ ಹೆಚ್ಚು ಸ್ಪೋರ್ಟಿ ಲುಕ್ ಹೊಂದಿದೆ ಎಂದು ಹೇಳಲಾಗಿದೆ. ಮುಂದೆ ಇರುವ ಫಾಗ್ ಲ್ಯಾಂಪ್ ನೋಟವು, ಹೆಚ್ಚು ಕಾಂಟ್ರಾಸ್ಟಿಂಗ್ ಎನಿಸಿದ್ದು, ಜನರ ಗಮನ ಸೆಳೆಯುವಂತಿದೆ. ಎಸ್‌ಯುವಿ ವಿನ್ಯಾಸಗಳಿಗೆ ಹೊಂದುವಂತೆ ಬಾನೆಟ್ ವಿನ್ಯಾಸ ವಿದ್ದರೂ, ತುಸು ಎತ್ತರ ಎನಿಸುವಂತಿದೆ. ಟೈಲ್ ಲೈಟುಗಳು ಒಟ್ಟಾರೆ ವಿನ್ಯಾಸಕ್ಕೆ ಹೊಂದುವಂತಿವೆ.

ಒಳ ವಿನ್ಯಾಸ
ಕಾರೊಂದರ ಸಾಮರ್ಥ್ಯಕ್ಕೆ ಅನುಗುಣವಾಗಿ, ಜನರು ಕುಳಿತುಕೊಳ್ಳುವ ಒಳಭಾಗದ ವಿನ್ಯಾಸವೂ ಹೊಂದುವಂತಿದ್ದರೆ ಮಾತ್ರ ಜನಮನ್ನಣೆ ಗಳಿಸಬಲ್ಲದು. ಕಿಯಾ ಸಂಸ್ಥೆಯು ಈ ಕಾರಿನ ಒಳವಿನ್ಯಾಸವನ್ನು ‘ಕೈನೆಟಿಕ್ ಆರ್ಟ್ ಲಾಂಜ್’ ಅನುಭವ ಎಂದು ಕರೆದುಕೊಂಡಿದೆ. ಈ ಕ್ಲಿಷ್ಟ ಮತ್ತು ಆಕರ್ಷಕ ಪದಗಳ ಅರ್ಥ ಏನೇ ಇದ್ದರೂ, ಇದರ ಸೀಟುಗಳು ಹೆಚ್ಚು ಎತ್ತರ ಮತ್ತು ವಿಶಾಲ ಎನಿಸಿದ್ದ, ಸುಖಕರ ಪಯಣಕ್ಕೆ ಅನುವುಮಾಡಿಕೊಡುತ್ತವೆ.

ಕುಳಿತುಕೊಳ್ಳುವವರ ಬೆನ್ನಿಗೆ ಹೆಚ್ಚು ಬೆಂಬಲ ನೀಡುತ್ತಿದ್ದು, ಕಾಲುಗಳಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಆದರೆ ಹಿಂದಿನ
ಸೀಟಿನ ವಿನ್ಯಾಸವು ಎತ್ತರದ ವ್ಯಕ್ತಿಗಳಿಗೆ ತುಸು ಇಕ್ಕಟ್ಟು ಎನಿಸಬಹುದು. 392 ಲೀಟರ್ ವೈಶಾಲ್ಯತೆ ಹೊಂದಿರುವ ಬೂಟ್ ಸ್ಪೇಸ್
ಈ ಕಾರಿನ ಒಂದು ಪ್ಲಸ್ ಪಾಯಿಂಟ್. ದೂರದ ಊರುಗಳಿಗೆ ಹೋಗುವಾಗ, ಹೆಚ್ಚಿನ ವಸ್ತುಗಳನ್ನು ತುಂಬಿಸಿಕೊಳ್ಳಲು ಅವಕಾಶ ನೀಡುತ್ತದೆ.

ವಿಶಾಲ ಡಿಸ್ಪ್ಲೇ ಸ್ಕ್ರೀನ್
ಸ್ಪೀಡೋ ಮೀಟರ್‌ನ್ನು ಒಳಗೊಂಡಂತಿರುವ 10.25 ಇಂಚು ಸ್ಕ್ರೀನ್ ಈ ಕಾರಿನ ಇನ್ನೊಂದು ಆಕರ್ಷಕ ಫೀಚರ್.  ಈ ತಲೆಮಾ ರಿನ ಹೊಸ ಕಾರುಗಳ ರೀತಿ ನಾನಾ ರೀತಿಯ ಸೌಲಭ್ಯ ಹೊಂದಿರುವ ಡ್ಯಾಶ್‌ಬೋರ್ಡ್, ಏಳು ಸ್ಪೀಕರಿನ ಬೋಸ್ ಆಡಿಯೋ ವ್ಯವಸ್ಥೆಯು ಸುಮಧುರ ಸಂಗೀತ ಕೇಳಲು ಅನುವು ಮಾಡಿಕೊಡುತ್ತದೆ. ವೈರ್‌ಲೆಸ್ ಚಾರ್ಜಿಂಗ್, ಸ್ಮಾರ್ಟ್ ಏರ್ ಪ್ಯೂರಿಫೈಯರ್, ವೈರಸ್ ಪ್ರೊಟೆಕ್ಷನ್ ಎಂಬ ಸೌಲಭ್ಯ (ಇದು ಹೊಸದು!), ಸುವಾಸನೆಯನ್ನು ಸಿಂಪಡಿಸುವ ಸಾಧನ ಮೊದಲಾದ ಹೊಸ ಫೀಚರ್‌ ಗಳು ಒಳಾಂಗಣ ವಿನ್ಯಾಸಕ್ಕೆ ತಮ್ಮದೇ ಆದ ಕೊಡುಗೆ ನೀಡಬಲ್ಲವು.

ವಾಯ್ಸ್‌ ಕಮಾಂಡ್
ಕಿಯಾ ಸೋನೆಟ್‌ನಲ್ಲಿರುವ ವಾಯ್‌ಸ್‌ ಕಮಾಂಡ್ ಅಥವಾ ಧ್ವನಿ ಆಧಾರಿತ ಸಂದೇಶ ನೀಡುವ ವ್ಯವಸ್ಥೆಗೆ ‘ಹಲೋ ಕಿಯಾ’ ಎಂದು ಹೆಸರಿಸಲಾಗಿದ್ದು, ಇಂದಿನ ತಲೆಮಾರಿನ ಕೆಲವು ಕಾರುಗಳಲ್ಲಿರುವ ಎಲ್ಲಾ ಕೆಲಸಗಳನ್ನೂ ಮಾಡಬಲ್ಲದು. ಜತೆಗೆ ಕಿಯಾದ ವಿಶೇಷತೆ ಎನಿಸಿರುವ ಕೆಲವು ಕೆಲಸಗಳನ್ನು ಮಾಡಬಲ್ಲದು. ಕಿಟಿಕಿಯನ್ನು ತೆರೆಯವುದು ಮತ್ತು ಮುಚ್ಚುವುದು, ಎಸಿಯ ಉಷ್ಣತೆಯನ್ನು ನಿಯಂತ್ರಿಸುವುದು, ಫ್ಯಾನ್ ತಿರುಗುವಿಕೆಯನ್ನು ನಿಯಂತ್ರಿಸುವುದು ಮೊದಲಾದ ಕೆಲಸಗಳನ್ನು ಧ್ವನಿಯ ಕಮಾಂಡ್ ಮೂಲಕ ಮಾಡಬಹುದು.

ಸುರಕ್ಷತೆಯ ದೃಷ್ಟಿಯಿಂದ ಈ ಕಾರಿನಲ್ಲಿ ಆರು ಏರ್ಬ್ಯಾಗ್‌ಗಳಿವೆ. ಜತೆಗೆ ತುರ್ತಾಗಿ ಬ್ರೇಕ್ ಹಾಕಿದಾಗ ಹೆಚ್ಚು ವೇಗದಿಂದ ಬ್ಲಿಂಕ್ ಆಗುವ ಲೈಟ್‌ಗಳನ್ನು ಅಳವಡಿಸಲಾಗಿದೆ. ಆಟೊಮ್ಯಾಟಿಕ್ ಎನಿಸಿರುವ ಐಎಂಟಿ ಗೇರ್ ಬಾಕ್ಸ್ ಅಳವಡಿಸಲಾಗಿದ್ದು, ಇದು ಮ್ಯಾನುವಲ್ ಗೇರ್‌ ಬಾಕ್ಸ್ ರೀತಿ ಕೆಲಸ ಮಾಡುವುದರಿಂದಾಗಿ, ಹೆಚ್ಚಿನ ಮೈಲೇಜ್ ನಿರೀಕ್ಷಿಸಬಹುದು. ಐಎಂಟಿ ತಂತ್ರಜ್ಞಾನ ದಿಂದಾಗಿ, ಆಟೊಮ್ಯಾಟಿಕ್ ಕಾರು ಎನಿಸಿದ್ದರೂ, ಮ್ಯಾನುವಲ್ ಗೇರ್ ನ ಕೆಲವು ಲಾಭ ಪಡೆಯಬಹುದು.

ದಕ್ಷಿಣ ಕೊರಿಯಾದ ಕಿಯಾ ಸಂಸ್ಥೆಯು ಈ ಹೊಸ ಎಸ್ ಯುವಿ ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ಇನ್ನಷ್ಟು ಭದ್ರ ವಾಗಿ ಹೆಜ್ಜೆ ಊರಲು ಸನ್ನದ್ಧವಾಗಿರುವುದಂತೂ ನಿಜ.