Friday, 22nd November 2024

ಮೆಟ್ರೋ ಎಂಬ ಸಮೂಹ ಸಾರಿಗೆ ಕ್ರಾಂತಿ

-ಪ್ರಕಾಶ್ ಶೇಷರಾಘವಾಚಾರ್

ಭಾರತದ ಸಮೂಹ ಸಾರಿಗೆ ಸೇವೆಯ ಇತಿಹಾಸ ಪ್ರಾರಂಭವಾಗಿದ್ದು ಕೋಲ್ಕತ್ತಾದಲ್ಲಿ ೧೮೭೩ರಲ್ಲಿ. ಆಗ ಶುರುವಾಗಿದ್ದು ಕುದುರೆಯ ಮೂಲಕ ಎಳೆದೊಯ್ಯುವ ಟ್ರಾಮ್ ಸೇವೆ. ನಂತರ ೧೮೯೫ರಲ್ಲಿ ಚೆನ್ನೈ, ಮುಂಬಯಿ, ಕಾನ್ಪುರ ಮತ್ತು ದೆಹಲಿಯಲ್ಲೂ ಈ ಸೇವೆ ಶುರುವಾದರೂ ಬಹುಕಾಲ ಬಾಳಲಿಲ್ಲ. ೧೯೩೩ರಿಂದ ೧೯೬೪ರೊಳಗೆ ಕೋಲ್ಕತ್ತಾ ಹೊರತುಪಡಿಸಿ ಮಿಕ್ಕೆಡೆ ಟ್ರಾಮ್ ಸೇವೆ ಸ್ಥಗಿತಗೊಂಡಿತು. ನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಅದಕ್ಕಿಂತಲೂ ವೇಗವಾಗಿ ಬೆಳೆಯುತ್ತಿರುವ ವಾಹನಗಳ ಸಂಖ್ಯೆಯು ರಸ್ತೆಗಳಲ್ಲಿನ ಸಂಚಾರವನ್ನು ದುಸ್ತರ ಮಾಡಿದೆ. ವಾಹನಗಳ ಸಂಖ್ಯೆ ಬೆಳೆದಂತೆ ರಸ್ತೆಗಳು ಬೆಳೆಯಲು ಸಾಧ್ಯವಿಲ್ಲದ ಕಾರಣ ಸಂಚಾರ ದಟ್ಟಣೆಯಿಂದ ವಾಹನ ಚಾಲಕರು ನಲುಗಿಹೋಗಿದ್ದಾರೆ. ಜತೆಗೆ ವಾಹನ ನಿಲುಗಡೆಯ ಸಮಸ್ಯೆಯೂ ಅಗಾಧವಾಗಿ ಕಾಡುತ್ತಿದೆ. ವಾಹನ ಸಂಚಾರಕ್ಕಿರುವ ರಸ್ತೆಗಳು ವಾಹನ ನಿಲುಗಡೆಗೆ ಬಳಕೆಯಾಗಿ ಸಂಚಾರ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ವಾಹನ ನಿಲುಗಡೆ ಸಂಕೀರ್ಣದ ಅಭಾವದಿಂದ ಅನೇಕ ನಗರಗಳಲ್ಲಿ ಶೇ. ೩೦ರಷ್ಟು ರಸ್ತೆಯನ್ನು ವಾಹನ ನಿಲುಗಡೆ ಆಕ್ರಮಿಸಿಕೊಂಡಿದೆ.

ನಗರದ ಸಂಚಾರ ದಟ್ಟಣೆ ನಿವಾರಿಸಲು, ಪರಿಸರ ಕಾಪಾಡಲು ಸಾರ್ವಜನಿಕ ಸಾರಿಗೆ ಬಳಸುವಂತೆ ಜನರನ್ನು ಉತ್ತೇಜಿಸುವುದು ಸರಕಾರಗಳಿಗೆ ಅನಿವಾರ್ಯ. ಆದ್ದರಿಂದ ಸುಸಜ್ಜಿತ ಸಮೂಹ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಜನರು ವೈಯಕ್ತಿಕ ವಾಹನದ ಬದಲು ಸಮೂಹ ಸಾರಿಗೆಯನ್ನು ನೆಚ್ಚುವಂತೆ ಪ್ರೇರೇಪಿಸಬೇಕಾಗಿದೆ. ೨೦೦೬ರ ರಾಷ್ಟ್ರೀಯ ಸಮೂಹ ಸಾರಿಗೆ ನೀತಿಯು ೨೦ ಲಕ್ಷ ಜನಸಂಖ್ಯೆ ಇರುವ ನಗರಗಳಲ್ಲಿ ಮೆಟ್ರೋ ರೈಲು ಆರಂಭಕ್ಕೆ ಶಿಫಾರಸು ಮಾಡಿತು. ೨೦೧೧ರ ಜನಗಣತಿಯನ್ವಯ ದೇಶದ ೪೬ ನಗರಗಳಲ್ಲಿ ೧೦ ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿದೆ. ೨೦೨೩ರಲ್ಲಿ ನಿಶ್ಚಿತವಾಗಿ ಈ ಸಂಖ್ಯೆ ನೂರು ದಾಟಿರುತ್ತದೆ. ಭಾರತದಲ್ಲಿ ಮೊದಲ ಮೆಟ್ರೋ ರೈಲು ಸೇವೆ ಆರಂಭವಾಗಿದ್ದು ೧೯೮೪ರಲ್ಲಿ, ಕೋಲ್ಕತ್ತಾ ನಗರದಲ್ಲಿ. ಮೊದಲ ಹಂತದಲ್ಲಿ ೩.೪ ಕಿ.ಮೀ. ಮಾರ್ಗದಲ್ಲಿ ಮೆಟ್ರೋ ಸಂಚರಿಸಿ, ಸಮೂಹ ಸಾರಿಗೆಯಲ್ಲಿ ಹೊಸ ಅಧ್ಯಾಯ ಬರೆಯಿತು. ದೇಶದ ೨ನೇ ಮೆಟ್ರೋ ಸೇವೆ ೨೦೦೨ರಲ್ಲಿ ದೆಹಲಿಯಲ್ಲಿ ಸಂಚಾರ ಆರಂಭಿಸಿತು. ಅಂದರೆ ಕೋಲ್ಕತ್ತಾದಲ್ಲಿ ಮೊದಲು ಶುರುವಾದ ಮೆಟ್ರೋ ಸೇವೆ ದೇಶದ ೨ನೇ ನಗರಕ್ಕೆ ವಿಸ್ತರಿಸಲು ೧೮ ವರ್ಷಗಳೇ ಕಾಯಬೇಕಾಯಿತು. ೧೯೯೮ರಲ್ಲಿ ದೆಹಲಿಯಲ್ಲಿ ದೇಶದ ೨ನೇ ಮೆಟ್ರೋ ರೈಲು ಯೋಜನೆಗೆ ಅಟಲ್ ಬಿಹಾರಿ ವಾಜಪೇಯಿ ಚಾಲನೆ ನೀಡಿದರು. ೨೦೦೨ರಲ್ಲಿ ಮೊದಲ ಸಂಚಾರ ಆರಂಭಿಸಿದ ದೆಹಲಿ ಮೆಟ್ರೋ, ೮.೨ ಕಿ.ಮೀ. ಮಾರ್ಗದಲ್ಲಿ ಸಂಚರಿಸಿತು. ಇಂದು ದೆಹಲಿ ಮೆಟ್ರೋ ೩೯೦ ಕಿ.ಮೀ.ವರೆಗೆ ವಿಸ್ತರಣೆಯಾಗಿ ದೇಶದ ಅತಿದೊಡ್ಡ ಮೆಟ್ರೋ ರೈಲುಜಾಲವಾಗಿ ಬೆಳೆದಿದೆ.

ದೆಹಲಿ ಮೆಟ್ರೋ ಯೋಜನೆಯ ರೂವಾರಿ ‘ಮೆಟ್ರೊ ಮ್ಯಾನ್’ ಎಂದೇ ಖ್ಯಾತರಾದ ಶ್ರೀಧರನ್ ೧೬ ವರ್ಷಗಳ ಕಾಲ ದೆಹಲಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾಗಿ ಈ ಜಾಲವನ್ನು ವಿಸ್ತರಿಸಿದರು. ಅವರ ಪರಿಣತಿಯನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಬಳಸಿಕೊಂಡಿವೆ. ದೆಹಲಿ ಮೆಟ್ರೋ ಯೋಜನೆಗೆ ಚಾಲನೆ ದೊರೆತ ಕೂಡಲೇ ಅಂದು ಕೇಂದ್ರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್, ಬೆಂಗಳೂರಿಗೆ ಮೆಟ್ರೋ ಅವಶ್ಯಕತೆ ಇರುವುದನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾದರು. ೨೦೧೨ರಲ್ಲಿ ಬೆಂಗಳೂರು ‘ನಮ್ಮ ಮೆಟ್ರೋ’ ೬.೭ ಕಿ.ಮೀ. ದೂರದ ಮೊದಲ ಸಂಚಾರ ಪ್ರಾರಂಭಿಸಿತು. ದೇಶದಲ್ಲಿ ೨೦೧೪ರ ಮೊದಲು ೫ ನಗರಗಳಲ್ಲಷ್ಟೇ ಮೆಟ್ರೋ ಸೌಲಭ್ಯವಿತ್ತು. ೨೦೧೪ರ ತರುವಾಯ ಇದು ೪೬ ನಗರಗಳಿಗೆ ವಿಸ್ತರಿಸಿದೆ. ಮೋದಿ ಸರಕಾರವು ಸಮೂಹ ಸಾರಿಗೆಗೆ ಪ್ರಾಶಸ್ತ್ಯ ನೀಡುತ್ತಿರುವುದರಿಂದ ದೇಶಾದ್ಯಂತ ಮೆಟ್ರೋ ರೈಲು, ಮೆಟ್ರೋ ಲೈಟ್, ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಂನಂಥ ಯೋಜನೆಗಳು ಜಾರಿಯಾಗುತ್ತಿವೆ. ಮೆಟ್ರೋ ರೈಲು ನಿರ್ಮಾಣವನ್ನು ಸರಕಾರವು ಆದ್ಯತೆಯಾಗಿ ಪರಿಗಣಿಸಿರುವ ಕಾರಣ ಹಲವಾರು ರಾಜ್ಯಗಳ ಮೆಟ್ರೋ ಪ್ರಸ್ತಾವನೆಗೆ ಅಂಗೀಕಾರ ದೊರೆತಿದೆ. ಈ ಜಾಲದ ವಿಸ್ತರಣೆಗೆ ರಾಜ್ಯಗಳಿಗೆ ಕೇಂದ್ರ ಸರಕಾರ ೮೦ ಸಾವಿರ ಕೋಟಿ ರು. ಅನುದಾನ ನೀಡಿದೆ. ೨೦೧೪ರಲ್ಲಿ ೨೪೮ ಕಿ.ಮೀ. ಇದ್ದ ಮೆಟ್ರೋ ರೈಲು ಸಂಪರ್ಕ, ೨೦೨೨ಕ್ಕೆ ೭೪೮ ಕಿ. ಮೀ.ಗೆ ವಿಸ್ತರಣೆಯಾಗಿದೆ. ೫ ನಗರದಿಂದ ೧೯ ನಗರಗಳಲ್ಲಿ ಈ ಸೇವೆ ಆರಂಭವಾಗಿದೆ.

ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ವರದಿಯನ್ವಯ ಕಳೆದ ೯ ವರ್ಷಗಳಲ್ಲಿ ೫೬೦ ಕಿ.ಮೀ. ಮೆಟ್ರೋ ರೈಲುಮಾರ್ಗ ನಿರ್ಮಾಣವಾಗಿದೆ, ೨೭ ನಗರಗಳಲ್ಲಿ ೧,೦೦೦ ಕಿ.ಮೀ. ಮೆಟ್ರೋಮಾರ್ಗ ನಿರ್ಮಾಣದ
ಹಂತದಲ್ಲಿದೆ. ಹೊಸದಾಗಿ ಹತ್ತು ನಗರಗಳ ಪ್ರಸ್ತಾವನೆಯು ಕೇಂದ್ರ ಸರಕಾರದ ಮುಂದಿದೆ. ಕೋಲ್ಕತ್ತಾ, ದೇಶದಲ್ಲೆ ಮೊದಲು ಮೆಟ್ರೋ ರೈಲು ಸಂಪರ್ಕ ಪಡೆದ ನಗರ. ಆದರೆ ೪೦ ವರ್ಷ ಕಳೆದರೂ ೪೬ ಕಿ.ಮೀ. ಮೆಟ್ರೋ ರೈಲುಮಾರ್ಗ ಮಾತ್ರ ಅಲ್ಲಿ ನಿರ್ಮಾಣವಾಗಿದೆ. ಕೋಲ್ಕತ್ತಾ ದೇಶದಲ್ಲೆ ೨ನೇ ಅತಿ ದಟ್ಟಣೆಯ ನಗರ ಹಾಗೂ ಪಶ್ಚಿಮ ಬಂಗಾಳದ ರಾಜಧಾನಿಯಾಗಿದ್ದರೂ ಅಲ್ಲಿನ ಸರಕಾರ ಮೆಟ್ರೋ ಮಾರ್ಗದ ವಿಸ್ತರಣೆಯಲ್ಲಿ ಸೋತಿದೆ. ಅಭಿವೃದ್ಧಿಯ ವಿಷಯದಲ್ಲೂ ರಾಜಕೀಯ ಮಾಡಿದ್ದರಿಂದ ಮೆಟ್ರೋ ನಿರ್ಮಾಣದಲ್ಲಿ ಪಶ್ಚಿಮ ಬಂಗಾಳ ಹಿಂದೆ ಬಿದ್ದಿದೆ. ದುರದೃಷ್ಟವೆಂದರೆ, ಮೊದಲು ಎಡರಂಗ, ನಂತರ ಮಮತಾ
ಬ್ಯಾನರ್ಜಿ ಸರಕಾರಗಳ ನಿರ್ಲಕ್ಷ್ಯದಿಂದ ಕೋಲ್ಕತ್ತಾದ ಹಿತಕ್ಕೆ ಧಕ್ಕೆಯಾಗಿದೆ. ಕೋಲ್ಕತ್ತಾ ಮೆಟ್ರೋದ ಹೆಗ್ಗಳಿಕೆಯೆಂದರೆ, ಹೊಸದಾಗಿ ನಿರ್ಮಾಣವಾಗುತ್ತಿರುವ ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ನ ೫೨೦ ಮೀ. ಮೆಟ್ರೋಮಾರ್ಗ ಹೂಗ್ಲಿ ನದಿಯ ಜಲಸುರಂಗದಲ್ಲಿ ಸಂಚರಿಸುತ್ತಿರುವುದು. ಈ ಬಾಬತ್ತಿನಲ್ಲಿ ಇದಕ್ಕೆ ‘ಮೊದಲಿಗ’ ಎಂಬ ಖ್ಯಾತಿ ಸಿಕ್ಕಿದೆ.

ಕೇರಳದ ಕೊಚ್ಚಿಯಲ್ಲಿ ದೇಶದ ಮೊದಲ ಜಲ ಮೆಟ್ರೋಗೆ ೨೦೨೧ರಲ್ಲಿ ಚಾಲನೆ ನೀಡಲಾಯಿತು. ಆದರೆ ಇದನ್ನು ಫೀಡರ್ ಸೇವೆಯಂತೆ ಬಳಸಲಾಗುತ್ತಿದೆ. ಜಲ ಮೆಟ್ರೋ ಯೋಜನೆಯು ಸಮೂಹ ಸಾರಿಗೆ ನಿರ್ಮಾಣದಲ್ಲಿ ಹೊಸ ಎತ್ತರವನ್ನು ತಲುಪಿದೆ. ೨೦೨೧ರಲ್ಲಿ ದೇಶದ ೨೬೩ ಕೋಟಿ ಜನ ಮೆಟ್ರೋ ಸೇವೆ ಬಳಸಿದ್ದಾರೆ. ೭೬೦ ಕಿ.ಮೀ. ಮಾರ್ಗಗಳ ಮೆಟ್ರೋ ರೈಲಿನಲ್ಲಿ ಪ್ರತಿನಿತ್ಯ ೧ ಕೋಟಿ ಜನ ಪ್ರಯಾಣಿಸುತ್ತಿದ್ದಾರೆ. ಸಮೂಹ ಸಾರಿಗೆಯಲ್ಲಿ ಮೆಟ್ರೋ ರೈಲು ಅತೀವ ಜನಪ್ರಿಯತೆ ಗಳಿಸಿದ್ದು ನಗರಗಳ ಗೌರವ-ಹೆಮ್ಮೆಯ ಸಂಕೇತವಾಗಿದೆ.  ಸಮೂಹ ಸಾರಿಗೆಯ ಇನ್ನೊಂದು ಮೈಲಿಗಲ್ಲೆಂದರೆ ಮೀರತ್-ದೆಹಲಿ ನಡುವೆ ಕೈಗೊಳ್ಳಲಾಗುತ್ತಿರುವ ಪ್ರಾದೇಶಿಕ ಕ್ಷಿಪ್ರ ಸಾರಿಗೆ ಯೋಜನೆ. ಈಗಾಗಲೇ ೧೭ ಕಿ.ಮೀ. ಮಾರ್ಗ ಪೂರ್ಣಗೊಂಡು ಸಂಚಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಲ್ಲದೆ ದೆಹಲಿ-ಆಳವಾರ್, ದೆಹಲಿ-ಹರಿಯಾಣದ ಪಾಲ್
ವಾಲ್ ನಡುವೆ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ ಸೇವೆಗೆ ಅನುಮೋದನೆ ದೊರೆತಿದೆ. ಬೆಂಗಳೂರಿನಲ್ಲಿ ೧೫ ಸಾವಿರ ಕೋಟಿ ರು. ಉಪನಗರ ರೈಲು ಸಂಪರ್ಕಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಕೇಂದ್ರ ಸರಕಾರ ಈ ಯೋಜನೆಗೆ ೫,೦೦೦ ಕೋಟಿ ರು. ಬಿಡುಗಡೆ ಮಾಡಿದೆ. ದೇಶದಲ್ಲಿ ಮೊದಲ ಬಾರಿಗೆ ವಾರಾಣಸಿಯಲ್ಲಿ ರೋಪ್ ಮೂಲಕ ವಿನೂತನವಾಗಿ ನಗರ ಸಾರಿಗೆ ವ್ಯವಸ್ಥೆಯ ನಿರ್ಮಾಣವಾಗುತ್ತಿದೆ. ೩.೮ ಕಿ.ಮೀ. ಮಾರ್ಗದ ಈ ಯೋಜನೆ ೬೪೫ ಕೋಟಿ ರು. ವೆಚ್ಚದಲ್ಲಿ ಜಾರಿಯಾಗುತ್ತಿದೆ. ಇದರ ಆರಂಭದಿಂದ ಸಮೂಹ ಸಾರಿಗೆ ವಲಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ. ಈ ಯೋಜನೆಯ ಯಶಸ್ಸನ್ನು ಆಧರಿಸಿ ಮಿಕ್ಕ ನಗರಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಸಾಧ್ಯತೆಗಳಿವೆ.

ಕಡಿಮೆ ಜನಸಂಖ್ಯೆಯ ನಗರಗಳಲ್ಲಿ ಹಾಲಿ ಜಾರಿಯಲ್ಲಿರುವ ಮೆಟ್ರೋ ವ್ಯವಸ್ಥೆ ಆರ್ಥಿಕವಾಗಿ ಲಾಭದಾಯಕವಲ್ಲದಿರುವುದರಿಂದ ಕಡಿಮೆ ವೆಚ್ಚದ ಮೆಟ್ರೋ ಲೈಟ್ ಸೇವೆ ಒದಗಿಸಲು ಸರಕಾರ ಮುಂದಾಗಿದೆ. ಈ ಯೋಜನೆಗೆ ಮೆಟ್ರೋ ರೈಲು ಯೋಜನೆಗಿಂತ ಶೇ. ೪೦ರಷ್ಟು ಕಡಿಮೆ ವೆಚ್ಚವಾಗುತ್ತದೆ. ಸದ್ಯ ಯುಪಿಯ ಗೋರಖ್‌ಪುರ, ದೆಹಲಿ, ಜಮ್ಮು ಮತ್ತು ಶ್ರೀನಗರದಲ್ಲಿ ಮೆಟ್ರೋ ಲೈಟ್ ಪ್ರಸ್ತಾವನೆಗೆ ಕೇಂದ್ರ ಅನುಮೋದಿಸಿದೆ. ಮೂಲಭೂತ ಸೌಕರ್ಯ ಯೋಜನೆಗಳು ದೇಶದ ಆರ್ಥಿಕ ಪ್ರಗತಿಗೆ, ಉದ್ಯೋಗ ಸೃಷ್ಟಿಗೆ ಪೂರಕ. ಈ ಹಿನ್ನೆಲೆಯಲ್ಲಿ ಮುಂದಿನ ೫ ವರ್ಷದಲ್ಲಿ ೩೦ಕ್ಕೂ ಹೆಚ್ಚು ನಗರಗಳಲ್ಲಿ ೨೦೦೦ ಕಿ.ಮೀ. ಮೆಟ್ರೋ ಸಂಪರ್ಕ ನಿರ್ಮಿಸಲು ಯೋಜಿಸಲಾಗಿದೆ. ಮೋದಿ ಸರಕಾರದ ಅವಧಿಯಲ್ಲಿ ದೇಶದಲ್ಲಿ ಸಮೂಹ ಸಾರಿಗೆ ನಕ್ಷೆ ಬದಲಾಗುತ್ತಿದ್ದು, ಮೆಟ್ರೊ ವ್ಯವಸ್ಥೆಯಿಂದ ಹೊಸಕ್ರಾಂತಿಯಾಗುತ್ತಿದೆ ಎನ್ನಲಡ್ಡಿಯಿಲ್ಲ.
(ಲೇಖಕರು ಬಿಜೆಪಿಯ ಮಾಜಿ ಮಾಧ್ಯಮ ಸಂಚಾಲಕರು)