Friday, 18th October 2024

ಮಹಿಳಾ ಆರ್ಥಿಕ ಸಬಲತೆಗೆ ಬಲನೀಡುವ ಗೃಹಲಕ್ಷ್ಮಿ

-ಶಾಲಿನಿ ರಜನೀಶ್

ಗೃಹಲಕ್ಷ್ಮಿ ಯೋಜನೆಯು ಸಣ್ಣ-ಪುಟ್ಟ ಅವಶ್ಯಕತೆಗೂ ಇತರರಲ್ಲಿ ಕೈಚಾಚುವುದನ್ನು ತಪ್ಪಿಸಿ ಮನೆಯಾಕೆಯ ಆತ್ಮವಿಶ್ವಾಸವನ್ನು ಹಿಗ್ಗಿಸುತ್ತದೆ. ಆರ್ಥಿಕ ಅಭದ್ರತೆಯ ಭಾವನೆಯಿಂದ ಹೊರಬರಲು ಸಾಧ್ಯವಾಗಿ ಆಕೆಯ ಮಾನಸಿಕ ಆರೋಗ್ಯವೂ ಸದೃಢವಾಗಿ ತನ್ನೆಲ್ಲ ನಿರ್ಧಾರಗಳನ್ನು ಸಮರ್ಥವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ.

ಹಿಂದೂ ಸಂಪ್ರದಾಯದ ಪ್ರಕಾರ ‘ಲಕ್ಷ್ಮಿ’ ಎಂಬ ದೇವತೆ ಮನೆಯಲ್ಲಿ ನೆಲೆಸಿರುತ್ತಾಳೆ. ಆಕೆಯ ಕೃಪಾಶೀರ್ವಾದದಿಂದ ಗೃಹದಲ್ಲಿ ಐಶ್ವರ್ಯ ನೆಲೆಸುತ್ತದೆ ಎಂಬ ನಂಬಿಕೆ ಕಾಲಾನುಕಾಲದಿಂದ ಜನರಲ್ಲಿದೆ. ಕೆಲವು ಸಂಪ್ರದಾಯಗಳಲ್ಲಿ ಮನೆಯ ಹೆಣ್ಣುಮಗಳನ್ನು ಗೃಹಲಕ್ಷ್ಮಿ ಎಂದು ಕರೆದರೆ, ಇನ್ನು ಕೆಲವು ಸಂಸ್ಕೃತಿಯಲ್ಲಿ ಮನೆಗೆ ಬರುವ ಹೆಣ್ಣುಮಗಳು ಅಂದರೆ ಸೊಸೆಯನ್ನು ಗೃಹಲಕ್ಷ್ಮಿ ಎಂದು ಕರೆಯುತ್ತಾರೆ. ಏಕೆಂದರೆ ಆಕೆ ಮನೆಗೆ ಸಮೃದ್ಧಿ ತರುತ್ತಾಳೆ ಮಾತ್ರವಲ್ಲ ಮುಂದಿನ ಪೀಳಿಗೆ ಅವಳಿಂದ ಬೆಳೆಯುತ್ತದೆ ಎಂಬ ನಂಬಿಕೆ. ಹಾಗಾಗಿ ವಿವಿಧ ಸಂಸ್ಕೃತಿಯಲ್ಲಿ ಸೊಸೆ ಮನೆಗೆ ಬಂದರೆ ಒಳ್ಳೆಯ ಯೋಗ ಎಂದು ತಿಳಿದು ಆಕೆಯನ್ನು ಮನೆ ತುಂಬಿಸಿಕೊಳ್ಳುವಾಗ ಸಂಭ್ರಮಿಸುತ್ತಾರೆ. ಹೀಗೆ ಗೃಹಲಕ್ಷ್ಮಿ ಎಂದರೆ ಹೆಣ್ಣು ಮಗಳು, ಹೋಗುವ ಅಥವಾ ಬರುವ ಮನೆಯ ಯಜಮಾನಿಯಾಗುವವಳು ಎಂಬುದು ಸಾಮಾನ್ಯವಾಗಿ ಧರ್ಮವನ್ನು ಮೀರಿದ ನಂಬಿಕೆಯಾಗಿದ್ದು ಭಾರತದ ಕುಟುಂಬಗಳಲ್ಲಿ ಜನಜನಿತವಾಗಿದೆ.

ಹೀಗೆಂದ ಮಾತ್ರಕ್ಕೆ ಭಾರತದಲ್ಲಿ ಹೆಣ್ಣುಮಕ್ಕಳ ಪರಿಸ್ಥಿತಿ ಬಹಳ ಚೆನ್ನಾಗಿದೆ ಎಂದರ್ಥವಲ್ಲ. ಹೆಣ್ಣನ್ನು ಮನೆಯ ದೇವತೆ ಎಂದು ನಾವೆಷ್ಟೇ ಹೇಳಿಕೊಂಡರೂ ಆಕೆಗೆ ಸಮಾಜದಲ್ಲಿ ೨ನೇ ಸ್ಥಾನ ನೀಡಿರುವುದಕ್ಕೆ
ಹಲವು ದತ್ತಾಂಶಗಳು ಸಾಕ್ಷಿಯಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯಂತೆ, ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ೨೦೨೦ಕ್ಕೆ ಹೋಲಿಸಿದಾಗ ೨೦೨೧ರಲ್ಲಿ ಶೇ.೧೫.೩
ಕ್ಕೇರಿವೆ. ಐಪಿಸಿ ಅಡಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಅಡಿಯಲ್ಲಿ ಹೆಚ್ಚಿನ ಪ್ರಕರಣಗಳು ‘ಗಂಡ ಅಥವಾ ಅವನ ಸಂಬಂಧಿಕರಿಂದ ಕ್ರೌರ್ಯ’ದ (ಶೇ.೩೧.೮) ಅಡಿಯಲ್ಲಿ ದಾಖಲಾಗಿವೆ. ಹೀಗಿರುವಾಗ ಈ ಮಹಿಳೆಯರಿಗೆ ಆರ್ಥಿಕ ಮತ್ತು ಮಾನಸಿಕ ಬೆಂಬಲ ನೀಡುವವರು ಯಾರು? ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ೨೦೨೦-೨೧ರ ವರದಿಯ ಪ್ರಕಾರ ಕಾರ್ಮಿಕ ಪಡೆಯಲ್ಲಿ ಪುರುಷರು ಶೇ.೫೭.೫ರಷ್ಟಿದ್ದರೆ, ಮಹಿಳೆಯರು ಕೇವಲ ಶೇ.೨೫.೧ರಷ್ಟಿರುವುದು ಮಹಿಳೆಯರು ಆರ್ಥಿಕ ನಿರ್ಧಾರಗಳನ್ನು ಮಾಡುವಲ್ಲಿ ಇನ್ನೂ ಬಹಳ ಹಿಂದಿದ್ದಾರೆ ಎಂಬುದಕ್ಕೆ ಸಾಕ್ಷಿ. ದಿನಗೂಲಿಯನ್ನು ಪರಿಗಣಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಪುರುಷರಿಗೆ ೩೯೩ ರು. ಮತ್ತು ಮಹಿಳೆಯರಿಗೆ ೨೬೫ ರು., ನಗರದಲ್ಲಿ ಪುರುಷರಿಗೆ ೪೮೩ ರು. ಮತ್ತು ಮಹಿಳೆಯರಿಗೆ ೩೩೩ ರು. ಇರುವುದು ಇಲ್ಲೂ ಸಮಾನತೆ ಇಲ್ಲದಿರುವುದಕ್ಕೆ ಸಾಕ್ಷಿ.

ಮಹಿಳೆಯರು ಕಾರ್ಮಿಕ ಮಾರುಕಟ್ಟೆಯನ್ನು ಮತ್ತು ಯೋಗ್ಯಕೆಲಸವನ್ನು ಪ್ರವೇಶಿಸಲು ಅನೇಕ ಅಡೆತಡೆಗಳಿವೆ. ಉದ್ಯೋಗ ಪ್ರವೇಶಕ್ಕೆ ಸಂಬಂಧಿಸಿ ಮಹಿಳೆಯರು ಹಲವು ಸವಾಲುಗಳನ್ನು ಅಸಮಾನವಾಗಿ ಎದುರಿಸುತ್ತಾರೆ. ಉದಾಹರಣೆಗೆ, ಕೆಲಸದ ಆಯ್ಕೆ ಮತ್ತು ಪರಿಸ್ಥಿತಿಗಳು, ಉದ್ಯೋಗ ಭದ್ರತೆ, ವೇತನ ತಾರತಮ್ಯ, ಕೆಲಸ ಮತ್ತು ಕುಟುಂಬದ ಜವಾಬ್ದಾರಿಗಳ ಸ್ಪರ್ಧಾತ್ಮಕ ಹೊರೆಗಳನ್ನು ಸಮತೋಲನಗೊಳಿಸುವಿಕೆ ಇತ್ಯಾದಿ ಸವಾಲುಗಳಿವೆ. ಹೀಗಿರುವಾಗ ಮಹಿಳೆಗೆ ಆರ್ಥಿಕ ಸಬಲತೆ ಬರುವುದಾದರೂ ಹೇಗೆ? ಆಕೆ ಸ್ವಯಂನಿರ್ಧಾರಗಳನ್ನು ಕೈಗೊಳ್ಳುವುದಾದರೂ ಹೇಗೆ? ಇದೆಲ್ಲ ಆಗಬೇಕಾದರೆ ಆಕೆಗೆ ತನ್ನದೇ ಆದ ಹಣಕಾಸಿನ ಅಗತ್ಯವಿದೆ. ಇದು ಲಭ್ಯವಾದಲ್ಲಿ ಆಕೆ ಸ್ವಂತ ನಿರ್ಧಾರಗಳನ್ನು ಕೈಗೊಳ್ಳಬಲ್ಲಳು.

ಗೃಹಲಕ್ಷ್ಮಿ ಎಂಬ ವರದಾನ:
ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದು ೧.೨೮ ಕೋಟಿ ಮಹಿಳೆಯರಿಗೆ ವರದಾನವಾಗಲಿದೆ. ಕುಟುಂಬದ ಪ್ರಮುಖ ಪಾತ್ರಧಾರಿಯಾಗಿರುವ ಯಜಮಾನಿಗೆಂದೇ ವಿಶೇಷವಾಗಿ ಯೋಜಿಸಲ್ಪಟ್ಟ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಿರುವುದು. ಇದೇ ಮೊದಲು. ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ಇದರಿಂದ ೨,೦೦೦ ರು. ಸಿಗಲಿದೆ. ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ. ಕುಟುಂಬವೊಂದರಲ್ಲಿ ಒಬ್ಬರಿಗಿಂತ ಹೆಚ್ಚು ಮಹಿಳೆಯರಿದ್ದರೆ ಆ ಪೈಕಿ ಒಬ್ಬರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ಹಾಗಂತ ಆದಾಯ ತೆರಿಗೆ ಪಾವತಿಸುವ ಮಹಿಳೆಗೆ ಇದು ದಕ್ಕುವುದಿಲ್ಲ. ಆದರೆ, ಕುಟುಂಬದ ಮಗ ಅಥವಾ ಮಗಳು ತೆರಿಗೆ ಪಾವತಿದಾರರಾಗಿದ್ದು, ತಾಯಿಯು ಮನೆಯ ಯಜಮಾನಿಯಾಗಿದ್ದರೆ ಆಕೆಯೂ ಇದಕ್ಕೆ ಅರ್ಹರಾಗುತ್ತಾರೆ. ‘ಶಕ್ತಿ’ ಯೋಜನೆ ಬಂದಾಗ ಸಾಕಷ್ಟು ಟೀಕೆಗಳು ಎದುರಾಗಿದ್ದವು. ಆದರೆ ಇದರ ಅನುಷ್ಠಾನದ ನಂತರ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯದಲ್ಲಿ ಏರಿಕೆಯಾಗಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. ಮುಖ್ಯವಾಗಿ, ಸಣ್ಣ ಪಟ್ಟಣದ ಮತ್ತು ಗ್ರಾಮೀಣ ಮಹಿಳೆಯರಿಗೆ ಇದು ವರದಾನವಾಗಿದೆ.

ಸ್ವಾವಲಂಬಿ ಬದುಕಿಗೆ ಗೃಹಲಕ್ಷ್ಮಿ:
ಆರ್ಥಿಕ ಸಬಲೀಕರಣವು ಸಮಾನವಾಗಿ ಭಾಗವಹಿಸುವ ಸಾಮರ್ಥ್ಯವನ್ನು ಮಹಿಳೆಯರಿಗೆ ನೀಡುತ್ತದೆ. ಉಳಿತಾಯದಲ್ಲಿ ಮಹಿಳೆಯರು ನಿಪುಣರು ಎನ್ನುವ ಕಾರಣಕ್ಕೇ ಇರಬೇಕು ಭಾರತದಲ್ಲಿಂದು ಸ್ವಸಹಾಯ ಗುಂಪುಗಳು ಬಹಳ ಸಕ್ರಿಯವಾಗಿದ್ದು, ಅಡುಗೆ ಮನೆಯ ಡಬ್ಬಿಯಲ್ಲಿ ಉಳಿತಾಯವಾಗುತ್ತಿದ್ದ ಹಣವಿಂದು ಬ್ಯಾಂಕುಗಳಲ್ಲಿ ಜಮೆಯಾಗುತ್ತಿದೆ. ಮಾತ್ರವಲ್ಲ, ಮಹಿಳೆಯರು ಸ್ವ-ಉದ್ಯೋಗವನ್ನು ಕೈಗೊಂಡು ಆರ್ಥಿಕ ಸ್ವಾವಲಂಬಿಗಳಾಗಿದ್ದಾರೆ. ಕರ್ನಾಟಕದಲ್ಲಿರುವ ಸುಮಾರು ೨.೬ ಲಕ್ಷ ಮಹಿಳಾ ಸ್ವಸಹಾಯ ಸಂಘಗಳಲ್ಲಿ ೩೦.೩ ಲಕ್ಷ ಸದಸ್ಯರಿದ್ದು, ಇವರಲ್ಲಿ ಮನೆಯ ಯಜಮಾನಿಯಾಗಿರುವವರಿಗೆ ಆರ್ಥಿಕ ನಿರ್ಧಾರವನ್ನು ಕೈಗೊಳ್ಳಲು ಗೃಹಲಕ್ಷ್ಮಿ ಯೋಜನೆ ಇನ್ನಷ್ಟು ಪುಷ್ಟಿನೀಡುತ್ತದೆ. ಎಷ್ಟೋ ಮಹಿಳೆಯರಿಂದು ಸ್ವ-ಸಹಾಯ ಸಂಘಗಳಿಗೂ ಹೋಗಲಾರದ ಪರಿಸ್ಥಿತಿಯಲ್ಲಿದ್ದಾರೆ. ಗೃಹಲಕ್ಷ್ಮಿ ಯೋಜನೆಯು ಆರ್ಥಿಕ ಸಬಲತೆಯ ದಾರಿತೋರುವುದು ಮಾತ್ರವಲ್ಲದೆ, ಸ್ವ-ಉದ್ಯೋಗಕ್ಕೆ ಅಲ್ಪಬಂಡವಾಳವಾಗಿಯೂ ನೆರವಾಗಬಲ್ಲದು.

ಆರೈಕೆ ಕೆಲಸಕ್ಕೆ ಪೇರಣೆ :
‘ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಜನಜನಿತ ಹೇಳಿಕೆಯಂತೆ, ಪುರುಷನನ್ನು ‘ಕುಟುಂಬದ ಪೋಷಕ’ ಎಂದು ಪರಿಗಣಿಸಿ, ಮಹಿಳೆಯನ್ನು ಮನೆ ವಾರ್ತೆಗಷ್ಟೇ ಮೀಸಲಿಡಲಾಗಿತ್ತು. ಆದರೆ ಹೆಣ್ಣು ಮಕ್ಕಳಿಗೂ ಶಿಕ್ಷಣ ದೊರೆತು ಮಹಿಳಾ ಸಬಲೀಕರಣ ಬೇರೂರತೊಡಗಿದಾಗ, ಅವರೂ ಔಪಚಾರಿಕ ಉದ್ಯೋಗಗಳಲ್ಲಿ ಭಾಗವಹಿಸತೊಡಗಿದರು ಮತ್ತು ಕಾನೂನಿನಡಿ ಸಮಾನ ವೇತನವನ್ನು ಪಡೆಯಲಾರಂಭಿಸಿದರು. ಸಂವಿಧಾನದ ೭೩ ಮತ್ತು ೭೪ನೇ ತಿದ್ದುಪಡಿಯ ನಂತರ ರಾಜಕೀಯ ಸಬಲೀಕರಣದಲ್ಲಿ ಇಂಥದೇ ಬದಲಾವಣೆಗಳಾದವು. ಪಂಚಾಯತ್‌ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಯಿತು. ಮಕ್ಕಳ ಲಾಲನೆ-ಪಾಲನೆ, ಕಲಿಸುವಿಕೆ ಮತ್ತು ಶಾಲೆಗೆ ಬಿಡುವಿಕೆ, ಅಡುಗೆ, ಮನೆಯನ್ನು ಚೊಕ್ಕವಾಗಿಟ್ಟುಕೊಳ್ಳುವಿಕೆ, ಬಟ್ಟೆ ಒಗೆಯುವಿಕೆ ಹೀಗೆ ಆರೈಕೆ ಕೆಲಸ ಮಾಡುವ ಸಾಮಾನ್ಯ ಮಹಿಳೆಯರ ಸರಾಸರಿ ಕಾರ್ಯಮೌಲ್ಯವು ಯಾವುದೇ ಬಹು ರಾಷ್ಟ್ರೀಯ ಕಂಪನಿಯ ಸಿಇಒ ಸಂಬಳಕ್ಕೆ ಸಮನಾಗಿರುತ್ತದೆ ಎಂದು ಆರ್ಥಿಕತೆ ತೋರಿಸುತ್ತದೆ! ಹೀಗಿರುವಾಗ ಕೇವಲ ಶೇ.೩೦ರಷ್ಟು ಮಹಿಳೆಯರು ಸ್ವಂತ ಆಸ್ತಿ ಹೊಂದಿದ್ದು, ಕೇವಲ ಶೇ.೩೦ರಷ್ಟು ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯ ದರದಲ್ಲಿರುವುದು ದುರಂತವಲ್ಲವೇ?

ದಿನವಿಡೀ ದುಡಿದರೂ ಸಂಬಳವಾಗಲೀ ಮೆಚ್ಚುಗೆಯಾಗಲೀ ನಿವೃತ್ತಿಯಾಗಲೀ ಸಿಗದ ಬಾಬತ್ತೆಂದರೆ ಅದು ಮನೆಯ ಆರೈಕೆ ಕೆಲಸ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ವರದಿ ಪ್ರಕಾರ, ಭಾರತದ ಹೆಣ್ಣುಮಕ್ಕಳು ನಗರ ಪ್ರದೇಶದಲ್ಲಿ ದಿನಕ್ಕೆ ೩೧೨ ನಿಮಿಷ ಮತ್ತು ಗ್ರಾಮೀಣ ಪ್ರದೇಶದಲ್ಲಿ ೨೯೧ ನಿಮಿಷ ಆರೈಕೆ ಕೆಲಸದಲ್ಲಿ ತೊಡಗಿರುತ್ತಾರೆ. ಆದರೆ ಪುರುಷರು ಕ್ರಮವಾಗಿ ೨೯ ಮತ್ತು ೩೨ ನಿಮಿಷ ಮಾತ್ರ ತೊಡಗಿರುತ್ತಾರೆ. ಹೀಗಿರುವಾಗ ಆ ಮಹಿಳೆ ಹತಾಶೆಗೆ ಒಳಗಾಗದಿರುತ್ತಾಳೆಯೇ? ಎಷ್ಟೋ ಬಾರಿ ತಮ್ಮಲ್ಲಿ ಹಣವಿದ್ದರೂ ಗಂಡಂದಿರು ‘ನಿನಗ್ಯಾಕೆ ಹಣ? ಕೇಳಿದ್ದು ತಂದುಕೊಡುತ್ತಿದ್ದೇನಲ್ಲಾ?’ ಎನ್ನುವುದಿದೆ. ಇನ್ನು, ಮನೆ ಖರ್ಚಿಗೆಂದು ಹಣ ಕೊಡುವ ಗಂಡನೂ, ‘ಯಾವುದಕ್ಕೆ ಎಷ್ಟು ಖರ್ಚಾಗಿದೆ? ಏನೇನು ಖರೀದಿಸಿದ್ದೀಯ? ಅದೇಕೆ ಖರೀದಿಸಿದೆ? ಉಳಿದ ಹಣವನ್ನು ಮರಳಿಸಲಿಲ್ಲವೇಕೆ? ಏನು ಖರೀದಿಸುವೆ ಎಂದು ಪಟ್ಟಿ ಕೊಟ್ಟರಷ್ಟೇ ಹಣ ನೀಡುವೆ’ ಎನ್ನುವ ಉದಾಹರಣೆಗಳು ಸಾಕಷ್ಟಿವೆ. ಹೀಗಾದಾಗ, ‘ಅರೆ, ನಾನು ಮನೆಗಾಗಿ ದುಡಿಯುವುದಿಲ್ಲವೇ? ಮನೆಗೆಲಸ, ಮನೆಯವರ ಲಾಲನೆ-ಪಾಲನೆ ಮಾಡುವುದಿಲ್ಲವೇ? ಮುಂಜಾನೆಯಿಂದ ರಾತ್ರಿವರೆಗೆ ದಣಿವರಿಯದೆ ದುಡಿಯುವ ನನಗೆ ನೂರೆಂಟು ಪ್ರಶ್ನೆಯೇ? ನನ್ನಿಷ್ಟದ ವಸ್ತುವನ್ನು ಖರೀದಿಸುವ ಸ್ವಾತಂತ್ರ್ಯವೂ ನನಗಿಲ್ಲವೇ?’ ಎಂಬ ಪ್ರಶ್ನೆಗಳು ಆಕೆಯನ್ನು ಕಾಡುವುದು ಸುಳ್ಳಲ್ಲ. ಇಂಥ ಯಜಮಾನಿಯರು ಈ ಯೋಜನೆಯಿಂದ ತಮ್ಮ ಸಣ್ಣಪುಟ್ಟ ಆಸೆಗಳನ್ನು ಪೂರೈಸಿಕೊಳ್ಳಬಹುದೇನೋ?

ಆರ್ಥಿಕ ಬಲದಿಂದ ಆತ್ಮವಿಶ್ವಾಸ :
ಈ ಒಂದು ಯೋಜನೆಯು ಸಣ್ಣ-ಪುಟ್ಟ ಅವಶ್ಯಕತೆಗೂ ಇತರರಲ್ಲಿ ಕೈಚಾಚುವುದನ್ನು ತಪ್ಪಿಸುತ್ತದೆ. ಮಾತ್ರವಲ್ಲ ಮನೆಯಾಕೆಯ ಆತ್ಮವಿಶ್ವಾಸವನ್ನೂ ಹಿಗ್ಗಿಸುತ್ತದೆ. ಆರ್ಥಿಕ ಅಭದ್ರತೆಯ ಭಾವನೆಯಿಂದ ಆಕೆ ಹೊರಬರಲು ಕಾರಣವಾಗುತ್ತದೆ. ಇದರಿಂದಾಗಿ ಆಕೆಯ ಮಾನಸಿಕ ಆರೋಗ್ಯವೂ ಸದೃಢವಾಗಿ ತನ್ನೆಲ್ಲ ನಿರ್ಧಾರಗಳನ್ನು ಸಮರ್ಥವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ.

ಅಪೌಷ್ಟಿಕತೆಯ ನಿವಾರಕ :
ಮಹಿಳೆಯರಲ್ಲಿ ಅನಕ್ಷರತೆ, ರಕ್ತಹೀನತೆ ಮತ್ತು ಅಪೌಷ್ಟಿಕತೆ ಯಾವಾಗಲೂ ಹೆಚ್ಚು ಎಂಬುದು ಕಳವಳಕಾರಿ ವಿಷಯ. ಅಡುಗೆ ಮಾಡುವ ಮಹಿಳೆಯು ಎಲ್ಲರ ಊಟವಾದ ನಂತರವಷ್ಟೇ ಉಣ್ಣುತ್ತಾಳೆ ಎಂಬುದಕ್ಕೆ ನಾವೇ ಸಾಕ್ಷಿ! ಇದು ಮಹಿಳೆಯರಲ್ಲಿನ ಅಪೌಷ್ಟಿಕತೆಗಿರುವ ಕಾರಣಗಳಲ್ಲೊಂದು. ಬಡತನವೂ ಹಲವು ಬಾರಿ ಅಪೌಷ್ಟಿಕತೆಗೆ, ರಕ್ತಹೀನತೆಗೆ ಕಾರಣವಾಗುತ್ತದೆ. ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ರೂಢಿಗಳಿಂದಾಗಿ, ಮಹಿಳೆಗೆ ತನ್ನ ಸ್ವಂತಪೋಷಣೆಯ ಆಯ್ಕೆಯ ಸ್ವಾತಂತ್ರ್ಯವಿರಲಿಲ್ಲ. ಆದರೆ ಕಾಲಾನಂತರದಲ್ಲಿ ಆಕೆ ಸ್ವಸಹಾಯ ಗುಂಪಿನ ಆಂದೋಲನವನ್ನು ಶುರುಮಾಡಿ ವಾರಕ್ಕೊಮ್ಮೆ ಸ್ವಲ್ಪ ಹಣವನ್ನು ಉಳಿಸಿ ಗುಂಪಿನ ಖಾತೆಗೆ ಸೇರಿಸತೊಡಗಿದಳು. ಇದರಿಂದಾಗಿ ಆಕೆಗೆ ಮಕ್ಕಳ ಶಿಕ್ಷಣ, ಆರೋಗ್ಯ, ಪೋಷಣೆಗೆ ಖರ್ಚುಮಾಡಲು ಆರ್ಥಿಕ ಸ್ವಾತಂತ್ರ್ಯ ಸಿಗಲಾರಂಭಿಸಿತು. ಆದರೆ ಆಕೆಗೆ ಮತ್ತೆ ಅವಳದೇ ಕೊನೆಯ ಆದ್ಯತೆ! ಗೃಹಲಕ್ಷ್ಮಿ ಯೋಜನೆಯ ಮೂಲಕ ಅಂಥ ಕುಟುಂಬಗಳ ಯಜಮಾನಿಗೆ ತನಗೆ ಹಾಗೂ ತನ್ನ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವುದು ಸಾಧ್ಯವಾಗುತ್ತದೆ. ಮಾತ್ರವಲ್ಲ, ಸಣ್ಣ-ಪುಟ್ಟ ಆರೋಗ್ಯ ಸಂಬಂಧಿ ಖರ್ಚುಗಳ ನಿಭಾವಣೆಯೂ ಆಗುತ್ತದೆ.

ಆರ್ಥಿಕ ಪಗತಿಗೆ ಕೊಡುಗೆ :
ಮಹಿಳೆಯರ ಆರ್ಥಿಕ ಸಬಲೀಕರಣವಾದಾಗ ಸ್ವಂತ ನಿರ್ಧಾರ ಕೈಗೊಳ್ಳಲು ಸಮರ್ಥರಾಗುತ್ತಾರೆ. ಮನೆಯ ಒಳಗೂ ಹೊರಗೂ ಅವರ ವ್ಯಾವಹಾರಿಕ ಸಂವಹನಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಅಲ್ಲದೆ ಉದ್ಯೋಗ ಕ್ಷೇತ್ರದತ್ತ ಆಕೆಯ ಆಸಕ್ತಿಯೂ ಬೆಳೆಯುತ್ತದೆ. ಮಹಿಳಾ ಕಾರ್ಮಿಕ ಪಡೆ ಹೆಚ್ಚುತ್ತಿದ್ದಂತೆ ಒಟ್ಟು ದೇಶೀಯ ಉತ್ಪಾದನೆಯಲ್ಲೂ ಹೆಚ್ಚಳವಾಗಿ, ರಾಜ್ಯ ಮತ್ತು ದೇಶದ ಆರ್ಥಿಕತೆಯ ಔನ್ನತ್ಯಕ್ಕೆ ಅವರು ಕೊಡುಗೆ ನೀಡಿದಂತಾಗುತ್ತದೆ. ಹೀಗೆ ಮನೆಯ ಗೃಹಲಕ್ಷ್ಮಿಯು ರಾಜ್ಯದ ಲಕ್ಷ್ಮಿಗೆ, ಅಂದರೆ ರಾಜ್ಯದ ಆರ್ಥಿಕ ಪ್ರಗತಿಗೆ ಕಾರಣಳಾಗುತ್ತಾಳೆ. ಕರ್ನಾಟಕ ಸರಕಾರವು ಗೃಹಲಕ್ಷ್ಮಿ ಯೋಜನೆಯ ಮೂಲಕ ತನ್ನದೇ ಆದ ಶೈಲಿಯಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿರುವುದು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ. ಮುಂಬರುವ ದಿನಗಳಲ್ಲಿ ಇದು ದೇಶದ ಜಿಡಿಪಿಗೆ ಕೊಡುಗೆಯಾಗುತ್ತದೆ ಎಂಬುದನ್ನು ಎಲ್ಲರೂ ಮನಸ್ಸಿನಲ್ಲಿಟ್ಟುಕೊಳ್ಳಬೇಕಿದೆ.
(ಲೇಖಕಿ, ಕರ್ನಾಟಕ ಸರಕಾರದ ಯೋಜನಾ ಇಲಾಖೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ)