Saturday, 23rd November 2024

ಕೋರ್ಟ್ ಮೆಟ್ಟಿಲೇರದ ಸಂಪಾದಕ ಒಬ್ಬ waste body!

ವೈಯಕ್ತಿಕ ನಿಂದನೆ, ಅವಹೇಳನ, ಕೊಚ್ಚೆ ಎರಚಾಟಗಳ ಪತ್ರಿಕೋದ್ಯಮದಿಂದ ನಾನು ಗಾವುದ ದೂರ. ಟ್ಯಾಬ್ಲಾಯಿಡ್ ಪತ್ರಿಕೋದ್ಯಮ ನನ್ನ ಬ್ರಾಂಡ್ ಅಲ್ಲವೇ ಅಲ್ಲ. ಅಂಥ ಪತ್ರಿಕೋದ್ಯಮ ಮಾಡಿದವರು ಏನಾಗಿದ್ದಾರೆ, ಏನು ಸಾಧಿಸಿದ್ದಾರೆ ಎಂಬುದನ್ನು ಕಣ್ಣಾರೆ ನೋಡಿದ್ದೇವೆ. ಅವರ ಸಾಧನೆ ಏನೇ ಇರಲಿ, ಅದು ಮೂಲತಃ ನನಗೆ ಒಗ್ಗುವಂಥದ್ದಲ್ಲ. ನಾನು ಸಂಪಾದಕನಾದ ಎಲ್ಲ ಪತ್ರಿಕೆಗಳಲ್ಲೂ ಈ ಟ್ಯಾಬ್ಲಾಯಿಡ್ ಧಾತು’ಗಳು ಪ್ರವೇಶಿಸದಂತೆ ನೋಡಿಕೊಂಡಿದ್ದೇನೆ. ಸಂದರ್ಭ ಬಂದಾಗ, ಬಿಸಿ ಮುಟ್ಟಿಸುವಾಗ, ಸೌಜನ್ಯ, ಶಿಷ್ಟಾಚಾರದ ಪರಿಮಿತಿಯೊಳಗೇ ಗೌರವಯುತವಾಗಿ ಹೇಳಿದ್ದಿದೆ. ತೀರಾ ಅನಿವಾರ್ಯವಾದಾಗ ಸುತ್ತಲು ರೇಷ್ಮೆ ಶಾಲು ಬಳಸಿದ್ದಿದೆ. ಆದರೆ ಯಾವ ಕಾರಣಕ್ಕೂ ಪತ್ರಿಕೆಯನ್ನು ಸ್ವಂತಕ್ಕೆ ದುಪಯೋಗಪಡಿಸಿಕೊಂಡಿಲ್ಲ, ಅದರ ಮಾಲೀಕತ್ವ ಮತ್ತು ಸಂಪಾದಕತ್ವ ನನ್ನದೇ ಆಗಿದ್ದರೂ. ನನ್ನನ್ನು ಟೀಕಿಸಿದವರಿಗೂ ಪತ್ರಿಕೆಗಳಲ್ಲಿ ಜಾಗ ಕೊಟ್ಟಿದ್ದೇನೆ. ‘ವಿಶ್ವೇಶ್ವರ ಭಟ್ಟರ ತಲೆ ಖಾಲಿಯಾಗಿದೆ’ ಎಂದು ಬರೆದಿದ್ದನ್ನೂ ಪ್ರಕಟಿಸಿದ್ದೇನೆ. ನನ್ನ ಖಾಸಗಿ ವಿಚಾರವೊಂದನ್ನು ಬಿಟ್ಟು, ಓದುಗರು ಕೇಳಿದ ಎಲ್ಲ ಪ್ರಶ್ನೆಗಳಿಗೂ (ಮೊದಲಿನ  Ask The Editor ಅಂಕಣದಲ್ಲಿ) ಉತ್ತರಿಸಿದ್ದೇನೆ. ತಪ್ಪು ಮಾಡಿದಾಗಲೆಲ್ಲ ಓದುಗರ ಮುಂದೆ ಪ್ರಾಮಾಣಿಕವಾಗಿ, ಮುಲಾಜಿಲ್ಲದೇ, ಮುಜುಗರಕ್ಕೊಳಗಾಗದೇ, ತಪ್ಪಾಯ್ತು ಅಂತ (ತಪ್ಪಾಯ್ತು, ತಿದ್ಕೋತೀವಿ ಅಂಕಣ ನೆನಪಿಸಿಕೊಳ್ಳಿ) ಕೇಳಿಕೊಂಡಿದ್ದೇನೆ. ಈ ಎರಡೂವರೆ ದಶಕಗಳಲ್ಲಿ, ಕಿವಿ ಹಿಂಡಿಸಿಕೊಳ್ಳಲು, ತಿವಿಸಿ ಕೊಳ್ಳಲು ಸಿಗುವಷ್ಟು ಹತ್ತಿರದಲ್ಲಿ ಓದುಗರ ಕೈಗೆ ಸಿಕ್ಕಿದ್ದೇನೆ.

ಇಷ್ಟಾಗಿಯೂ ನಮ್ಮ ಮೇಲೆ ಕೋರ್ಟ್ ಕೇಸುಗಳು ಬಿದ್ದಿಲ್ಲವಾ? ಬಿದ್ದಿವೆ. ಕೆಲವರು ತಡೆಗೋಡೆಯಾಗಿ, ಬೇಕೆಂದೇ ಕೋರ್ಟಿಗೆ ಅಲೆದಾಡಿಸಲೆಂದು ಬೇಕೆಂದೇ ಕೇಸು ಹಾಕಿದ್ದಾರೆ. ಆದರೆ ಒಂದೂ ಕೇಸಲ್ಲಿ ಇಲ್ಲಿ ತನಕ ನನ್ನ ವಿರುದ್ಧ ತೀರ್ಪುಗಳು ಬಂದಿದ್ದಿಲ್ಲ. ಇಷ್ಟಾಗಿಯೂ ಪೊಲೀಸ್ ಠಾಣೆ, ಕೋರ್ಟ್ ಕೇಸ್ ತಪ್ಪುವುದಿಲ್ಲ. ಇವೆಲ್ಲ ಇದ್ದಿದ್ದೇ. ಕೋರ್ಟ್ ಕೇಸ್ ಹಾಕುವ ಮೂಲಕ ನಮ್ಮ ಕೈ ಕಟ್ಟಿ ಹಾಕಬಹುದು ಎಂದು ಕೆಲವರು ಭಾವಿಸಿಕೊಂಡಿರುತ್ತಾರೆ. ಕೋರ್ಟ್ ಕೇಸುಗಳನ್ನು ಎದುರಿಸಿದಷ್ಟೂ ಸಂಪಾದಕ ಗಟ್ಟಿಯಾಗುತ್ತಾ ಹೋಗುತ್ತಾನೆ. ನ್ಯಾಯಾಂಗ ವ್ಯವಸ್ಥೆ, ಕೋರ್ಟ್, ವಕೀಲರು, ನ್ಯಾಯಾಧೀಶರು, ಹೀಗೆ ಹತ್ತು ಹಲವರು ಪರಿಚಯವಾಗುತ್ತಾ ಹೋಗುತ್ತಾರೆ. ಇದೊಂದು ರೀತಿಯಲ್ಲಿ ಬಯಸದೇ ಬಂದ ಭಾಗ್ಯ. ಯಾವ ಸಂಪಾದಕನ ಮೇಲೆ ಕೋರ್ಟ್ ಕೇಸ್ ಇಲ್ಲ ಅಂದ್ರೆ ನನ್ನ ದೃಷ್ಟಿಯಲ್ಲಿ ಆತ ತನ್ನ ಡ್ಯೂಟಿಯನ್ನು ಸರಿಯಾಗಿ ಮಾಡುತ್ತಿಲ್ಲ ಎಂದೇ ಅರ್ಥ. ಆಗಾಗ ಕೋರ್ಟ್ ಕೇಸ್ ಬೀಳುತ್ತಿದ್ದರೆ, ಆತ ಕರೆಕ್ಟ್ ಆಗಿ ಡ್ಯೂಟಿ ಮಾಡುತ್ತಿದ್ದಾನೆ ಎಂದರ್ಥ. ‘ಜೀವನದಲ್ಲಿ ನಾನು ಒಮ್ಮೆಯೂ ಕೋರ್ಟ್ ಮೆಟ್ಟಿಲನ್ನು ತುಳಿದಿಲ್ಲ’ ಎಂದು ಸಂಪಾದಕನೊಬ್ಬ ಎದೆಯುಬ್ಬಿಸಿ ಹೇಳಿಕೊಂಡರೆ, ಆತ ಶುದ್ಧ waste body and very boring person!

ಪ್ರಸ್ತುತ ನನ್ನ ವಿರುದ್ಧ ರಾಜ್ಯದ ಬೇರೆ ಬೇರೆ ಕೋರ್ಟು ಗಳಲ್ಲಿ ಸುಮಾರು ೪೭ ಕೇಸುಗಳಿವೆ. ಐದು ವರ್ಷಗಳ ಹಿಂದೆ,೧೩೭ ಕೇಸುಗಳಿದ್ದವು. ನಾನು ಸಂಪಾದಕನಾಗಿದ್ದ ‘ವಿಜಯ ಕರ್ನಾಟಕ’, ‘ಕನ್ನಡ ಪ್ರಭ’, ಸುವರ್ಣ ನ್ಯೂಸ್ ಮತ್ತು ಈಗಿನ ‘ವಿಶ್ವವಾಣಿ’ ಸೇರಿ ಅಷ್ಟು ಕೇಸುಗಳಾಗಿವೆ. ಇವೆಲ್ಲ ನನ್ನ ವೃತ್ತಿಪರ ಆಸ್ತಿಯೇ. ಹೆಚ್ಚಿನ ಪಾಲನ್ನು ನನ್ನ ಸಹೋದ್ಯೋಗಿಗಳಿಂದಾಗಿ ನಾನು ಸಂಪಾದಿಸಿದ್ದು. ‘ಮಳೆ ನಿಂತರೂ ಹನಿ ತೊಟ್ಟಿಕ್ಕುವುದು ನಿಂತಿಲ್ಲ’ ಎನ್ನುವ ಹಾಗೆ, ನಾನು ಆ ಪತ್ರಿಕೆಗಳು, ಚಾನೆಲ್ಲನ್ನು ಬಿಟ್ಟರೂ, ಅಲ್ಲಿದ್ದಾಗ ಬಿದ್ದ ಕೇಸುಗಳಿಂದಾಗ ಕೋರ್ಟ್ ಅಲೆದಾಟ ಮಾತ್ರ ತಪ್ಪಿಲ್ಲ. ಈ ಕೇಸುಗಳು ನನ್ನನ್ನು ರಾಜ್ಯದ ಎಂಬತ್ತಕ್ಕೂ ಹೆಚ್ಚು ಕೋರ್ಟುಗಳ ಮುಂದೆ ತಂದು ನಿಲ್ಲಿಸಿದೆ. ಗೋಕಾಕ, ಅಥಣಿ, ಕೊಪ್ಪ, ಶೃಂಗೇರಿ, ಸಾಗರ, ಕುಂದಾಪುರ, ಶಿರಸಿ, ಹಾವೇರಿ, ಯಾದಗಿರಿ,ಅಫಜಲಪುರ, ಚಿತ್ತಾಪುರ, ಕೊಪ್ಪಳ, ಚಿಕ್ಕಮಗಳೂರು, ಚಾಮ ರಾಜನಗರ, ಗದಗ, ದಾವಣಗೆರೆ, ಮೈಸೂರು, ನಂಜನ ಗೂಡು, ವಿಜಯಪುರ, ಬಾಗಲಕೋಟೆ, ಸಿಂದಗಿ, ಇಂಡಿ, ನರಗುಂದ, ಬಾದಾಮಿ, ಗುಬ್ಬಿ, ಅರಸೀಕೆರೆ, ಚಿತ್ರದುರ್ಗ, ಚನ್ನಪಟ್ಟಣ, ತುಮಕೂರು, ರಾಮನಗರ, ಸೋಮವಾರ  ಪೇಟೆ, ಮಡಿಕೇರಿ, ಉಡುಪಿ, ಕಾರ್ಕಳ… ಹೀಗೆ ರಾಜ್ಯದ ಬಹುತೇಕ ಎಲ್ಲ ಕೋರ್ಟುಗಳ ಹೊಸ್ತಿಲನ್ನು ತುಳಿದು ಬಂದಿದ್ದೇನೆ. ಪ್ರಾಯಶಃ ನನ್ನಷ್ಟು ಕೋರ್ಟ್ ಎದುರಿಸಿದ ಸಂಪಾದಕ ಯಾರೂ ಇರಲಿಕ್ಕಿಲ್ಲ.

‘ಕನ್ನಡ ಪ್ರಭ’ದಲ್ಲಿದ್ದಾಗ ಹಾಕಿದ ಒಂದು ಹೆಡ್‌ಲೈನ್‌ನಿಂದ ಮುನಿದ ವಕೀಲರು, ನನ್ನ ಮೇಲೆ ರಾಜ್ಯದ ಐವತ್ತಕ್ಕೂ ಹೆಚ್ಚು ಕೋರ್ಟುಗಳಲ್ಲಿ ಕೇಸು ಬೀಳುವಂತೆ ಮಾಡಿದ್ದರು. ಆ ಸಂದರ್ಭದಲ್ಲಿ ನಾನು ತಿಂಗಳಲ್ಲಿ ಇಪ್ಪತ್ತು ದಿನ ರಾಜ್ಯದ ಬೇರೆ ಬೇರೆ ಕೋರ್ಟುಗಳಿಗೆ ಹಾಜರಾಗುತ್ತಿದ್ದೆ. ಇದೇ ಒಂದು ರೋಚಕ ಅನುಭವ. ಪತ್ರಕರ್ತರು, ವಕೀಲರು ಜತೆಜತೆಯಾಗಿ ಕೆಲಸ ಮಾಡಬೇಕಾದವರು. ಒಬ್ಬರನ್ನು ಬಿಟ್ಟು ಮತ್ತೊಬ್ಬರಿಲ್ಲ. ಹಾಗೆ ಪೊಲೀಸರು ಕೂಡ. ನಮ್ಮ ಮೂವರ ಮಧ್ಯೆ ಯಾವತ್ತೂ ಕೊಂಡಿ ಕಳಚುವಂತಿಲ್ಲ. ನಾವು ಮೂವರೂ ಪ್ರತಿದಿನ ಪರಸ್ಪರ ಮುಖಾಮುಖಿ ಆಗಬೇಕಾದವರು. ಕೊನೆಗೆ ಹೇಗೋ, ಆ ಪ್ರಕರಣ ಸುಖಾಂತ್ಯ ಕಂಡಿತು. ದೊಡ್ಡ ಮನಸ್ಸು ಮಾಡಿ, ವಕೀಲರು ಕೇಸುಗಳನ್ನು ವಾಪಸ್ ಪಡೆದರು. ಕೆಲವೊಮ್ಮೆ ಒಂದೇ ದಿನ ಎರಡು-ಮೂರು ಊರುಗಳಲ್ಲಿ ಕೋರ್ಟ್ ಮುಂದೆ ಹಾಜರಾಗಬೇಕಾಗುತ್ತದೆ. ಆಗ ಉಳಿದ ಕೋರ್ಟುಗಳಿಗೆ ಹಾಜರಾಗಲು ಆಗುವುದಿಲ್ಲ. ಅವನ್ನು ಬಿಟ್ಟರೆ, ಯಾವ ಊರಿನ ಕೋರ್ಟ್ ಮುಂದೆ ಹಾಜರಾಗಬೇಕಾಗಿ ಬಂದರೂ, ನಾನು ತಪ್ಪಿಸಿಕೊಳ್ಳುವುದಿಲ್ಲ. ಒಮ್ಮೆಯೂ ನನಗೆ ಕೋರ್ಟ್ ಮುಂದೆ ಹಾಜರಾಗುವುದು ಕಿರಿಕಿರಿ ಎಂದು ಅನಿಸಿಲ್ಲ.

ಬೆಳಗಿನಿಂದ ಸಾಯಂಕಾಲ ತನಕ ಕೋರ್ಟ್‌ನಲ್ಲಿ ಕಾಲ ಕಳೆಯುವಂತಾದಾಗಲೂ, ಬೇಸರಿಸಿಕೊಂಡಿದ್ದಿಲ್ಲ. ಕಾರಣ ಕೋರ್ಟ್ ಎನ್ನುವುದು ನ್ಯಾಯದೇಗುಲ. ಬದುಕಿನ ಅತ್ಯಂತ ಕಷ್ಟಕಾಲದಲ್ಲಿ, ಅನಿವಾರ್ಯ ಪ್ರಸಂಗಗಳಲ್ಲಿ, ಅಸಹಾಯಕರಾಗಿ ಜನ ಕೋರ್ಟಿನ ಮೆಟ್ಟಿಲನ್ನು ಏರುತ್ತಾರೆ. ತಿರುಪತಿ ತಿಮ್ಮಪ್ಪ ಕೂಡ ಬಡವ-ಶ್ರೀಮಂತ ಎಂದು ಪಕ್ಷಪಾತ ಮಾಡುತ್ತಾನೆ. ಶ್ರೀಮಂತರನ್ನು ಕಂಡರೆ ಅವನಿಗೆ ಹೆಚ್ಚು ಪ್ರೀತಿ. ಹೆಚ್ಚು ಹಣ ತೆತ್ತವರು ವಿಶೇಷ ಸರತಿಯಲ್ಲಿ ಬಂದು, ಅವನ ಮುಂದೆ ಎಷ್ಟು ಹೊತ್ತಾದರೂ ನಿಂತು ದರ್ಶನ ಪಡೆಯಬಹುದು. ಆದರೆ ನ್ಯಾಯದೇವತೆ ಮುಂದೆ ಎಲ್ಲರೂ ಸಮಾನರು. ದೇಶದ ಪ್ರಧಾನಿ ಮತ್ತು ದೇಶದ  ಕಟ್ಟಕಡೆಯ ವ್ಯಕ್ತಿ ಇಬ್ಬರೂ ಒಂದೇ. ಇಬ್ಬರೂ ಯಾಧೀಶರ ಮುಂದೆ ಕೈಕಟ್ಟಿ, ತಲೆಬಾಗಿ ನಿಲ್ಲಲೇಬೇಕು. ಕೋರ್ಟಿನಂಥ ಸಮಾನತೆ ಸಾರುವ ಮತ್ತೊಂದು ಜಾಗವನ್ನು ಭೂಮಿಯ ಮೇಲೆಯೇ ಕಾಣಲು ಸಾಧ್ಯವಿಲ್ಲ. ಹೀಗಾಗಿ ಕೋರ್ಟ್ ಅಂದ್ರೆ ಒಂಥರ ಅವ್ಯಕ್ತ ಭಕ್ತಿ-ಭಯ. ನಮ್ಮ ನ್ಯಾಯದಾನ ಪದ್ಧತಿಯಲ್ಲಿ ಲೋಪಗಳಿರ ಬಹುದು, ಪ್ರಕರಣ ಇತ್ಯರ್ಥಕ್ಕೆ ಸಮಯ ಹಿಡಿಯಬಹುದು, ಹತ್ತಾರು ವರ್ಷಗಳಾದರೂ ನ್ಯಾಯ ಮರೀಚಿಕೆ ಎನಿಸಬಹುದು. ನೂರು ಅಪರಾಧಿಗಳು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಬಹುದು, ಆದರೆ ಒಬ್ಬೇ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬ ಕಲ್ಪನೆಯೇ ಅದ್ಭುತ. ಎರಡೂ ಪಂಗಡಗಳಿಗೆ ಬೇಕಾಗಿದ್ದು ನ್ಯಾಯ. ಪೀಠದಲ್ಲಿ ಆಸೀನರಾದ ನ್ಯಾಯಾಧೀಶರದ್ದೂ ಬಹಳ ದೊಡ್ಡ ಹೊಣೆಗಾರಿಕೆ. ತೀರ್ಪು ಒಬ್ಬರ ಪರವಾಗಿ, ಇನ್ನೊಬ್ಬರ ವಿರುದ್ಧವಾಗಿ ಬಂದರೂ, ಒಟ್ಟಂದದಲ್ಲಿ ಇಬ್ಬರಿಗೂ ನ್ಯಾಯ ದೊರಕಿಸಿಕೊಡಬೇಕಾದ ಜವಾಬ್ದಾರಿ. ಹೀಗಾಗಿ ನ್ಯಾಯದಾನ ಪ್ರಕ್ರಿಯೆಯನ್ನು ಕೋರ್ಟಿನಲ್ಲಿ ಖುದ್ದಾಗಿ ನೋಡುವುದು ಸಹ ಒಂದು ಉತ್ತಮ ಅನುಭವ.

ಹೀಗಾಗಿ ರಾಜ್ಯದ ಯಾವ ಮೂಲೆಯಲ್ಲಿ ಕೋರ್ಟ್ ಗೆ ಹಾಜರಾಗಬೇಕಾಗಿ ಬಂದರೂ, ಖುಷಿಯಿಂದ ಹೋಗಿ ಬರುತ್ತೇನೆ. ನನಗೆ ಸಂಬಂಧಪಡದಿದ್ದರೂ, ನಾನು ಆಗಾಗ ಸಮಯ ಮಾಡಿಕೊಂಡು ಪ್ರಮುಖ ಅಥವಾ ಆಸಕ್ತಿದಾಯಕ ಪ್ರಕರಣಗಳ ವಿಚಾರಣೆಯಿದ್ದಾಗ, ತೀರ್ಪು ನೀಡುವ ಸಂದರ್ಭವಿದ್ದಾಗ, ನಮ್ಮ ವರದಿಗಾರರ ಜತೆ ಕೋರ್ಟಿಗೆ ಹೋಗಿ ಕಲಾಪ ವೀಕ್ಷಿಸಿ ಬರುತ್ತೇನೆ. ಕಳೆದ ಹದಿಮೂರು ವರ್ಷಗಳಿಂದ ಒಂದು ಕೇಸಿನ ನಿಮಿತ್ತ ಬೆಂಗಳೂರಿನಿಂದ ಸುಮಾರು ಇನ್ನೂರು ಕಿ.ಮೀ. ದೂರದ ಕೋರ್ಟಿಗೆ ಹಾಜರಾಗುತ್ತಿದ್ದೇನೆ. ನಾನು ‘ಕನ್ನಡ ಪ್ರಭ’ದಲ್ಲಿದ್ದಾಗ, ನಮ್ಮ ತಾಲೂಕು ವರದಿಗಾರನೊಬ್ಬ ಸ್ಥಳೀಯ ಹೈಸ್ಕೂಲಿನ ಹೆಡ್ ಮಾಸ್ತರ್ ವಿರುದ್ಧ ಒಂದು ವರದಿ ಬರೆದಿದ್ದ. ಹೆಡ್ ಮಾಸ್ತರರು ಕ್ಲಾಸಿನಲ್ಲಿ ನಿದ್ದೆ ಮಾಡುತ್ತಾರೆ ಎಂಬುದು ಆ ವರದಿಯ ಸಾರಾಂಶ. ಅಸಲಿಗೆ ಆ ಹೆಡ್ ಮಾಸ್ತರರು ಭಲೇ ಕಟ್ಟುನಿಟ್ಟು. ಕ್ಲಾಸಿನಲ್ಲಿ ನಿದ್ದೆ ಮಾಡುವವರಲ್ಲ. ಆದರೆ ನಮ್ಮ ವರದಿಗಾರ, ಅಲ್ಲಿಯೇ ಓದುವ ತಮ್ಮ ಸಂಬಂಧಿಕರ ಮಗನಿಗೆ ಅಟೆಂಡೆನ್ಸ್ ಕೊಡದೇ ಕಿರಿಕ್ ಮಾಡಿದರು ಎಂಬ ಕಾರಣಕ್ಕೆ ಈ ವರದಿ ಮಾಡಿದ್ದ. ಈ ವರದಿಯಿಂದ ಹೆಡ್ ಮಾಸ್ತರರು ವ್ಯಗ್ರರಾಗಿದ್ದರು. ಕಾರಣ, ಅವರು ಇನ್ನೇನು ನಾಲ್ಕೈದು ತಿಂಗಳಲ್ಲಿ ನಿವೃತ್ತರಾಗುವವರಿದ್ದರು. ತಮ್ಮ ಸೇವೆಯ ಕೊನೆಯಲ್ಲಿ ಇಂಥ ಆರೋಪ ಕೇಳಿಸಿಕೊಳ್ಳಬೇಕಾಗಿ ಬಂತಲ್ಲ ಎಂದು ಅವರು ಕೋಪಗೊಂಡಿದ್ದರು. ಹೀಗಾಗಿ ವರದಿಗಾರ ಮತ್ತು ಪತ್ರಿಕೆ ವಿರುದ್ಧ ಶಾಸ್ತಿಗೆ ನಿರ್ಧರಿಸಿದ್ದರು. ಈ ವಿಷಯ ನನ್ನ ಗಮನಕ್ಕೆ ಬಂದಿತು. ನಾನು ವರದಿಗಾರನನ್ನು ಕರೆಯಿಸಿ, ವಿಚಾರಿಸಿದೆ.

ಆತ ತಪ್ಪನ್ನು ಒಪ್ಪಿಕೊಂಡ. ನಾನು ಮರುದಿನದ ಪತ್ರಿಕೆಯಲ್ಲೇ ವಿಷಾದ ವ್ಯಕ್ತಪಡಿಸಿ, ನಮ್ಮಿಂದ ತಪ್ಪಾಗಿದೆ ಎಂದು ಪ್ರಕಟಿಸಿದೆ. ಪತ್ರಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ವರದಿ ಗಾರನ ಮೇಲೆ ಶಿಸ್ತು ಕ್ರಮವನ್ನು ಜರುಗಿಸಿದೆ. ನಾನು ಖುದ್ದಾಗಿ ಹೆಡ್ ಮಾಸ್ತರರನ್ನು ಭೇಟಿ ಮಾಡಿ, ನಮ್ಮಿಂದ ಆದ ಪ್ರಮಾದಕ್ಕೆ ಕ್ಷಮೆ ಯಾಚಿಸಿದೆ. ಇಷ್ಟಾಗಿಯೂ ಅವರು ನನ್ನ ಮೇಲೆ ಕೇಸು ಹಾಕಿದರು. ಅದಾದ ಬಳಿಕ, ನಮ್ಮಿಬ್ಬರ ಕಾಮನ್  ಫ್ರೆಂಡ್ ಮಧ್ಯಸ್ಥಿಕೆಯಲ್ಲಿ ರಾಜಿ-ಸಂಧಾನವೂ ಆಯಿತು. ಆದರೂ ಆ ಹೆಡ್ ಮಾಸ್ತರರು ಜಗ್ಗಲಿಲ್ಲ. ಅವರು ಕೇಸನ್ನು ವಾಪಸ್ ಪಡೆಯದ ಒಂದು ವಿಚಿತ್ರ ಸಂದಿಗ್ಧಕ್ಕೆ ಸಿಲುಕಿ ಹಾಕಿ ಕೊಂಡಿದ್ದರು. ನನ್ನನ್ನು ಭೇಟಿಯಾದಾಗಲೆಲ್ಲ, ತಲೆ ಮರೆಸಿ ಕೊಂಡು ಹೋಗುತ್ತಿದ್ದರು. ಒಮ್ಮೆ ಅವರು ‘ಸರ್, ನಾನು ಕೇಸು ವಾಪಸ್ ಪಡೆಯದೇ ತಪ್ಪುಮಾಡಿದೆ, ನಿಮಗೆ ತೊಂದರೆ ಕೊಟ್ಟಿದ್ದೇನೆ, ಕ್ಷಮೆ ಇರಲಿ’ ಎಂದು ಹೇಳಿದ್ದರು. ಆದರೆ ಕೇಸನ್ನು ವಾಪಸ್ ಪಡೆಯುತ್ತಿರಲಿಲ್ಲ. ಆ ಕೇಸಿನ ಸಂಬಂಧ ನಾನು ಏನಿಲ್ಲವೆಂದರೂ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಆ ಕೋರ್ಟಿಗೆ ಹೋಗಿ ಬಂದಿದ್ದೇನೆ. ಎರಡು ಸಲ ಹಾಜರಾಗದಿದ್ದಾಗ, ವಾರಂಟ್, ಜಾಮೀನುರಹಿತ ವಾರಂಟ್ ಬಂದಿದ್ದಿದೆ. ಅದಕ್ಕಿಂತ ಹೆಚ್ಚಾಗಿ ಅಂತ ಸಂದರ್ಭದಲ್ಲಿ ನಾನೇ ಕುಬ್ಜನಾಗಿದ್ದಿದೆ.

ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಬೇಕಾದುದು ಕರ್ತವ್ಯ. ನ್ಯಾಯಾಲಯದ ನೋಟೀಸು, ಕರೆಯನ್ನು ಎಲ್ಲ ಕೆಲಸಗಳನ್ನು ಬದಿಗೊತ್ತಿ ಗೌರವಿಸಲೇಬೇಕು. ಒಮ್ಮೊಮ್ಮೆ ಪೂರ್ವನಿರ್ಧರಿತ ಕಾರ್ಯ ಕ್ರಮಗಳಿಂದ ಹಾಜರಾಗಲು ಆಗದಿದ್ದಾಗ ಖಿನ್ನನಾಗುತ್ತೇನೆ. ಸೋಜಿಗವೆಂದರೆ, ಇಲ್ಲಿ ತನಕ ಕೋರ್ಟ್ ಮುಂದೆ ಹಾಜರಾದಾಗಲೆಲ್ಲ ನ್ಯಾಯಾಧೀಶರು ಮುಂದಿನ ದಿನಾಂಕ ಕೊಡುತ್ತಿದ್ದಾರೆಯೇ ಹೊರತು, ಇನ್ನೂ ವಿಚಾರಣೆಯೇ ಆರಂಭ ವಾಗಿಲ್ಲ. ಆದರೂ ಬೇಸರವಿಲ್ಲ. ಕೋರ್ಟ್ ಮುಂದೆ ಹಾಜರಾಗಬೇಕಾದ ದಿನ ನಾನು ಅಲ್ಲಿ ಕೈಕಟ್ಟಿ ನಿಂತಿರುತ್ತೇನೆ. ಒಂದು ಕಪ್ ಕಾಫಿ ಕುಡಿಯುತ್ತಾ, ಎದುರಾ-ಬದುರಾ ಕುಳಿತು ಇತ್ಯರ್ಥಪಡಿಸಬಹುದಾದ ಪ್ರಕರಣವಿದು. ಹದಿಮೂರು ವರ್ಷಗಳಾಯ್ತು, ಇನ್ನೂ ವಾದಿ-ಪ್ರತಿವಾದಿ ವಕೀಲರು ಮುಖಾಮುಖಿಯೇ ಆಗಿಲ್ಲ. ಈ ಅಲೆದಾಟದಲ್ಲಿ ನನಗಾದ ಶ್ರಮ, ಸಮಯ ಪೋಲು, ಖರ್ಚು ಲೆಕ್ಕಕ್ಕೆ ತೆಗೆದುಕೊಳ್ಳುವುದು ಬೇಡ. ಆದರೂ ನಮ್ಮ ವ್ಯವಸ್ಥೆ ಬಗ್ಗೆ ವಿಶ್ವಾಸ, ನಂಬಿಕೆಯಿದೆ. ನನ್ನ ಕುತೂಹಲ ಇದು ಹೇಗೆ ಕೊನೆಗೊಳ್ಳಬಹುದು ಎಂಬ ಬಗ್ಗೆ. ಈ ಮಧ್ಯೆ, ನನ್ನ ವಿರುದ್ಧ ಕೇಸು ಹಾಕಿದ ಹೆಡ್ ಮಾಸ್ತರರ ಸ್ನೇಹಿತರೊಬ್ಬರು (ಅವರು ನನ್ನ ಆತ್ಮೀಯರು ಮತ್ತು ಓದುಗ ಅಭಿಮಾನಿ) ಇತ್ತೀಚೆಗೆ ನನ್ನನ್ನು ಭೇಟಿ ಮಾಡಿ, ‘ನಿಮಗೊಂದು ಸಿಹಿಸುದ್ದಿ ಹೇಳುತ್ತಿದ್ದೇನೆ, ಅಂತೂ ಹೆಡ್ ಮಾಸ್ತರರನ್ನು ಒಪ್ಪಿಸಿದ್ದೇನೆ. ಈ ಕೇಸನ್ನು ವಾಪಸ್ ತೆಗೆದುಕೊಳ್ಳಲು ಅವರು ಒಪ್ಪಿದ್ದಾರೆ’ ಎಂದು ಹೇಳಿದರು. ನನಗೆ ಸಂತೋಷವಾಗಲಿಲ್ಲ.

‘ಸರ್, ದಯವಿಟ್ಟು ಕೇಸನ್ನು ವಾಪಸ್ ತೆಗೆದುಕೊಳ್ಳಬೇಡಿ ಅಂತ ಹೇಳಿ.  ನನಗೆ ಈ ಕೇಸಿನ ಬಗ್ಗೆ ಒಂಥರಾ ವ್ಯಾಮೋಹವುಂಟಾಗಿದೆ. ನನಗೆ ಅಲ್ಲಿನ ಕೋರ್ಟ್ ಕಟ್ಟಡ, ವಕೀಲರ ಬಗ್ಗೆ ಆತ್ಮೀಯತೆ ಬೆಳೆದಿದೆ. ನಾನು ಹೋದಾಗಲೆಲ್ಲಾ ವಕೀಲರು ಊಟ ಕೊಡಿಸುತ್ತಾರೆ, ಪ್ರೀತಿ ತೋರುತ್ತಾರೆ. ಮನೆಗೆ ಬನ್ನಿ ಅಂತಾರೆ. ನಾನು ಅನೇಕ ಸಲ ಅವರ ಮನೆಗಳಿಗೂ ಹೋಗಿ ಬಂದಿದ್ದೇನೆ. ಅವರ ಮನೆಗಳಲ್ಲಿನ ಮದುವೆ-ಮುಂಜಿ-ಗೃಹ ಪ್ರವೇಶಗಳಿಗೆಲ್ಲ ಆಮಂತ್ರಿಸುತ್ತಾರೆ. ನಾನು ತಪ್ಪದೆ ಹಾಜರಾಗಿದ್ದೇನೆ. ಇದಲ್ಲದೇ ನನಗೂ ಅಲ್ಲಿಗೆ ಆಗಾಗ ಹೋಗಬೇಕು ಎನಿಸುತ್ತದೆ. ಅತ್ಯಂತ ಪ್ರೀತಿ, ಶ್ರದ್ಧೆಯಿಂದ ಆ ಕೇಸನ್ನು ಪೊರೆಯಬೇಕು ಎಂದು ಅನಿಸಲಾರಂಭಿಸಿದೆ. ಆ ಕೇಸು ಇಲ್ಲದಿದ್ದರೆ, ಇತ್ಯರ್ಥವಾದರೆ ನನಗೆ ಅಲ್ಲಿಗೆ ಹೋಗುವ ಪ್ರಮೇಯವೇ ಬರುವುದಿಲ್ಲ. ಎಷ್ಟೇ ತೊಂದರೆಯಾಗಲಿ, ತಿರುಗಾಟವಾಗಲಿ, ಖರ್ಚಾಗಲಿ, ಆ ಕೇಸನ್ನು ಫೈಟ್ ಮಾಡುತ್ತೇನೆ. ನ್ಯಾಯಾಲಯದಲ್ಲೇ ತೀರ್ಮಾನವಾಗಲಿ, ಇನ್ನೂ ಹತ್ತು ವರ್ಷವಾದರೂ ಚಿಂತೆಯಿಲ್ಲ ಬಿಡಿ. ನನ್ನ ಮೇಲೆ ಕೇಸು ಹಾಕಿದ ಆ ಹೆಡ್ ಮಾಸ್ತರರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಮ್ಮಿಯೇ’ ಎಂದು ನನ್ನ ಸ್ನೇಹಿತರಿಗೆ ಹೇಳಿದೆ. ಅದರಲ್ಲಿ ಸ್ವಲ್ಪವೂ ಉತ್ಪ್ರೇಕ್ಷೆ ಇರಲಿಲ್ಲ. ಅವರು ನನ್ನನ್ನು ವಿಚಿತ್ರವಾಗಿ (ಕ್ಯಾಕರಿಸಿ) ನೋಡಿದರು.

ಕೋರ್ಟ್ ಕೇಸ್ ಎಂದು ಅನೇಕರು ಮುಖ ಸಿಂಡರಿಸಿ ಕೊಳ್ಳುವುದನ್ನು, ಕಿವುಚಿಕೊಳ್ಳುವುದನ್ನು, ತಮ್ಮನ್ನೇ ಶಪಿಸಿಕೊಳ್ಳು ವುದನ್ನು ನೋಡಿದ್ದೇನೆ. ಆದರೆ ನಾನು ಕೋರ್ಟ್ ಕೇಸು ಗಳನ್ನು ಎಂಜಾಯ್ ಮಾಡುವುದನ್ನು ರೂಢಿಸಿಕೊಂಡಿದ್ದೇನೆ. ದಿನವಿಡೀ ಕೋರ್ಟಿನ ಯಾವುದೋ ಮೂಲೆಯಲ್ಲಿ ಕುಳಿತು ಹೆಸರು ಕೂಗುವ ತನಕ ಪುಸ್ತಕ ಓದಲು ಸಮಯ ಸಿಗುತ್ತದೆ. ಮೊಬೈಲಿನಲ್ಲಿರುವ ಕೊಳೆಗಳನ್ನು ಡಿಲೀಟ್ ಮಾಡಲು ಸಮಯ ಸಿಗುತ್ತದೆ. ನನ್ನ ಪಕ್ಕದಲ್ಲೇ ಜೇಬುಗಳ್ಳ, ಕೊಲೆಗಡುಕ, ತಲೆಹಿಡುಕ, ಅತ್ಯಾಚಾರಿಗಳು ಕುಳಿತಿರುತ್ತಾರೆ. ಅವರ ಜತೆ ಮಾತಾಡುವುದು ಯಾವತ್ತೂ ರೋಚಕವೇ. ಇವರು ಜೈಲು ಮತ್ತು ಕೋರ್ಟ್ ಹೊರತಾಗಿ ಮತ್ತೆಲ್ಲೂ ಸಿಗಲಾರರು. ಈ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು, ಯಥಾವತ್ತು ಸ್ವೀಕರಿಸಲು ಮತ್ತಷ್ಟು ವ್ಯವಧಾನ ವೃದ್ಧಿಸಿದೆ. ನನಗರಿವಿಲ್ಲದಂತೆ ನನ್ನಲ್ಲಿ ಸಹನೆ, ಸಂಯಮ ಜಾಸ್ತಿಯಾಗಿದೆ. ನನ್ನೊಳಗಿನ ಅಸಹನೆ ಸಹಜ ಸಾವು ಹೊಂದುತ್ತಿದೆ. ಈ ಪಾಠವನ್ನು ನೀವು ಅನುಭವಿಸದೇ ಪಡೆಯಲು ಸಾಧ್ಯವೇ ಇಲ್ಲ. ಇವೆಲ್ಲ ಪ್ರೀತಿಯಿಂದ, passionate ಆಗಿ ಮಾಡಬೇಕಾದ ಕೆಲಸ ಎಂದು ಮನವರಿಕೆಯಾಗಿದೆ.

ಮಾಜಿ ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಮಾಜಿ ಅರಣ್ಯ ಮಂತ್ರಿ ದಿವಂಗತ ಚೆನ್ನಿಗಪ್ಪನವರು ನನ್ನ ಹಾಗೂ ವಿಜಯ ಸಂಕೇಶ್ವರರ ಮೇಲೆ ಕೇಸು ಹಾಕಿದ್ದರು. ಪೊಲೀಸ್ ಸೇವೆಯಲ್ಲಿದ್ದಾಗ ಅವರ ಮೇಲಧಿಕಾರಿಯಾಗಿದ್ದ ಮತ್ತು ಮಾಜಿ ಸಂಸದರಾಗಿದ್ದ ಕೋದಂಡರಾಮಯ್ಯನವರು ಪತ್ರಿಕಾಗೋಷ್ಠಿಯೊಂದರಲ್ಲಿ ಚೆನ್ನಿಗಪ್ಪನವರನ್ನು ವೈಯಕ್ತಿಕವಾಗಿ ನಿಂದಿಸಿದ್ದರು. ಅದನ್ನು ನಾನು ಆಗ ‘ವಿಜಯ ಕರ್ನಾಟಕ’ದಲ್ಲಿ ಪ್ರಕಟಿಸಿದ್ದೆ. ಕೋದಂಡರಾಮಯ್ಯನವರ ವಿರುದ್ಧ ಅವರು ಮಾನಹಾನಿ ಮೊಕದ್ದಮೆ ಹೂಡಿದ್ದರು. ಕೇಸನ್ನು ಬಲಿಷ್ಠಗೊಳಿಸಲು ನಮ್ಮಿಬ್ಬರನ್ನು (ನನ್ನನ್ನು ಮತ್ತು ಸಂಕೇಶ್ವರರು) ಪಾರ್ಟಿ ಮಾಡಿದ್ದರು. ಚೆನ್ನಿಗಪ್ಪನವರಿಗೆ ನಮ್ಮಿಬ್ಬರ ಮೇಲೆ ಯಾವ ದ್ವೇಷವೂ ಇರಲಿಲ್ಲ. ಇದರಿಂದ ನಾವಿಬ್ಬರೂ ಕೋರ್ಟಿಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ಸಂಕೇಶ್ವರರು ತಮ್ಮ ಬಿಡುವಿಲ್ಲದ ಪ್ರವಾಸಗಳ ನಡುವೆಯೂ ಕೋರ್ಟಿಗೆ ತಪ್ಪದೇ
ಹಾಜರಾಗುತ್ತಿದ್ದರು. ಕೆಲವೊಮ್ಮೆ ಅವರು ಕೋರ್ಟಿಗೆ ಹಾಜರಾಗಲೆಂದು ಲಕ್ಷಾಂತರ ರುಪಾಯಿ ಖರ್ಚು ಮಾಡಿಕೊಂಡು ವಿಶೇಷ ವಿಮಾನದಲ್ಲಿ ಬಂದಿದ್ದಿದೆ. ನಾನು ಚೆನ್ನಿಗಪ್ಪನವರನ್ನು ಕೇಸು ವಾಪಸ್ ಪಡೆಯುವಂತೆ ಒಂದೆರಡು ಸಲ ಕೋರಿದೆ. ಆದರೆ ಅವರು, ’ಸರ್, ನಿಮ್ಮ ಮೇಲೆ ದ್ವೇಷವಿಲ್ಲ. ಆದರೆ ಆ ಕೋದಂಡರಾಮಯ್ಯನನ್ನು ಈ ಜನ್ಮದಲ್ಲಿ ಬಿಡೊಲ್ಲ. ಜೈಲಿಗೆ ಕಳಿಸಿಯೇ ಸಾಯುತ್ತೇನೆ. ಆದರೆ ನಿಮ್ಮಿಬ್ಬರ ವಿರುದ್ಧ ಕೇಸ್ ತೆಗೆದರೆ ಕೇಸ್ ವೀಕ್ ಆಗುತ್ತದೆ. ಹೀಗಾಗಿ ನಿಮ್ಮನ್ನು ಪಾರ್ಟಿ ಮಾಡಿದ್ದೇನೆ. ಅರ್ಥಮಾಡಿಕೊಳ್ಳಿ’ ಎಂದು ಹೇಳುತ್ತಿದ್ದರು. ಆ ಪ್ರಕರಣ ಸುಮಾರು ಹದಿನಾರು ವರ್ಷಗಳ ಕಾಲ ನಡೆಯಿತು.

ಪ್ರತಿ ಸಲ ಹೋದಾಗಲೂ ಚೆನ್ನಿಗಪ್ಪನವರು ಸಿಗುತ್ತಿದ್ದರು. ಆದರೆ ಕೋದಂಡರಾಮಯ್ಯನವರು ಕೋರ್ಟಿಗೆ ಬರುತ್ತಿರಲಿಲ್ಲ. ಕೋರ್ಟ್ ಕಲಾಪ ಮುಗಿದ ಬಳಿಕ ಹತ್ತಾರು ಸಲ ಚೆನ್ನಿಗಪ್ಪನವರು ನನ್ನನ್ನು ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಅವರು ತಮ್ಮ ಜೀವನಗಾಥೆಯನ್ನು ಹೇಳುತ್ತಿದ್ದರು. ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯಿಂದ ಮಂತ್ರಿಯಾಗುವ ತನಕದ ತಮ್ಮ ಬದುಕಿನ ಹಾದಿಯನ್ನು ರಸವತ್ತಾಗಿ ಹೇಳುತ್ತಿದ್ದರು. ಅವರು ತೀವ್ರ ಅನಾರೋಗ್ಯಪೀಡಿತರಾಗಿ ಚಿಕಿತ್ಸೆಗೆಂದು ಸಿಂಗಾಪುರಕ್ಕೆ ಹೋಗುವ ಕೆಲ ದಿನಗಳ ಮುನ್ನ, ತಮ್ಮನ್ನು ಬಂದು ಕಾಣುವಂತೆ ಹೇಳಿದ್ದರು. ನಾನು ಅವರ ಮನೆಗೆ ಹೋಗಿದ್ದೆ. ಬಹಳ ಪ್ರಯಾಸಪಟ್ಟು, ‘ಭಟ್ರೇ, ನಿಮಗೆ ಬಹಳ ತೊಂದರೆ ಕೊಟ್ಟೆ. ಕ್ಷಮಿಸಿಬಿಡಿ’ ಎಂದು ಹೇಳಿದ್ದರು. ಅಲ್ಲಿ ಚಿಕಿತ್ಸೆ ಪಡೆದರೂ ಅವರು ಗುಣ ಮುಖರಾಗಲಿಲ್ಲ. ನಂತರ ವಾಪಸ್ ಬಂದು ಇಲ್ಲಿಯೇ ಅಸುನೀಗಿದರು. ಸಿಂಗಾಪುರದಲ್ಲಿದ್ದಾಗ ಒಂದೆರಡು ಬಾರಿ ನನ್ನನ್ನು ನೆನಪಿಸಿಕೊಂಡಿದ್ದರಂತೆ. ಅದಕ್ಕೆ ಕಾರಣವೂ ಇತ್ತು. ಈ ಕೇಸಿಗೆ ಸಂಬಂಧಿಸಿದಂತೆ, ನಾನು ಕೋರ್ಟಿಗೆ ಹಾಜರಾಗದಿದ್ದಾಗ, ನ್ಯಾಯಾಧೀಶರು ನನ್ನ ವಕೀಲರನ್ನು ತರಾಟೆಗೆ ತೆಗೆದುಕೊಂಡಾಗ, ಕೋರ್ಟ್ ಹಾಲ್‌ನಲ್ಲಿ ನನ್ನ ಪರವಾಗಿ ಮಾತಾಡಿ ನ್ಯಾಯಾಧೀಶರಿಂದ ಗದರಿಸಿಕೊಂಡು ಚೆನ್ನಿಗಪ್ಪನವರು ಮುಜುಗರಕ್ಕೊಳಗಾಗಿದ್ದರು. ‘ನನ್ನಿಂದ ನಿಮಗೆ ತೊಂದರೆ ಆಯ್ತು.. ನಿಮ್ಮಿಂದ ನಾನು ಬೈಸಿಕೊಂಡೆ’ ಎಂದು ಹೇಳಿ ನಕ್ಕಿದ್ದರು. ಅವರ ಸಾವಿನಲ್ಲಿ ಆ ಪ್ರಕರಣ ಪರ್ಯವಸಾನಗೊಂಡಿತು.

ನಾನು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಯಾವ ಕೋರ್ಟಿಗೆ ಹೋದರೂ ಒಂದಷ್ಟು ನೆನಪು, ಜೀವನಪಾಠ, ಅನುಭವಗಳಿಲ್ಲದೇ ಬರಿಗೈಯಲ್ಲಿ ಬಂದಿಲ್ಲ. ಹೀಗಾಗಿ ಕೋರ್ಟ್ ಕೇಸ್ ಅಂದ್ರೆ ಏನೋ ಪುಳಕ! ಅಲ್ಲಿಗೆ ಹೋಗದ ಸಂಪಾದಕನೂ ನೀರಸ ಮತ್ತು ಅವನ ಪತ್ರಿಕೆಯೂ.