ಈ ಬಾರಿ ರಾಜ್ಯದ ೧೬೫ ತಾಲೂಕುಗಳಲ್ಲಿ ವಾಡಿಕೆಯಂತ ಮಳೆ ಆಗಿಲ್ಲ. ಆಗಸ್ಟ್, ಸೆಪ್ಟೆಂಬರ್‌ನಲ್ಲೂ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿತ್ತನೆ ಮಾಡಿ ಮಳೆಗಾಗಿ ಕಾಯು ತ್ತಿರುವ ರೈತಾಪಿ ಜನ ಆಕಾಶದತ್ತ ನೋಡುತ್ತಿದ್ದಾರೆ. ಇನ್ನೂ ಕೆಲವು ದಿನ ಮಳೆ ಬಾರದೇ ಹೋದರೆ ಬೆಳೆ ಒಣಗುವ ಆತಂಕ ಎದುರಾಗಿದೆ.
ಇದೇ ಸ್ಥಿತಿ ಮುಂದುವರಿದರೆ ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಪರಿಣಾಮ ಬೀರುವ ಆತಂಕ ಉಂಟಾಗುತ್ತಿದೆ. ಮಳೆ ಕೊರತೆಯಿಂದ ಬೆಳೆ ನಷ್ಟ ಮಾತ್ರವಲ್ಲದೆ ಕುಡಿಯುವ ನೀರಿನ ಕೊರತೆ, ಬರಗಾಲ, ಗ್ರಾಮೀಣ ಸಮುದಾಯಗಳಿಗೆ ಸಾಮಾಜಿಕ-ಆರ್ಥಿಕ ಸಂಕಷ್ಟಗಳು ಸೇರಿದಂತೆ ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಮಳೆಯಾಗದ ಜಿಲ್ಲೆ ಗಳನ್ನು ಗುರುತಿಸಿ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕಿದೆ.
ಆದರೆ ಮಳೆ ಕೊರತೆ ಕಾಡುತ್ತಿರುವ ಜಿಗಳ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಂಬಂಧ ಕೇಂದ್ರ ಸರಕಾರದ ಕೆಲವೊಂದು ನಿಯಮಗಳು ಅಡ್ಡಿಯಾಗಿವೆ. ಕೇಂದ್ರ ಸರಕಾರದ ಬರ ಕೈಪಿಡಿ ೨೦೧೬ರ ಅನ್ವಯ ಶೇ.೬೦ರಷ್ಟು ಮಳೆ ಕೊರತೆಯಾಗಿರಬೇಕು ಮತ್ತು ಹಿಂದಿನ ಮೂರು ವಾರಗಳ ಕಾಲ ಮಳೆ ಬಂದಿರಲೇಬಾರದು. ಕೇಂದ್ರದ ಈ ನಿಯಮಗಳ ಪ್ರಕಾರ ರಾಜ್ಯದ ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗುವುದಿಲ್ಲ. ಜೂನ್ ತಿಂಗಳ ಆರಂಭದಲ್ಲಿ ಅಲ್ಪಸ್ವಲ್ಪ ಮಳೆ ಸುರಿದಿದ್ದರೂ ಯಾವ ಬೆಳೆಗೂ ಅನುಕೂಲವಾಗಿಲ್ಲ.
ಆದ್ದರಿಂದ ಕೇಂದ್ರ ಸರಕಾರವು ಬರ ಘೋಷಣೆ ಮಾರ್ಗಸೂಚಿಗಳನ್ನು ಪರಿಷ್ಕರಿಸಬೇಕು. ಈಗಾಗಲೇ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರ ಬರೆದಿದ್ದು, ಕೇಂದ್ರವು ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ. ರಾಜ್ಯದ ಸಂಸದರು ಮತ್ತು ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿರುವವರು ಈ ಸಂಬಂಧ ಗಮನ ಹರಿಸಬೇಕು. ಈಗಾಗಲೇ ಮಳೆ ಕೊರತೆ ಕಾರಣದಿಂದಾಗಿ ಸಮಸ್ಯೆಗೆ ಸಿಲುಕಿರುವ ರೈತಾಪಿ ವರ್ಗಕ್ಕೆ ಇದರಿಂದ ಕಿಂಚಿತ್ತಾದರೂ ಅನುಕೂಲವಾಗುತ್ತದೆ.