Friday, 22nd November 2024

ಬಿಜೆಪಿಯ ತ್ರಿವಳಿ ದಾಳಿ ೨೦೨೪ರಲ್ಲಿ ಗೆಲುವು ತಂದುಕೊಟ್ಟೀತೇ?

-ರಾಜದೀಪ್ ಸರದೇಸಾಯಿ

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ೨ ವರ್ಷಗಳ ಹಿಂದೆ ಸಂವಿಧಾನ ದಿನದಂದು ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಕುಟುಂಬ ರಾಜಕಾರಣ ಮತ್ತು ರಾಜಮನೆತನಗಳ ರಾಜಕಾರಣದ ನಡುವಿನ ವ್ಯತ್ಯಾಸವನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದರು. ಕುಟುಂಬ ರಾಜಕಾರಣಿಗಳು ಪ್ರಜಾಪ್ರಭುತ್ವದ ಸ್ಪೂರ್ತಿಗೆ ವಿರುದ್ಧವಾಗಿದ್ದರೆ, ರಾಜಮನೆತನಗಳಿಂದ ಬಂದವರಲ್ಲಿ ಪ್ರತಿಭೆ ಹಾಗೂ ಸಾರ್ವಜನಿಕ ಬೆಂಬಲ ಇದ್ದರೆ ಅವರನ್ನು ನಾವು ಸ್ವೀಕರಿಸಬಹುದು ಎಂದಿದ್ದರು.

ಪ್ರಧಾನಿ ನರೇಂದ್ರ ಮೋದಿಯವರಂಥ ಅದ್ಭುತ ವಾಗ್ಮಿಗಳ ಮಾತಿನಲ್ಲಿ ಸೂಚ್ಯವಾದ ಸಂದೇಶ ಯಾವಾಗಲೂ ಶಬ್ದಗಳ ಚಾಣಾಕ್ಷ ಆಟದೊಳಗೆ ಅಡಗಿರುತ್ತದೆ. ಅದನ್ನು ಹುಡುಕಿ ಹೊರಗೆಳೆಯಬೇಕು. ಹಾಗಾಗಿಯೇ ಈ ಸಲದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಅವರು ‘ಪರಿವಾರಜನ್’ (ಕುಟುಂಬದ ಸದಸ್ಯರು) ಎಂಬ ಶಬ್ದವನ್ನು ೪೮ ಬಾರಿ ಬಳಸಿರುವುದು ಅಪ್ಪಟ ವ್ಯೂಹಾತ್ಮಕ ತಂತ್ರವಾಗಿ ಕಾಣಿಸುತ್ತದೆ. ಸಾಮಾನ್ಯವಾಗಿ ಅವರು ಭಾಷಣದಲ್ಲಿ ‘ಮಿತ್ರೋಂ’ (ಸ್ನೇಹಿತರೇ) ಹಾಗೂ ‘ಭಾಯಿ ಔರ್ ಬೆಹೆನೋ’ (ಸೋದರ ಸೋದರಿಯರೇ) ಎಂದು ಜನರನ್ನು ಸಂಬೋಧಿಸುತ್ತಿದ್ದರು. ಅದು ಈಗ ಏಕ್‌ದಂ ‘ಪರಿವಾರಜನ್’ ಆಗಿ ಬದಲಾಗಿದೆ. ಅದರೊಂದಿಗೆ
೧೪೦ ಕೋಟಿ ಭಾರತೀಯರ ಮನೆಗಳ ಹಿರಿಯ ಸದಸ್ಯ ಅಥವಾ ಹಿರಿಯಣ್ಣ ತಾನು ಎಂದು ಮೋದಿ ತಮ್ಮನ್ನು ಬಿಂಬಿಸಿಕೊಳ್ಳತೊಡಗಿದ್ದಾರೆ. ತಮ್ಮ ರಾಜಕೀಯ ಶತ್ರುಗಳನ್ನು ಮೂದಲಿಸುವಾಗ ಅವರು ಯಾವಾಗಲೂ ‘ಪರಿವಾರವಾದ’ (ಕುಟುಂಬ ರಾಜಕಾರಣ) ಎಂಬ ಪದ ಬಳಸುತ್ತಿದ್ದರು. ಪರಿವಾರವಾದ ಎಂಬ ಪದಕ್ಕೂ ಪರಿವಾರಜನ ಎಂಬ ಪದಕ್ಕೂ ಇರುವ ಕಾಂಟ್ರಾಸ್ಟ್ ಗಮನಿಸಿ. ಈ ಪದಗಳ ಬಳಕೆಯೊಂದಿಗೆ ಕಾಂಗ್ರೆಸ್ ಪಕ್ಷದ ಮೇಲೆ ಅವರ ವಾಗ್ದಾಳಿ ಇನ್ನೂ ಹರಿತಗೊಂಡಿರುವುದಂತೂ ಸ್ಪಷ್ಟ. ಆದರೆ ಇಲ್ಲೊಂದು ಪ್ರಶ್ನೆ: ಈಗಲೂ ಅವರು ವಿಪಕ್ಷಗಳನ್ನು ಜರಿಯಲು ಬಳಸುವ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಹಾಗೂ ತುಷ್ಟೀಕರಣ
ರಾಜಕಾರಣ ಈ ಮೂರು ತ್ರಿಶೂಲಗಳು ಒಂಭತ್ತು ವರ್ಷದ ಹಿಂದೆ ಮಾಡಿದ ಜಾದೂ ಮಾಡಬಲ್ಲವೇ?

ಮೊದಲಿಗೆ ಅವರ ಒರಿಜಿನಲ್ ಬ್ರಹ್ಮಾಸವಾದ ‘ಪರಿವಾರವಾದ’ದಿಂದ ಆರಂಭಿಸೋಣ. ೨೦೧೪ರಲ್ಲಿ ಮೋದಿಯವರು ಲ್ಯೂಟನ್ಸ್ ದೆಹಲಿಯ ಪ್ರಭಾವಿ ವಲಯಕ್ಕೆ ಹೊರಗಿನವರಾಗಿದ್ದರು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ, ಗುಜರಾತಿನ ಮುಖ್ಯಮಂತ್ರಿ ಮತ್ತು ಚಾಯ್ ವಾಲಾನ ಮಗ ಇಷ್ಟೇ ಆಗಿದ್ದರು. ದಿಲ್ಲಿಯ ಹೃದಯ ಭಾಗದ ಬಂಗಲೆಗಳಲ್ಲಿ ವಾಸಿಸುತ್ತಾ ರಾಜಕಾರಣ ಮಾಡುವ ಐಷಾರಾಮಿ ವ್ಯಕ್ತಿ ಅವರಾಗಿರಲಿಲ್ಲ. ಆದರೆ ಅವರ ಪ್ರಮುಖ ವೈರಿ ರಾಹುಲ್ ಗಾಂಧಿಯವರು ಆಗಲೇ ವಂಶಪಾರಂಪರ‍್ಯ ರಾಜಕೀಯ ಕುಟುಂಬದ ಐದನೇ ತಲೆಮಾರಿನ ‘ಶೆಹಜಾದಾ’ (ರಾಜಕುಮಾರ) ಆಗಿದ್ದರು. ದಿಲ್ಲಿಯನ್ನು ಆಳಿದ ಸುಲ್ತಾನ್ ಸಾಮ್ರಾಜ್ಯದ ರಾಜಕುಮಾರರನ್ನು ಹಿಂದೆ ‘ಶೆಹಜಾದಾ’ ಎಂದು ಕರೆಯುವ ರೂಢಿಯಿತ್ತು. ಮೋದಿ ಅದೇ ಪದವನ್ನು ರಾಹುಲ್ ಗಾಂಧಿಗೆ ಬಳಸತೊಡಗಿದರು. ಕಾಮ ದಾರ್ (ಕೆಲಸಗಾರ) ವರ್ಸಸ್ ನಾಮದಾರ್ (ವಂಶ ಪಾರಂಪರ‍್ಯ ಉತ್ತರಾಧಿಕಾರಿ) ಎಂಬ ವ್ಯಾಖ್ಯಾನ ಬಹಳ ಚೆನ್ನಾಗಿ ಕೆಲಸ ಮಾಡಿತು. ಸೋನಿಯಾ ಮತ್ತು ರಾಜೀವ್ ಗಾಂಧಿಯವರ ಮಗನಾಗಿರುವುದರಿಂದಲೇ ತನಗೆ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಲಭಿಸಿದೆ ಎಂಬ ಜನಪ್ರಿಯ ನಂಬಿಕೆಯನ್ನು ತೊಡೆದುಹಾಕಲು ರಾಹುಲ್ ಗಾಂಧಿ ಕೂಡ ಯಾವುದೇ ವಿಶೇಷ ಪ್ರಯತ್ನ ಮಾಡುತ್ತಿರಲಿಲ್ಲ.

ಆದರೆ ಕಳೆದೊಂದು ವರ್ಷದಿಂದ ಈಚೆಗೆ ಈ ಪ್ರಧಾನ ರಾಜಕೀಯ ಆಟಗಾರರ ಪಾತ್ರಗಳು ಒಂಥರಾ ಅದಲುಬದಲಾಗಿರುವುದನ್ನು ನೀವು ಗಮನಿಸಬೇಕು. ಮೋದಿ ಈಗಲೂ ತಮ್ಮನ್ನು ಇತರೆ ಹಿಂದುಳಿದ ವರ್ಗದ (ಒಬಿಸಿ) ನಾಯಕ, ತಳಮಟ್ಟದ ಜನರ ಕಷ್ಟಕಾರ್ಪಣ್ಯಗಳನ್ನು ನೋಡಿಕೊಂಡು ಬೆಳೆದಿದ್ದೇನೆ, ಹೀಗಾಗಿ ಎಲ್ಲ ವರ್ಗದವರಿಗೂ ಪ್ರತಿಭೆಗೆ ತಕ್ಕಂತೆ ಅವಕಾಶಗಳನ್ನು ದೊರಕಿಸುವ ಹೊಸ ಭಾರತವನ್ನು ಕಟ್ಟುತ್ತಿದ್ದೇನೆ ಎಂದು ಹೇಳಿಕೊಳ್ಳಬಹುದು. ಆದರೆ ಅದರ ಜತೆಗೇ ಈಗ ಅವರು ಎರಡು ಅವಧಿಗೆ ಅಧಿಕಾರ ನಡೆಸಿದ ಪ್ರಧಾನಿ ಕೂಡ ಹೌದು. ಅವರಿಗೆ ಸುದೀರ್ಘ ಅಧಿಕಾರ ಸಿಕ್ಕಿದೆ. ಜತೆಗೇ ಅವರು ಅಧಿಕಾರದ ಭವಬಂಧನಗಳಲ್ಲೂ ಸಿಲುಕಿದ್ದಾರೆ. ಅಹಮದಾಬಾದ್‌ನ ಕ್ರಿಕೆಟ್ ಸ್ಟೇಡಿಯಂಗೆ ಅವರ ಹೆಸರಿಟ್ಟಾಗ ಅಥವಾ ಸುಸಜ್ಜಿತ ಗಾರ್ಡನ್‌ನಲ್ಲಿ ನವಿಲಿಗೆ ಕಾಳು ತಿನ್ನಿಸುವ ಅವರ ವಿಡಿಯೋಗಳು ವೈರಲ್ ಆದಾಗ ಅಥವಾ ಜಿ-೨೦ ಹೋರ್ಡಿಂಗ್‌ಗಳಲ್ಲಿ ಅವರ ಚಿತ್ರಗಳು ದೊಡ್ಡದಾಗಿ ರಾರಾಜಿಸಿದಾಗ ಅಥವಾ ಭವ್ಯವಾದ ಹೊಸ ಪಾರ್ಲಿಮೆಂಟ್ ಕಟ್ಟಡದ ಎದುರು ಫೋಟೋ ತೆಗೆಸಿಕೊಂಡಾಗ ಅವರೊಬ್ಬ ವಿನೀತ ರಾಜಕಾರಣಿಯಿಂದ ಅಹಂಕಾರದ ವ್ಯಕ್ತಿಯಾಗಿ ರೂಪಾಂತರಗೊಂಡಿದ್ದಾರೇನೋ ಎಂಬ ಅನುಮಾನ ಮೂಡುವುದು ಸಹಜ. ಅದಕ್ಕೆ ವ್ಯಕ್ತಿರಿಕ್ತವಾಗಿ ರಾಹುಲ್ ಗಾಂಧಿ ಕಳೆದೊಂದು ವರ್ಷವನ್ನು ಇಡೀ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತುವ ಭಾರತ್ ಜೋಡೋ ಯಾತ್ರೆಯಲ್ಲಿ ಕಳೆದಿದ್ದಾರೆ. ಗಲಭೆ ಪೀಡಿತ ಮಣಿಪುರಕ್ಕೆ ಹೋಗಿ ನಿರಾಶ್ರಿತರ ಕ್ಯಾಂಪ್ಗಳಲ್ಲಿ ಕಣ್ಣೀರು ಹಾಕುತ್ತಿರುವವರನ್ನು ತಬ್ಬಿಕೊಂಡು ಸಂತೈಸಿದ್ದಾರೆ. ಟ್ರಕ್ ಡ್ರೈವರ್‌ಗಳ
ಜತೆ, ಮೆಕ್ಯಾನಿಕ್‌ಗಳ ಜತೆ, ಕೃಷಿಕರ ಜತೆ ಹಾಗೂ ತರಕಾರಿ ವ್ಯಾಪಾರಿಗಳ ಜತೆ ಕಾಣಿಸಿಕೊಂಡಿದ್ದಾರೆ.

ಆಮ್ ಆದ್ಮಿ (ಜನಸಾಮಾನ್ಯರು)ಗಳ ಜತೆ ರಾಹುಲ್ ಗಾಂಧಿ ಸಮಯ ಕಳೆಯುತ್ತಿರುವುದನ್ನು ಹಾಗೂ ಅವರ ಕಷ್ಟಸುಖ ಆಲಿಸುತ್ತಿರುವುದನ್ನು ಕಾಂಗ್ರೆಸ್ ಪಕ್ಷ ಬಹಳ ಚೆನ್ನಾಗಿ ವಿಡಿಯೋ ಪ್ಯಾಕೇಜ್ ಮಾಡಿ ಜನರ ನಡುವೆ ಹರಿಬಿಡುತ್ತಿದೆ. ರಾಹುಲ್ ಗಾಂಧಿ ನಮ್ಮ-ನಿಮ್ಮೆಲ್ಲರಂತೆ ನೆಲದ ಮೇಲೆ ನಿಂತಿರುವ ಸರಳ ವ್ಯಕ್ತಿ ಎಂದು ಪಕ್ಷ ಬಿಂಬಿಸುತ್ತಿದೆ. ಈಗಲೂ ಕುಟುಂಬ ರಾಜಕಾರಣದ ಸೌಕರ್ಯಗಳು ಅವರನ್ನು ಕಾಡಬಹುದು. ಆದರೆ ಅದೊಂದೇ ಈಗ ಅವರ ಗುರುತಾಗಿ ಉಳಿದಿಲ್ಲ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅದಕ್ಕಿಂತ ಹೆಚ್ಚಾಗಿ, ದೇಶದ ಬಹುತೇಕ ಎಲ್ಲ ವಿಪಕ್ಷಗಳು ಕೈಜೋಡಿಸಿರುವ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲಯೆನ್ಸ್ (ಇಂಡಿಯ) ಒಕ್ಕೂಟದಲ್ಲಿರುವ ಹೆಚ್ಚುಕಮ್ಮಿ ಎಲ್ಲಾ ರಾಜಕೀಯ ಪಕ್ಷಗಳೂ ಕುಟುಂಬ ಆಧಾರಿತ  ಪಕ್ಷಗಳೇ ಆಗಿವೆ. ಹೀಗಿರುವಾಗ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಾತ್ರ ತಾನು ಸಾರ್ವಜನಿಕ ಜೀವನದಲ್ಲಿ ಸ್ವಜನ ಪಕ್ಷಪಾತದಿಂದ ಸಂಪೂರ್ಣ ಹೊರತಾಗಿ ಉಳಿದಿದ್ದೇನೆ ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿದೆಯೇ ಎಂಬುದನ್ನೂ ಯೋಚಿಸಬೇಕು. ಸಂಸತ್ತಿನ ಉಭಯ ಸದನಗಳಲ್ಲಿರುವ ಸುಮಾರು ೪೦ ಮಂದಿ ಬಿಜೆಪಿ ಸಂಸದರು ಕುಟುಂಬ ರಾಜಕಾರಣದ ಕುಡಿಗಳೇ ಆಗಿದ್ದಾರೆ.

ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಎರಡು ಡಜನ್ ಬಿಜೆಪಿ ಟಿಕೆಟ್‌ಗಳು ೧೦ ರಾಜಕೀಯ ಕುಟುಂಬಗಳ ಪಾಲಾಗಿದ್ದವು. ಇನ್ನು ಬಿಜೆಪಿಯ ಮೈತ್ರಿಪಕ್ಷಗಳನ್ನೇ ನೋಡಿ. ಹಳೆಯ ಮೈತ್ರಿಪಕ್ಷಗಳು ಹಾಗೂ ಹೊಸ ಮೈತ್ರಿಪಕ್ಷಗಳನ್ನೆಲ್ಲ ಗಣನೆಗೆ ತೆಗೆದುಕೊಂಡರೆ, ಪಂಜಾಬಿನ ಅಕಾಲಿಗಳು, ಹರಿಯಾಣದ ಚೌಟಾಲಾಗಳು, ಬಿಹಾರದ ಪಾಸ್ವಾನ್‌ಗಳು, ಮಹಾರಾಷ್ಟ್ರದ ಅಜಿತ್ ಪವಾರ್ ಇವರೆಲ್ಲ ಏನು? ಕುಟುಂಬ ರಾಜಕಾರಣದಿಂದ ಬಂದವರೇ ಅಲ್ಲವೇ? ಹೀಗಾಗಿ ಬಿಜೆಪಿಯವರಿಗೂ ‘ಪರಿವಾರವಾದದ’ ರೋಗ ಅಂಟಿದೆಯಲ್ಲವೇ? ಕುತೂಹಲಕರ ಸಂಗತಿಯೆಂದರೆ, ಎರಡು ವರ್ಷಗಳ ಹಿಂದೆ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಂವಿಧಾನ ದಿನದಂದು ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಕುಟುಂಬ ರಾಜಕಾರಣ ಮತ್ತು ರಾಜಮನೆತನಗಳ ರಾಜಕಾರಣದ ನಡುವಿನ ವ್ಯತ್ಯಾಸವನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದರು. ಕುಟುಂಬ ರಾಜಕಾರಣಿಗಳು ಪ್ರಜಾ ಪ್ರಭುತ್ವದ ಸ್ಪೂರ್ತಿಗೆ ವಿರುದ್ಧವಾಗಿದ್ದರೆ, ರಾಜಮನೆತನಗಳಿಂದ ಬಂದವರಲ್ಲಿ ಪ್ರತಿಭೆ ಹಾಗೂ ಸಾರ್ವಜನಿಕ ಬೆಂಬಲ ಇದ್ದರೆ ಅವರನ್ನು ನಾವು ಸ್ವೀಕರಿಸಬಹುದು ಎಂದಿದ್ದರು. ಅರ್ಥಾತ್, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ರಾಜಕಾರಣಿಗಳ ಮಕ್ಕಳಿಗೆ ಅವರು ಹಸಿರು ನಿಶಾನೆ ತೋರಿದ್ದರು.

ಈಗ ಭ್ರಷ್ಟಾಚಾರಕ್ಕೆ ಬರೋಣ. ಮೋದಿಯವರ ಚುನಾವಣಾ ಪ್ರಚಾರದಲ್ಲಿ ಇದು ಬಹಳ ಪ್ರಮುಖ ವಿಷಯವಾಗಿರುತ್ತದೆ. ೨೦೧೪ರ ಚುನಾವಣೆಯಲ್ಲಿ ಮನಮೋಹನ ಸಿಂಗ್ ಅವರನ್ನು ನೆಲಕ್ಕೆ ಬೀಳಿಸಿದ ಇಂಡಿಯಾ ಅಗೇನಸ್ಟ್ ಕರಪ್ಷನ್ (ಅಣ್ಣಾ ಹಜಾರೆ ಹೋರಾಟ) ಆಂದೋಲನದ ಅತಿದೊಡ್ಡ ಲಾಭ ಪಡೆದವರು ಮೋದಿ. ಒಂಭತ್ತು ವರ್ಷಗಳ ನಂತರ ಇಂದು ಕೇಂದ್ರ ತನಿಖಾ ಸಂಸ್ಥೆಗಳು ಹೇಗೆ ಬಿಜೆಪಿಯ ರಾಜಕೀಯ ವಿರೋಧಿಗಳನ್ನು ಹಣಿಯಲು ಬಳಕೆ ಯಾಗುತ್ತಿವೆ ಎಂಬ ಗಂಭೀರವಾದ ಪ್ರಶ್ನಾರ್ಥಕ ಚಿಹ್ನೆ ಎಲ್ಲರ ಮುಂದಿದೆ. ಬಿಜೆಪಿಯೇತರ ಪಕ್ಷಗಳ ಆಳ್ವಿಕೆಯಿರುವ ರಾಜ್ಯಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅತಿಯಾದ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಅದು ಉಸಿರೇ ಎತ್ತುವುದಿಲ್ಲ. ಹಾಗಿರುವಾಗ ಮೋದಿ ಸರಕಾರ ‘ನ ಖಾವೂಂಗಾ ನ ಖಾನೇ ದೂಂಗಾ’ (ನಾನೂ ಲಂಚ ತಿನ್ನುವುದಿಲ್ಲ, ಬೇರೆಯವರಿಗೂ ಲಂಚ ತಿನ್ನಲು ಬಿಡುವುದಿಲ್ಲ) ಎಂಬ ಘೋಷಣೆಗೆ ಅನ್ವರ್ಥವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಲು ಸಾಧ್ಯವೇ? ರಾಜಕಾರಣಿಗಳು ಬೇರೆ ಪಕ್ಷದಿಂದ ಬಿಜೆಪಿಗೆ ಜಿಗಿದು ಬಂದ ತಕ್ಷಣ ನಿಗೂಢ
ರೀತಿಯಲ್ಲಿ ತನಿಖಾ ಸಂಸ್ಥೆಗಳ ಹಿಡಿತದಿಂದ ಹೇಗೆ ಪಾರಾಗಿಬಿಡುತ್ತಾರೆ ಎಂಬುದು ಕೂಡ ಅಚ್ಚರಿಯ ವಿಷಯವೇ. ಅಪಾರದರ್ಶಕ ಚುನಾವಣಾ ಬಾಂಡ್‌ಗಳಿಂದ ಸಾಕಷ್ಟು ಲಾಭ ಪಡೆದು ಶ್ರೀಮಂತವಾಗಿರುವ ಬಿಜೆಪಿ ತಾನು ‘ಭಿನ್ನ ಪಕ್ಷ’ ಎಂದು ಹೇಗೆ ತಾನೇ ಹೇಳಿಕೊಳ್ಳುತ್ತದೆ? ನಾವು ಸ್ವಜನ ಪಕ್ಷಪಾತ ಮಾಡುವುದಿಲ್ಲ ಎಂದು ಹೇಗೆ ತಾನೇ ಬಿಜೆಪಿ ನಾಯಕರು ಹೇಳಿಕೊಳ್ಳಲು ಸಾಧ್ಯ?

ಪ್ರಧಾನಿ ಕಾಂಗ್ರೆಸ್ ಪಕ್ಷವನ್ನು ದೂಷಿಸಲು ಯಾವಾಗಲೂ ಬಳಸುವ ಇನ್ನೊಂದು ಪದವಾದ ‘ತುಷ್ಟೀಕರಣ’ವನ್ನು ಕೂಡ ಈಗ ಪುನಃ ಅವಲೋಕಿಸಬೇಕಾದ ಸಮಯ ಬಂದಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಅತಿಯಾಗಿ ಓಲೈಸುತ್ತಾ ಬಂದಿದೆ ಎಂದಾದರೆ, ಅದೇ ಅಲ್ಪಸಂಖ್ಯಾತ ಸಮುದಾಯಗಳಿಗೆ ಕಿರುಕುಳ ನೀಡುತ್ತಿರುವ ಆರೋಪದಿಂದ ಬಿಜೆಪಿ ಪಾರಾಗಲು ಸಾಧ್ಯವೇ ಇಲ್ಲ. ಅನ್ಯಧರ್ಮೀಯರ ನಡುವೆ ನಡೆಯುವ ಮದುವೆಗಳನ್ನೆಲ್ಲ ‘ಲವ್ ಜಿಹಾದ್’ ಎಂದು ಕರೆದು, ಆಹಾರ ಮತ್ತು ಉಡುಗೆ ತೊಡುಗೆಯ ಅಭ್ಯಾಸವನ್ನು ಸಾಮಾಜಿಕ ತಾರತಮ್ಯಕ್ಕೆ ಬಳಸಿಕೊಂಡು, ಕೆಲ ಅಲ್ಪಸಂಖ್ಯಾತ ಸಮುದಾಯಕ್ಕೆ ಅತ್ಯಂತ ಕಡಿಮೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಾ, ದ್ವೇಷ ಭಾಷಣಗಳಿಗೆ ಕಡಿವಾಣ ಹಾಕದೆ ಕುಳಿತುಕೊಂಡಿರುವಾಗ ಬಹುಸಂಖ್ಯಾತ ರಾಜಕಾರಣದಿಂದ ಸಮಾಜಕ್ಕೆ ಎದುರಾಗಿರುವ ಅಪಾಯದ ಬಗ್ಗೆ ಪ್ರಶ್ನೆಗಳು ಎದ್ದೇ ಏಳುತ್ತವೆ.

ಇತ್ತೀಚೆಗೆ ರೈಲಿನಲ್ಲಿ ಆರ್‌ಪಿಎ- ಕಾನ್ ಸ್ಟೇಬಲ್ ಒಬ್ಬನು ಮುಸ್ಲಿಂ ವ್ಯಕ್ತಿಯನ್ನು ಹತ್ಯೆಗೈದ ವಿಚಾರ ಬಿಜೆಪಿ ಸರಕಾರದಲ್ಲಿ ಕೊಂಚವೂ ಸಾರ್ವಜನಿಕ ಆಕ್ರೋಶಕ್ಕೆ ಆಸ್ಪದವನ್ನೇ ನೀಡಲಿಲ್ಲ. ಇದೆಲ್ಲ ಏನನ್ನು ಹೇಳುತ್ತಿದೆ? ಇಷ್ಟಾಗಿಯೂ ರಾಜಕೀಯ ವಿರೋಧಿಗಳ ಮೇಲೆ ನಡೆಸುವ ತ್ರಿವಳಿ ದಾಳಿಗಳು ಮೋದಿಯವರಿಗೆ ಹ್ಯಾಟ್ರಿಕ್ ಜಯ ತಂದುಕೊಡಲಿವೆ ಎಂಬುದರಲ್ಲಿ ಬಿಜೆಪಿಗರಿಗೆ ಅನುಮಾನವೇ ಉಳಿದಿಲ್ಲ. ವಿರೋಧ
ಪಕ್ಷಗಳು ಇನ್ನೂ ತಮ್ಮಲ್ಲಿ ಒಗ್ಗಟ್ಟು ತಂದುಕೊಳ್ಳುವುದಕ್ಕೆ ಹೆಣಗಾಡುತ್ತಿರುವಾಗ ೨೦೨೪ರಲ್ಲಿ ಅಧಿಕಾರಕ್ಕೆ ಬರಬಹುದಾದ ನಾಯಕನಾಗಿ ಈಗಲೂ ಮೋದಿಯೇ ಎದ್ದು ತೋರುತ್ತಾರೆ ಎಂಬುದು ಕೂಡ ನಿಜವೇ. ಆದರೆ, ಆಶ್ಚರ್ಯಕರ ಸಂಗತಿಯೇನೆಂದರೆ, ಹೆಚ್ಚುಕಮ್ಮಿ ಹತ್ತು ವರ್ಷಗಳ ಆಡಳಿತ ನಡೆಸಿದ ನಂತರವೂ ಮೋದಿ ಸರಕಾರದ ರಾಜಕೀಯ ತಂತ್ರಗಾರಿಕೆಯು ವಿರೋಧ ಪಕ್ಷಗಳ ದೌರ್ಬಲ್ಯದ ಸುತ್ತಲಿನಲ್ಲೇ ಗಿರಕಿ ಹೊಡೆಯುತ್ತಿದೆ. ಹೊಸ ಬಿಜೆಪಿ ತಾನೀಗ ಯಾವುದರ ಪ್ರತೀಕವಾಗಿ ನಿಂತಿದ್ದೇನೆ ಎಂಬುದನ್ನು ಘಂಟಾಘೋಷವಾಗಿ ಹೇಳುವ ಸಮಯ ಬಂದಿದೆ. ತಾನು ಯಾವುದರ ವಿರುದ್ಧ ಇದ್ದೇನೆ ಎಂಬುದನ್ನಷ್ಟೇ ಅದು ಹೇಳಿದರೆ ಸಾಲದು, ಯಾವುದರ ಪರವಾಗಿದ್ದೇನೆ ಎಂಬುದನ್ನೂ ಹೇಳ ಬೇಕಿದೆ. ವಿರೋಧ ಪಕ್ಷಗಳು ಏನನ್ನು ಪ್ರತಿನಿಧಿಸುತ್ತವೆ ಎಂಬುದನ್ನಷ್ಟೇ ಹೇಳುತ್ತಾ ಹೋದರೆ ಸಾಲದು, ತಾನು ಯಾವುದನ್ನು ಪ್ರತಿನಿಧಿಸುತ್ತಿದ್ದೇನೆ
ಎಂಬುದನ್ನೂ ಜನರಿಗೆ ತೋರಿಸಬೇಕಿದೆ.

ಅದನ್ನು ತಿಳಿದುಕೊಳ್ಳುವ ಹಕ್ಕು ‘ಪರಿವಾರಜನ’ಕ್ಕೆ ಇದೆ. ಕೊನೆಯ ಮಾತು: ಇಂಡಿಯ ಒಕ್ಕೂಟದ ಒಂದು ಸಭೆಯ ಬಳಿಕ ಹಿರಿಯ ರಾಜಕಾರಣಿಯೊಬ್ಬರು ಖಾಸಗಿಯಾಗಿ ಮಾತನಾಡುವಾಗ ಕುತೂಹಲಕರ
ವಿಶ್ಲೇಷಣೆಯೊಂದನ್ನು ಮುಂದಿಟ್ಟರು. ‘ರಾಹುಲ್ ಗಾಂಧಿ ನಮ್ಮ ಪ್ರಧಾನಿ ಅಭ್ಯರ್ಥಿಯಾಗಲು ಒಂದು ವೇಳೆ ಸಾಧ್ಯವಿಲ್ಲ ಅಂತಾದರೆ ಏನಾಯಿತು? ನಮ್ಮಲ್ಲಿ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ, ಒಬಿಸಿ
ನಾಯಕ ನಿತೀಶ್ ಕುಮಾರ್, ಮಹಿಳಾ ಕೋಟಾ ದಿಂದ ಮಮತಾ ಬ್ಯಾನರ್ಜಿ ಹಾಗೂ ಐಐಟಿಯನ್ ಅರವಿಂದ ಕೇಜ್ರಿವಾಲ್ ಕೂಡ ಇದ್ದಾರೆ ಎಂಬುದನ್ನು ಮರೆಯಬೇಡಿ. ಇವರನ್ನೆಲ್ಲ ಯಾರಾದರೂ ಕುಟುಂಬ ರಾಜಕಾರಣದಿಂದ ಬಂದವರು, ‘ಪರಿವಾರವಾದದ’ ಫಲಾನುಭವಿಗಳು ಎಂದು ಹೇಳಲು ಸಾಧ್ಯವೇ’ ಎಂದು ಕೇಳಿದರು.
(ಲೇಖಕರು ಹಿರಿಯ ಪತ್ರಕರ್ತರು)