ಶತಮಾನದ ಇತಿಹಾಸ ಹೊಂದಿರುವ ಕಾವೇರಿ ವಿವಾದ ಮತ್ತೆ ಉದ್ವಿಗ್ನ ಸ್ವರೂಪ ಪಡೆಯತ್ತಿದೆ. ಪ್ರಾಧಿಕಾರದ ಆದೇಶದ ಬೆನ್ನಲ್ಲೇ ಸಲ್ಲಿಸಲಾದ ತಮಿಳುನಾಡಿನ ಮೇಲ್ಮನವಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಎಚ್ಚರದ ನಡೆ ತೋರಿದೆ. ನೀರಿ ಹಂಚಿಕೆ ಬಗೆಗೆ ಮಧ್ಯಂತರ ತೀರ್ಪು ನೀಡುವ ಆತುರ ತೋರದೇ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣದ ಬಗೆಗೆ ತಜ್ಞರ ಸಮಿತಿಯ ವರದಿಗೆ ಆದೇಶಿಸಿದೆ. ಏತನ್ಮಧ್ಯೆ, ತಮಿಳುನಾಡಿಗೆ ಪ್ರತಿ ನಿತ್ಯ ೫ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸೋಮವಾರ ಸೂಚನೆ ನೀಡಿದೆ. ಇದೊಂದು ರೀತಿ ೧೫ ರು. ಕದ್ದಿದ್ದಾನೆಂದು ಸುಳ್ಳು ಆರೋಪ ಮಾಡಿದವನಿಗೆ ೫ ರು. ವಾಪಸು ಕೊಡು ಎಂದಂತಾಗಿದೆ. ಏನನ್ನೂ ಕಳಕೊಳ್ಳದವನಿಗೆ ಆ ೫ ರು. ಸಹ ಲಾಭವೆ, ಮತ್ತೂ ಕೊಡುವವನಿಗೆ ಅದಷ್ಟೂ ನಷ್ಟವೇ. ಮೊದಲೇ ಮುಂಗಾರು ಕೊರತೆಯಿಂದ ಬಳಲುತ್ತಿರುವ ಕರ್ನಾಟಕದಲ್ಲಿ ಈಗಾಗಲೇ ಬರಗಾಲದ ಛಾಯೆ ಆವರಿಸಿದೆ. ಅಂಥದ್ದರಲ್ಲಿ ಸೂಚನೆ ಪ್ರಕಾರ ಮುಂದಿನ ೧೫ ದಿನ ನಿತ್ಯ ೫೦೦೦ ಕ್ಯೂಸೆಕ್ ನೀರು ಹರಿಸಬೇಕಿರುವ ಅನಿವಾರ್ಯ. ೧೫ ಕ್ಯೂಸೆಕ್‌ನಿಂದ ೧೦, ೧೦ ರಿಂದ ಇದೀಗ ೫ ಕ್ಯೂಸೆಕ್‌ಗೆ ಹರಿಸಬೇಕಿರುವ ನೀರಿನ ಪ್ರಮಾಣ ಕಡಿಮೆ ಆಗಿದೆ ಎಂಬುದನ್ನು ಬಿಟ್ಟರೆ, ಕರ್ನಾಟಕದ ಇಂದಿನ ಸನ್ನಿವೇಶದಲ್ಲಿ ಇದು ಸಹ ತುಟ್ಟಿಯೇ. ಕರ್ನಾಟಕ ಸದ್ಯಕ್ಕೆ ತಮಿಳುನಾಡಿಗೆ ೧೯೦೦ ಕ್ಯೂಸೆಕ್ ನೀರು ಹರಿಸುತ್ತಿದ್ದು, ಇದೀಗ ಹೆಚ್ಚುವರಿಯಾಗಿ ೩,೧೦೦ ಕ್ಯೂಸೆಕ್ ನೀರನ್ನು ಎಲ್ಲಿಂದ ತರುವುದು ಎಂಬುದು ಪ್ರಶ್ನೆ. ಒಂದೊಮ್ಮೆ ಸಮಿತಿಯ ಈ ಆದೇಶ ಪಾಲನೆ ಗಿಳಿದರೆ ಕಾವೇರಿ ಕೊಳ್ಳದಲ್ಲಿ ಜಲಾಶಯಗಳ ನೀರಿನ ಮಟ್ಟ ‘ಡೆಡ್ ಸ್ಟೋರೇಜ್’ ತಲುಪುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಮಳೆಗಾಲ ಮುಗಿಯುತ್ತ ಬಂದಾಗಲೂ ರಾಜ್ಯದ ಯಾವೊಂದು ಜಲಾಶಯವೂ ತುಂಬಿಲ್ಲ. ಪರಿಣಾಮ ಮುಂಬರುವ ದಿನಗಳಲ್ಲಿ ರಾಜಧಾನಿ ಬೆಂಗಳೂರಿನ ಕುಡಿಯುವ ನೀರಿಗೇ ತತ್ವಾರ ಬರುವುದರಲ್ಲಿ ಅನುಮಾನವಿಲ್ಲ. ಇನ್ನು ನ್ಯಾಯಾಲಯದಲ್ಲಿ ನೀರಿನ ಕೊರತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಇದೀಗ ಮಳೆ ಕೊರತೆ ಹಿನ್ನೆಲೆಯಲ್ಲಿ ‘ಸಂಕಷ್ಟ ಸೂತ್ರ’ ಮುಂದಿಟ್ಟುಕೊಂಡು ನ್ಯಾಯ ಕೋರಬೇಕಿದೆ. ಒಂದೊಮ್ಮೆ ಅದನ್ನಾಧರಿಸಿ ತಿರ್ಪು ನಮ್ಮ ಪರವಾಗಿಯೇ ಬರುತ್ತದೆ ಎಂಬ ವಿಶ್ವಾಸ ಇಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ವಿವಾದ ಭುಗಿಲೇಳುವ ಲಕ್ಷಣ ದಟ್ಟವಾಗಿದೆ.