ಕೊಪ್ಪಳ: ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂಬ ಚರ್ಚೆ ಬಗ್ಗೆ ನನಗೂ ಬೇಸರ ಇದೆ. ಇದರಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮರ್ಯಾದೆ ಹಾಳಾಗುತ್ತಿದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಶಾಸಕ ರಾಯರೆಡ್ಡಿ ಆಯೋಜಿಸಿದ್ದ ಔತಣಕೂಟದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತ ನಾಡಿದರು.
ನಾವು ಶೇ. 40 ಪರಸೆಂಟೇಜ‌್ ಸರಕಾರ ಎಂದು ಆರೋಪ ಮಾಡಿದ್ದೆವು. ಈಗ ಅವರು ಶೇ.15 ರಷ್ಟು ಕಮಿಷನ್ ಎಂದು ಆರೋಪ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕರ್ನಾಟಕ ಭ್ರಷ್ಟ ರಾಜ್ಯ ಆಗುತ್ತಿದೆ. ಇದರಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತಿದೆ. ಭ್ರಷ್ಟಾಚಾರ ತೊಲಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸ ಮಾಡಬೇಕಿದೆ. ವಿರೋಧ ಪಕ್ಷದ ನಾಯಕರನ್ನು ಕರೆದು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಗುತ್ತಿಗೆದಾರರ ಸಂಘದ ಶೇ.15ರ ಕಮಿಷನ್ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಇಂದಿನ ಔತಣಕೂಟಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ. ಚುನಾವಣೆಯಲ್ಲಿ ಕೆಲಸ ಮಾಡಿದ ಕಾರ್ಯ ಕರ್ತರು, ಮುಖಂಡರು ಹಾಗೂ ಅಧಿಕಾರಿಗಳಿಗೆ ಔತಣಕೂಟಕ್ಕೆ ಕರೆಯುತ್ತಿದ್ದೆ. ಈ ಹಿಂದೆಯೂ ನಾನು ಊಟಕ್ಕೆ ಕರೆದಿದ್ದೇನೆ. ಇದು ಕೂಡ ನನ್ನ ಕ್ಷೇತ್ರವೇ. ಯಾರು ಏನೇ ಅರ್ಥ ಮಾಡಿಕೊಂಡರೂ ನಾನು ಏನು ಕೇರ್ ಮಾಡುವುದಿಲ್ಲ ಎಂದರು.
ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂದುಕೊಂಡಿದ್ದೇನೆ. ಇಂದಿನ ರಾಜ ಕಾರಣ ನನಗೆ ಒಗ್ಗುವುದಿಲ್ಲ. ಲೋಕಸಭೆಗೆ ನಾನು ಸ್ಪರ್ಧೆ ಮಾಡಿದರೆ. ಜನ ನನ್ನನ್ನು ಸೋಲಿಸುತ್ತಾರೆ. ಇಂದಿನ ಚುನಾವಣೆ ವ್ಯವಸ್ಥೆ ಸರಿ ಇಲ್ಲ. ನಮ್ಮಂತವರನ್ನು ಜನ ಗೆಲ್ಲಿಸುವುದಿಲ್ಲ. ಈ ಹಿಂದೆ ಎಂಪಿ ಆಗಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೂ ನನ್ನನ್ನು ಸೋಲಿಸಿದ್ದರು. ಈ ಕಾರಣಕ್ಕೆ ಅದಕ್ಕೆ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದರು.
ಕೆಕೆಆರ್ ಡಿಬಿ ಅಧ್ಯಕ್ಷನಾಗಲು ನನಗೆ ಇಂಟರೆಸ್ಟ್ ಇಲ್ಲ. ನಾನೇ ಅಜಯ್ ಸಿಂಗ್ ಅಧ್ಯಕ್ಷ ಆಗಲಿ ಎಂದು ಬರೆದುಕೊಟ್ಟಿದ್ದೇನೆ. ಕೆಕೆಆರ್ ಡಿಬಿಗೆ ನಾನೇ ಎಲ್ಲ ಸದಸ್ಯರ ಹೆಸರು ಶಿಫಾರಸ್ಸು ಮಾಡಿದ್ದೇನೆ ಎಂದು ತಿಳಿಸಿದರು.