ಇದೇ ಅಂತರಂಗ ಸುದ್ದಿ
vbhat@me.com
ಮೊನ್ನೆ ನಾನು ಸಿಂಗಾಪುರಕ್ಕೆ ಆ ದೇಶದ ಹಸಿರನ್ನು ನೋಡಲೆಂದೇ ಹೋಗಿದ್ದೆ. ಅಂದರೆ ಅಲ್ಲಿನ ಗಿಡ, ಮರ, ಹೂವು, ಎಲೆ, ಉದ್ಯಾನ, ಹಸಿರು ಆಫೀಸು, ಗಗನ ಚುಂಬಿ ಹಸಿರು ಕಟ್ಟಡಗಳು, ಹಸಿರು ಹೋಟೆಲುಗಳು, ರಸ್ತೆ ಬದಿ ಸಣ್ಣ ಉದ್ಯಾನ, ಮನೆ ಮುಂದಿನ ಕೈತೋಟ, ಕಾಡು, ಚಿಕ್ಕಕಾಡು, ನೂರಾರು ವರ್ಷಗಳ
ವಟವೃಕ್ಷ, ಮಳೆ ಕಾಡು, ಹಸುರು ಬಳ್ಳಿ, ಆರ್ಕಿಡ್ ವನ, ಬೊಟಾನಿಕಲ್ ಗಾರ್ಡನ್, ಅಲ್ಲಿನ ಮರಗಳ ಮೇಲೆ ಸಹಜವಾಗಿ ಬೆಳೆದ ಬಂದಳಿಕೆ, ಸೀತಾಳೆಗಳನ್ನು ನೋಡಲೆಂದೇ ಹೋಗಿದ್ದೆ.
ಇವನ್ನು ಬಿಟ್ಟರೆ ನನಗೆ ಬೇರೆ ಯಾವ ಕೆಲಸಗಳೂ ಇರಲಿಲ್ಲ. ‘ಫ್ರೆಂಡ್ಸ್ ಆಫ್ ದಿ ಪಾರ್ಕ್ ಕಮ್ಯುನಿಟಿಸ್’ ಎಂಬ ಸ್ವಯಂಸೇವಾ ಸಂಸ್ಥೆಯ ‘ಹಸಿರು ಸ್ನೇಹಿತರು’ ಜತೆ ಸಿಂಗಾಪುರದ ಗಲ್ಲಿಗಲ್ಲಿ ಗಳಲ್ಲಿ, ಪ್ರಮುಖ ಬೀದಿ, ರಸ್ತೆಗಳಲ್ಲಿ ಸುತ್ತಿದ್ದೇ ಸುತ್ತಿದ್ದು. ಇಷ್ಟು ವರ್ಷಗಳ ಕಾಲ ‘ಗಾರ್ಡನ್ ಸಿಟಿ’ ಎಂದು ಕರೆಯಿಸಿಕೊಂಡಿದ್ದ ಸಿಂಗಾಪುರ ಈಗ ‘ಸಿಟಿ ಇನ್ ಗಾರ್ಡನ್’ ಆಗಿ ಪರಿವರ್ತನೆಯಾಗಿದೆ. ಒಂದು ನಗರದಲ್ಲಿ ದೊಡ್ಡ ಉದ್ಯಾನ ಇರುವುದಕ್ಕೂ, ದೊಡ್ಡ ಉದ್ಯಾನದೊಳಗೇ ಒಂದು ನಗರ ಇರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಳೆದ ಅರ್ಧ ಶತಮಾನದಲ್ಲಿ ಸಿಂಗಾಪುರ ಅಂಥ ಒಂದು ಅದ್ಭುತ ಪವಾಡವನ್ನು ಸಾಧಿಸಿದೆ.
ಸಿಂಗಾಪುರದಲ್ಲಿ ಅನುಮತಿ ಇಲ್ಲದೇ ಮರಗಳನ್ನು ಕಡಿಯುವಂತಿಲ್ಲ. ಅದು ಘೋರ ಅಪರಾಧ. ಅದರಲ್ಲೂ ಒಂದು ಮೀಟರ್ ಗಾತ್ರದ ಮರವನ್ನಂತೂ ಕಡಿಯುವಂತಿಲ್ಲ. ಒಂದು ಮೀಟರ್ ಗಾತ್ರದ ಮರವನ್ನು ಪಾರಂಪ ರಿಕ ವೃಕ್ಷ (ಹೆರಿಟೇಜ್ ಟ್ರೀ) ಎಂದು ಪರಿಗಣಿಸಲಾಗುತ್ತದೆ. ವೃಕ್ಷ ಸಂರಕ್ಷಿತ ಪ್ರದೇಶ ಅಥವಾ ಬಯಲು ಪ್ರದೇಶದಲ್ಲಿನ ಮರಗಳನ್ನಂತೂ ಕಡಿಯುವಂತಿಲ್ಲ. ಒಂದು ವೇಳೆ ಒಂದು ಮರವನ್ನು ಕಡಿಯುವ ಸಂದರ್ಭ ಬಂದರೆ, ಕನಿಷ್ಠ ಹದಿನಾಲ್ಕು ಹಂತಗಳಲ್ಲಿ ಅನುಮತಿ ಪಡೆಯಬೇಕಾಗುತ್ತದೆ. ಅದರಲ್ಲೂ ಪಾರಂಪರಿಕ ವೃಕ್ಷವನ್ನು ಕಡಿಯುವ ಸಂದರ್ಭದಲ್ಲಿ ಸಚಿವರ ಅನುಮತಿ ಅಗತ್ಯವಾಗಬಹುದು.
ಇಲ್ಲಿ ಒಂದು ಪ್ರಸಂಗವನ್ನು ಹೇಳುತ್ತೇನೆ. 2003ರಲ್ಲಿ ಡಿಟಿಝಡ್ ಡೆಬೆನ್ಹಮ್ ಟೈ ಲೀಂಗ್ ಎಂಬ ಪ್ರಾಪರ್ಟಿ ಮ್ಯಾನೇಜ್ಮೆಂಟ್ ಕಂಪನಿಗೆ ಸಿಂಗಾಪುರದಲ್ಲಿ ಒಂದು ಮರದ ಮಹತ್ವವೇನು ಎಂಬುದು ಅರಿವಿಗೆ ಬಂದಿತು. ೨೦೦೨ರಲ್ಲಿ ಆ ಕಂಪನಿ ತಾನು ಕಟ್ಟಿದ ಅಪಾರ್ಟ್ಮೆಂಟಿನ ನಿವಾಸಿಯೊಬ್ಬರಿಗೆ ತೊಂದರೆ ಯಾಗುತ್ತದೆ ಎಂಬ ದೂರಿನ ಅನ್ವಯ, ಮೂರೂವರೆ ಮೀಟರ್ ಸುತ್ತಳತೆ ಇರುವ ದೊಡ್ಡ ಮರವೊಂದನ್ನು ಕಡಿದುಹಾಕಿತು. ಆ ಕಟ್ಟಡದ ಸೂಪರ್ವೈಸರ್
ಸಹ ಅಪಾರ್ಟ್ಮೆಂಟ್ ವಾಸಿಗಳ ಹಿತದೃಷ್ಟಿಯಿಂದ ಆ ಮರವನ್ನು ಕಡಿಯುವುದು ಒಳ್ಳೆಯದು ಎಂದು ವರದಿ ನೀಡಿದ್ದ. ಆದರೆ ಆ ಮರ ‘ವೃಕ್ಷ ಸಂರಕ್ಷಿತ’ ಪ್ರದೇಶದಲ್ಲಿತ್ತು. ಅಷ್ಟೇ ಅಲ್ಲ, ಆ ಮರ ನೂರು ವರ್ಷಗಳಿಗಿಂತ ಹೆಚ್ಚು ಹಳೆಯದಾಗಿತ್ತು.
Read E-Paper click here
‘ಹೋಪೆಯೇ ಸಂಗಲ್’ ಎಂದು ಕರೆಯಿಸಿಕೊಳ್ಳುವ ಆ ಮರ, ಅಳಿವಿನ ಅಂಚಿನಲ್ಲಿರುವ ತಳಿಗಳ ಪಟ್ಟಿಗೆ ಸೇರಿತ್ತು. ಅಂಥ ಮರವನ್ನಲ್ಲ, ಅದರ ಒಂದು ಕೊಂಬೆ ಯನ್ನು ಕತ್ತರಿಸಲು ಸಹ ಅನುಮತಿ ಅಗತ್ಯ. ಹೀಗಿರುವಾಗ ಇಡೀ ಮರಕ್ಕೆ ಕೊಡಲಿ ಇಡುವುದು ಘೋರ ಅಪರಾಧ. ಇಂಥ ಮರಗಳನ್ನು ಕಡಿಯಲು ಅನುಮತಿ ಕೊಡುವುದೇ ಇಲ್ಲ. ವಿಶೇಷ ಸಂದರ್ಭದಲ್ಲಿ, ಆ ಮರವನ್ನು ಕಡಿಯುವುದು ತೀರಾ ಅನಿವಾರ್ಯವಾದರೆ, ಅದಕ್ಕೂ ಮುನ್ನ ಅದನ್ನು ಸ್ಥಳಾಂತರಿಸಲು ಮಾರ್ಗೋ ಪಾಯಗಳನ್ನು ಹುಡುಕಬೇಕು. ಕೆಲವು ಸಲ ಆ ಮರಕ್ಕೆ ವಿಮೆ ಮಾಡಿಸಬೇಕಾಗುತ್ತದೆ. ಇವೆಲ್ಲವನ್ನೂ ಖಾತ್ರಿಪಡಿಸಿಕೊಂಡ ನಂತರವೇ ಸ್ಥಳಾಂತರಕ್ಕೆ ಪರವಾನಗಿ ನೀಡಲಾಗುತ್ತದೆ. ಮರಗಳ ವಿಷಯ ದಲ್ಲಿ ಸಿಂಗಾಪುರ ಅಷ್ಟು ಕಟ್ಟುನಿಟ್ಟು.
ಆದರೆ ಬಿಲ್ಡಿಂಗ್ ಸೂಪರ್ವೈಸರ್ ವರದಿ ಮತ್ತು ಅಪಾರ್ಟ್ ಮೆಂಟ್ ವಾಸಿಗಳ ಆಗ್ರಹದ ಮೇರೆಗೆ, ಡಿಟಿಝಡ್ ಡೆಬೆನ್ಹಮ್ ಟೈ ಲೀಂಗ್ ಕಂಪನಿ ಆ ಮರವನ್ನು ಕಡಿದುಹಾಕಿತು. ಸಿಂಗಾಪುರ ದಲ್ಲಿ ಬಹುತೇಕ ಮರಗಳಿಗೆ ಸೆನ್ಸರ್ ಅಥವಾ ಚಿಪ್ ಅಳವಡಿಸಿರುವುದರಿಂದ, ಯಾರೇ ಕತ್ತರಿಸಲು ಮುಂದಾದರೂ ತಕ್ಷಣ
ಗೊತ್ತಾಗುತ್ತದೆ. ಕಡಿದ ಆ ಮರವನ್ನು ಸಾಗಿಸುವುದರೊಳಗೆ, ಸ್ಥಳಕ್ಕೆ ಪೊಲೀಸರು ಆಗಮಿಸಿ ಮಹಜರು ನಡೆಸಿ, ಸರಕಾರಕ್ಕೆ ವರದಿ ನೀಡಿದರು. ಆ ಕಂಪನಿಗೆ 8000 ಸಿಂಗಾಪುರ ಡಾಲರ್ ದಂಡ ವಿಧಿಸಿತು.
ಅದಾದ ಬಳಿಕ ಈ ಪ್ರಕರಣ ಕೋರ್ಟಿಗೆ ಹೋಯಿತು. ವಿಚಾರಣೆಯ ನಂತರ, 76,035 ಸಿಂಗಾಪುರ ಡಾಲರ್ ಪರಿಹಾರ ನೀಡುವಂತೆ ಆ ಕಂಪನಿಗೆ ಕೋರ್ಟ್ ಆದೇಶ ನೀಡಿತು. ಆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ನಿರಾಕರಿಸಲಾಯಿತು. ಒಂದು ಮರ ಕಡಿದಿದ್ದಕ್ಕೆ ಆ ಕಂಪನಿ ಸುಮಾರು 53,32,000 ರುಪಾಯಿ ದಂಡ ತೆತ್ತಿತು. ಅದಕ್ಕಿಂತ ಹೆಚ್ಚಾಗಿ ಆ ಕಂಪನಿಯನ್ನು ಹಸಿರು ವಿರೋಧಿ, ವೃಕ್ಷ ವಿರೋಧಿ ಎಂಬ ಪಟ್ಟಿಗೆ ಸೇರಿಸಲಾಯಿತು. ಮುಂದಿನ ಒಂದು ವರ್ಷದ ಅವಧಿಗೆ ಹೊಸ ಯೋಜನೆಗೆ ಅವಕಾಶವನ್ನು ನಿರಾಕರಿಸಲಾಯಿತು. ಒಂದು ಮರ ಕಡಿದ ತಪ್ಪಿಗೆ ಯಾವಜ್ಜೀವ ನೆನಪಿನಲ್ಲಿ ಇಟ್ಟುಕೊಳ್ಳುವ ಪಾಠವನ್ನು ಆ ಕಂಪನಿ ಕಲಿಯಿತು. ಇದು ಆ ದೇಶದಲ್ಲಿನ ಇತರ ಕಂಪನಿಗಳಿಗೆ ಮತ್ತು ಜನರಿಗೆ ಒಂದು ಎಚ್ಚರಿಕೆ ಸಂದೇಶವನ್ನು ರವಾನಿಸಿತು (ಈ ಸುದ್ದಿ ಸಿಂಗಾಪುರದ ಪ್ರಮುಖ ದೈನಿಕ ‘ದಿ ಸ್ಟ್ರೇಟ್ಸ್ ಟೈಮ್ಸ್’ನ 2009ರ ಜುಲೈ 7ರ ಸಂಚಿಕೆಯಲ್ಲಿ ವಿಸ್ತೃತವಾಗಿ ವರದಿ ಯಾಗಿದೆ).
ಸಿಂಗಾಪುರದಲ್ಲಿ ಒಂದು ಮರಕ್ಕೆ ಕೊಡಲಿಯಿಟ್ಟು ದಕ್ಕಿಸಿಕೊಳ್ಳುವುದು ಕಷ್ಟ ಕಷ್ಟ. ಈ ಪ್ರಸಂಗವನ್ನು ನನಗೆ ‘ಫ್ರೆಂಡ್ಸ್ ಆಫ್ ದಿ ಪಾರ್ಕ್ ಕಮ್ಯುನಿಟಿಸ್’ ಎಂಬ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು ಹೇಳಿದ್ದರು. ‘ಸಿಂಗಾಪುರದಲ್ಲಿ ಮನುಷ್ಯ ರೊಂದನ್ನೇ ಅಲ್ಲ, ಮರಗಳನ್ನು ಕತ್ತರಿಸಿ ಜೀರ್ಣಿಸಿಕೊಳ್ಳುವುದು ಕಷ್ಟ’ ಎಂದು ಹೇಳಿದ್ದರು. ಮರಗಳನ್ನು ಕಡಿಯುವುದರ ಬಗ್ಗೆ ಸಿಂಗಾಪುರದ ಪ್ರಪ್ರಥಮ ಪ್ರಧಾನಿ ಲೀ ಕುಆನ್ ಯು ಅವರ ಪ್ರಸಿದ್ಧ ವಾಕ್ಯವಿದೆ- ‘ಇಂದು ನೆಡುವ ಗಿಡ, ನಾಳೆ ನಮಗೆ ಎಂದೂ ಸಮಸ್ಯೆಯಾಗಿ ಕಾಡ ಬಾರದು. ಮುಂದೆ ಅದನ್ನು ಕತ್ತರಿಸುವ ಪ್ರಸಂಗ ಬರಬಾರದು. ಒಂದು ಮರವನ್ನು ಕತ್ತರಿಸುವುದೆಂದರೆ, ಲಾಲನೆ-ಪಾಲನೆ
ಮಾಡಿ ಬೆಳೆಸಿದ ಮಗುವಿನ ಅಂಗಾಂಗಗಳನ್ನು ಕತ್ತರಿಸಿದಂತೆ ಎಂಬುದನ್ನು ಮರೆಯಬಾರದು. ಯಾವ ಕಾರಣಕ್ಕೂ ಮರ, ಮಾರಕವಾಗಬಾರದು. ಅದು ಕಸ-ಕಡ್ಡಿಗಳನ್ನು ಸೃಷ್ಟಿಸುವ ಆಗರ ವಾಗಬಾರದು. ಬೇಕಾದಾಗ ಬೆಳೆಯುವ, ಬೇಡವಾದಾಗ ಕತ್ತರಿಸುವ ಮನೋಭಾವ ನಿಮ್ಮದಾಗಿದ್ದರೆ, ಮರಗಳನ್ನು ನೆಡ
ಬಾರದು. ಅಂಥವರು ಕುರಿ-ಕೋಳಿಯನ್ನು ಸಾಕಬೇಕು’.
ಒಂದು ವಾರ ಸಿಂಗಾಪುರದ ಹಸಿರು ತೋರಣ, ಅಭಿಯಾನ, ಹೋರಾಟಗಳ ಸಾಹಸಗಾಥೆ ಕೇಳಿ, ಖುದ್ದಾಗಿ ನೋಡಿ ರೋಮಾಂಚಿತನಾದ ನಾನು ಬೆಂಗಳೂರಿಗೆ ಮರಳಿದ ಮರು ದಿನವೇ ‘ಟೈಮ್ಸ್ ಆಫ್ ಇಂಡಿಯ’ದಲ್ಲಿ ‘Close to 32,000 trees may be axed for Hassan-Hiriyur greenfield corridor’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಒಂದು ವರದಿ ನೋಡಿ ದಂಗಾಗಿಹೋದೆ. ಭಾರತಮಾಲಾ ಪರಿಯೋಜನೆಯ ಅಂಗವಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರ ಹಾಸನ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಉದ್ದೇಶಿತ ಎಕನಾಮಿಕ್ ಕಾರಿಡಾರ್ ನಿರ್ಮಿಸಲು ಮೂವತ್ತೆರಡು ಸಾವಿರ ಮರಗಳನ್ನು ಕಡಿದು ಹಾಕಲು ನಿರ್ಧರಿಸಿದೆ ಎಂಬ ಆ ಸುದ್ದಿಯನ್ನು ನನಗೆ ಜೀರ್ಣಿಸಿ ಕೊಳ್ಳಲು ಸಾಧ್ಯವಾಗಲೇ ಇಲ್ಲ.
ಅಲ್ಲಿ ಒಂದು ಮರ ಕಡಿದಿದ್ದಕ್ಕೆ ಆ ಪರಿ ದಂಡ, ಶಿಕ್ಷೆ! ಇಲ್ಲಿ ಸಾವಿರಾರು ಮರಗಳ ಮಾರಣಹೋಮ ನಡೆದರೂ ಹೇಳುವವ ರಿಲ್ಲ, ಕೇಳುವವರಿಲ್ಲ! ಒಂದು ಮರ ಕಡಿದ ಅಪರಾಧಕ್ಕೆ ದಂಡ ವಿಧಿಸಿದ ಸುದ್ದಿ ಸಿಂಗಾಪುರದ ಪತ್ರಿಕೆಯಲ್ಲಿ ಮುಖಪುಟದಲ್ಲಿ ವರದಿಯಾದರೆ, ಮೂವತ್ತೆರಡು ಸಾವಿರ ಮರಗಳು ಕೊಡಲಿಗೆ
ಆಹುತಿಯಾಗಲಿವೆ ಎಂಬ ಸುದ್ದಿ ಐದನೇ ಪುಟದಲ್ಲಿ ವರದಿಯಾಗಿತ್ತು.
ಒಂದು ಕ್ಷಣ ನಾನು ನಿಶ್ಚೇಷ್ಟಿತನಾಗಿಬಿಟ್ಟೆ! ತನ್ನ ಅನುಮತಿ ಪಡೆಯದೇ ಮರದ ಕೊಂಬೆಯನ್ನೂ ಕಡಿಯುವಂತಿಲ್ಲ ಎಂಬ ಸಿಂಗಾಪುರದ ಆಡಳಿತ ಎಲ್ಲಿ?
ಸಾವಿರಾರು ಮರಗಳನ್ನು ಕಡಿದುಹಾಕಿದರೂ ನಾವು ಕೇಳುವುದಿಲ್ಲ ಎಂಬ ನಮ್ಮ ಸರಕಾರಗಳು ಎಲ್ಲಿ? ನಮ್ಮ ಗೋಳನ್ನು ಸಂಬಂಧಪಡದವರ ಮುಂದೆ ಹೇಳಿಕೊಳ್ಳುವುದಕ್ಕೆ ಇಂಗ್ಲಿಷಿನಲ್ಲಿ Barking up the wrong tree ಎಂಬ ನುಡಿಗಟ್ಟಿದೆ. ನಾವು ಯಾವ ಮರ (ಸರಕಾರ)ದ ಮುಂದೆ ನಿಂತು ಬೊಬ್ಬೆ (Barking) ಹೊಡೆದರೂ ಪ್ರಯೋಜನವಿಲ್ಲ. ‘ಬೇಕಾದಾಗ ಬೆಳೆಯುವ, ಬೇಡವಾದಾಗ ಕತ್ತರಿಸುವ ಮನೋಭಾವ ನಿಮ್ಮದಾಗಿದ್ದರೆ, ಮರಗಳನ್ನು ನೆಡಬಾರದು.
ಅಂಥವರು ಕುರಿ-ಕೋಳಿಯನ್ನು ಸಾಕಬೇಕು’ ಎಂಬ ಮಾತು ನಮಗೆ ಹೇಳಿ ಮಾಡಿಸಿದಂತಿದೆ. ಕಾರಣ ನಾವು ಮರಗಳನ್ನು ಕುರಿ-ಕೋಳಿಗಳಂತೆ ನಿರ್ದಯವಾಗಿ ಕತ್ತರಿಸಿ ಹಾಕುತ್ತೇವೆ.
ಸಿಂಗಾಪುರಕ್ಕೂ ನಮಗೂ ಹೋಲಿಕೆ ಅಲ್ಲ, ನಿಜ. ಆದರೆ ಆ ದೇಶ ಮರಗಳ ಕುರಿತು ಅನುಸರಿಸುತ್ತಿರುವ ಧೋರಣೆ ನಮಗೆ ಕಪಾಳಮೋಕ್ಷ ಮಾಡುವಂತಿದೆ. ಮರಗಳನ್ನು ಮಾತೆ ಎಂದು ಪೂಜಿಸುವವರು ನಾವು. ಆದರೆ ಮಾರಣಹೋಮ ಮಾಡುವವರೂ ನಾವೇ. ಆದರೆ ಆ ಪುಟ್ಟ ದೇಶ ಮರಗಳ ಬಗ್ಗೆ ಹೊಂದಿರುವ
ಮಮತೆ ಅದೆಷ್ಟು ದೊಡ್ಡದು?! ನಾವು ಇನ್ನೂ ಎಲ್ಲೋ ಇದ್ದೇವೆ.. ನಮ್ಮನ್ನು ಇತರರು ಹಿಂದಕ್ಕೆ ಹಾಕಿ ಎಲ್ಲಿಗೋ ಹೋಗಿದ್ದಾರೆ. ಮುಂದಿನ ಜನಾಂಗ ಮತ್ತು ಸ್ಮರಣೆ
ಇತ್ತೀಚೆಗೆ ನಾನು ಸಿಂಗಾಪುರಕ್ಕೆ ಹೋದಾಗ, ಆ ದೇಶದ ಪ್ರಪ್ರಥಮ ಪ್ರಧಾನಿ ಲೀ ಕುಆನ್ ಯು ನೆನಪನ್ನು ಸಂಗ್ರಹಿಸಿಟ್ಟಿರುವ (ಅವರ ಬರಹ, ಭಾಷಣ, ವಸ್ತುಗಳನ್ನಿಟ್ಟ ಮನೆ), ಮ್ಯೂಸಿಯಂ ಎಂದು ಕರೆಯಿಸಿಕೊಳ್ಳದ, ಒಬ್ಬರ ಮನೆಗೆ ಹೋಗಿದ್ದೆ. ಅವರು ಕೆಲ ಕಾಲ ಲೀ ಕುಆನ್ ಯು ಜತೆ ಕೆಲಸ ಮಾಡಿದವರು. ತಮ್ಮ ಮನೆಯ ಒಂದು ಪಾರ್ಶ್ವವನ್ನು ತಮ್ಮ ಈ ಸಂಗ್ರಹಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಅಲ್ಲಿಟ್ಟ ಒಂದು ಪತ್ರಿಕೆಯಲ್ಲಿ ಲೀ ಕುಆನ್ ಯು ಸಂದರ್ಶನ ಪ್ರಕಟವಾದ ಪ್ರತಿಯಿತ್ತು.
ಪತ್ರಕರ್ತನೊಬ್ಬ ಅವರಿಗೆ ಕೇಳಿದ್ದ- ‘ನಿಮ್ಮನ್ನು ಆಧುನಿಕ ಸಿಂಗಾಪುರದ ನಿರ್ಮಾತೃ ಎಂದು ಕರೆಯುತ್ತಾರೆ. ನಿಮ್ಮನ್ನು ಬಿಟ್ಟು ಸಿಂಗಾಪುರವನ್ನು ಊಹಿಸಿಕೊ ಳ್ಳಲೂ ಆಗುವುದಿಲ್ಲ. ಹೀಗಿರುವಾಗ ಮುಂದಿನ ಜನಾಂಗ ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕು ಎಂದು ಬಯಸುತ್ತೀರಿ?’ ಅದಕ್ಕೆ ಯು ಏನು ಹೇಳಬಹುದು ಎಂಬ ಕಾತರ ನನಗಿತ್ತು. ಯು ಹೇಳಿದ್ದರು: ನಾನೇನೋ ಅಗಾಧವಾದ ಕೆಲಸ ಮಾಡಿದ್ದೇನೆ ಎಂಬ ಭಾವನೆಯನ್ನು ತಲೆಯಲ್ಲಿ ತುಂಬಿಕೊಳ್ಳಬಾರದು. ಆ ಭಾರವನ್ನು ಹೊರಲಾಗುವುದಿಲ್ಲ. ನನಗೆ ಸಿಕ್ಕ ಸದವಕಾಶವನ್ನು ನಾನು ಸರಿಯಾಗಿ ಬಳಸಿಕೊಂಡಿದ್ದೇನಾ ಎಂಬುದಷ್ಟೇ ಮುಖ್ಯ. ಈ ವಿಷಯದಲ್ಲಿ ನಾನು ಅದೃಷ್ಟವಂತ. ನನಗೆ ಅವಕಾಶಗಳೂ ಸಿಕ್ಕವು ಮತ್ತು ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡೆ. ಎಲ್ಲರಿಗೂ ಅವಕಾಶಗಳು ತೆರೆದುಕೊಳ್ಳುತ್ತವೆ.
ಆದರೆ ಯಾರೂ ಅದನ್ನು ಪೂರ್ತಿಯಾಗಿ ಬಳಸಿಕೊಳ್ಳುವುದಿಲ್ಲ. ಹಾಗೆ ಪೂರ್ತಿಯಾಗಿ ಬಳಸಿಕೊಂಡಾಗ ಸಹಜವಾಗಿ ಉತ್ತಮ ಕೆಲಸಗಳಾಗಿರುತ್ತವೆ. ಆದರೆ ಯಾರೂ ಮಾಡದ ಉತ್ತಮ ಕೆಲಸಗಳನ್ನು ಮಾಡಿದಾಗ ಅವು ಸಾಧನೆ ಎಂದು ಕರೆಯಿಸಿಕೊಳ್ಳುತ್ತವೆ. ನನ್ನ ಜಾಗದಲ್ಲಿ ಬೇರೆಯವರು ಇದ್ದರೂ ನನಗಿಂತ ಉತ್ತಮ ಕೆಲಸ ಮಾಡುತ್ತಿದ್ದರೇನೋ. ಹೀಗಾಗಿ ನಾನು ಮಾಡಿದ್ದೆಲ್ಲ ಶ್ರೇಷ್ಠ ಎಂಬ ಭಾವನೆ ನನಗಿಲ್ಲ.
ಹೊಸ ಸಿಂಗಾಪುರವನ್ನು ಕಟ್ಟುವಾಗ ನನ್ನ ಮುಂದೆ ಹಲವು ಆಯ್ಕೆಗಳಿದ್ದವು. ನಾನು ಏನೇ ಮಾಡಿದರೂ ಅದು ವಿಶೇಷ ಎಂದು ಕರೆಯಿಸಿಕೊಳ್ಳುತ್ತದೆ ಎಂಬ
ಅಂದಾಜಿತ್ತು. ಕಾರಣ ಮೊದಲು ನಡೆಯುವವನ ಹೆಜ್ಜೆ ಗುರುತುಗಳು ದಾರಿಯಲ್ಲಿ ಮೂಡುತ್ತವೆ. ಹೀಗಾಗಿ ನಾನು ಬರೀ ನಡೆಯಬಾರದು, ದಿಟ್ಟ ಹೆಜ್ಜೆ ಇಡಬೇಕು, ದಾಪುಗಾಲು ಹಾಕಬೇಕು ಎಂದು ನಿರ್ಧರಿಸಿದೆ. ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕೆಂದು ನಿರ್ಧರಿಸಿದೆ. ನಮ್ಮ ಕೆಲಸಗಳು ನಮಗೇ ಅಚ್ಚರಿ ಮೂಡಿಸಬೇಕು, ಹಾಗೆ ಮಾಡಲು, ಅಂಥ ಅಚ್ಚರಿಗಳ ಪರಿಸರದಲ್ಲಿಯೇ ಬೆಳೆಯಬೇಕು, ಯೋಚಿಸ ಬೇಕು ಎಂದು ನಿರ್ಧರಿಸಿದೆ.
ಹೀಗಾಗಿ ಸಿಂಗಾಪುರದಲ್ಲಿ ಯಾರೂ ನಂಬದ ಪವಾಡಗಳು ಜರುಗಿದವು. ಈ ಪವಾಡ, ಸವಾಲು, ಅಚ್ಚರಿಗಳನ್ನು ನೀವು ನಿತ್ಯ ನಿಮ್ಮ ಮಂತ್ರವಾಗಿಸಿಕೊಂಡರೆ, ಅವನ್ನೇ ಅಭ್ಯಾಸ ಮಾಡಿ ಕೊಂಡರೆ, ನಿಮ್ಮ ಜೀವನದಲ್ಲಿ ನೀರಸ ಕ್ಷಣ ಎಂಬುದೇ ಇರುವುದಿಲ್ಲ. ಮನೆ ಮುಂದಿನ ಗುಡ್ಡ ಏರಿದವನಿಗೆ ಅದಕ್ಕಿಂತ ಎತ್ತರದ ಗುಡ್ಡ ಕರೆಯುತ್ತದೆ. ಆ ಗುಡ್ಡವನ್ನು ಹತ್ತಿದವನಿಗೆ ಪರ್ವತಗಳು ಕೈಬೀಸಿ ಕರೆಯುತ್ತವೆ. ಮೌಂಟ್ ಎವರೆಸ್ಟ್ ಏರಿದವನಿಗೆ ಜೀವನ ಬೋರಾಗುತ್ತದೆ. ಕಾರಣ ಅದಕ್ಕಿಂತ ಎತ್ತರದ ಪರ್ವತಗಳೇ ಇಲ್ಲವಲ್ಲ. ನಾನೂ ಈ ರೀತಿ ಗುಡ್ಡ, ಬೆಟ್ಟ, ಪರ್ವತ, ಎವರೆಸ್ಟ್ ಏರಲಾರಂಭಿಸಿದೆ. ನನ್ನ ಮುಂದೆ ಹಲವು ಎವರೆಸ್ಟುಗಳನ್ನು ಕಲ್ಪಿಸಿಕೊಂಡು ಏರುತ್ತಾ ಮುನ್ನಡೆದೆ.
ಇವೆಲ್ಲವನ್ನೂ ನಾನೊಬ್ಬನೇ ಮಾಡಿಲ್ಲ. ನಾನು ಏರುತ್ತೇನೆ ಎಂದಾಗ ನೂರಾರು ಜನ ನಿಮ್ಮನ್ನು ಮೇಲಕ್ಕೆ ಎತ್ತಿ ಬಿಡುತ್ತಾರೆ. ನನ್ನ ವಿಷಯದಲ್ಲಿ ಆದದ್ದೂ ಅದೇ. ಜನರ ಮುಂದೆ ಹೊಸ ಐಡಿಯಾಗಳ ಬೀಜ ಇಟ್ಟರೆ, ಅವನ್ನು ಅವರು ಬಿತ್ತದೆ ಹೋಗಲಾರರು. ನಾನು ಮಾಡಿದ್ದೂ ಅದನ್ನೇ. ನಾನು ಕನಸುಗಳ ಮೂಟೆಯನ್ನಿಟ್ಟೆ. ಅವರು ಹೊತ್ತು ಸಾಗಿಸಿದರು. ಗಾಳಿಯಲ್ಲಿ ಬೀಜಗಳು ಹಾರಿ ಹೋಗಿ, ಎಲ್ಲೆಲ್ಲೋ ಬಿದ್ದು, ಬಿದ್ದಲ್ಲೆಲ್ಲ ಗಿಡ, ಮರವಾಗಿ ಅರಳುತ್ತವೆ. ನಾನೂ ಗಾಳಿಯಲ್ಲಿ ಅಂಥ ಬೀಜಗಳನ್ನು ತೂರಿಬಿಟ್ಟೆ.
ಅದನ್ನೇ ನೀವು ಬಹುದೊಡ್ಡ ಸಾಧನೆ ಎಂದು ಕರೆಯುವುದಾದರೆ ಕರೆಯಬಹುದು. ಅದು ನನ್ನ ಸಾಧನೆಯಲ್ಲ. ಅದು ಗಾಳಿಯ ಧರ್ಮ, ಅಷ್ಟೇ. ಹೀಗಾಗಿ ನನ್ನನ್ನು ನೀವು ದೊಡ್ಡ ಸಾಧಕ ಎಂದು ನೆನೆಯಬೇಕಿಲ್ಲ. ನನ್ನನ್ನು ನೆನೆಯದಿದ್ದರೂ ಪರವಾಗಿಲ್ಲ. ಅಷ್ಟಕ್ಕೂ ನಿಮಗೆ ನನ್ನನ್ನು ನೆನಪಿಸಿಕೊಳ್ಳಬೇಕು ಅಂತಿದ್ದರೆ, ನೆನಪಿಸಿ ಕೊಳ್ಳಿ. ಸಿಂಗಾಪುರದಲ್ಲಿ ಬದುಕುತ್ತಿರುವುದೇ ನನ್ನ ಪುಣ್ಯ ಅಂತ ನಿಮಗನಿಸಿದರೆ, ನನ್ನನ್ನು ನೆನಪಿಸಿಕೊಳ್ಳಬೇಡಿ. ಈ ದೇಶ ಹೀಗೆ ಇದ್ದಿದ್ದರೆ ಚೆನ್ನಾಗಿತ್ತು, ಇದನ್ನು ಮೊದಲ ಪ್ರಧಾನಿ ಮಾಡಿದ್ದಿದ್ದರೆ ಚೆನ್ನಾಗಿತ್ತು ಎಂದೆನಿಸಿದರೆ, ನನ್ನನ್ನು ನೆನಪಿಸಿಕೊಳ್ಳಿ. ನನ್ನಿಂದಲೂ ಕೆಲವು ತಪ್ಪುಗಳಾಗಿವೆ. ನಾನೂ ಕೆಲವು ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ.
ಒಂದು ದೇಶದ ನಿರ್ಮಾಣದಲ್ಲಿ ಇವೆಲ್ಲಾ ಸಾಮಾನ್ಯ ಎಂದು ಭಾವಿಸಿ ನನ್ನನ್ನು ಒಪ್ಪಿಕೊಂಡು ಬಿಡಿ. ಸಿಂಗಾಪುರದ ಮಣ್ಣಿನಲ್ಲಿ ವಿಶೇಷ ಗುಣವಿದೆ. ಅದೇ ನಮ್ಮಿಂದ
ಒಂದಿಷ್ಟು ಉತ್ತಮ ಕೆಲಸಗಳನ್ನು ಮಾಡಿಸಿದೆ. ನಾವೇ ಎಲ್ಲವನ್ನೂ ಮಾಡಿದ್ದೇವೆ ಎಂಬುದು ಒಂದು ಭ್ರಮೆ. ಸಿಂಗಾಪುರದಲ್ಲಿ ನೀವು ಇರುವಷ್ಟು ದಿನ ನಿಮ್ಮ ಹಿತ ಅನುಭವದಲ್ಲಿ ನಾನು ಇರುತ್ತೇನೆ. ನಾನು ಮಾಡದೇ ಇರುವುದನ್ನು ಬೇರೆಯವರು ಮುಂದುವರಿಸಿಕೊಂಡು ಹೋಗಿ ಸಾಧಿಸಿದರೆ ಅದು ನನಗೆ ನೀವು ಕೊಡುವ
ಬಹುದೊಡ್ಡ ಕೊಡುಗೆ. ನಮ್ಮ ಮನೆಗಿಂತ ನಮ್ಮ ದೇಶ ಸುಂದರ ತಾಣವಾಗಬೇಕು. ದೇಶ ಸುಂದರವಾದರೆ, ನಮ್ಮ ಮನೆಯೂ ಸಹಜವಾಗಿ ಸುಂದರವಾಗಿರುತ್ತದೆ.
ನಾವೆಲ್ಲ ಸೇರಿ ನಮ್ಮ ದೇಶವನ್ನು ಸುಂದರವಾಗಿಡಲು ನಿರಂತರ ಶ್ರಮಿಸಬೇಕು. ಅದೇ ನೀವು ನನಗೆ ಕೊಡುವ ಬಹುದೊಡ್ಡ ಗೌರವ. ಉಳಿದುದೆಲ್ಲ ತೋರಿಕೆ, ಉಡಾಫೆ. ನನಗೆ ಅವುಗಳಲ್ಲಿ ನಂಬಿಕೆ ಇಲ್ಲ. ನನ್ನ ನೆನಪಿಸಿಕೊಂಡು ಸುಮ್ಮನಾದರೆ ಪ್ರಯೋಜನವಿಲ್ಲ. ನನ್ನ ನೆನಪಿಸಿಕೊಂಡಾಗಲೆಲ್ಲ ಒಂದು ಒಳ್ಳೆಯ ಕೆಲಸ ಮಾಡಿ. ಕನಿಷ್ಠ ಒಂದು ಗಿಡವನ್ನಾದರೂ ನೆಡಿ. ನಿಮ್ಮ ಸುತ್ತಮುತ್ತ ಸುಂದರ ವಾಗಿದೆಯೇ ಎಂದು ಕೇಳಿಕೊಳ್ಳಿ. ಇಲ್ಲದಿದ್ದರೆ ಸುಂದರವಾಗಿಸಲು ಪ್ರಯತ್ನಿಸಿ. ಆಗ ನನ್ನನ್ನು ನೆನಪಿಸಿಕೊಂಡಿದ್ದಕ್ಕೊಂದು ಅರ್ಥ. ಮೋದಿ ಅಧಿಕಾರಕ್ಕೆ ಬಂದ ನಂತರ.. ತಮ್ಮನ್ನು ಹೃದ್ರೋಗ ತಜ್ಞ ಎಂದು ಕರೆದುಕೊಂಡಿರುವ ಪ್ರೊ.ಜಾನ್ ಕ್ಯಾಮ್ಮ್ ಎನ್ನುವವರು ಇತ್ತೀಚೆಗೆ ಒಂದು ಟ್ವೀಟ್ ಮಾಡಿದ್ದರು. ಇಂದು ನಾನು ಮನೆಗೆ ಮರಳುತ್ತಿರುವಾಗ ಕ್ಯಾಬ್ ಡ್ರೈವರ್ ಜತೆಗೆ ಮಾತಾಡುತ್ತಿದ್ದೆ.
ಆತ ಹೇಳಿದ- ‘ಮೋದಿ ಅಧಿಕಾರಕ್ಕೆ ಬಂದಂದಿನಿಂದ, ಅವರು ನನ್ನ ದೇಶವನ್ನು ಸತ್ಯಾನಾಶ ಮಾಡಿದ್ದಾರೆ. ಆರ್ಥಿಕತೆ ಹದಗೆಟ್ಟಿದೆ. ಎಲ್ಲೆಡೆ ಭ್ರಷ್ಟಾಚಾರ, ಬಡತನ. ಸೇನೆಗೆ ಕಿಮ್ಮತ್ತಿಲ್ಲದಂತಾಗಿದೆ. ಅವರು ಭಿಕ್ಷುಕರಾಗಿದ್ದಾರೆ. ಆಡಳಿತ ಯಂತ್ರ ಕುಸಿದುಬಿದ್ದಿದೆ’. ಆಗ ನಾನು ಕೇಳಿದೆ- ‘ನೀನು ಯಾವ ದೇಶದ ಬಗ್ಗೆ
ಮಾತಾಡುತ್ತಿದ್ದೀಯಾ? ನೀನು ಎಲ್ಲಿಯವನು?’ ಆತ ಹೇಳಿದ- ‘ಪಾಕಿಸ್ತಾನ!’